ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡು ಮರೆತ ಹಕ್ಕಿ ನಾದ...

Last Updated 9 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಮನುಷ್ಯನ ಭಾವಾಭಿವ್ಯಕ್ತಿಗೆ ಹಾಡು ಮುಖ್ಯ ವಾಹಕ. ಬದಲಾದ ತಂತ್ರಜ್ಞಾನ ಹಾಡಿನ ವ್ಯಾಪ್ತಿಯನ್ನು ಹಿಗ್ಗಿಸಿದೆ. ಹೊಸ ಹೊಸ ಆಲೋಚನೆಗಳ ಮೂಲಕ ಮಹಿಳಾ ಸಾಹಿತ್ಯದಲ್ಲಿ ಸದಾ ಹೊಸತರ ಹುಡುಕಾಟದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಲೇಖಕಿಯರ ಸಂಘ ರಾಜ್ಯದ ಆಯ್ದ ಕವಯತ್ರಿಯರ ಭಾವಗೀತೆಗಳ ಧ್ವನಿಸಾಂದ್ರಿಕೆ ತಯಾರಿಸಿದ್ದು, ಬಿಡುಗಡೆಗೆ ಸಿದ್ಧವಾಗಿದೆ.

ಪ್ರತಿ ವರ್ಷ ಸಾಕಷ್ಟು ಸಂಖ್ಯೆಯಲ್ಲಿ ಕವನ ಸಂಕಲನಗಳು ಹೊರಬರುತ್ತಿವೆ. ಇವುಗಳಲ್ಲಿ ಮಹಿಳೆಯರದ್ದೇ ಸಿಂಹಪಾಲು. ಮಹಿಳೆಯರ ಕವಿತೆಗಳಾಗಲೀ, ಭಾವಗೀತೆಗಳಾಗಲೀ ಇದುವರೆಗೆ ಸಿ.ಡಿ ರೂಪದಲ್ಲಿ ಬಂದಿರಲಿಲ್ಲ. ಮಹಿಳೆ ಹೇಗಿರಬೇಕೆಂದು ಚೌಕಟ್ಟು ತೊಡಿಸಿದ ಹಾಗೆ (ತಾಯಿಯಾಗಿ, ಮಡದಿಯಾಗಿ, ಪ್ರೇಯಸಿಯಾಗಿ) ಮಧುರ ಭಾವನೆಗಳನ್ನು ಅಭಿವ್ಯಕ್ತಿಸುವ ಬಹುಪಾಲು ಹಾಡುಗಳನ್ನು ಬರೆದವರು ಪುರುಷರು. ಅವಳು (ಮಹಿಳೆ) ಇರುವ ಹಾಗೆ ಅವಳದೇ ಆದ ರೀತಿಯಲ್ಲಿ ನೋಡುವ ದೃಷ್ಟಿಕೋನದೊಂದಿಗೆ ಲೇಖಕಿಯರ ಸಂಘವು ಸಿ.ಡಿ.ಗೆ ಇಟ್ಟ ಹೆಸರು ‘ಅವಳು ಅವಳೇ’ ಟ್ಯಾಗ್‌ ಲೈನ್‌ ಹೋಲಿಕೆಯೇ ಇಲ್ಲದವಳು.

ಪ್ರಸ್ತುತ ಸಿ.ಡಿ.ಯಲ್ಲಿ ಒಟ್ಟು ಒಂಬತ್ತು ಹಾಡುಗಳಿವೆ. ಕೆ.ಷರೀಫಾ ಅವರ ‘ಹೆಣ್ಣು ಬೇಕು ಬದುಕಿನಲಿ’, ಸುಕನ್ಯಾ ಮಾರುತಿ ಅವರ ‘ಬಂದಿದ್ದಾನೆ ಕೃಷ್ಣ’, ಮಾಲತಿ ಪಟ್ಟಣಶೆಟ್ಟಿ ಅವರ ‘ಹಾಡ ಮರೆತಿ ಯಾಕ ಹಕ್ಕಿ,’ ವೈದೇಹಿ ಅವರ ‘ರಿಮುಝಿಮು ರಿಮುಝಿಮು’, ಹೇಮಾ ಪಟ್ಟಣಶೆಟ್ಟಿ ಅವರ ‘ಎಲ್ಲಿರುವಿ ಸಖ ನೀನು’, ಸವಿತಾ ನಾಗಭೂಷಣ್‌ ಅವರ ‘ಅಪ್ಪ ಅಮ್ಮ ಅನ್ನು’, ವನಮಾಲಾ ಸಂಪನ್ನಕುಮಾರ್‌ ಅವರ ‘ನೀನು ನಾನು ಅರಿತು ಬೆರೆತು’, ಲಲಿತಾ ಸಿದ್ಧಬಸವಯ್ಯ ಅವರ ‘ಒಳ್ಳೊಳ್ಳೆ ಶಬುದಗಳ’, ಎಚ್‌.ಎಲ್‌.ಪುಷ್ಪಾ ಅವರ ‘ಮಂಜು ಮೋಡಗಳ ನಡುವೆ’ ಗೀತೆಗಳಿವೆ.

ಸುಧಾಶರ್ಮ ಚವತ್ತಿ ಅವರು ಸಿ.ಡಿಯ ನಿರ್ವಹಣೆ ಮಾಡಿದ್ದಾರೆ. ಕಲಾದೇಗುಲ ಶ್ರೀನಿವಾಸ್‌ ಸಂಗೀತ ನೀಡಿದ್ದು, ಸಂಗೀತ್‌ ಥಾಮಸ್‌ ವಾದ್ಯ ಸಂಯೋಜನೆ ಮಾಡಿದ್ದಾರೆ. ಸೀಮಾ ರಾಯ್ಕರ್‌, ಕೀರ್ತನ, ಆದಿತ್ಯ ಕಿದ್ಲಾಯ, ಸಂಗೀತಾ ಕಟ್ಟಿ, ಕೆ.ಎಸ್‌.ಸುರೇಖಾ, ಡಾ.ಶಮಿತಾ ಮಲ್ನಾಡ್‌, ಅಭಿಮನ್ಯು ಭೂಪತಿ, ಉದಯ್‌ ಅಂಕೋಲ, ರವೀಂದ್ರ ಸೊರಗಾವಿ ಅವರು ಹಾಡುಗಳನ್ನು ಹಾಡಿದ್ದಾರೆ. ಈ ಯಾವ ಹಾಡುಗಳೂ ನೋವಿನಿಂದ ಅಸಹಾಯಕ ವಾದವಲ್ಲ. ಆಕ್ರೋಶಭರಿತವಾದವಲ್ಲ. ಭ್ರೂಣ ಹತ್ಯೆ, ಕನ್ನಡದ ಅಸ್ಮಿತೆ, ಗಂಡ–ಹೆಂಡತಿ ನಡುವಿನ ಪ್ರೇಮ ಇತ್ಯಾದಿ ವಿಷಯಗಳು ವಿಭಿನ್ನ ನೆಲೆಯಲ್ಲಿ ಅಭಿವ್ಯಕ್ತಿಗೊಂಡಿವೆ.

‘ವಿವಿಧ ಕ್ಷೇತ್ರಗಳಲ್ಲಿ ಮಹಿಳೆ ತನ್ನ ಸಾಮರ್ಥ್ಯ ಸಾಬೀತು ಪಡಿಸಿದ್ದರೂ, ಎರಡನೇ ದರ್ಜೆ ಪ್ರಜೆಯಾಗಿ ಕಾಣುವ ಮನೋಭಾವ ಪೂರ್ಣವಾಗಿ ಅಳಿದಿಲ್ಲ. ವೈಯುಕ್ತಿಕ ನೆಲೆಯಲ್ಲಿ ಹೊರತುಪಡಿಸಿ ಸಾರ್ವತ್ರಿಕವಾಗಿ ಮಹಿಳಾ ಲೇಖಕಿಯರ ಭಾವಗೀತೆಗಳು ಸಿ.ಡಿಯಾಗಿ ರೂಪುಗೊಂಡಿಲ್ಲ. ಮಹಿಳೆಯರು ಹಲವು ಉತ್ತಮ ಗೀತೆಗಳನ್ನು ರಚಿಸಿದ್ದರೂ ಜನರನ್ನು ಮುಟ್ಟಲು ಸಾಧ್ಯವಾಗಿಲ್ಲ. ಸಿ.ಡಿ ಮೂಲಕ ಜನರಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು, ಯುವ ಬರಹಗಾರರನ್ನು ಪ್ರೋತ್ಸಾಹಿಸಲು ಸಾಧ್ಯ ವಾಗಲಿದೆ’ ಎನ್ನುತ್ತಾರೆ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ.

‘ಲೇಖಕಿಯರ ಸಂಘದಿಂದ ಈ ಹಿಂದೆ ಆಯ್ದ ಲೇಖಕಿಯರ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದಾಗ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಅಂತೆಯೇ ಮಹಿಳೆಯರು ರಚಿಸಿರುವ ಭಾವಗೀತೆಗಳ ಧ್ವನಿಸಾಂದ್ರಿಕೆಯನ್ನೇಕೆ ತರಬಾರದು ಎಂಬ ಆಲೋಚನೆ ಮನಸ್ಸಿನಲ್ಲಿ ಮೂಡಿತ್ತು. ಆ ಕನಸು ಇಂದು ಸಾಕಾರಗೊಂಡಿದೆ. ಸದ್ಯ ಒಂಬತ್ತು ಗೀತೆಗಳ ಧ್ವನಿಸಾಂದ್ರಿಕೆ ತಯಾರಿಸಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹಾಡುಗಳ ಧ್ವನಿಸಾಂದ್ರಿಕೆ ತರುವ ಯೋಜನೆ ಇದೆ. ಈ ಮೂಲಕ ಕನ್ನಡ ಸಾಹಿತ್ಯದಲ್ಲಿ ಮಹಿಳಾ ಸಾಹಿತ್ಯದ ಶ್ರೀಮಂತಿಕೆ ಎತ್ತಿಹಿಡಿಯಲು ಸಾಧ್ಯವಾಗಲಿದೆ’ ಎಂದು ವಿವರಿಸುತ್ತಾರೆ ಅವರು.
*
ನಾಳೆ ಧ್ವನಿಸಾಂದ್ರಿಕೆ ಬಿಡುಗಡೆ
ಅಕ್ಟೋಬರ್‌ 11 (ಭಾನುವಾರ) ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಜೆ.ಸಿ.ರಸ್ತೆಯ ಕನ್ನಡ ಭವನದ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜೆಎಸ್‌ಡಬ್ಲ್ಯೂ ಸಹಯೋಗದಲ್ಲಿ ಕವಯತ್ರಿಯರ ಭಾವಗೀತೆಗಳ ಧ್ವನಿಸಾಂದ್ರಿಕೆ ಬಿಡುಗಡೆಯಾಗಲಿದೆ. ಸಾಹಿತಿ ಎಚ್‌.ಎಸ್‌. ವೆಂಕಟೇಶಮೂರ್ತಿ ಅವರು ಧ್ವನಿಸಾಂದ್ರಿಕೆ  ಬಿಡುಗಡೆ ಮಾಡಲಿದ್ದು, ವಿಧಾನ ಪರಿಷತ್‌ ಸದಸ್ಯೆ ಜಯಮಾಲ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಒಂದು ಸಿ.ಡಿ ಬೆಲೆ ₹ 50. ಆದರೆ ಕಾರ್ಯಕ್ರಮದ ದಿನದಂದು ರಿಯಾಯಿತಿ ದರ ₹ 40ಕ್ಕೆ ಮಾರಾಟವಾಗಲಿದೆ.
ಹೆಚ್ಚಿನ ಮಾಹಿತಿಗೆ: 9986840477

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT