ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡಿನಲೆಗೆ ತೂಗಿದವರು...

Last Updated 21 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ತುಂಡುಡುಗೆ ಧರಿಸಿದ್ದ ಹೆಣ್ಣು ಮಕ್ಕಳ ನೀಳಕಾಲುಗಳು ಅಬ್ಬರದ ಸಂಗೀತಕ್ಕನುಗುಣವಾಗಿ ಕುಣಿಯುತ್ತಿದ್ದವು. ಬಿಯರ್‌ ನಶೆಯಲ್ಲಿದ್ದ ಕೆಲವರು ತಮ್ಮ ತಲೆಯನ್ನು ಮೇಲಿಂದ ಕೆಳಕ್ಕೆ ರೊಯ್ಯನೆ ಬೀಸುತ್ತಾ ಸಂಗೀತವನ್ನು ಮೆಚ್ಚಿಕೊಳ್ಳುತ್ತಿದ್ದರು.

ಗುಂಪಾಗಿ ಬಂದ ಸ್ನೇಹಿತರು ಪರಸ್ಪರರ ಸೊಂಟ ಬಳಸಿ ಡಾನ್ಸ್‌ ಮಾಡುತ್ತಿದ್ದರೆ, ಪ್ರೇಮಿಗಳು ಚುಂಬನದ ಸವಿಯೊಂದಿಗೆ ಸಂಗೀತವನ್ನು ಆಸ್ವಾದಿಸುತ್ತಿದ್ದರು. ಒಟ್ಟಾರೆಯಾಗಿ, ನಗರದಲ್ಲಿ ಈಚೆಗೆ ನಡೆದ ಕಿಂಗ್‌ಫಿಷರ್‌ ಪ್ರೀಮಿಯಂ ದಿ ಗ್ರೇಟ್‌ ಇಂಡಿಯನ್‌ ಅಕ್ಟೋಬರ್‌ ಫೆಸ್ಟ್‌ನಲ್ಲಿ ಬಿಯರ್‌ನ ಮಳೆ ಸುರಿಯಿತು. ಸಂಗೀತದ ಹೊಳೆ ಹರಿಯಿತು. ಇವೆರಡಕ್ಕೂ ಕಳಶವಿಟ್ಟಂತೆ ಗ್ಲ್ಯಾಮರ್‌ನ ಮಿಂಚೂ ಹರಿಯಿತು.

– ಕಳೆದ ಬಾರಿ ನಡೆದ ಉತ್ಸವಕ್ಕೆ ಹೋಲಿಸಿದರೆ ಈ ಬಾರಿ ಅಷ್ಟೇನೂ ಸದ್ದು ಮಾಡದ ಅಕ್ಟೋಬರ್ ಫೆಸ್ಟ್‌ಗೆ ಭಾನುವಾರ ವರ್ಣರಂಜಿತ ತೆರೆಬಿದ್ದಿತು. ಉತ್ಸವ ಆರಂಭಗೊಂಡ ಮೊದಲ ದಿನಕ್ಕಿಂತಲೂ ಕೊನೆಯ ಎರಡು ದಿನ ಹೆಚ್ಚು ಜನ ಜಮಾಯಿಸಿದ್ದರು. ಅವರೆಲ್ಲಾ ಬಿಯರ್‌ ಮಳೆಯಲ್ಲಿ ತೊಯ್ದು; ಸಂಗೀತದ ಅಲೆಯಲ್ಲಿ ತೇಲಿದರು.

ಮೊದಲ ದಿನ ನೀರಸ
ಶುಕ್ರವಾರ ಆರಂಭಗೊಂಡ ಉತ್ಸವದ ಪುಳಕವನ್ನು ತುಂಬ ಕಮ್ಮಿ ಜನರು ಸವಿದರು. ಮ್ಯಾಡ್ ಆರೆಂಜ್ ಫೈರ್‌ವರ್ಕ್ಸ್‌ ತಂಡದವರ ಪ್ರದರ್ಶನದೊಂದಿಗೆ ಆರಂಭಗೊಂಡ ಕಾರ್ಯಕ್ರಮ ಅಪಾಚೆ ಇಂಡಿಯನ್‌ ಸಂಗೀತದೊಂದಿಗೆ ಮುಕ್ತಾಯಗೊಂಡಿತು. ೯೦ರ ದಶಕದಲ್ಲಿ ಅನೇಕ ಹಿಟ್ ಹಾಡುಗಳಿಗೆ ದನಿಯಾಗಿದ್ದ ಅಪಾಚೆ ಇಂಡಿಯನ್ ಹಾಡುಗಳಿಗೆ ಯುವಜನತೆ ಕುಣಿದು ಕುಪ್ಪಳಿಸಿತು.

ಆನಂತರ, ವೇದಿಕೆಯೇರಿದ ಮತ್ತೊಬ್ಬ ಹೆಸರಾಂತ ಗಾಯಕ ಬೆನ್ನಿ ದಯಾಳ್ ಬಾಲಿವುಡ್‌ನ ಹಲವು ಮಧುರ ಗೀತೆಗಳನ್ನು ಹಾಡಿ ಜನರನ್ನು ರಂಜಿಸಿದರು. ‘ಮಿನಿಸ್ಟ್ರಿ ಆಫ್ ಬ್ಲೂಸ್’ ಮತ್ತು ‘ಸ್ಕ್ರಾಟ್’ ತಂಡಗಳು ಹಲವರು ಗುನುಗುವ ಹಾಡುಗಳನ್ನು ಹಾಡುವ ಮೂಲಕ ಜನರ ಮನಗೆದ್ದವು. ಡಿಜೆಗಳಾದ ಸಾವ್ಯೋ, ಟ್ವೊಕಿಡ್ ವಿಕ್ಕಿಡ್ ಮತ್ತು ಜಸ್ಮೀತ್ ಅವರ ಬಾಲಿವುಡ್ ಹಾಡುಗಳ ಮಿಶ್ರಣಕ್ಕೆ ಜನ ತಾಳ ಹಾಕಿದರು.

ರಂಜಿಸಿದ ಆಟಗಳು
ಉತ್ಸವಕ್ಕೆ ಬಂದವರನ್ನು ಸಂಗೀತದ ಜೊತೆಗೆ ಕೆಲವು ಆಕರ್ಷಕ ಆಟಗಳು ರಂಜಿಸಿದವು. ದೊಡ್ಡ ಬಲೂನ್‌ ಒಳಕ್ಕೆ ಒಬ್ಬ ಮನುಷ್ಯನನ್ನು ಕೂರಿಸಿ ಅದರೊಳಕ್ಕೆ ಗಾಳಿ ತುಂಬಿ ಈಜುಕೊಳಕ್ಕೆ ತಳ್ಳುವ ಆಟ ಯುವಜನತೆಗೆ ಮಜ ನೀಡುತ್ತಿತ್ತು. ತೇಲುವ ಬಲೂನ್‌ ಒಳಗೆ ಇರುವವರು ಎದ್ದು ನಿಲ್ಲಲು ಮಾಡುತ್ತಿದ್ದ ಸಾಹಸ ನೋಡುಗರಲ್ಲಿ ನಗು ತರಿಸುತ್ತಿತ್ತು. ಗುಡ್‌ ಟೈಮ್ಸ್‌ ಜೋನ್‌ನಲ್ಲಿ ಬಿಯರ್‌ ಹೀರುವ ಸ್ಪರ್ಧೆ ನಡೆಯುತ್ತಿತ್ತು.

ನಾಲ್ಕು ಜನರಲ್ಲಿ ಯಾರು ಮೊದಲು ಬಿಯರ್‌ ಹೀರುತ್ತಾರೋ ಅವರಿಗೆ ಮತ್ತೊಂದು ಬಿಯರ್‌ ಬಹುಮಾನವಾಗಿ ಲಭಿಸುತ್ತಿತ್ತು. ಬಿಯರ್‌ಪ್ರಿಯರಾದ ಹೆಣ್ಣು ಮಕ್ಕಳೂ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಬಿಯರ್‌ನ ಸವಿಯುಂಡರು. ಸಂಗೀತದ ಲಯಕ್ಕೆ ಅನುಗುಣವಾಗಿ ತಲೆಯನ್ನು ಬೀಸುವ  ಸ್ಪರ್ಧೆಯಲ್ಲಿ ಗೆದ್ದವರಿಗೆ ಉಡುಗೊರೆಯಾಗಿ ಬಿಯರ್ ಸಿಗುತ್ತಿದ್ದವು. ಅದೇ ರೀತಿ ಬಾಕ್ಸಿಂಗ್‌, ಸುತ್ತಿಗೆಯಲ್ಲಿ ಹೊಡೆಯುವ ಆಟದಲ್ಲಿ ಯುವಜನತೆ ತಮ್ಮ ಶಕ್ತಿ ಪ್ರದರ್ಶನ ಮಾಡಿಕೊಂಡರು.

ಕೊನೆಯ ಎರಡು ದಿನದಲ್ಲಿ ಉತ್ಸಾಹದ ಹೊನಲು
ಶುಕ್ರವಾರ ದೊರೆತ ನೀರಸ ಪ್ರತಿಕ್ರಿಯೆಗೆ ಉತ್ತರವೆಂಬಂತೆ ಶನಿವಾರ ಮತ್ತು ಭಾನುವಾರ ಹುಮ್ಮಸ್ಸಿನ ಹೊನಲು ಹರಿಯಿತು. ಶನಿವಾರ ‘ದಿ ಓಷನ್ ಕಲೆಕ್ಟಿವ್ ಬ್ಯಾಂಡ್‌’ನವರು ನೀಡಿದ ಪ್ರದರ್ಶನ ಜನರ ಹುಮ್ಮಸ್ಸಿಗೆ ನೂರ್ಮಡಿ ಬಲ ತುಂಬಿತು. ಬಾಸ್ಸ್‌ಕ್ಲೆಫ್, ಭೂಮಿ, ಒನ್ ನೈಟ್ ಸ್ಟ್ಯಾಂಡ್ ತಂಡಗಳು ಯುವಜನತೆಯನ್ನು ಉಲ್ಲಾಸದ ಲೋಕಕ್ಕೆ ದೂಡಿತು.

ಭಾನುವಾರದ ಕಾರ್ಯಕ್ರಮ ತುಂಬ ತಡವಾಗಿ ಆರಂಭಗೊಂಡಿತು. ಸಂಗೀತ ಪ್ರದರ್ಶನ ಆರಂಭಗೊಳ್ಳುವವರೆಗೂ ಜನರು ಬಿಯರ್‌ ಹೀರುತ್ತಿದ್ದರು. ಆನಂತರ, ಲಕ್ಕಿ ಆಲಿ ಧ್ವನಿ ಕೇಳಿಸಿತು. ಹಲವು ಹಿಟ್‌ ಗೀತೆಗಳಿಗೆ ಧ್ವನಿಯಾಗಿದ್ದ ಲಕ್ಕಿ ಆಲಿ ಇಲ್ಲಿ ಅಷ್ಟೇನೂ ಚೆಂದವಾಗಿ ಹಾಡಲಿಲ್ಲ. ಬಿಯರ್‌ ನಶೆಯಲ್ಲಿದ್ದ ಕೆಲವರು ಆಲಿ ಗೀತೆಯನ್ನು ಚೆನ್ನಾಗಿ ಆಸ್ವಾದಿಸಿದರು.

ನೃತ್ಯರುತ್ಯ ತಂಡದ ಜೊತೆಗೂಡಿ ರಘು ದೀಕ್ಷಿತ್‌ ಕಾರ್ಯಕ್ರಮ ನೀಡಿದರು. ಉಚ್ಚಸ್ಥಾಯಿಯಲ್ಲಿ ಅಪ್ಪಳಿಸುತ್ತಿದ್ದ ರಘು ಸಂಗೀತ, ಮಾತಿ ಬಾನಿ ತಂಡದ ಇಂಪಿನ ನೆನಪಿನೊಂದಿಗೆ ಉತ್ಸವ ಕೊನೆಗೊಂಡಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT