ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಭಾರತ ತಂಡಕ್ಕೆ ನಿರಾಸೆ

Last Updated 1 ಜುಲೈ 2016, 19:30 IST
ಅಕ್ಷರ ಗಾತ್ರ

ವಲೆನ್ಸಿಯಾ (ಪಿಟಿಐ): ಎದುರಾಳಿ ತಂಡದ ಸವಾಲನ್ನು ಮೆಟ್ಟಿ ನಿಲ್ಲಲು ವಿಫಲವಾದ ಭಾರತ ತಂಡ ಒಲಿಂಪಿಕ್ಸ್‌ ಸಿದ್ಧತೆಗೆ ವೇದಿಕೆ ಎಂದೇ ಬಿಂಬಿತವಾಗಿ ರುವ ಆರು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಿಯ ಪಂದ್ಯದಲ್ಲಿ ಸೋಲು ಕಂಡಿದೆ.

ಗುರುವಾರ ತಡ ರಾತ್ರಿ ನಡೆದ ರೌಂಡ್‌ ರಾಬಿನ್‌ ಲೀಗ್‌ ಮಾದರಿಯ ಪಂದ್ಯದಲ್ಲಿ ಭಾರತ 0–1 ಗೋಲಿನಿಂದ ನ್ಯೂಜಿಲೆಂಡ್‌ ತಂಡಕ್ಕೆ ಶರಣಾಯಿತು.
ಮೂರು ಪಂದ್ಯಗಳಿಂದ ಮೂರು ಪಾಯಿಂಟ್ಸ್‌ ಹೊಂದಿರುವ ಭಾರತ ಪಾಯಿಂಟ್ಸ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಒಲಿಂಪಿಕ್‌ ಚಾಂಪಿಯನ್‌ ಜರ್ಮನಿ ಮತ್ತು ಅರ್ಜೆಂಟೀನಾ ತಂಡಗಳು ತಲಾ ಆರು ಪಾಯಿಂಟ್ಸ್‌ ಹೊಂದಿದ್ದು ಮೊದಲ ಎರಡು ಸ್ಥಾನಗಳನ್ನು ಹೊಂದಿವೆ. ಎರಡು ಪಂದ್ಯಗಳಿಂದ ಮೂರು ಪಾಯಿಂಟ್ಸ್‌ ಸಂಗ್ರಹಿಸಿರುವ ಸ್ಪೇನ್‌ ತಂಡ ಮೂರನೇ ಸ್ಥಾನದಲ್ಲಿದೆ.

ಆರಂಭಿಕ ಪಂದ್ಯದಲ್ಲಿ ಬಲಿಷ್ಠ ಜರ್ಮನಿ ವಿರುದ್ಧ 0–4 ಗೋಲುಗಳ ಅಂತರದಿಂದ ಸೋತಿದ್ದ ಸರ್ದಾರ್‌ ಬಳಗ ತನ್ನ ಎರಡನೇ ಪಂದ್ಯದಲ್ಲಿ 2–1 ಗೋಲುಗಳಿಂದ ಐರ್ಲೆಂಡ್‌ ತಂಡವನ್ನು ಮಣಿಸಿ ಭರವಸೆ ಮೂಡಿಸಿತ್ತು.

ಆದರೆ ಗುರುವಾರದ ಹೋರಾಟದಲ್ಲಿ ಸರ್ದಾರ್‌ ಪಡೆ ಶ್ರೇಷ್ಠ ಆಟ ಆಡಲು ವಿಫಲವಾಯಿತು. ಉಭಯ ತಂಡಗಳೂ ಶುರುವಿನಿಂದಲೇ ರಕ್ಷಣೆಗೆ ಒತ್ತು ನೀಡಿ ಆಡಿದವು. ಹೀಗಾಗಿ ಮೊದಲ 17 ನಿಮಿಷದ ಆಟ ಗೋಲು ರಹಿತವಾಗಿತ್ತು. ಆ ಬಳಿಕ ಕಿವೀಸ್‌ ನಾಡಿನ ತಂಡ ಆಟದಲ್ಲಿ ವೇಗ ಹೆಚ್ಚಿಸಿಕೊಂಡಿತು.

ಈ ತಂಡ 18ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆಯಲು ಯಶಸ್ವಿ ಯಾಯಿತು. ಸ್ಟೀಫನ್‌ ಜೆನ್ನೆಸ್‌ ಅವರು ಚೆಂಡನ್ನು ಗುರಿ ಮುಟ್ಟಿಸಿ ನ್ಯೂಜಿಲೆಂಡ್‌ ಪಾಳಯದಲ್ಲಿ ಸಂಭ್ರಮ ತಂದರು.

ಆ ಬಳಿಕ ಭಾರತ ತಂಡ ಸಮಬಲದ ಗೋಲಿಗಾಗಿ ಹೋರಾಟ ಮುಂದುವರಿ ಸಿತು. ಆದರೆ ಎದುರಾಳಿ ತಂಡದ ರಕ್ಷಣಾ ವಿಭಾಗದ ಆಟಗಾರರು ಸರ್ದಾರ್‌ ಬಳಗದ ಆಟಗಾರರಿಗೆ ತಮ್ಮ ಆವರಣದೊಳಗೆ ನುಸುಳಲು ಅವಕಾಶ ನೀಡಲಿಲ್ಲ.

ಹೀಗಾಗಿ ಭಾರತ 0–1ರ ಹಿನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು. ವಿರಾಮದ ಬಳಿಕ ಭಾರತ ತಂಡದ ಕೋಚ್‌ ರೋಲಂಟ್‌ ಓಲ್ಟಮಸ್‌ ಯೋಜನೆಯಲ್ಲಿ ಕೆಲ ಬದ ಲಾವಣೆ ಮಾಡಿ ಆಟಗಾರರನ್ನು ಕಣಕ್ಕಿಳಿಸಿದರು. ಹೀಗಿದ್ದರೂ ಯಾವ ಪ್ರಯೋಜನವೂ ಆಗಲಿಲ್ಲ. ಎರಡು ಮತ್ತು ಮೂರನೇ ಕ್ವಾರ್ಟರ್‌ನಲ್ಲಿ ರಕ್ಷಣೆಗೆ ಒತ್ತು ನೀಡಿ ಆಡಿದ ನ್ಯೂಜಿಲೆಂಡ್‌ ಸುಲಭವಾಗಿ ಗೆಲುವಿನ ತೋರಣ ಕಟ್ಟಿತು.

ಭಾರತ ತಂಡ ತನ್ನ ನಾಲ್ಕನೇ ಪಂದ್ಯದಲ್ಲಿ ಅರ್ಜೆಂಟೀನಾ ತಂಡದ ಸವಾಲು ಎದುರಿಸಲಿದೆ. ಪ್ರಶಸ್ತಿ ಸುತ್ತಿನ ಆಸೆ ಜೀವಂತವಾಗಿಟ್ಟುಕೊಳ್ಳಬೇಕಾದರೆ ಸರ್ದಾರ್‌ ಬಳಗ ಈ ಪಂದ್ಯದಲ್ಲಿ ಗೆಲ್ಲಲೇಬೇಕು. 

ಆಕಾಶದೀಪ್‌ ‘ಶತಕದ’ ಸಾಧನೆ..
ನ್ಯೂಜಿಲೆಂಡ್‌ ವಿರುದ್ಧದ ಪಂದ್ಯವಾಡುವ ಮೂಲಕ ಆಕಾಶದೀಪ್‌ ಸಿಂಗ್‌ ನೂರು ಅಂತರರಾಷ್ಟ್ರೀಯ ಪಂದ್ಯ ಗಳಲ್ಲಿ ಆಡಿದ ಕೀರ್ತಿಗೆ ಪಾತ್ರರಾದರು.
2012ರಲ್ಲಿ ಲೂಧಿಯಾನದಲ್ಲಿ ನಡೆದ  ಚಾಂಪಿಯನ್ಸ್‌ ಟ್ರೋಫಿಯ ಇಂಗ್ಲೆಂಡ್‌ ವಿರುದ್ಧದ  ಹಾಕಿ ಟೂರ್ನಿಯಲ್ಲಿ ಆಡುವ ಮೂಲಕ ಅವರು ಅಂತರರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT