ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡಿ–ಕುಣಿದು ದಣಿವು ಮರೆತು...

Last Updated 5 ಮೇ 2016, 19:30 IST
ಅಕ್ಷರ ಗಾತ್ರ

ಬೆಳಿಗ್ಗೆಯಿಂದ ರಾತ್ರಿಯವರೆಗೆ ಯಂತ್ರಗಳೊಂದಿಗೆ ದುಡಿದು ಹೈರಾಣಾದ ಮನಸ್ಸು–ದೇಹಗಳಿಗೆ ನವ ಚೈತನ್ಯ ತುಂಬಲು ಐಟಿಪಿಬಿ (ಇಂಟರ್‌ನ್ಯಾಷನಲ್‌ ಟೆಕ್‌ ಪಾರ್ಕ್‌) ಹೊಸ ದಾರಿ ಕಂಡುಕೊಂಡಿದೆ.

ನಗರೀಕರಣ, ಕೈಗಾರಿಕೀಕರಣ ಹಾಗೂ  ಜಾಗತೀಕರಣದ ಗಾಳಕ್ಕೆ ಸಿಕ್ಕು ಮನುಷ್ಯನೂ ಯಂತ್ರಗಳಲ್ಲಿ ಒಬ್ಬನಾಗಿ ಹೋಗಿದ್ದಾನೆ. ಆದರೆ ಅದು ಅವನ ಮಾನಸಿಕ, ಸಾಮಾಜಿಕ ಬದುಕಿಗೆ ವಿರುದ್ಧವಾದುದು.

‘ಮಾನವ ಮೂಲತಃ ಸಂಘ ಜೀವಿ’ ಸಾಂಘಿಕ ಜೀವನ ಅವನಲ್ಲಿ ಹೆಚ್ಚಿನ ಚೈತನ್ಯ, ಸಾಮರ್ಥ್ಯ ಹಾಗೂ ಜೀವನೋತ್ಸಾಹ ತುಂಬಬಲ್ಲದು’ ಎನ್ನುವುದು ಐಟಿಪಿಬಿ ನಂಬಿಕೆ.

ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸಂಸ್ಥೆ ವಿವಿಧ ಸಂಸ್ಥೆಗಳಲ್ಲಿ, ಕಾರ್ಪೊರೇಟ್‌ ಕಂಪೆನಿಗಳಲ್ಲಿ ದುಡಿಯುವವರಿಗಾಗಿ ಕೆಲವು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದೆ.

ವರ್ಷಪೂರ್ತಿ ನಡೆಯುವ ಈ ಚಟುವಟಿಕೆಗಳಲ್ಲಿ ಹಾಡು, ಹರಟೆ, ನಗು, ಆಟೋಟ, ಸಂಗೀತ, ನಾಟಕ–ನೃತ್ಯ ಸೇರಿದಂತೆ ಅನೇಕ ಕಾರ್ಯಕ್ರಮಗಳು ಸೇರಿವೆ. ‘ಸದಾ ಆತಂಕ, ಒತ್ತಡ ಹಾಗೂ ಚಿಂತೆಗಳ ನಡುವೆಯೇ ಬದುಕುವ ಇಂದಿನ ದುಡಿಯುವ ವರ್ಗ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವ ಮಾರ್ಗಗಳಿಗಾಗಿ ತಡಕಾಡುತ್ತಿದೆ. ಸಂಘ ಜೀವನದ ಮೂಲ ಗುಣವನ್ನೇ ಕಳೆದುಕೊಂಡು, ಹೊರಗೂ–ಒಳಗೂ ಏಕಾಂಗಿತನವನ್ನು ಅನುಭವಿಸುತ್ತಿದೆ.

ಅಂಥವರಿಗೆ ಒಂದಷ್ಟು ಮನರಂಜನೆಯ ಜೊತೆಗೆ ಒತ್ತಡ ನಿವಾರಣೆಯ ಮಾರ್ಗಗಳನ್ನು ಕಲ್ಪಿಸಿಕೊಡುವುದು ನಮ್ಮ ಉದ್ದೇಶ’ ಎನ್ನುತ್ತಾರೆ ಐಟಿಪಿಬಿ ನಗರ ಮುಖ್ಯಸ್ಥ ಅಶ್ವಿನ್‌ ಶೆಟ್ಟಿ. ‘ಕೆಲವರು ವಾರಾಂತ್ಯಗಳಲ್ಲಿ ಕುಟುಂಬ ಅಥವಾ ಸ್ನೇಹಿತರೊಟ್ಟಿಗೆ ಕಾಲ ಕಳೆಯುತ್ತಾರೆ.

ಇದೂ ಕೂಡ ಕೆಲ ಮಟ್ಟಿಗೆ ಒತ್ತಡ ನಿವಾರಣೆಗೆ ಸಹಾಯವಾಗುತ್ತದೆ. ಇನ್ನೂ ಕೆಲವು ಕಂಪೆನಿಗಳೇ ತಮ್ಮ ನೌಕರರ ಒತ್ತಡ ನಿವಾರಣೆಗೆ ಕೆಲ ಚಟುವಟಿಕೆಗಳನ್ನು ಏರ್ಪಡಿಸುತ್ತಾರೆ. ಇದರ ನಡುವೆ ಆಯ್ದ ಕೆಲವು ಕಾರ್ಪೊರೇಟ್‌ ಕಂಪೆನಿಗಳಿಗೆ ಐಟಿಪಿಬಿ ಸಹ ‘ಸ್ಟ್ರೆಸ್‌ ಬೂಸ್ಟರ್‌’ ಚಟುವಟಿಕೆಗಳನ್ನು ನಡೆಸುತ್ತ ಬಂದಿದೆ’ ಎಂದು ವಿವರಿಸುತ್ತಾರೆ ಅವರು.

ಇತ್ತೀಚೆಗೆ ಟೆಕ್‌ ಪಾರ್ಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಅಮಿತ್‌ ತ್ರಿವೇದಿ ಅವರ ಗಾನ ಮೋಡಿಗೆ ಒಳಗಾದ ಐಟಿ ಜನ ಅವರೊಂದಿಗೆ ಹಾಡಿ ಕುಣಿದು ಸಂತಸ ಪಟ್ಟರು. ತ್ರಿವೇದಿ ಹಾಡಿಗೆ ಹೆಜ್ಜೆ ಹಾಕುತ್ತ ಕೆಲಸದ ಒತ್ತಡ ಮರೆತು ಖುಷಿಯಾದರು. ಅಲ್ಲದೇ, ದಿನವಿಡಿ ಹಲವಾರು ಕ್ರೀಡಾ ಚಟುವಟಿಕೆಗಳಲ್ಲಿಯೂ ಮೈ ದುಡಿಸಿ ದಣಿದರು.

ದಿನಕಳೆದಿದ್ದೇ ಗೊತ್ತಾಗಲಿಲ್ಲ
ಐಟಿ ಸಮುದಾಯಕ್ಕೆಂದೇ ಏನೋ ಚಟುವಟಿಕೆ ನಡೆಸಲಾಗುತ್ತಿದೆ, ಅದೂ ಉಚಿತ ಎನ್ನುವುದನ್ನು ಕೇಳಿ ಹೋದೆ. ಆಮೇಲೆ ಗೊತ್ತಾಯಿತು, ನಿಜಕ್ಕೂ ಇದೊಂದು ಅತ್ಯುತ್ತಮ ಪ್ರಯತ್ನ.

ವಾರಪೂರ್ತಿ ಕಂಪ್ಯೂಟರ್‌ ಮುಂದೆ ಕುಳಿತು ಕೆಲಸ ಮಾಡುವ ನಮಗೆ ಕೆಲಸ ಮುಗಿಸಿಕೊಂಡು ಹೋಗುವಾಗ ನಿಜಕ್ಕೂ ಒಂದು ಥರ ಮಂಕು ಕವಿದಂತಾಗಿರುತ್ತದೆ.  ಒತ್ತಡ ನಿವಾರಣೆಗೆ ಟಿವಿ, ಸಿನಿಮಾ, ಶಾಪಿಂಗ್‌ ಬಿಟ್ಟರೆ ಬೇರೆ ಮಾರ್ಗಗಳು ಗೊತ್ತಿಲ್ಲ. ಆದರೆ ಇಲ್ಲಿ ಆಟೋಟಗಳಲ್ಲಿ ಭಾಗವಹಿಸಿದ್ದು ಖುಷಿ ಅನಿಸಿತು. ಶಾಲಾ ದಿನಗಳು ನೆನಪಾದವು.

ನಾನು ಶಾಲೆ–ಕಾಲೇಜುಗಳಲ್ಲಿ ಓದುವಾಗ ಕ್ರೀಡಾಪಟು ಆಗಿದ್ದೆ. ಈ ಬ್ಯುಸಿ ಜೀವನಕ್ರಮದಲ್ಲಿ ಅವೆಲ್ಲವೂ ಮರೆತು ಹೋಗಿತ್ತು. ಈಗ ಮತ್ತೆ ಆ ದಿನಗಳ ನೆನಪಾಗಿ ಮನಸ್ಸು ಉಲ್ಲಸಿತಗೊಂಡಿತು.
– ಜ್ಯೋತಿ ಪ್ರಕಾಶ, ಆಟೊಸ್‌ ಇಂಡಿಯಾ ಪ್ರೈ.ಲಿ.

ಹೊಸ ಸ್ನೇಹಿತರು ಸಿಕ್ಕ ಖುಷಿ
ಫೇಸ್‌ಬುಕ್‌, ಟ್ವಿಟರ್‌ಗಳಲ್ಲಿ ಸಿಗುವ ಸ್ನೇಹಕ್ಕೂ ಮುಖಾಮುಖಿ ಪರಿಚಯವಾಗಿ ಬೆಳೆಯುವ ಸ್ನೇಹಕ್ಕೂ ಇಷ್ಟೊಂದು ಅಂತರವಿರುತ್ತದೆ ಎನ್ನುವುದು ಇದೇ ಮೊದಲು ಗೊತ್ತಾಯಿತು.

ಐಟಿಪಿಬಿ ಏರ್ಪಡಿಸಿದ್ದ ಚಟುವಟಿಕೆಗಳಲ್ಲಿ ಬೇರೆ ಬೇರೆ ಕಂಪೆನಿಗಳ ಸ್ನೇಹಿತರು ಸಿಕ್ಕರು. ಅಲ್ಲದೇ, ಈ ವಾತಾವರಣ ಶಾಲಾ ದಿನಗಳನ್ನು ನೆನಪಿಸಿತು. ಎಷ್ಟೊ ದಿನಗಳಿಂದ ಕ್ರಿಕೆಟ್‌ ಆಡಬೇಕು ಎಂದರೂ ಆಗಿರಲಿಲ್ಲ. ಅದಕ್ಕಾಗಿ ಟೀಮ್‌ ತಯಾರಾಗಬೇಕಲ್ಲವೇ? ಆದರೆ ಇಲ್ಲಿನ ಆಟೋಟ–ಚಟುವಟಿಕೆಗಳು ಖುಷಿ ಕೊಟ್ಟವು.

ನಿಜಕ್ಕೂ ಅದ್ಭುತ ಅನುಭವ.  ಇದೇ ಮೊದಲ ಬಾರಿಗೆ ಇಂಥದ್ದೊಂದು ಚಟುವಟಿಕೆಯಲ್ಲಿ ಭಾಗವಹಿಸಿದೆ. ಇನ್ನು ಮುಂದೆ ಇಂತಹ ಅವಕಾಶ ಬಂದರೆ ಖಂಡಿತ ಅದರ ಭಾಗವಾಗುತ್ತೇನೆ.
ವಿನೋದ್‌ ಕುಮಾರ್‌, ಏಜೀಜ್‌ ಗ್ಲೋಬಲ್‌ ಲಿಮಿಟೆಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT