ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡಿಸುವಾತನ ಒಲವು ನಲಿವುಗಳು

Last Updated 27 ಜೂನ್ 2016, 19:30 IST
ಅಕ್ಷರ ಗಾತ್ರ

ನಗರದಲ್ಲಿ ಇತ್ತೀಚೆಗೆ ‘ಕ್ಯಾರಿಯೋಕೆ’ ಒಂದು ಟ್ರೆಂಡ್‌ ಆಗಿ ರೂಪುಗೊಳ್ಳುತ್ತಿದೆ. ಸಾಮಾನ್ಯ ಜನರನ್ನೂ ಹಾಡಲು ಪ್ರೇರೇಪಿಸುವ ಈ ಕಾರ್ಯಕ್ರಮನ್ನು ನಿರ್ವಹಿಸುವವರನ್ನು ಕೆ.ಜೆ (ಕ್ಯಾರಿಯೋಕೆ ಜಾಕಿ) ಎನ್ನುತ್ತಾರೆ. ಬೆಂಗಳೂರಿನ ಪ್ರಸಿದ್ಧ ಕ್ಯಾರಿಯೋಕೆ ಜಾಕಿಗಳಲ್ಲಿ ‘ಕೆಜೆ’ ನವೀನ್‌ ಕೂಡ ಒಬ್ಬರು.

ಜೆ (ಕ್ಯಾರಿಯೋಕೆ ಜಾಕಿ) ನವೀನ್‌ ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿಯೇ. ಚಿಕ್ಕಂದಿನಿಂದ ಸಂಗೀತದ ಗಂಧವನ್ನು ತಮ್ಮೊಳಗೆ ತುಂಬಿಕೊಳ್ಳುತ್ತಲೇ ಬೆಳೆದ ಅವರು ಕಾಲೇಜು ದಿನಗಳಲ್ಲಿಯೇ ಡಿಜೆ ಆಗಿ ಕೆಲಸ ಪ್ರಾರಂಭಿಸಿದ್ದರು.

1997ರಲ್ಲಿ ಡಿಜೆ ಆಗಿ ಕಾರ್ಯಕ್ರಮ ಕೊಡಲಾರಂಭಿಸಿದಾಗ ಅವರಿಗಿನ್ನೂ 20 ವರ್ಷವಷ್ಟೇ. ಆರಂಭದಲ್ಲಿ ಬೇರೆ ಬೇರೆ ಡಿಜೆಗಳ ಜತೆ ಸಹಾಯಕನಾಗಿ ಕೆಲಸ ಮಾಡಿದ ಅನುಭವವೂ ಅವರಿಗಿತ್ತು.

ಸದ್ಯಕ್ಕೆ ಸ್ವಂತ ಕಂಪೆನಿ ಆರಂಭಿಸಿರುವ ನವೀನ್‌ ಸಂಗೀತದ ಸಂಗವನ್ನು ಮಾತ್ರ ಹಾಗೆಯೇ ಉಳಿಸಿಕೊಂಡು ಬಂದಿದ್ದಾರೆ.
ಆರಂಭದಲ್ಲಿ ಖಾಸಗಿ ಕಂಪೆನಿಗಳಲ್ಲಿ ಡಿಜೆ ಕೆಲಸ ಮಾಡಿದ ಅವರು 2012ರಿಂದ ಅದರಲ್ಲಿ ಗಂಭೀರವಾಗಿ ತೊಡಗಿಸಿಕೊಂಡರು. ಈ ಸಮಯದಲ್ಲಿಯೇ ಅವರ ಒಲವು ಕ್ಯಾರಿಯೋಕೆ ಕಡೆಗೆ ಹೊರಳಿದ್ದು.

‘ಡಿಜೆ ಅಂದರೆ ಅಂದರೆ ಸಂಗೀತ ಪ್ಲೇ ಮಾಡುವ ಕೆಲಸವಷ್ಟೇ. ತಾನು ಪ್ಲೇ ಮಾಡಿದ ಸಂಗೀತಕ್ಕೆ ಜನರು ನರ್ತಿಸುವಂತೆ ಮಾಡುವ ಜವಾಬ್ದಾರಿ ಅವನಿಗಿರುತ್ತದೆ. ಆದರೆ ಕ್ಯಾರಿಯೋಕೆ ಜಾಕಿ ಕೆಲಸ ಹಾಗಲ್ಲ. ಅಲ್ಲಿ ಜನರಿಂದ ಹಾಡನ್ನು ಹಾಡಿಸಬೇಕು.

ಅವರನ್ನು ನಮ್ಮ ಸಂಗೀತದಲ್ಲಿ ಭಾಗಿಯಾಗಿಸಿಕೊಳ್ಳಬೇಕು. ಇಲ್ಲಿ ಜನರು ಹೆಚ್ಚು ಎಂಜಾಯ್‌ ಮಾಡಲು ಸಾಧ್ಯವಾಗುತ್ತದೆ. ಈ ಕಾರಣದಿಂದಲೇ ನನಗೆ ಕ್ಯಾರಿಯೋಕೆ ಕುರಿತು ಆಸಕ್ತಿ ಹುಟ್ಟಿದ್ದು’ ಎಂದು ಅವರು ವಿವರಿಸುತ್ತಾರೆ.

‘ಸಂಗೀತ ಎಲ್ಲರಿಗೂ ಇಷ್ಟವಾಗಿರುತ್ತದೆ. ಅಲ್ಲದೇ ತಮ್ಮಿಷ್ಟದ ಹಾಡುಗಳನ್ನು ಗುನುಗಿಕೊಳ್ಳುವ ಅಭ್ಯಾಸವಂತೂ ಇದ್ದೇ ಇರುತ್ತದೆ. ಹಲವರು ಸೇರಿಕೊಂಡು ಹಾಡಿದಾಗ ಅಲ್ಲಿ ಒಂದು ಚೈತನ್ಯ ಹುಟ್ಟಿಕೊಳ್ಳುತ್ತದೆ.ಆ ಚೈತನ್ಯವೇ ನನ್ನನ್ನು ಆ ಪ್ರಕಾರದತ್ತ ಸೆಳೆದಿದ್ದು’ ಎನ್ನುವ ನವೀನ್‌ ಈಗಲೂ ಡಿಜೆ ಕೆಲಸವನ್ನು ಪೂರ್ತಿಯಾಗಿ ತೊರೆದಿಲ್ಲ. ಆಗೀಗ ಡಿಜೆ ಆಗಿಯೂ ಕಾರ್ಯಕ್ರಮ ನೀಡುವುದಿದೆ.
ತಮ್ಮ  ವೃತ್ತಿ ಅವಶ್ಯಕತೆಗೋಸ್ಕರವೇ ನವೀನ್‌ ಬಳಿ ಸಾಕಷ್ಟು ಹಾಡುಗಳ ಸಂಗ್ರಹವಿದೆ.

‘ಹೀಗೆ ಸಾಧ್ಯವಾದಷ್ಟೂ ಹಾಡುಗಳನ್ನು ಸಂಗ್ರಹಿಸುವುದು ಕೆ.ಜೆ. ವೃತ್ತಿಯಲ್ಲಿರುವವರ ಜವಾಬ್ದಾರಿ’ ಎಂದು ಅವರು ನಂಬಿಕೊಂಡಿದ್ದಾರೆ. ಜನರು ಬಯಸುವ ಎಲ್ಲ ಬಗೆಯ ಹಾಡುಗಳೂ ತಮ್ಮ ಸಂಗ್ರಹದಲ್ಲಿರುವಂತೆ ಅವರು ನೋಡಿಕೊಳ್ಳುತ್ತಾರೆ. ತಮ್ಮ ಬಳಿ ಇರದ ಹಾಡುಗಳಿಗಾಗಿ ಬೇರೆಯವರನ್ನು ಕೇಳುತ್ತಾರೆ. ಕೆಲವೊಮ್ಮೆ ಅಂತರ್ಜಾಲದಲ್ಲಿ ಸಾಹಿತ್ಯ ಹುಡುಕಿ ಅದಕ್ಕೆ ತಾವೇ ಸಂಗೀತ ಸಂಯೋಜಿಸುವುದೂ ಇದೆ.

ಒಂದು ಹಾಡು ಸಿಕ್ಕಿದಾಗ ಅದನ್ನು ಕ್ಯಾರಿಯೋಕೆ ಕಾರ್ಯಕ್ರಮಕ್ಕೆ ಸಿದ್ಧಪಡಿಸಲು ಕೆಜೆಗೆ ತಾಂತ್ರಿಕ ಜ್ಞಾನವೂ ಅವಶ್ಯ. ಹಾಡಿನ ಗಾಯನ ಭಾಗವನ್ನು ಸಾಫ್ಟ್‌ವೇರ್‌ ಮುಖಾಂತರ ತೆಗೆದು ಸಂಗೀತವನ್ನಷ್ಟೇ ಉಳಿಸಿಕೊಳ್ಳಲಾಗುತ್ತದೆ. ‘ತಾಂತ್ರಿಕ ಜ್ಞಾನವಷ್ಟೇ ಅಲ್ಲ, ಒಳ್ಳೆಯ ಕೆಜೆ ಆಗಲು ಸಂಗೀತ ಜ್ಞಾನವೂ ಬೇಕು ’ ಎನ್ನುತ್ತಾರೆ ನವೀನ್‌.

‘ಒಬ್ಬ ಡಿಜೆಗೆ ಎಷ್ಟು ಸಂಗೀತ ಪ್ರಜ್ಞೆ ಬೇಕಾಗುತ್ತದೆಯೋ ಅಷ್ಟೇ ಸಂಗೀತ ಜ್ಞಾನ ಕ್ಯಾರಿಯೋಕೆ ಷೋ ನೀಡುವವರಿಗೂ ಬೇಕಾಗುತ್ತದೆ. ಕಾರ್ಯಕ್ರಮದ ಆರಂಭದಲ್ಲಿಯೇ ಜೋರು ಸಂಗೀತದ ಹಾಡು ಹಾಕಬಾರದು. ಆರಂಭದಲ್ಲಿ ಮೆಲುವಾದ ಹಾಡುಗಳನ್ನು ಹಾಕಿ ನಂತರ ಜನರು ಆ ವಾತಾವರಣಕ್ಕೆ ಹೊಂದಿಕೊಂಡ ಮೇಲೆ ಫಾಸ್ಟ್‌ ಬೀಟ್‌ ಹಾಡುಗಳನ್ನು ಹಾಕಬೇಕು’ ಎಂದು ಅವರು ತಮ್ಮ ವೃತ್ತಿಜೀವನದ ಕೌಶಲಗಳ ಕುರಿತು ವಿವರಿಸುತ್ತಾರೆ.

‘ಸಂಗೀತದ ಕುರಿತು ಬದಲಾಗುತ್ತಿರುವ ಜನರ ಅಭಿರುಚಿಯನ್ನು ಗ್ರಹಿಸುವುದು ಕೆಜೆಗಳಿಗೊಂದು ಸವಾಲು’ ಎನ್ನುವ ನವೀನ್‌ ಅವರು ಈ ಸವಾಲನ್ನು ನಿರ್ವಹಿಸಲು ತಮ್ಮದೇ ಆದ ದಾರಿಗಳನ್ನು ಕಂಡುಕೊಂಡಿದ್ದಾರೆ.

ತಮ್ಮ ಬಿಡುವಿನ ಅವಧಿಯಲ್ಲಿ ಅವರು ಸಂಗೀತವನ್ನು ಕೇಳುತ್ತಿರುತ್ತಾರೆ. ಸಂಗೀತ ವಾಹಿನಿಗಳು, ಎಫ್‌.ಎಂ ರೇಡಿಯೊಗಳನ್ನು ಕೇಳುತ್ತಲೇ ಇರುತ್ತಾರೆ.  ಹಾಗೆಯೇ ತಮ್ಮ ಸ್ನೇಹಿತರ ಅಭಿಪ್ರಾಯಗಳ ಮೂಲಕವೂ ಸಂಗೀತ ಜಗತ್ತಿನ ಹೊಸ ಟ್ರೆಂಡ್‌ಗಳ ಬಗ್ಗೆ ಅವರು ತಿಳಿದುಕೊಳ್ಳುತ್ತಾರೆ.

ಬೆಂಗಳೂರಿನ ಕ್ಯಾರಿಯೋಕೆ ಜಗತ್ತಿನಲ್ಲಿ ಕನ್ನಡದ ಹಾಡುಗಳಿಗೂ ಜಾಗವಿದೆಯೇ? ಎಂದು ಪ್ರಶ್ನಿಸಿದರೆ ನವೀನ್‌ ಕೊಂಚ ಹೊತ್ತು ಸುಮ್ಮನಾಗಿ ಆಮೇಲೆ ವಿವರಿಸಿದ್ದು ಹೀಗೆ: ‘ಕಳೆದ ನಾಲ್ಕು ವರ್ಷಗಳಿಂದಲೂ ನಾನು ಕ್ಯಾರಿಯೋಕೆ ಷೋ ಕೊಡ್ತಿದೀನಿ. ಈ ಥರದ ಕಾರ್ಯಕ್ರಮಗಳಲ್ಲಿ ಶೇ 98ರಷ್ಟು ಜನ ಇಂಗ್ಲಿಷ್‌ ಹಾಡು ಕೇಳುತ್ತಾರೆ.

ಉಳಿದ ಸ್ವಲ್ಪ ಜನರು ಹಿಂದಿ ಹಾಡುಗಳನ್ನು ಕೇಳುತ್ತಾರೆ. ಆದರೆ ಕನ್ನಡದ ಹಾಡನ್ನು ಕೇಳಿದವರು ಒಬ್ಬರೋ ಇಬ್ಬರೋ ಅಷ್ಟೇ’ ಎನ್ನುವ ಅವರು ಅದಕ್ಕೆ ಕಾರಣವನ್ನೂ ವಿಶ್ಲೇಷಿಸುತ್ತಾರೆ.

‘ಇದೊಂದು ಟ್ರೆಂಡ್‌ ಆಗಿಬಿಟ್ಟಿದೆ. ಇಂಥ ಕಾರ್ಯಕ್ರಮಗಳಿಗೆ ಹೋಗುವಾಗ ಇಂಗ್ಲಿಷ್‌ ಹಾಡುಗಳನ್ನೇ ಕೇಳಬೇಕು ಎಂಬ ಮನಸ್ಥಿತಿಯಲ್ಲಿಯೇ ಬರುತ್ತಾರೆ. ಬೇರೆ ಭಾಷೆಗಳ ಹಾಡನ್ನು ಕೇಳುವ ಮನಸ್ಥಿತಿಯೇ ಅವರಿಗಿರುವುದಿಲ್ಲ. ಪಬ್‌ಗಳಲ್ಲಿಯೂ ವಾತಾವರಣ ಹೀಗೆಯೇ ಇದೆ. ಜನರು ಏನನ್ನು ಬಯಸುತ್ತಾರೆಯೋ ಅದನ್ನು ನಾವು ಕೊಡಬೇಕಾಗುತ್ತದೆ. ಅದು ನಮ್ಮ ವೃತ್ತಿಯ ಅನಿವಾರ್ಯತೆ’ ಎಂಬುದು ಅವರ ವಿವರಣೆ.

ಸಂಗೀತದ ಬಗೆಗೆ ಆಸಕ್ತಿ ಮತ್ತು ಸಾಕಷ್ಟು ಹಾಡುಗಳ ಸಂಗ್ರಹ ಇರುವ ಯಾರು ಬೇಕಾದರೂ ಕ್ಯಾರಿಯೋಕೆ ಜಾಕಿ ಆಗಬಹುದು ಎನ್ನುವ ನವೀನ್‌, ಒಂದಿಷ್ಟು ಅನುಭವ ಪಡೆದುಕೊಂಡ ನಂತರ ಅದನ್ನೇ ವೃತ್ತಿಯನ್ನಾಗಿಯೂ ನಡೆಸಿಕೊಂಡು ಹೋಗಬಹುದು ಎಂದು ಅವರು ಸಲಹೆ ನೀಡುತ್ತಾರೆ.

ಹೊಸ ಟ್ರೆಂಡ್‌ ‘ಕ್ಯಾರಿಯೋಕೆ’
‘ಕ್ಯಾರಿಯೋಕೆ’ ಮೂಲವಿರುವುದು ಜಪಾನ್‌ನಲ್ಲಿ. ಆ ದೇಶದಲ್ಲಿ ಕ್ಯಾರಿಯೋಕೆ ತುಂಬ ಜನಪ್ರಿಯ ಪ್ರಕಾರ. ಇದನ್ನು ನಡೆಸಿಕೊಡುವವನನ್ನು ಕ್ಯಾರಿಯೋಕೆ ಜಾಕಿ ಎಂದು ಕರೆ ಯುತ್ತಾರೆ.

ಈ ಕಾರ್ಯಕ್ರಮದಲ್ಲಿ ಒಂದು ಪರದೆ ಇರುತ್ತದೆ. ಅದರಲ್ಲಿ ಹಾಡಿನ ಸಾಹಿತ್ಯ ಪ್ರದರ್ಶಿಸಲಾಗುತ್ತದೆ. ಹಾಗೆಯೇ ಹಿನ್ನೆಲೆ ಸಂಗೀತವೂ ಪ್ಲೇ ಆಗುತ್ತದೆ. ಅದಕ್ಕೆ ತಕ್ಕಂತೆ ಜನರು ಪರದೆಯ ಮೇಲಿನ ಸಾಹಿತ್ಯವನ್ನು ಓದಿ ಹಾಡು ಹೇಳುತ್ತಾರೆ. ಅವರನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಂಡು ಹೋಗುವ ಕೆಲಸ ಕೆ.ಜೆ. ಕೆಲಸ.

ಜಪಾನ್‌ ದೇಶದ ಹಳೆಯ ಕಾರ್ಯಕ್ರಮವಾದರೂ ಕ್ಯಾರಿಯೋಕೆ ಬೆಂಗಳೂರನ್ನು ಪ್ರವೇಶಿಸಿಸಿದ್ದು ಕಳೆದ ನಾಲ್ಕೈದು ವರ್ಷಗಳ ಹಿಂದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಕ್ಯಾರಿಯೋಕೆ ತುಂಬ ಜನಪ್ರಿಯವಾಗುತ್ತಿರುವ ಕಾರ್ಯಕ್ರಮ.

‘ಮೊದಲೆಲ್ಲ ಮದುವೆಗಳಲ್ಲಿ ಆರ್ಕೆಸ್ಟ್ರಾ ಇಡುತ್ತಿದ್ದರು. ಆಮೇಲೆ ಡಿಜೆಗಳನ್ನು ನಿಯೋಜಿಸಲು ಶುರು ಮಾಡಿದರು. ಆದರೆ ಈಗ ಮದುವೆಗಳಲ್ಲಿ ಕ್ಯಾರಿಯೋಕೆ ಏರ್ಪಡಿಸುವುದು ಒಂದು ಟ್ರೆಂಡ್‌ ಆಗಿ ರೂಪುಗೊಂಡಿದೆ’ ಎಂದು ಗುರುತಿಸುತ್ತಾರೆ ಕೆಜೆ ನವೀನ್‌.

ಕೆಜೆ ನವೀನ್‌ ಅವರ ಫೇಸ್‌ಬುಕ್‌ ಪುಟದ ಕೊಂಡಿ:  facebook.com/kjnav

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT