ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಭಾರತಕ್ಕೆ ಎರಡನೇ ಸೋಲು

Last Updated 29 ಜುಲೈ 2016, 19:30 IST
ಅಕ್ಷರ ಗಾತ್ರ

ಮ್ಯಾಡ್ರಿಡ್‌ (ಪಿಟಿಐ): ರಿಯೊ ಒಲಿಂಪಿಕ್ಸ್‌ ಸಿದ್ಧತೆಗೆ ವೇದಿಕೆ ಎನಿಸಿದ್ದ ಸ್ಪೇನ್‌ ಪ್ರವಾಸದ ಎರಡನೇ ಅಭ್ಯಾಸ ಪಂದ್ಯದಲ್ಲೂ ಭಾರತ ತಂಡ ಮುಗ್ಗರಿಸಿದೆ.
ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಪಿ.ಆರ್‌. ಶ್ರೀಜೇಶ್‌ ಬಳಗ 2–3 ಗೋಲುಗಳಿಂದ ಆತಿಥೇಯ ಸ್ಪೇನ್‌ ತಂಡದ ಎದುರು ಆಘಾತ ಅನುಭವಿಸಿತು.

ವಿಶ್ವ ಕ್ರಮಾಂಕಪಟ್ಟಿಯಲ್ಲಿ ಐದನೇ ಸ್ಥಾನ ಹೊಂದಿರುವ ಪ್ರವಾಸಿ ಬಳಗ ಆರಂಭಿಕ ಪಂದ್ಯದಲ್ಲಿ 1–4 ಗೋಲುಗಳಿಂದ ವಿಶ್ವ ರ್‍ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ  ಸ್ಪೇನ್‌ಗೆ ಶರಣಾಗಿತ್ತು.

ಹಿಂದಿನ ಪಂದ್ಯದಲ್ಲಿ ಗೆದ್ದು ವಿಶ್ವಾಸ ಹೆಚ್ಚಿಸಿಕೊಂಡಿದ್ದ ಸ್ಪೇನ್‌ ತಂಡ ಆರಂಭದಿಂದಲೇ ಚುರುಕಿನ ಆಟಕ್ಕೆ ಮುಂದಾಯಿತು.
ಆತಿಥೇಯ ತಂಡದ ಜೋಸೆಫ್‌ ರೋಮೆಯು 20ನೇ ನಿಮಿಷದಲ್ಲಿ ಗೋಲು ದಾಖಲಿಸಿ ಮುನ್ನಡೆ ತಂದುಕೊಟ್ಟರು. 

ಆ ಬಳಿಕ ಭಾರತ ತಂಡ ಸಮಬಲದ ಗೋಲು ಗಳಿಸಲು ಹೋರಾಟ ಮುಂದುವರಿಸಿತು. 38ನೇ ನಿಮಿಷದಲ್ಲಿ ಮನ್‌ಪ್ರೀತ್‌ ಸಿಂಗ್‌ ಗೋಲು ದಾಖಲಿಸಿ ಭಾರತದ ಪಾಳಯದಲ್ಲಿ ಆವರಿಸಿದ್ದ ಆತಂಕದ ಕಾರ್ಮೋಡವನ್ನು ದೂರ ಮಾಡಿದರು.

ಶ್ರೀಜೇಶ್‌ ಬಳಗದಲ್ಲಿ ಈ ಖುಷಿ ಹೆಚ್ಚು ಹೊತ್ತು ಉಳಿಯಲು ಪಾವು ಕ್ವೆಮಾಡ ಬಿಡಲಿಲ್ಲ. 42ನೇ ನಿಮಿಷದಲ್ಲಿ ಚೆಂಡಿನೊಂದಿಗೆ ಭಾರತದ ಆವರಣದೊಳಗೆ ಪ್ರವೇಶಿಸಿದ ಅವರು ಅದನ್ನು ನಿಖರವಾಗಿ ಗುರಿ ಮುಟ್ಟಿಸಿ ಭಾರತ ತಂಡದ ಸಂಕಷ್ಟವನ್ನು ಹೆಚ್ಚಿಸಿದರು. 

ಆ ಬಳಿಕ ಸ್ಪೇನ್‌ ತಂಡದ ಆಟ ಇನ್ನಷ್ಟು ಕಳೆಗಟ್ಟಿತು. 53ನೇ ನಿಮಿಷದಲ್ಲಿ ಸಾಲ್ವಡರ್‌ ಪಿಯೆರಾ ಗೋಲು ದಾಖಲಿಸಿ  ತಂಡದ ಮುನ್ನಡೆಯನ್ನು 3–1ಕ್ಕೆ ಹಿಗ್ಗಿಸಿದರಲ್ಲದೆ ಆತಿಥೇಯರ ಗೆಲುವನ್ನು ಖಾತ್ರಪಡಿಸಿದರು. 57ನೇ ನಿಮಿಷದಲ್ಲಿ ಭಾರತ ತಂಡ ಹಿನ್ನಡೆಯನ್ನು 2–3ಕ್ಕೆ ತಗ್ಗಿಸಿಕೊಂಡಿತು.

ಇದಕ್ಕೆ ಕಾರಣವಾಗಿದ್ದು ರಮಣದೀಪ್‌. ಸಹ ಆಟಗಾರ ನೀಡಿದ ಪಾಸ್‌ನಲ್ಲಿ ಚೆಂಡನ್ನು ನಿಯಂತ್ರಣಕ್ಕೆ ಪಡೆದ ರಮಣದೀಪ್‌ ಅದನ್ನು ನಿಖರವಾಗಿ ಗುರಿ ಮುಟ್ಟಿಸುವಲ್ಲಿ ಸಫಲರಾದರು. ಅಂತಿಮ ಮೂರು ನಿಮಿಷಗಳಲ್ಲಿ ರಕ್ಷಣೆಗೆ ಒತ್ತು ನೀಡಿ ಆಡಿದ ಸ್ಪೇನ್‌ ತಂಡ ಭಾರತದ ಗೆಲುವಿನ ಆಸೆಗೆ ತಣ್ಣೀರೆರಚಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT