ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡ್ಸನ್‌ರ ‘ಕನ್ನಡ ಭಾಷೆಯ ಪ್ರಾಥಮಿಕ ವ್ಯಾಕರಣ’

ಹಳತು ಹೊನ್ನು
Last Updated 27 ಜೂನ್ 2015, 19:30 IST
ಅಕ್ಷರ ಗಾತ್ರ

ಥಾಮಸ್ ಹಾಡ್ಸನ್ ಅವರ ‘ಕನ್ನಡ ಭಾಷೆಯ ಪ್ರಾಥಮಿಕ ವ್ಯಾಕರಣ’, ಅನ್ ಎಲಿಮೆಂಟರಿ ಗ್ರಾಮರ್ ಆಫ್ ಕನ್ನಡ, ಆರ್ ಕ್ಯಾನರೀಸ್ ಲ್ಯಾಂಗ್ವೇಜ್- ಎನ್ನುವ ಈ ಕೃತಿಯು 1859ರಲ್ಲಿ ಬೆಂಗಳೂರಿನ ವೆಸ್ಲಿಯನ್ ಮಿಷನ್ ಪ್ರೆಸ್ಸಿನಲ್ಲಿ ಮೊದಲಿಗೆ ಮುದ್ರಣಗೊಂಡಿತು. ಇದರ ಎರಡನೆಯ ಆವೃತ್ತಿಯು 1864ರಲ್ಲಿ ಅದೇ ಮುದ್ರಣಾಲಯದಿಂದ ಪ್ರಕಟವಾಯಿತು. ಮತ್ತೆ ಈ ಕೃತಿಯು 1923, 1993 ಹಾಗೂ 2008ರಲ್ಲಿ ಪುನರ್ ಮುದ್ರಣಗೊಂಡಿದೆ.

ಹಾಡ್ಸನ್‌ಗಿಂತ ಹಿಂದೆ ಪ್ರಕಟಗೊಂಡ ವಿಲಿಯಂ ಕ್ಯಾರಿ (1817), ಜಾನ್ ಮೆಕರೆಲ್ (1820, ಹಳತು ಹೊನ್ನು 21 ಡಿಸೆಂಬರ್ 2014 )– ಈ ಪಾಶ್ಚಾತ್ಯ ವಿದ್ವಾಂಸರುಗಳ ವ್ಯಾಕರಣಗಳಿಗಿಂತ ಹೆಚ್ಚು ಉಪಯುಕ್ತವೂ ಜನಪ್ರಿಯವೂ ಆಗಿದೆ. ಹಾಡ್ಸನ್‌ರ ಕೃತಿಯನ್ನು ಹೆರಾಲ್ಡ್ ಸ್ಪೆನ್ಸರ್ ಪರಿಷ್ಕರಣೆ ಮಾಡಿ 1914ರಲ್ಲಿ ‘ಕ್ಯಾನರೀಸ್ ಗ್ರಾಮರ್’ (ಹಳತು ಹೊನ್ನು-9 ಅಕ್ಟೋಬರ್ 2011) ಎನ್ನುವ ಹೆಸರಿನಲ್ಲಿ ವೆಸ್ಲಿಯನ್ ಮಿಷನ್ ಪ್ರೆಸ್ಸಿನಿಂದ ಪ್ರಕಟಿಸಿದರು.

ಈ ವ್ಯಾಕರಣ ಪುಸ್ತಕದ ಜೊತೆಗೆ ಹಾಡ್ಸನ್ 1852ರಲ್ಲಿ ಮುನ್ಷಿ ಶ್ರೀನಿವಾಸಯ್ಯ ಅವರ ಜತೆ ರಚಿಸಿದ ‘ವಿಲೇಜ್ ಡಯಲಾಗ್ಸ್’ ಕೃತಿಯಲ್ಲಿ ಮುನ್ಷಿಯವರ ಕನ್ನಡ ವಾಕ್ಯಗಳಿಗೆ ಇಂಗ್ಲಿಷ್‌ ಭಾಷೆಯಲ್ಲಿ ತರ್ಜುಮೆ ಮಾಡಿರುತ್ತಾರೆ. ಈ ಎರಡು ಕೃತಿಗಳನ್ನು ಹೊರತು ಪಡಿಸಿದರೆ ಅವರ ಹೆಸರಿನಲ್ಲಿ ಇತರ ಕೃತಿಗಳು ಕಂಡುಬರುವುದಿಲ್ಲ.

ಆದರೆ ಕನ್ನಡ ಭಾಷೆಯಲ್ಲಿ ಮೈಸೂರಿನ ನಕಾಶೆಯ ದೊಡ್ಡ ಭೂಪಟದ ಪ್ರಕಟಣೆ ಹಾಗೂ ಸ್ವಲ್ಪ ಕಾಲ 1862ರಿಂದ ‘ಹಾರ್ವೆಸ್ಟ್ ಫೀಲ್ಡ್’ ಎನ್ನುವ ಪತ್ರಿಕೆಯನ್ನು ನಡೆಸಿರುವುದು ಇವರ ವಿಶೇಷ. ಉಳಿದಂತೆ ಕನ್ನಡದಲ್ಲಿ ಬರವಣಿಗೆಗಿಂತ ಬರಹಗಾರರಿಗೆ ಪ್ರೋತ್ಸಾಹ ನೀಡಿರುವುದು ಹಾಗೂ ಹಲವಾರು ಶಾಲೆಗಳನ್ನು ಸ್ಥಾಪಿಸಿದ್ದು ಮತ್ತು ಅನೇಕ ಪ್ರಗತಿಪರ ಕಾರ್ಯಗಳನ್ನು ಕೈಗೊಂಡಿದ್ದು ಹಾಡ್ಸನ್‌ರ ಹೆಚ್ಚುಗಾರಿಕೆ.

ಥಾಮಸ್ ಹಾಡ್ಸನ್ 1833ರಲ್ಲಿ ಬೆಂಗಳೂರಿನಲ್ಲಿ ವೆಸ್ಲಿಯನ್ ಮಿಷನರಿಗಳ ಕನ್ನಡದ ಕೈಂಕರ್ಯಕ್ಕೆ ನಾಂದಿ ಹಾಡಿದರು. ಹೀಗಾಗಿ 1786ರಲ್ಲಿ ಇಂಗ್ಲೆಂಡಿನಲ್ಲಿ ಪ್ರಾರಂಭವಾದ ವೆಸ್ಲಿಯನ್ ಸಂಸ್ಥೆ ಮೈಸೂರು ರಾಜ್ಯಕ್ಕೆ ಕಾಲಿಟ್ಟಿತು. ವೆಸ್ಲಿಯನ್ನರ ಮುಖಂಡನಾಗಿದ್ದ ಹಾಡ್ಸನ್ 1834ರಲ್ಲಿ ಬೆಂಗಳೂರಿನ ಕಂಟೋನ್‌ಮೆಂಟ್ ಪ್ರದೇಶದಲ್ಲಿ ಒಂದು ಇಂಗ್ಲಿಷ್ ಶಾಲೆಯನ್ನು ಆರಂಭಿಸಿದರು.

ಇದು ಬೆಂಗಳೂರಿನ ಪ್ರಥಮ ಇಂಗ್ಲಿಷ್ ಶಾಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಶಾಲೆಗೆ ಥಾಮಸ್ ಹಾಡ್ಸನ್, ಕಬ್ಬನ್ ಸಾಹೇಬರಿಂದ 500 ರೂಪಾಯಿಗಳನ್ನು ವಂತಿಗೆ ಕೊಡಿಸಿದ್ದಷ್ಟೇ ಅಲ್ಲದೆ, ಭಾರತದ ಅಂದಿನ ಗವರ್ನಲ್ ಜನರಲ್ ಲಾರ್ಡ್ ವಿಲಿಯಂ ಬೆಂಟಿಂಕ್‌ರಿಂದ 300 ರುಪಾಯಿ ದೇಣಿಗೆ ಕೊಡಿಸಿದರು.

ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು 1833ರಲ್ಲಿ ಮೈಸೂರಿನಲ್ಲಿ ‘ರಾಜಾ ಸ್ಕೂಲ್’ ಎನ್ನುವ ಶಾಲೆಯನ್ನು ಆರಂಭಿಸಿದರು. ಒಡೆಯರು 1840ರಲ್ಲಿ ಥಾಮಸ್ ಹಾಡ್ಸನ್ನರಿಗೆ ಇದರ ನಿರ್ವಹಣೆಯನ್ನು ವಹಿಸಿದರು. ಪಂಡಿತ ಬಿ. ಮಲ್ಲಪ್ಪ ಮುಂತಾದ ಪ್ರಖ್ಯಾತ ದೇಸಿ ವಿದ್ವಾಂಸರು ಈ ಶಾಲೆಯ ಅಧ್ಯಾಪಕರಾಗಿದ್ದರು. 1853ರವರೆಗೆ ವೆಸ್ಲಿಯನ್ನರ ನೇರ ಆಡಳಿತ ನಿರ್ವಹಣೆಗೆ ಈ ಶಾಲೆ ಒಳಪಟ್ಟಿತ್ತು. ಮುಂದೆ ಈ ಶಾಲೆ ಕರ್ನಾಟಕದ ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದಾದ ಮೈಸೂರಿನ ಮಹಾರಾಜಾ ಕಾಲೇಜಾದದ್ದು ಈಗ ಇತಿಹಾಸ. 1877ರಲ್ಲಿ ಹಾಡ್ಸನ್ನರ ನಿವೃತ್ತಿ ಹೊತ್ತಿಗೆ ವೆಸ್ಲಿಯನ್ನರು 60ಕ್ಕೂ ಹೆಚ್ಚು ಶಾಲೆಗಳನ್ನು ತೆರೆದಿದ್ದರು.

ಹಾಡ್ಸನ್ನರ ಇನ್ನೊಂದು ಕೊಡುಗೆ ಎಂದರೆ ಕನ್ನಡದ ಮುದ್ರಣಾಕ್ಷರಗಳ ಸುಧಾರಣೆ. 1843ರ ಹೊತ್ತಿಗೆ ಲಂಡನ್‌ಗೆ ಹೋದ ಅವರು, ಮತ್ತೆ ಮರಳುವಾಗ ಕನ್ನಡದ ಅಕ್ಷರಗಳ ಮೊಳೆಗಳ ಸಂಜ್ಞೆಗಳನ್ನು ಸ್ವತಂತ್ರವಾಗಿ ರೂಪಿಸಿ ಹೊಸದಾಗಿ ಎರಕ ಹೊಯ್ಯಿಸಿ ಬೆಂಗಳೂರಿಗೆ ತಂದರು. 700ಕ್ಕಿಂತ ಹೆಚ್ಚು ಇದ್ದ ಕನ್ನಡಾಕ್ಷರಗಳ ಮೊಳೆಗಳ ಸಂಖ್ಯೆಯನ್ನು ಸಾಕಷ್ಟು ತಗ್ಗಿಸಿ ಸುಧಾರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಹಾಡ್ಸನ್ ಸ್ತ್ರೀ ಪುನರುತ್ಥಾನದ ಬಗ್ಗೆ ಅಧಿಕ ಕಳಕಳಿಯನ್ನು ಹೊಂದಿದ್ದರು.

ವಿಧವಾ ವಿವಾಹ ಹಾಗೂ ವಿಧವೆಯರ ಗೋಳಿನ ಬಗ್ಗೆ ನಾಗಪುರದ ಒಬ್ಬ ಬ್ರಾಹ್ಮಣ, ವಿಲ್ಕಿನ್ಸನ್ ಎನ್ನುವ ಇಂಗ್ಲಿಷ್ ನಾಗರಿಕ, ಸಿ. ಕ್ರಿಸ್ತಮ್ಮ, ಸಿದ್ಧಾಂತಿ ಸುಬ್ರಹ್ಮಣ್ಯ ಶಾಸ್ತ್ರೀ ಹಾಗೂ ಅವರ ಪುತ್ರರಾದ ಸಿದ್ಧಾಂತಿ ಶಿವಶಂಕರ ಶಾಸ್ತ್ರೀ, ಎರಡೆತ್ತಿನ ಮಠಾಧಿಕಾರಿಗಳಾದ ಚನ್ನವೀರಸ್ವಾಮಿಗಳು, ವೆಂಕಟ ರಂಗೋ ಕಟ್ಟಿ ಹಾಗೂ ಶಾಮರಾವ ವಿಠ್ಠಲ ಕೈಕಿಣಿ ಮುಂತಾದವರು ವಿಧವಾ ಸಮಸ್ಯೆಗಳನ್ನು ಕುರಿತು ಚಿಂತಿಸಿ ಪುಸ್ತಕಗಳನ್ನು ರಚಿಸಿ ಪ್ರಕಟಿಸಲು ನೆರವಾದರು.

ಈ ಹಿನ್ನೆಲೆಯಲ್ಲಿ ಸಿದ್ಧಾಂತಿ ಸುಬ್ರಹ್ಮಣ್ಯ ಶಾಸ್ತ್ರೀ ಹಾಗೂ ಸಿದ್ಧಾಂತಿ ಶಿವಶಂಕರ ಶಾಸ್ತ್ರೀ ತಂದೆ ಮಕ್ಕಳ ಜೋಡಿ ಸುಮಾರು 1900ರಲ್ಲಿ ರಚಿಸಿದ ‘ಸ್ತ್ರೀ ಪುನರ್ ವಿವಾಹವನ್ನು ಕುರಿತು’ ಎನ್ನುವ ಕೃತಿಯನ್ನು ಉಲ್ಲೇಖಿಸಲೇಬೇಕು. ಅತ್ಯಂತ ಪ್ರಗತಿಪರ ಚಿಂತನೆಗಳನ್ನು ಹೊಂದಿದ್ದ ಥಾಮಸ್ ಹಾಡ್ಸನ್ 1880ರ ಹೊತ್ತಿಗೆ ಅಸ್ವಸ್ಥರಾಗಿ ಸ್ವದೇಶಕ್ಕೆ  ಹಿಂದಿರುಗಿದರು. ಬೆಂಗಳೂರಿನ ತಮ್ಮ ವಾಸ್ತವ್ಯದ ನೆನಪಿಗಾಗಿ ಲಂಡನ್ನಿನಲ್ಲಿದ್ದ ಮನೆಗೆ ‘ಬೆಂಗಳೂರು ಕಾಟೇಜು’ ಎಂದು ಹೆಸರಿಟ್ಟಿದ್ದರು ಎಂದು ಶ್ರೀನಿವಾಸ ಹಾವನೂರರು ತಮ್ಮ ಕೃತಿಯಲ್ಲಿ ಉಲ್ಲೇಖಿಸುತ್ತಾರೆ.

ಹಲವಾರು ಮುದ್ರಣಗಳನ್ನು ಹೊಂದಿದ ಹಾಡ್ಸನ್ನನ ಈ ಕನ್ನಡ ಭಾಷೆಯ ಪ್ರಾಥಮಿಕ ವ್ಯಾಕರಣವು ಕೃತಿಯು 107+8 ಪುಟಗಳ ಅಷ್ಟಮ ಡೆಮಿ ಆಕಾರದ ಪುಸ್ತಕ. ಅಂದಿನ ಸರ್ಕಾರಿ ನೌಕರರ, ಮಿಷನರಿಗಳ ಹಾಗೂ ಇತರ ವಿದೇಶಿಯರ ಕನ್ನಡಾಭ್ಯಾಸದ ಸೌಕರ್ಯಕ್ಕಾಗಿ ಹಾಡ್ಸನ್ ಈ ಕೃತಿರಚನೆ ಮಾಡಿದರು.

ಅವರು ಕೃತಿಯ ಮುನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ– “The Tamil, the Telugu and the Canarese, are the three principle languages of South India. The Canarese is spoken by several millions of Hindus who are living under the government of Englishmen. To the servants of Government in the Civil, Judicial, and Educational departments, as well as to the Missionaries, a knowledge of this language is absolutely necessary in order to right discharge of their respective duties”.

ಈ ಕೃತಿಯಲ್ಲಿ ಕನ್ನಡ ವ್ಯಾಕರಣಕ್ಕೆ ಸಂಬಂಧಿಸಿದ 347 ಅಂಶಗಳನ್ನು ನೀಡಲಾಗಿದೆ. ಈ ಪುಸ್ತಕದಲ್ಲಿ ಪ್ರಯೋಗಿಸಿದ ಕನ್ನಡ ಶಬ್ದಗಳಿಗಳನ್ನೂ ಇಂಗ್ಲಿಷಿಗೆ ಅನುವಾದಿಸಿರುವುದರ ಜೊತೆಗೆ ಅದರ ಇಂಗ್ಲಿಷಿನ ಉಚ್ಛಾರಣೆಯನ್ನೂ ನೀಡಲಾಗಿದೆ. ಇಂಗ್ಲಿಷ್ ಭಾಷೆಯಲ್ಲಿರುವ ಈ ವ್ಯಾಕರಣದಲ್ಲಿ ಕನ್ನಡಾಕ್ಷರ ಸಂಕೇತಗಳು, ಕನ್ನಡ ಪದಗಳು ಹಾಗೂ ವಾಕ್ಯಗಳನ್ನು ಕನ್ನಡ ಭಾಷೆಯಲ್ಲಿ ನೀಡಿರುವುದರ ಜೊತೆಗೆ ಇಂಗ್ಲಿಷಿನ ಅನುವಾದಗಳನ್ನೂ ಕೊಡಲಾಗಿದೆ.

ಕನ್ನಡ ಪದಗಳಿಗೆ ಇಂಗ್ಲಿಷಿನಲ್ಲಿ ಅರ್ಥಗಳನ್ನೂ ನೀಡಿರುವುದರಿಂದ ಈ ಪುಸ್ತಕದಲ್ಲಿ ಒಂದು ಪುಟ್ಟ ನಿಘಂಟೂ ಅಡಕವಾಗಿದೆ. ಇದು ದ್ವಿಭಾಷಿಕ ಕೃತಿಯಾದ್ದರಿಂದ ಭಾಷಾಂತರಕಾರರಿಗೂ ಇದು ಒಂದು ಅಚ್ಚುಕಟ್ಟಾದ ಕೈಪಿಡಿಯಂತಿದೆ. ಈ ಕೃತಿಯನ್ನು ಕುರಿತು ಶ್ರೀನಿವಾಸ ಹಾವನೂರರು ‘‘ಮೆಕ್ಕೆರಲ್‌ನ ಕೃತಿಯು ವ್ಯಾಕರಣದ ಎಲ್ಲ ಅಂಶಗಳನ್ನು ಒಳಗೊಂಡಿದ್ದರೂ ನಿರೂಪಣೆಯು ವ್ಯವಸ್ಥಿತವಾಗಿರಲಿಲ್ಲ.

ಕೇವಲ ಹೊಸಗನ್ನಡದ ಅಭ್ಯಾಸ ಮಾಡುವವರಿಗೆ ಅನಗತ್ಯವಾದ ಅನೇಕ ವಿವರಗಳು ಅದರಲ್ಲಿದ್ದುವು. ಹೀಗಾಗಿ ಕೈಪಿಡಿ ಸ್ವರೂಪದ ವ್ಯಾಕರಣವೊಂದನ್ನು ಹಾಡ್ಸನ್ ಸಿದ್ಧಗೊಳಿಸಿದನು. ಇದರಲ್ಲಿ ಮೆಕ್ಕೆರೆಲ್‌ನ ಸ್ಥೂಲ ಅನುಕರಣೆಯಿದ್ದರೂ ಸುವ್ಯವಸ್ಥಿತವಾದ ವಿಷಯ ವಿಭಜನೆ ಮತ್ತು ಸಂಕ್ಷಿಪ್ತತೆ- ಇವು ಹಾಡ್ಸನ್ ವ್ಯಾಕರಣದ ವೈಶಿಷ್ಟ್ಯಗಳಾಗಿವೆ’’ ಎಂದು ಹೇಳಿದ್ದಾರೆ.

ಪ್ರತಿಯೊಂದು ಉದಾಹೃತ ಶಬ್ದ/ವಾಕ್ಯವನ್ನು ಕನ್ನಡದೊಂದಿಗೆ ಇಂಗ್ಲಿಷ್ ಲಿಪಿಯಲ್ಲಿ (transliteration) ಕೊಡಲಾಗಿದೆ. ಜೊತೆಗೆ ಭಾಷಾಂತರವನ್ನು ಕೊಡಲಾಗಿದೆ. ಮೆಕ್ಕೆರೆಲ್ ಸಂಬಂಧಾರ್ಥಕ ಸರ್ವನಾಮಗಳಿಲ್ಲವೆಂದು ಹೇಳಿದ್ದರೆ, ಹಾಡ್ಸನ್ possessive ಸರ್ವನಾಮಗಳನ್ನೂ ಆ ಗುಂಪಿಗೆ ಸೇರಿಸಿದ್ದಾರೆ. ಕ್ರಮರಹಿತ  ಕ್ರಿಯಾಪದಗಳು ನೂರರಷ್ಟು ಇದೆಯೆಂದು ಅವುಗಳ ಪಟ್ಟಿಯನ್ನು ಕೊಟ್ಟಿದ್ದಾರೆ.

‘ವರ್ಣಮಾಲೆ’, ‘ಭಾಷಾಂಗಗಳು’ (ನಾಮಪದ, ಗುಣವಾಚಕ, ಕ್ರಿಯಾಪದ, ಸರ್ವನಾಮ, ಅವ್ಯಯ), ‘ವಾಕ್ಯರಚನಾಕ್ರಮ’ ಹಾಗೂ ‘ಪರಿಶಿಷ್ಟ’ ಎನ್ನುವ ನಾಲ್ಕು ಪ್ರಮುಖ ಅಧ್ಯಾಯಗಳಲ್ಲಿ ಹಾಡ್ಸನ್ ಕನ್ನಡ ವ್ಯಾಕರಣವನ್ನು ಅಕ್ಷರ, ಪದ ಹಾಗೂ ವಾಕ್ಯಗಳ ನೆಲೆಯಲ್ಲಿ ಅಪರಿಚಿತ ಹಾಗೂ ಕಲಿತ ಭಾಷೆಯೊಂದನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ್ದಾರೆ. ಕನ್ನಡದಲ್ಲಿರುವ ಸಪ್ತ ವಿಭಕ್ತಿ ಪ್ರತ್ಯಯಗಳನ್ನು ಅತ್ಯಂತ ಸೂಕ್ಷ್ಮವಾಗಿ ಗುರುತಿಸಿದ್ದಾರೆ. ಪಂಚಮಿ ವಿಭಕ್ತ್ಯರ್ಥವನ್ನು ತೃತೀಯಾ ವಿಭಕ್ತಿ ಪ್ರತ್ಯಯದಿಂದಲೇ ಪ್ರತೀತಗೊಳಿಸಬಹುದೆಂಬುದನ್ನು ಬಾಯಿ ಬಿಟ್ಟು ಹೇಳದಿದ್ದರೂ ಆ ಅಂಶದ ಬಗ್ಗೆ ಸೂಚನೆಗಳಿವೆ.

ಹೀಗಾಗಿ ಭಾಷಾವಿಜ್ಞಾನಿಯೊಬ್ಬನ ಹದ್ದುಗಣ್ಣುಗಳು ಇವನಿಗಿವೆ ಎನ್ನಿಸದೆ ಇರದು. ಪರಿಶಿಷ್ಟದಲ್ಲಿ ಇರುವ– ವ್ಯಾಕರಣ ಪಾರಿಭಾಶಿಕ ಶಬ್ದಗಳು, ಭಿನ್ನರಾಶಿ, ಪ್ರಭವಾದಿ ಹಿಂದೂ ಸಂವತ್ಸರಗಳು, ಮಾಸಗಳು, ಋತುಗಳು, ವಾರಗಳು ಹಾಗೂ ಅದರ ಇಂಗ್ಲಿಷ್ ಹಾಗೂ ಜ್ಯೋತಿಷ್ಯ ಸಂಬಂಧೀನಾಮಗಳು (ಉದಾ-ಬುಧವಾರ=ಸೌಮ್ಯವಾರ ಇತ್ಯಾದಿ)ಅಂದಿನ ಕಾಲದ ಓದುಗರಿಗೆ ಉಪಯುಕ್ತವಾಗಿದ್ದಿತು. ಒಂದು ಹೊಸಭಾಷೆಗೆ ಅಪರಿಚಿತರಾದವರಿಗೆ ಆ ಭಾಷೆಯನ್ನು ಕಲಿಸಲು ಬರೆಯಬೇಕಾದ ವ್ಯಾಕರಣಕ್ಕೆ ಹಾಡ್ಸನ್‌ರ ಈ ಪುಸ್ತಕ ಒಂದು ಒಳ್ಳೆಯ ಮಾದರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT