ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾನಿಕಾರಕ ರಾಸಾಯನಿಕ ನಿಷೇಧಕ್ಕೆ ಚಿಂತನೆ

ಬ್ರೆಡ್‌, ಬನ್‌ಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಪೊಟಾಷಿಯಂ ಬ್ರೊಮೆಟ್‌
Last Updated 24 ಮೇ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬ್ರೆಡ್‌ ಸೇರಿದಂತೆ ಆಹಾರ ಪದಾರ್ಥಗಳಲ್ಲಿ ಬಳಸುವ ಹಾನಿಕಾರಕ  ರಾಸಾಯನಿಕ ಪೊಟಾಷಿಯಂ ಬ್ರೊಮೆಟ್‌ ನಿಷೇಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಎಲ್ಲ ಪ್ರಮುಖ ಬ್ರ್ಯಾಂಡ್‌ಗಳ ಬ್ರೆಡ್‌, ಪಾವ್‌, ಬನ್‌ಗಳಲ್ಲಿ ಕ್ಯಾನ್ಸರ್‌ ರೋಗಕ್ಕೆ ಕಾರಣವಾಗುವ ಹಾನಿಕಾರಕ ರಾಸಾಯನಿಕ ಅಂಶಗಳು ಇರುವುದನ್ನು ನವದೆಹಲಿಯ ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್‌ಇ) ನಡೆಸಿದ ಅಧ್ಯಯನದಲ್ಲಿ ಬೆಳಕಿಗೆ ಬಂದ ನಂತರ ಈ ಬಗ್ಗೆ ಚಿಂತನೆ ನಡೆಸಿದೆ.

ಸಿಎಸ್‌ಇ ನಡೆಸಿದ ಅಧ್ಯಯನವನ್ನು ಗಂಭೀರವಾಗಿ ಪರಿಗಣಿಸಿ   ಶೀಘ್ರ ವರದಿ ನೀಡುವಂತೆ ಭಾರತೀಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ(ಎಫ್‌ಎಸ್‌ಎಸ್‌ಎಐ) ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಸೂಚಿಸಿದ್ದರು.

ಸಿಎಸ್‌ಇ ಅಧ್ಯಯನ ಪರಿಶೀಲಿಸಿ ವರದಿ ನೀಡಿದ ಎಫ್‌ಎಸ್‌ಎಸ್‌ಎಐ, ಪೊಟಾಷಿಯಂ ಬ್ರೊಮೆಟ್‌ ನಿಷೇಧಿಸುವಂತೆ  ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

ಸಿಎಸ್‌ಇ ನಡೆಸಿದ ಅಧ್ಯಯನದಲ್ಲಿ ಬ್ರೆಡ್‌, ಪಾವ್‌ ಹಾಗೂ ಬನ್‌ಗಳಲ್ಲಿ ಪೊಟಾಷಿಯಂ ಬ್ರೊಮೆಟ್‌ ಮತ್ತು ಪೊಟಾಷಿಯ ಐಯೊಡೇಟ್‌ ಇರುವುದು ಪತ್ತೆಯಾಗಿತ್ತು.

‘ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಸಂರಕ್ಷಣೆ ಮತ್ತು ಇತರ ಅಗತ್ಯಗಳಿಗೆ 11 ಸಾವಿರ  ರಾಸಾಯನಿಕಗಳನ್ನು ಬಳಸಲು  ಅವಕಾಶ ನೀಡಲಾಗಿದೆ. ಇವುಗಳಲ್ಲಿ ಪೊಟಾಷಿಯಂ ಬ್ರೊಮೆಟ್‌ ಸಹ ಒಂದು.  ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಿದ ನಂತರ ಪರವಾನಗಿ ನೀಡಿರುವ ಪಟ್ಟಿಯಿಂದ ಪೊಟಾಷಿಯಂ ಬ್ರೊಮೆಟ್‌ ತೆಗೆದು ಹಾಕುವಂತೆ ಶಿಫಾರಸು ಮಾಡಲು ಎಫ್‌ಎಸ್‌ಎಸ್‌ಎಐ ನಿರ್ಧರಿಸಿತು’ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪವನ್‌ ಕುಮಾರ್‌ ಅಗರವಾಲ್‌ ತಿಳಿಸಿದರು.

‘ಶೀಘ್ರದಲ್ಲಿ ಆರೋಗ್ಯ ಸಚಿವಾಲಯ ಪೊಟಾಷಿಯಂ ಬ್ರೊಮೆಟ್‌ಅನ್ನು ಪರವಾನಗಿ ನೀಡಿರುವ ಪಟ್ಟಿಯಿಂದ ಕೈಬಿಡುವ ಕುರಿತು ನಿರ್ಧಾರ ಕೈಗೊಳ್ಳಲಿದೆ.  ನಂತರ ಈ ರಾಸಾಯನಿಕವನ್ನು ನಿಷೇಧಿಸಲಾಗುವುದು’ ಎಂದು ತಿಳಿಸಿದರು.

‘ಪೊಟಾಷಿಯಂ ಐಯೊಡೇಟ್‌ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದ್ದು, ಶೀಘ್ರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಸ್ವಾಗತ: ಎಫ್‌ಎಸ್‌ಎಸ್‌ಎಐ ನಿರ್ಧಾರವನ್ನು ಸಿಎಸ್‌ಇ ಸ್ವಾಗತಿಸಿದ್ದು, ಸಾರ್ವಜನಿಕರ ಆರೋಗ್ಯ ಮೊದಲ ಆದ್ಯತೆಯಾಗಬೇಕು ಎಂದು ಅದು ತಿಳಿಸಿದೆ.

ಅಸೊಚಾಮ್‌ ಅಸಮಾಧಾನ: ಬ್ರೆಡ್‌ ತಯಾರಿಕಾ ಕಂಪೆನಿಗಳಿಗೆ ಬೆಂಬಲ ವ್ಯಕ್ತಪಡಿಸಿರುವ ಕೈಗಾರಿಕೋದ್ಯಮಿಗಳ ಸಂಘಟನೆಯಾದ ‘ಅಸೊಚಾಮ್‌’,   ಕೇವಲ ಭೀತಿಯ ವಾತಾವರಣ ಸೃಷ್ಟಿಸಲು ಕೆಲವು ಸರ್ಕಾರೇತರ ಸಂಸ್ಥೆಗಳು ಪ್ರಯತ್ನಿಸುತ್ತಿವೆ ಎಂದು ಹೇಳಿಕೆ ನೀಡಿದೆ.

‘ಸಂಪೂರ್ಣ ಮಾಹಿತಿಯಿಂದಲೇ ಪೊಟಾಷಿಯಂ ಬ್ರೊಮೆಟ್‌ ಬಳಸಲಾಗುತ್ತಿದೆ. ಸರ್ಕಾರೇತರ ಸಂಸ್ಥೆಗಳು ನಿಗಾ ವಹಿಸಲು ಮುಕ್ತವಾಗಿವೆ. ಆದರೆ, ಕೇವಲ ಉದ್ಯಮಗಳನ್ನು ಗುರಿಯಾಗಿರಿಸಿಕೊಂಡು  ಅಧ್ಯಯನ ಕೈಗೊಳ್ಳಬಾರದು. ಇನ್‌ಸ್ಪೆಕ್ಟರ್‌ ರಾಜ್‌ ವ್ಯವಸ್ಥೆಯನ್ನು ಕೊನೆಗಾಣಿಸಿ ಉದ್ಯಮಕ್ಕೆ ಅನುಕೂಲಕರವಾಗುವ ವಾತಾವರಣವನ್ನು ಕಲ್ಪಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಹೀಗಿರುವಾಗ ಸರ್ಕಾರೇತರ ಸಂಸ್ಥೆಗಳ ನೀತಿಗಳು ಉದ್ಯಮಕ್ಕೆ ಹಾನಿ ಮಾಡಬಹುದು’ ಎಂದು ಅಸೋಚಾಮ್‌ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಎಸ್‌. ರಾವತ್‌ ತಿಳಿಸಿದ್ದಾರೆ.

‘ಎಲ್ಲ ಬ್ರೆಡ್‌ ತಯಾರಕರು ಉದ್ದೇಶಪೂರ್ವಕವಾಗಿ ಅಪಾಯವನ್ನು ತಂದೊಡ್ಡುತ್ತಿದ್ದಾರೆ ಎನ್ನುವ ವಾತಾವರಣ ಸೃಷ್ಟಿಸಲಾಗಿದೆ. ಇದೇ ರೀತಿಯ ಸನ್ನಿವೇಶ ಮ್ಯಾಗಿ ಸಂದರ್ಭದಲ್ಲೂ ಉಂಟಾಯಿತು. ಆದರೆ, ಮತ್ತೆ ಮ್ಯಾಗಿ ಮಾರುಕಟ್ಟೆಗೆ ಬಂತು. ಒಟ್ಟಿನಲ್ಲಿ ಕಂಪೆನಿಗೆ ಮಾತ್ರ ನೂರಾರು ಕೋಟಿ ರೂಪಾಯಿ ನಷ್ಟವಾಯಿತು’ ಎಂದು ತಿಳಿಸಿದ್ದಾರೆ.

ಸಿಎಸ್‌ಇ  ಅಧ್ಯಯನ ಹೇಳಿದ್ದೇನು?
ವಿಜ್ಞಾನ ಮತ್ತು ಪರಿಸರ ಕೇಂದ್ರದ (ಸಿಎಸ್‌ಇ) ಮಾಲಿನ್ಯ ನಿಗಾ ಪ್ರಯೋಗಾಲಯದಲ್ಲಿ  ಪ್ಯಾಕಿಂಗ್‌ ರೂಪದಲ್ಲಿ ದೊರೆಯುವ 38 ಬ್ರ್ಯಾಂಡ್‌ಗಳ  ಬ್ರೆಡ್‌, ಪಾವ್‌, ಬನ್ ಹಾಗೂ ತಿನ್ನಲು ಸಿದ್ಧವಾಗಿರುವ ಬರ್ಗರ್‌ ಬ್ರೆಡ್‌ ಮತ್ತು ಪಿಜ್ಜಾ ಪರೀಕ್ಷಿಸಲಾಗಿತ್ತು.

ಆಗ ಇವುಗಳಲ್ಲಿ  ಪೊಟ್ಯಾಷಿಯಂ ಬ್ರೊಮೆಟ್‌ ಮತ್ತು ಪೊಟ್ಯಾಷಿಯಮ್‌ ಐಯೊಡೇಟ್‌ ಇರುವುದು ಪತ್ತೆಯಾಗಿತ್ತು. ಅಪಾಯಕಾರಿಯಾಗಿರುವ ಈ ರಾಸಾಯನಿಕಗಳನ್ನು ಹಲವು ರಾಷ್ಟ್ರಗಳು ನಿಷೇಧಿಸಿವೆ ಎಂದು ಸಿಎಸ್‌ಇ ತಿಳಿಸಿತ್ತು.

ಇವುಗಳಲ್ಲಿನ ಒಂದು ರಾಸಾಯನಿಕ ‘2ಬಿ ಕಾರ್ಸಿನೊಜೆನ್‌’ ಅಂಶ ಹೊಂದಿದ್ದು, ಕ್ಯಾನ್ಸರ್‌ ರೋಗಕ್ಕೆ ಕಾರಣವಾಗಲಿದೆ.  ಇನ್ನೊಂದು ‘ಥೈರಾಯಿಡ್‌’ ಸಮಸ್ಯೆಗೆ ಕಾರಣವಾಗುತ್ತದೆ. ಆದರೆ, ಭಾರತದಲ್ಲಿ ಈ ರಾಸಾಯನಿಕಗಳನ್ನು ನಿಷೇಧಿಸಿಲ್ಲ ಎಂದು ಸಿಎಸ್‌ಇ ತಿಳಿಸಿತ್ತು.

ಬ್ರಿಟಾನಿಯಾ,ಹಾರ್ವೆಸ್‌ ಗೋಲ್ಡ್‌ ಮತ್ತು  ಕೆಎಫ್‌ಸಿ, ಪಿಜ್ಜಾ ಹಟ್‌, ಡೊಮಿನೊಸ್‌, ಸಬ್‌ವೇ, ಮ್ಯಾಕ್‌ಡೊನಾಲ್ಡ್ ಹಾಗೂ ಸ್ಲೈಸ್‌ ಆಪ್‌ ಇಟಲಿಯ ಬ್ರೆಡ್‌ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಬ್ರಿಟಾನಿಯಾ, ಕೆಎಫ್‌ಸಿ, ಡೊಮಿನೊಸ್‌, ಮ್ಯಾಕ್‌ಡೊನಾಲ್ಡ್‌ ಮತ್ತು ಸಬ್‌ವೇ  ಕಂಪೆನಿಗಳು  ಸಿಎಸ್‌ಇ ವರದಿಯನ್ನು ತಳ್ಳಿಹಾಕಿದ್ದು, ಈ ರಾಸಾಯನಿಕಗಳನ್ನು ಬಳಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದವು.

ಶೇಕಡ 84ರಷ್ಟು ಮಾದರಿಗಳಲ್ಲಿ ಪೊಟಾಷಿಯಮ್‌ ಬ್ರೊಮೆಟ್‌ ಅಥವಾ ಐಯೊಡೇಟ್‌ ಇರುವುದು ಪತ್ತೆಯಾಗಿದೆ. ಈ ರಾಸಾಯನಿಕಗಳು ಇರುವುದನ್ನು  ದೃಢಪಡಿಸಿಕೊಳ್ಳಲು ಇನ್ನೊಂದು ಬಾರಿ ಮತ್ತೊಂದು ಸಂಸ್ಥೆಯ ಪ್ರಯೋಗಾಲಯದಲ್ಲೂ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಲೇಬಲ್‌ಗಳನ್ನು ಸಹ ಪರೀಶೀಲಿಸಿ ಸಂಬಂಧಿಸಿದ ಉದ್ಯಮಗಳ ಮುಖ್ಯಸ್ಥರು ಹಾಗೂ ವಿಜ್ಞಾನಿಗಳ ಜತೆಯೂ ಚರ್ಚಿಸಲಾಯಿತು. ಈ ಅಧ್ಯಯನ ರಾಸಾಯನಿಕ ಅಂಶಗಳು ಇರುವುದನ್ನು  ದೃಢಪಡಿಸಿತು’ ಎಂದು ಸಿಎಸ್‌ಇ ಉಪನಿರ್ದೇಶಕ ಚಂದ್ರ ಭೂಷಣ ತಿಳಿಸಿದ್ದಾರೆ.

‘ಸ್ಯಾಂಡ್‌ವಿಚ್‌  ಬ್ರೆಡ್‌, ಪಾವ್‌, ಬನ್‌ಗಳಲ್ಲಿ ಅತಿ ಹೆಚ್ಚು ಪೊಟಾಷಿಯಂ ಬ್ರೊಮೆಟ್‌ ಅಥವಾ ಐಯೊಡೇಟ್‌ ಇರುವುದು ಕಂಡು ಬಂದಿದೆ’ ಎಂದು ಅವರು ತಿಳಿಸಿದ್ದಾರೆ.

ಮುಖ್ಯಾಂಶಗಳು
* ಕೇಂದ್ರ ಸರ್ಕಾರಕ್ಕೆ ಎಫ್‌ಎಸ್‌ಎಸ್‌ಎಐ ವರದಿ

* ಬ್ರೆಡ್‌, ಬನ್‌ಗಳಲ್ಲಿ ಕಾರ್ಸಿನೊಜಿನಿಕ್‌ ಅಂಶಗಳು ಪತ್ತೆ
* ಪೊಟಾಷಿಯಂ ಐಯೊಡೇಟ್‌ ಸಹ ನಿಷೇಧಕ್ಕೆ ಪರಿಶೀಲನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT