ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರರ್‌ ಮತ್ತು ಹಾಸ್ಯೋತ್ಸವ

Last Updated 27 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನಗಿಸುತ್ತಲೇ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುವ ಸಿನಿಮಾಗಳ ಸಾಲಿಗೆ ಇನ್ನೊಂದು ಸೇರ್ಪಡೆ– ‘ನಮೋ ಭೂತಾತ್ಮ’. ಕೋಮಲ್‌ ಅಭಿನಯದ ಈ ಚಿತ್ರ ರಾಜ್ಯದಾದ್ಯಂತ ನವೆಂಬರ್ 28ರಂದು ತೆರೆ ಕಂಡಿದೆ.

ತಮಿಳಿನಲ್ಲಿ ಕಳೆದ ವರ್ಷ ತೆರೆ ಕಂಡು ಸೂಪರ್‌ ಹಿಟ್‌ ಅನಿಸಿಕೊಂಡ ‘ಯಾಮಿರುಕ್ಕು ಭಯಮೇ’ ಚಿತ್ರದ ರೀಮೇಕ್ ಇದು. ಅಲ್ಲಿನ ಯಶಸ್ಸನ್ನು ಗಮನಿಸಿಯೇ ನಿರ್ಮಾಪಕರಾದ ಎಲ್ರೆಡ್ ಕುಮಾರ್, ಶ್ರುತಿ ಬೆಳ್ಳಿಯಪ್ಪ ಹಾಗೂ ಅನುಸೂಯ ಕೋಮಲ್‌ಕುಮಾರ್ ಇದನ್ನು ಕನ್ನಡಕ್ಕೆ ತಂದಿದ್ದಾರೆ. ಎಲ್ರೆಡ್ ಕುಮಾರ್ ಪ್ರಕಾರ, ಇದು ಗಲ್ಲಾಪೆಟ್ಟಿಗೆಯನ್ನು ಖಂಡಿತವಾಗಿಯೂ ದೋಚುತ್ತದಂತೆ!

‘ಚಿತ್ರಕಥೆಯೇ ಹಾಗಿದೆ’ ಎನ್ನುವ ಎಲ್ರೆಡ್, ‘ಈಗಿನ ಪ್ರೇಕ್ಷಕರು ಹೆಚ್ಚೆಚ್ಚು ಕಾಮಿಡಿ ಚಿತ್ರಗಳನ್ನು ಬಯಸುತ್ತಿದ್ದಾರೆ. ಅದರೊಂದಿಗೆ ಸ್ವಲ್ಪ ಪ್ರಮಾಣದಲ್ಲಿ ಹಾರರ್ ಕೂಡ ಸೇರಿಸಿ ಭೂತಾತ್ಮ ತಯಾರಿಸಿದ್ದೇವೆ. ಮೇಲ್ನೋಟಕ್ಕೆ ಇದು ಹಾರರ್ ಸಿನಿಮಾ ಅನಿಸಿದರೂ ಅದಕ್ಕಿಂತ ಹೆಚ್ಚು ಕಾಮಿಡಿ ಇದೆ’ ಎಂದು ವಿವರ ನೀಡಿದರು.

ವಿ. ಮುರಳಿ ಅವರಿಗೆ ತಮ್ಮ ಮೊದಲ ನಿರ್ದೇಶನದ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ಈ ಅವಕಾಶ ಸಿಗಲು ಕೋಮಲ್ ಕಾರಣ ಎಂದು ಮುರಳಿ ಕೃತಜ್ಞತೆ ಸಲ್ಲಿಸಿದರು. ‘ನಾನೊಬ್ಬ ನೃತ್ಯ ನಿರ್ದೇಶಕ. ಹಲವು ಸಿನಿಮಾಗಳಿಗೆ ನೃತ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವವಿದೆ. ಆದರೆ ನಮೋ ಭೂತಾತ್ಮ ನಿರ್ದೇಶನ ಮಾಡಲು ಕರೆದು ಅವಕಾಶ ನೀಡಿದ್ದು ಕೋಮಲ್. ಅಷ್ಟೇ ಅಲ್ಲ, ಚಿತ್ರೀಕರಣದ ಬಳಿಕ ಉಳಿದ ಕೆಲಸಗಳಲ್ಲೂ ಅವರು ನೀಡಿದ ಸಹಕಾರ ಮರೆಯಲಾಗದಂಥದು’ ಎಂದು ಬಣ್ಣಿಸಿದರು.

ತಮ್ಮ ವೃತ್ತಿಜೀವನದಲ್ಲಿ ಸಿಕ್ಕಿರುವ ಅತ್ಯುತ್ತಮ ಅವಕಾಶಗಳ ಪೈಕಿ ‘ನಮೋ ಭೂತಾತ್ಮ’ದ ಪಾತ್ರ ಪ್ರಮುಖವಾದದು ಎಂದು ಕೋಮಲ್ ಹೇಳಿಕೊಂಡರು. ಸ್ಟುಡಿಯೋದಲ್ಲಿ ಸಂಕಲನ ಮಾಡುವ ಸಂದರ್ಭದಲ್ಲಿ ಹಲವು ದೃಶ್ಯಗಳನ್ನು ನೋಡಿದಾಗ ನಗು ಉಕ್ಕಿ ಬಂದಿದ್ದನ್ನು ಅವರು ನೆನಪಿಸಿಕೊಂಡರು. ಕೆಲವೊಂದು ದೃಶ್ಯದಲ್ಲಿ ಕೋಮಲ್ ಅವರು ಮಲೆಯಾಳಂ ನಟ ಮೋಹನ್‌ಲಾಲ್‌ ಥರ ಕಾಣುತ್ತಾರೆ ಎಂದು ಸಂಗೀತ ನಿರ್ದೇಶಕ ಫರ್ಹಾನ್ ರೋಷನ್ ಬಣ್ಣಿಸಿದರು.

‘ಹಾರರ್‌ ಕಾಮಿಡಿ ಸೂತ್ರದ ಚಿತ್ರಗಳಿಗೆ ಇದು ಹೊಸ ದಿಕ್ಕು ತೋರಿಸಲಿದೆ’ ಎಂದು ನಾಯಕಿ ಐಶ್ವರ್ಯ ವಿಶ್ವಾಸ ವ್ಯಕ್ತಪಡಿಸಿದರು. ನರ್ಸ್ ಜಯಲಕ್ಷ್ಮೀ ಅವರದು ಸುಂದರ ಶಿಕ್ಷಕಿ ಪಾತ್ರವಂತೆ. ‘...ಸುಂದರ ಯಾಕೆಂದರೆ, ಛಾಯಾಗ್ರಾಹಕ ಸೋಮಸುಂದರಂ ನನ್ನನ್ನು ಅಷ್ಟು ಚೆನ್ನಾಗಿ ತೋರಿಸಿದ್ದಾರೆ’ ಎಂಬ ಸ್ಪಷ್ಟನೆಯನ್ನು ಅವರು ಕೊಟ್ಟರು! ಅನಿಶ್ವಿತ, ಹರೀಶ್‌ ರಾಜ್, ನಿಖಿತಾ ಹಾಗೂ ವಿನಾಯಕ ಜೋಶಿ ತಾರಾಗಣದಲ್ಲಿ ಇದ್ದಾರೆ. ನಾಲ್ಕು ಹಾಡುಗಳನ್ನು ಹೃದಯಶಿವ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT