ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರುವ ತೇಜಸ್‌ನಿಂದ ಜಿಗಿಯುವ ಆಸೆ

ಉಭಯಕುಶಲೋಪರಿ । ಅರುಣಾಚಲಂ ಅವರೊಂದಿಗೆ ಪಟ್ಟಾಂಗ
Last Updated 2 ಏಪ್ರಿಲ್ 2016, 19:46 IST
ಅಕ್ಷರ ಗಾತ್ರ

ಹೋಮಿ ಜಹಂಗೀರ್‌ ಭಾಭಾ, ರಾಜಾರಾಮಣ್ಣ, ಎಪಿಜೆ ಅಬ್ದುಲ್‌ ಕಲಾಂ, ರಾಬರ್ಟ್‌ ಕಾನ್‌ ಮೊದಲಾದವರಿಗೆ ಸೇರಿದ ಮಣಭಾರದ ಹೊತ್ತಿಗೆಗಳು, ಸಂಶೋಧನಾ ಪ್ರಬಂಧಗಳಿಂದ ತುಂಬಿಹೋದ ಜರ್ನಲ್‌ಗಳು, ಹೊಸ ಪುಸ್ತಕಕ್ಕಾಗಿ ಬರೆದುಕೊಂಡ ಟಿಪ್ಪಣಿಗಳು, ದೇಶ–ವಿದೇಶಗಳ ಮ್ಯಾಗಝಿನ್‌ಗಳು... ಆ ಮನೆಯ ಟೀಪಾಯಿ ತುಂಬಾ ಹರಡಿದ್ದವು. ಅದರ ಹಿಂದೆ ವಲ್ಲಂ ಪಡುಗೈ ಶ್ರೀನಿವಾಸ ರಾಘವನ್‌ (ವಿಎಸ್‌ಆರ್‌) ಅರುಣಾಚಲಂ ಅವರು ಕೊಡಗಿನ ಖಡಕ್‌ ಕಾಫಿ ಆಸ್ವಾದಿಸುತ್ತಾ ಕುಳಿತಿದ್ದರು. ‘ನೀವು ಬರುವುದು ತಡವಾಯಿತು, ನನಗೆ ಕಾಫಿ ಚಡಪಡಿಕೆ ಶುರುವಾಗಿತ್ತು’ ಎನ್ನುತ್ತಲೇ ಸ್ವಾಗತಿಸಿದರು. ಅವರ ಪತ್ನಿ ಮೀನಾಕ್ಷಿ ಅವರಿಂದ ಕಾಫಿ ಆತಿಥ್ಯ ಕಾದಿತ್ತು.

ಬೆಂಗಳೂರಿನ ಜೆ.ಪಿ. ನಗರದ ಅವರ ಮನೆಗೆ ಸಂಜೆಯ ಹೊತ್ತು ಹೋದಾಗ, ಮೇಲೆ ಹಾರಾಡುತ್ತಿದ್ದ ವಿಮಾನವೊಂದು ಭಾರಿ ಸದ್ದು ಮಾಡುತ್ತಿತ್ತು. ‘ಎಚ್‌ಎಎಲ್‌ ನಿಲ್ದಾಣದಲ್ಲಿ ಲ್ಯಾಂಡಿಂಗ್‌ಗಾಗಿ ಹವಣಿಸುತ್ತಿರುವ ವಿಮಾನ ಆಗಿನಿಂದಲೂ ಇಲ್ಲೇ ಗಿರಕಿ ಹೊಡೆಯುತ್ತಿದೆ’ ಎಂದರು ಅರುಣಾಚಲಂ. ಇದಕ್ಕಿಂತಲೂ ಹೆಚ್ಚಿನ ಗಲಾಟೆ ಮಾಡುವ ಯುದ್ಧ ವಿಮಾನಕ್ಕೆ ಮಾರುಹೋದವರು ಅವರು. ಲೋಹದ ರಣಹದ್ದಿನ ಕಾಕ್‌ಪಿಟ್‌ನಲ್ಲಿ ಕುಳಿತು ಅದರ ಆನಂದ ಅನುಭವಿಸಿದವರು. ‘ಉಕ್ಕಿನ ಮನುಷ್ಯ’ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರನ್ನು ಹೊರತುಪಡಿಸಿದರೆ ‘ಲೋಹ ಪುರುಷ’ರಾಗಿ ಹೆಸರು ಮಾಡಿದ ಇನ್ನೂ ಕೆಲವು ಭಾರತೀಯರು ಉಂಟು. ಅವರೆಲ್ಲ ವಿಜ್ಞಾನಿಗಳು. ಅಂಥವರಲ್ಲಿ ಅರುಣಾಚಲಂ ಕೂಡ ಒಬ್ಬರು.

ಭಾರತದ ಐವರು ಪ್ರಧಾನಿಗಳಿಗೆ– ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ವಿ.ಪಿ. ಸಿಂಗ್‌, ಚಂದ್ರಶೇಖರ್‌ ಹಾಗೂ ಪಿ.ವಿ. ನರಸಿಂಹರಾವ್‌– ವೈಜ್ಞಾನಿಕ ಸಲಹೆಗಾರರಾಗಿದ್ದ ಅರುಣಾಚಲಂ, ಅಗ್ನಿ, ಪೃಥ್ವಿ ಕ್ಷಿಪಣಿಗಳು, ರಡಾರ್‌ಗಳು ಹಾಗೂ ತೇಜಸ್‌ನಂತಹ ಲಘು ಯುದ್ಧ ವಿಮಾನದ (ಎಲ್‌ಸಿಎ) ನಿರ್ಮಾಣಕ್ಕೆ ಮುನ್ನುಡಿ ಬರೆದವರು. ಕ್ಷಿಪಣಿಗಳ ನಿರ್ಮಾಣ ಯೋಜನೆಗೆ ಮುಖ್ಯಸ್ಥರನ್ನಾಗಿ ಕಲಾಂ ಅವರನ್ನು ತಂದು ಕೂರಿಸಿದವರು. ಬೆಂಗಳೂರಿನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮುಖ್ಯಸ್ಥರಾಗಿ ರಕ್ಷಣಾ ಕ್ಷೇತ್ರದ ಸಂಶೋಧನೆಗಳಿಗೆ ಹೊಸ ದಿಕ್ಕು ತೋರಿದವರು.

‘ಲೋಹದ ನಂಟೇನು ಬಾಲ್ಯದಲ್ಲೇ ಅಂಟಿತ್ತೆ’ ಅಂತ ಕೇಳಿದರೆ ಅರುಣಾಚಲಂ ನಕ್ಕುಬಿಟ್ಟರು. ‘ತಮಿಳುನಾಡಿನ ಕೊಲ್ಲಿಡಂ ನದಿ ತೀರದ ವಲ್ಲಂ ಪಡುಗೈ ನಮ್ಮೂರು. ಮಲೇಷ್ಯಕ್ಕೆ ದುಡಿಯಲು ಹೋಗಿರುತ್ತಿದ್ದ ಗಂಡಂದಿರ ಬರುವಿಕೆಗಾಗಿ ಮುಸ್ಲಿಂ ಮಹಿಳೆಯರು ಕಾಯುತ್ತಿದ್ದರೆ, ವೃತ್ತ ಪತ್ರಿಕೆಗಳಿಗಾಗಿ ನಾನು ಕಾಯುತ್ತಾ ನಿಲ್ಲುತ್ತಿದ್ದೆ. ಹೀಗಾಗಿ ನದಿ ನೀರು ಹಾಗೂ ಪತ್ರಿಕೆಗಳ ನಂಟಷ್ಟೇ ನನಗಿತ್ತು. ಊಟದ ತಟ್ಟೆ–ಲೋಟ ಹೊರತುಪಡಿಸಿದರೆ ನನಗೆ ಲೋಹದ ಗಂಧ–ಗಾಳಿಯೂ ಗೊತ್ತಿರಲಿಲ್ಲ’ ಎಂದು ಬಾಲ್ಯದ ನೆನಪು ಹೆಕ್ಕಿ ತೆಗೆದರು.

‘ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವ ಉದ್ದೇಶದಿಂದ ನಮ್ಮ ತಂದೆಯವರು ವಲ್ಲಂ ಪಡುಗೈ ತೊರೆದು ‘ದೇವಾಲಯಗಳ ಊರು’ ಚಿದಂಬರಂನಲ್ಲಿ ಮನೆ ಮಾಡಿದರು. ಪ್ರತಿಷ್ಠಿತ ವಿದ್ಯಾಲಯಗಳು ಅಲ್ಲಿದ್ದವು. ‘ದಕ್ಷಿಣ ಭಾರತದ ಕೇಂಬ್ರಿಜ್‌’ ಎನಿಸಿದ ಅಣ್ಣಾಮಲೈ ವಿಶ್ವವಿದ್ಯಾಲಯ ಹತ್ತಿರದಲ್ಲೇ ಇತ್ತು. ಚಿದಂಬರಂ ಪಟ್ಟಣಕ್ಕಿಂತ ಮೈಸೂರಿನ ವಾಸ ಉತ್ತಮ ಎನಿಸಿದ್ದರಿಂದ ನಮ್ಮ ಕುಟುಂಬ ಅಲ್ಲಿಗೆ ಸ್ಥಳಾಂತರಗೊಂಡಿತು’ ಎಂದು, ಕೊಲ್ಲಿಡಂ ನದಿ ತಟದಿಂದ ಕಾವೇರಿ ತೀರಕ್ಕೆ ಬಂದ ಗುಟ್ಟನ್ನು ಬಿಟ್ಟುಕೊಟ್ಟರು.

ಮೈಸೂರಿನ ಶಾರದಾವಿಲಾಸ ವಿದ್ಯಾಲಯ ಹಾಗೂ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ (ಎನ್‌ಐಇ) ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿ ಅವರು. ತಂದೆಗೆ ಎಂಜಿನಿಯರಿಂಗ್‌ ಕೋರ್ಸ್‌ಗೆ ಸೇರಿಸುವ ಬಯಕೆ. ಮಗನಿಗೆ ಇಂಗ್ಲಿಷ್‌ ಸಾಹಿತ್ಯ ಓದುವ ಹಂಬಲ. ಹಗ್ಗಜಗ್ಗಾಟ ಹೆಚ್ಚಾದಾಗ ಅರುಣಾಚಲಂ, ವಲ್ಲಂ ಪಡುಗೈಗೆ ವಾಪಸ್‌ ಹೋಗಿ ಹೊಲದ ಉಸ್ತುವಾರಿ ಹೊತ್ತುಕೊಂಡರು. ವರ್ಷದ ಬಳಿಕ ಅಮ್ಮನ ಮಧ್ಯಸ್ಥಿಕೆಯಲ್ಲಿ ತಂದೆ–ಮಗ ಒಂದು ಒಪ್ಪಂದಕ್ಕೆ ಬಂದರು. ಎಂಜಿನಿಯರಿಂಗ್‌ ಓದಿಸಬೇಕೆಂಬ ಪಟ್ಟನ್ನು ತಂದೆ ಸಡಿಲಿಸಿದರೆ, ಇಂಗ್ಲಿಷ್‌ ಸಾಹಿತ್ಯ ಓದುವ ಆಸೆಯನ್ನು ಮಗ ಅದುಮಿದರು. ಎರಡರ ನಡುವಿನ ಪರಿಹಾರವಾಗಿ ಬಿ.ಎಸ್ಸಿ ಎಂಬ ಮಧ್ಯಮ ಮಾರ್ಗ ತೆರೆಯಿತು. ‘ಎನ್‌ಐಇ’ಯಲ್ಲಿಯೇ ಪದವಿ ಕೋರ್ಸ್‌ಗೆ ಅವರು ಸೇರಿದರು.

ಅರುಣಾಚಲಂ ಅವರ ಚಿಕ್ಕಪ್ಪ ಡಾ. ಸುಬ್ರಹ್ಮಣ್ಯಂ ಅವರು ‘ಕೇಂದ್ರೀಯ ಆಹಾರ ಸಂಶೋಧನಾ ಸಂಸ್ಥೆ’ಯ (ಸಿಎಫ್‌ಟಿಆರ್‌ಐ) ನಿರ್ದೇಶಕರಾಗಿದ್ದರು. ಚಿಕ್ಕಪ್ಪನೊಂದಿಗೆ ‘ಸಿಎಫ್‌ಟಿಆರ್‌ಐ’ ಹಾಗೂ ಬೆಂಗಳೂರಿನ ‘ಭಾರತೀಯ ವಿಜ್ಞಾನ ಸಂಸ್ಥೆ’ (ಐಐಎಸ್‌ಸಿ) ಆವರಣದಲ್ಲಿ ಅವರು ಓಡಾಡಿದ್ದರು. ಕಟ್ಟಿಗೆಯ ನೆಲಹಾಸಿನ ಮನೆ, ಟೆನಿಸ್‌ ಕೋರ್ಟ್‌ ಹಾಗೂ ಕಾರು ಅವರನ್ನು ತುಂಬಾ ಆಕರ್ಷಿಸಿದ್ದವು. ಇಂತಹ ಸೌಲಭ್ಯಗಳನ್ನೆಲ್ಲ ಪಡೆಯಲು ವಿಜ್ಞಾನ ಕ್ಷೇತ್ರದೊಳಗೆ ಧುಮುಕಬೇಕು ಎಂಬ ಆಕಾಂಕ್ಷೆ ಆಗ ಅವರ ಮನದೊಳಗೆ ಮೊಳಕೆ ಒಡೆದಿತ್ತಂತೆ!

‘ಮೈಸೂರಿನಲ್ಲಿ ಗಗನಚುಂಬಿ ಕಟ್ಟಡಗಳೇನಿಲ್ಲ. ಆದರೆ, ಅಲ್ಲಿನ ಶಿಕ್ಷಣ ಗುಣಮಟ್ಟದ ಎತ್ತರವನ್ನು ಅಳೆಯಲು ಸಾಧ್ಯವೇ ಇಲ್ಲ. ಹೊಸ ಜ್ಞಾನದ ಬಾಗಿಲನ್ನೇ ತೆರೆದು ನವ ಮನ್ವಂತರಕ್ಕೆ ನನ್ನನ್ನು ಸಜ್ಜುಗೊಳಿಸಿದ ನಗರ ಅದು’ ಎಂದು ಕೃತಜ್ಞತೆಯಿಂದ ಸ್ಮರಿಸಿದರು ಅರುಣಾಚಲಂ.

‘ಆಟ–ಪಾಠ ಎರಡಕ್ಕೂ ಹೇಳಿ ಮಾಡಿಸಿದ ತಾಣವಾಗಿದ್ದ ಅರಮನೆ ನಗರಿ, ನನಗೆ ಒಳ್ಳೆಯ ಸ್ನೇಹಿತರನ್ನೂ ಕೊಟ್ಟಿತು. ತಮಿಳಿನಲ್ಲಿ ಅಷ್ಟೇ ಮಾತನಾಡುತ್ತಿದ್ದ ನನಗೆ ಶಾರದಾವಿಲಾಸ ವಿದ್ಯಾಲಯದ ಗುರುಗಳು ಮೈಸೂರಿನಲ್ಲಿ ಇರಬೇಕಾದರೆ ಕನ್ನಡ ಕಲಿಯಬೇಕು ಎಂದು ತಾಕೀತು ಮಾಡಿದರು. ವರ್ಷದೊಳಗೆ ನಾನು ಕನ್ನಡ ಮಾತನಾಡಲು ಕಲಿತೆ’ ಎಂದು ಕನ್ನಡ ಕಲಿತ ಬಗೆಯನ್ನು ಅವರು ನೆನೆದರು. ‘ಪ್ರೊ.ಸಿ.ಡಿ.ನರಸಿಂಹಯ್ಯ ಅವರಂತಹ ವಿದ್ವಾಂಸರಿಂದ ಇಂಗ್ಲಿಷ್‌ ಕಲಿತ ಅದೃಷ್ಟ ನನ್ನದು’ ಎನ್ನುವಾಗ ಅವರ ಕಣ್ಣುಗಳು ಹೊಳೆಯುತ್ತಿದ್ದವು.

ಅಂದಹಾಗೆ, ಅರುಣಾಚಲಂ ಅವರು ಒಳ್ಳೆಯ ಕ್ರಿಕೆಟ್‌ ಆಟಗಾರ ಕೂಡ. ಮಹಾರಾಜ ಕಾಲೇಜು ಮೈದಾನದಲ್ಲಿ ಕಸ್ತೂರಿರಂಗನ್‌, ಆದಿಶೇಷ ಅವರಂತಹ ದಿಗ್ಗಜರೊಂದಿಗೆ ಆಡಿದ ಕ್ರಿಕೆಟ್‌ಪಟು ಅವರು. ಅಕ್ಕ ಹಾಗೂ ಭಾವ ಮಧ್ಯಪ್ರದೇಶದ ಸೌಗರ್‌ನಲ್ಲಿ ನೆಲೆಸಿದ್ದರಿಂದ ಅರುಣಾಚಲಂ ಸ್ನಾತಕೋತ್ತರ ಪದವಿ ಅಧ್ಯಯನವನ್ನು ಅಲ್ಲಿ ಪೂರೈಸಿದರು.

ಬಳಿಕ ‘ಭಾಭಾ ಅಣು ಸಂಶೋಧನಾ ಕೇಂದ್ರ’ ಸೇರಿದರು. ಅರುಣಾಚಲಂ ಅವರು ಬರೆದಿದ್ದ ಪ್ರಬಂಧ ಅಂತರರಾಷ್ಟ್ರೀಯ ಜರ್ನಲ್‌ನಲ್ಲಿ ಪ್ರಕಟವಾದಾಗ ಗುರು ಬ್ರಹ್ಮಪ್ರಕಾಶ್‌ ಅವರ ಹರ್ಷಕ್ಕೆ ಪಾರವೇ ಇರಲಿಲ್ಲ. ಮುಂಬೈನ ತಾಜ್‌ ಹೋಟೆಲ್‌ನಲ್ಲಿ ಟೈ ಕಟ್ಟಿಸಿಕೊಂಡು ಹೋಗಿ ಗುರುವಿನಿಂದಲೇ ಪಾರ್ಟಿ ಪಡೆದಿದ್ದು ಅವರ ಬದುಕಿನ ಸಾರ್ಥಕ ಕ್ಷಣ. ‘ಮಟಿರಿಯಲ್‌ ಸೈನ್ಸ್‌ ಅಂಡ್‌ ಎಂಜಿನಿಯರಿಂಗ್‌’ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಇಂಗ್ಲೆಂಡ್‌ನ ವೇಲ್ಸ್‌ ವಿಶ್ವವಿದ್ಯಾಲಯದಿಂದ ಅವರು ಪಿಎಚ್‌.ಡಿ ಪದವಿ ಪಡೆದರು.

ಅವರ ಮಾರ್ಗದರ್ಶಕ ರಾಬರ್ಟ್‌ ಕಾನ್‌ ಬಳಿಕ ಕುಟುಂಬದ ಸದಸ್ಯರೇ ಆಗಿಹೋದರು. ಪ್ರತಿವರ್ಷ ಕಾನ್‌ ಅವರು ಭಾರತಕ್ಕೆ– ಅರುಣಾಚಲಂ ಅವರ ಮನೆಗೆ– ತಪ್ಪದೇ ಬಂದು ಹೋಗುತ್ತಿದ್ದರು.

‘ಭಾಭಾ ಕೇಂದ್ರದ ಸಂಶೋಧಕರಿಗೆಲ್ಲ ಕರ್ನಾಟಕ ಸಂಗೀತದ ಗೀಳು. ಮುಂಬೈನ ಪ್ರಖ್ಯಾತ ಶ್ರೀ ಷಣ್ಮುಖಾನಂದ ಸಂಗೀತ ಸಭಾಕ್ಕೆ ಪ್ರತಿವಾರ ಸಂಗೀತ ಆಸ್ವಾದಿಸಲು ಅವರೊಂದಿಗೆ ನಾನೂ ಹೋಗುತ್ತಿದ್ದೆ. ಎಂ.ಎಸ್‌. ಸುಬ್ಬಲಕ್ಷ್ಮಿ, ಶಮ್ಮನ್‌ಗುಡಿ ಶ್ರೀನಿವಾಸ್‌ ಅಯ್ಯರ್‌ ಅವರಂತಹ ದಿಗ್ಗಜರ ಕಛೇರಿಗೆ ಸಾಕ್ಷಿಯಾಗುವ ಅವಕಾಶ ಸಿಗುತ್ತಿತ್ತು’ ಎಂದು ಅರುಣಾಚಲಂ ನೆನೆದರು.

ಮುಂಬೈನಿಂದ ಬೆಂಗಳೂರಿಗೆ ಬಂದ ಅವರು ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯದಲ್ಲಿ (ಎನ್‌ಎಎಲ್‌) ಸಂಶೋಧಕರಾಗಿ ಕೆಲಸ ಮಾಡಿದರು. ಬಳಿಕ ಹೈದರಾಬಾದ್‌ನ ರಕ್ಷಣಾ ಲೋಹ ಸಂಶೋಧನಾ ಪ್ರಯೋಗಾಲಯದಲ್ಲಿ (ಡಿಎಂಆರ್‌ಎಲ್‌) ನಿರ್ದೇಶಕರಾಗಿ ನಿಯುಕ್ತಿಗೊಂಡರು.

‘ವಾಯುಪಡೆ ಅಧಿಕಾರಿಯೊಬ್ಬರು ಒಂದುದಿನ ಡಿಎಂಆರ್‌ಎಲ್‌ ಕಚೇರಿಗೆ ಬಂದು (ರಷ್ಯನ್‌ ನಿರ್ಮಿತ) ವಿಮಾನದ ಪುಟ್ಟ ಭಾಗವೊಂದರ ಮುರಿದ ತುಂಡು ತೋರಿಸಿ, ‘ದೇಶದಲ್ಲೇ ಇದನ್ನು ತಯಾರು ಮಾಡಲು  ಸಾಧ್ಯವೇ’ ಎಂಬ ಪ್ರಶ್ನೆಗೆ ಪ್ರಧಾನಿ ಇಂದಿರಾ ಗಾಂಧಿ ಅವರು ಉತ್ತರ ಬಯಸಿದ್ದಾರೆ ಎಂದರು. ‘ನಾವು ಮಾಡಿ ತೋರಿಸಲಿದ್ದೇವೆ. ಆದರೆ ತುಸು ಕಾಲಾವಕಾಶ ಬೇಕು’ ಎಂಬ ಉತ್ತರ ನೀಡಿದೆವು. ಆ ತುಂಡು ವಿಮಾನದ ಬ್ರೇಕ್‌ಗೆ ಸಂಬಂಧಿಸಿತ್ತು. ನಾವು ಅದನ್ನು ಮೂರು ತಿಂಗಳಲ್ಲಿ ಮರುಸೃಷ್ಟಿ ಮಾಡಿದೆವು’ ಎಂದು ಹೆಮ್ಮೆಯಿಂದ ಹೇಳಿದರು ಅರುಣಾಚಲಂ.

‘ಡಿಎಂಆರ್‌ಎಲ್‌’ ಸೃಷ್ಟಿಸಿದ ಬ್ರೇಕ್‌ ಪರೀಕ್ಷೆ ಮಾಡಲು ‘ಎಚ್‌ಎಎಲ್‌’ ಸಂಸ್ಥೆ ಮುಂದೆ ಬಂದಿತಂತೆ. ಒಂದು ಗಾಲಿಗೆ ರಷ್ಯಾ ನಿರ್ಮಿತ ಬ್ರೇಕ್‌, ಮತ್ತೊಂದು ಗಾಲಿಗೆ ಭಾರತ ನಿರ್ಮಿತ ಬ್ರೇಕ್‌ ಅಳವಡಿಸಿಕೊಂಡ ವಿಮಾನ ಟೇಕ್‌ ಆಫ್‌ಗೆ ಸಿದ್ಧವಾದಾಗ ಪೈಲಟ್‌ಗಳ ಜೀವ ಪಣಕ್ಕೆ ಇಡಲಾಗುತ್ತಿದೆ ಎಂಬ ಕುಹಕ ಕೇಳಿಬಂತು. ‘ನಿಮ್ಮ ಮಕ್ಕಳನ್ನೇ ಪೈಲಟ್‌ ಆಗಿ ಕಳುಹಿಸುವಿರಾ’ ಎಂಬ ಮೂದಲಿಕೆಯೂ ಜತೆಗಿತ್ತು. ಅದಕ್ಕೆ ಅರುಣಾಚಲಂ, ‘ನನ್ನ ಮಕ್ಕಳನ್ನು ಖಂಡಿತಾ ಕಳುಹಿಸುವುದಿಲ್ಲ ಸ್ವಾಮಿ. ಏಕೆಂದರೆ, ಅವರಿನ್ನೂ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು’ ಎಂಬ ಉತ್ತರ ನೀಡುವ ಮೂಲಕ ನಗು ಉಕ್ಕಿಸಿದ್ದರಂತೆ.

‘ವಿಮಾನಕ್ಕೆ ಅಳವಡಿಸಿದ ಬ್ರೇಕ್‌ ಸಮರ್ಥವಾಗಿ ನೂರು ಲ್ಯಾಂಡಿಂಗ್‌ಗಳ ಹೊಣೆ ನಿಭಾಯಿಸಿತು. ಬಳಿಕ ಗಾಲಿ ಮತ್ತು ಬ್ರೇಕ್‌ಗಳ ಉತ್ಪಾದನೆ ಆರಂಭವಾಯಿತು. ಒಮ್ಮೆ ಬ್ರಿಟಿಷ್‌ ಜನರಲ್‌ ಒಬ್ಬರು ಸೈನಿಕರ ಲೋಹದ ರಕ್ಷಾ ಕವಚದ (ಆರ್ಮರ್‌) ಕುರಿತು ವಿವರಣೆ ನೀಡಲು ಬಂದಿದ್ದರು. ತಯಾರಿಕಾ ತಂತ್ರಜ್ಞಾನದ ಕುರಿತು ಕೇಳಿದಾಗ ಮೌನವಾದರು. ಕೆಲವು ತಿಂಗಳು ನಾವೇ ಪ್ರಯೋಗಾಲಯದಲ್ಲಿ ಶ್ರಮ ಹಾಕಿದಾಗ ‘ಕಾಂಚನ ಆರ್ಮರ್‌’ಗಳು ಸಿದ್ಧವಾದವು. ಹೀಗೆ ಸಂಶೋಧನಾ ಕ್ಷೇತ್ರದಲ್ಲಿ ಒಂದೊಂದಾಗಿ ಮೆಟ್ಟಿಲು ಏರುತ್ತಾ ಬರಲಾಯಿತು’ ಎಂದು ವಿವರಿಸಿದರು.

ಅರುಣಾಚಲಂ ಅವರಿಗೆ ‘ಶಾಂತಿ ಸ್ವರೂಪ್‌ ಬಟ್ನಾಗರ್‌’ ಪ್ರಶಸ್ತಿ ಒಲಿದ ಸಂದರ್ಭ. ಪ್ರದಾನ ಮಾಡಿದ್ದು ಸ್ವತಃ ದೇಶದ ಪ್ರಧಾನಿ ಇಂದಿರಾ ಗಾಂಧಿ. ‘ನವದೆಹಲಿಗೆ ಯಾವಾಗ ಬರುತ್ತೀರಿ’ ಎಂದು ಪ್ರಧಾನಿ ಅವರು ವೇದಿಕೆಯಲ್ಲೇ ಅರುಣಾಚಲಂ ಅವರನ್ನು ಕೇಳಿದ್ದರು. ಕಕ್ಕಾಬಿಕ್ಕಿಯಾದ ಅವರಿಗೆ ಏನು ಹೇಳಬೇಕು ಎನ್ನುವುದು ತೋಚಲಿಲ್ಲ. ‘ನಿಮ್ಮನ್ನು ವೈಜ್ಞಾನಿಕ ಸಲಹೆಗಾರರನ್ನಾಗಿ ನೇಮಿಸಿದ್ದೇನೆ’ ಎಂದ ಇಂದಿರಾ ಅವರು, ಈ ಲೋಹದ ವಿಜ್ಞಾನಿಯಲ್ಲಿ ರೋಮಾಂಚನ ಉಂಟು ಮಾಡಿದ್ದರು.

ಅರುಣಾಚಲಂ ಅವರು ಹಗುರ ಯುದ್ಧ ವಿಮಾನ (ಎಲ್‌ಸಿಎ) ಯೋಜನೆಗೆ ಬಲ ತುಂಬುತ್ತಿದ್ದಾಗ ‘ಎಲ್‌ಸಿಎ ಅಂದರೆ ಲಾಸ್ಟ್‌ ಚಾನ್ಸ್‌ ಫಾರ್‌ ಅರುಣಾಚಲಂ’ ಎಂದು ತಮಾಷೆಯಾಗಿ ಹೇಳಿದವರಿಗೆ ಲೆಕ್ಕವಿಲ್ಲ. ‘ಸುಮಾರು ಮೂರು ದಶಕಗಳ ಹಿಂದೆ ಕಂಡಿದ್ದ ಹಗುರ ಯುದ್ಧ ವಿಮಾನ ನಿರ್ಮಾಣದ ಕನಸು ಈಗ ನನಸಾಗಿದೆ. ಬಾನಂಗಳದಲ್ಲಿ ತೇಜಸ್‌ನಲ್ಲಿ ಹಾರುತ್ತಾ ಹಿಗ್ಗಿನಿಂದ ಕೆಳಗೆ ಧುಮುಕುವ ಆಸೆ (ಜಂಪ್‌ ವಿತ್‌ ಜಾಯ್‌) ಆಗುತ್ತಿದೆ’ ಎಂದು ಅರುಣಾಚಲಂ ಅವರು ಅಭಿಲಾಷೆ ವ್ಯಕ್ತಪಡಿಸಿದಾಗ ಅರೆಕ್ಷಣ ಮೈ ‘ಜುಂ’ ಎಂದಿತು.

‘ನಾನು ವೈಜ್ಞಾನಿಕ ಸಲಹೆಗಾರನಾಗಿ ನೇಮಕಗೊಂಡಾಗ ನನಗೆ ಕೇವಲ 46 ವರ್ಷ. ರಕ್ಷಣಾ ಸಚಿವರಾಗಿದ್ದ ಆರ್‌. ವೆಂಕಟರಾಮನ್ ಅವರು ಒಮ್ಮೆ ನನ್ನನ್ನು ಕರೆದು, ಪ್ರತಿದಿನ ನೀವು ದೇಶ–ವಿದೇಶಗಳ ಅಧಿಕಾರಿಗಳನ್ನು ಭೇಟಿ ಮಾಡಬೇಕಾಗುತ್ತದೆ. ಟೈ ಕಟ್ಟಿಕೊಂಡು ಬನ್ನಿ ಎಂದರು. ನಂತರದ ಅವಧಿಯಲ್ಲಿ ನಾನು ಟೈ ಕಟ್ಟಲು ಶುರುಮಾಡಿದೆ. ಇಂದಿರಾ ಗಾಂಧಿ ಅವರು ಬಲು ಖಕಡ್‌ ನಿರ್ಧಾರಗಳಿಗೆ ಹೆಸರಾಗಿದ್ದರು. ಯಾವುದೇ ಯೋಜನೆ ಕುರಿತಂತೆ ಅವರಿಗೆ ಒಮ್ಮೆ ಮನವರಿಕೆಯಾದರೆ ಸದಾ ಬೆಂಬಲಕ್ಕೆ ನಿಲ್ಲುತ್ತಿದ್ದರು. ಅನುದಾನ ಒದಗಿಸುತ್ತಿದ್ದರು’ ಎಂದರು.

ಒಮ್ಮೆ ವಿಜ್ಞಾನ ಮತ್ತು ತಂತ್ರಜ್ಞಾನ ಸ್ಥಾಯಿ ಸಮಿತಿ ಸಭೆ ಆಯೋಜನೆ ಆಗಿತ್ತು. ಆ ಸಭೆಗೆ ಅರುಣಾಚಲಂ ತುಂಬಾ ತಡವಾಗಿ ಬಂದರು. ಅದಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷರು ‘ಇಂತಹ ಅಶಿಸ್ತನ್ನು ನಾನು ಸಹಿಸುವುದಿಲ್ಲ’ ಎಂದು ಅಬ್ಬರಿಸಿದರು. ಅದಕ್ಕೆ ಅರುಣಾಚಲಂ, ‘ಪ್ರಧಾನಿ ಅವರು ಮತ್ತೊಂದು ಸಭೆ ತೆಗೆದುಕೊಂಡಿದ್ದರಿಂದ ತಡವಾಗಿ ಬಂದೆ’ ಎಂದು ಉತ್ತರಿಸಿದರು. ಸಭೆ ಮುಗಿದ ಬಳಿಕ ಅರುಣಾಚಲಂ ಅವರನ್ನು ಭೇಟಿಮಾಡಿದ ಆ ಅಧ್ಯಕ್ಷರು, ‘ಪ್ರಧಾನಿ ಅವರನ್ನು ನೀವು ಆಗಾಗ ಭೇಟಿ ಮಾಡುತ್ತೀರಾ’ ಎಂದು ಪ್ರಶ್ನಿಸಿದರು. ‘ವಾರಕ್ಕೆ 2–3 ಬಾರಿ’ ಎಂಬ ಉತ್ತರ ಸಿಕ್ಕಾಗ, ‘ಹಾಗಾದರೆ ಮುಂದಿನ ಸಲ ಭೇಟಿಯಾದಾಗ ನನ್ನ ಕುರಿತು ಒಂದೆರಡು ಒಳ್ಳೆಯ ಮಾತು ಹೇಳಿ’ ಎಂದು ಮೊರೆಯಿಟ್ಟರು. ವೈಜ್ಞಾನಿಕ ಸಲಹೆಗಾರರಾಗಿದ್ದ ಹತ್ತು ವರ್ಷಗಳ ಅವಧಿಯಲ್ಲಿ ಅರುಣಾಚಲಂ ಎದುರಿಸಿದ ಇಂತಹ ರಸಪ್ರಸಂಗಗಳಿಗೆ ಲೆಕ್ಕವಿಲ್ಲ.

ಕಲಾಂ ಮತ್ತು ಅರುಣಾಚಲಂ ಅವರ ಮಧ್ಯೆ ದಶಕಗಳ ಗೆಳೆತನ. ಲೋಹದ ಸಂಶೋಧನೆ ಇಬ್ಬರ ಸ್ನೇಹವನ್ನೂ ಬೆಸೆದಿತ್ತು. ಹಲವು ಯೋಜನೆಗಳಿಗೆ ಈ ಇಬ್ಬರೂ ಸಂಶೋಧಕರು ಒಟ್ಟಾಗಿ ಕುಳಿತು ರೂಪು–ರೇಷೆ ನೀಡುತ್ತಿದ್ದರು. ಮಧ್ಯಾಹ್ನದ ಊಟವನ್ನು ಜತೆಯಾಗಿ ಮಾಡುತ್ತಿದ್ದರು. ‘ಕಲಾಂ ಅವರು ಹಿಂದೂ ಧರ್ಮದ ಕುರಿತು ಮಾತನಾಡಿದರೆ, ಇಸ್ಲಾಮಿಕ್‌ ತತ್ವಜ್ಞಾನದ ಬಗೆಗೆ ನಾನು ಚರ್ಚಿಸುತ್ತಿದ್ದೆ. ಸುವರ್ಣ ದಿನಗಳು ಅವಾಗಿದ್ದವು’ ಎಂದು ಭಾವುಕರಾಗಿ ಸ್ಮರಿಸಿದರು.

ಹತ್ತು ವರ್ಷಗಳ ವೈಜ್ಞಾನಿಕ ಸಲಹೆಗಾರನ ಹುದ್ದೆ ಸಾಕಾಗಿ ಪ್ರಧಾನಿ ಪಿ.ವಿ. ನರಸಿಂಹರಾವ್‌ ಅವರಿಗೆ ರಾಜೀನಾಮೆ ಪತ್ರ ನೀಡಿದಾಗ, ‘ಯಾಕೆ, ಯಾವುದಾದರೂ ಹಗರಣದಲ್ಲಿ ನಿಮ್ಮ ಹೆಸರು ಕೇಳಿಬಂತೆ’ ಎಂದು ತಮಾಷೆ ಮಾಡಿದ್ದರಂತೆ. ಬೋಧನೆಯತ್ತ ಮನಸ್ಸು ಹೊರಳಿದೆ ಎಂದಾಗ ರಾಜೀನಾಮೆ ಅಂಗೀಕಾರ ಮಾಡಿದ್ದರಂತೆ. ನವದೆಹಲಿಯಿಂದ ಸೀದಾ ಅಮೆರಿಕದ ಪೀಟ್ಸ್‌ಬರ್ಗ್‌ಗೆ ಹಾರಿದ ಅವರು ಕಾರ್ನಿಗ್‌ ಮಿಲನ್‌ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು.

ಹತ್ತು ವರ್ಷಗಳ ಬಳಿಕ ಪೀಟ್ಸ್‌ಬರ್ಗ್‌ನಿಂದ ವಾಪಸ್‌ ಬೆಂಗಳೂರಿಗೆ ಬಂದ ಅವರು, ವಿಜ್ಞಾನ, ತಂತ್ರಜ್ಞಾನ ಮತ್ತು ನೀತಿ ಅಧ್ಯಯನ ಸಂಸ್ಥೆ (ಸಿ–ಸ್ಟೆಪ್‌) ಆರಂಭಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲದೆ ಪ್ರಪಂಚದ ಹಲವು ಪ್ರತಿಷ್ಠಿತ ಕಂಪೆನಿಗಳು ನೀತಿ ನಿರೂಪಣೆಗೆ ಈ ಸಂಸ್ಥೆಯ ನೆರವು ಪಡೆಯುತ್ತಿವೆ. 80ರ ಗಡಿ ದಾಟಿರುವ ಅರುಣಾಚಲಂ ಈಗಲೂ ಸಂಶೋಧನಾ ಚಟುವಟಿಕೆಗಳಲ್ಲಿ ನಿರತರು. ಮಾತು ಮುಗಿಸುವ ಮುನ್ನ ಅವರು ಹೇಳಿದ್ದು: ‘ಅಪ್ಪನ ಅಪೇಕ್ಷೆಯಂತೆ ಎಂಜಿನಿಯರಿಂಗ್‌ ಕ್ಷೇತ್ರದಲ್ಲೂ ನಾನು ಬೆಳೆದೆ. ಆಸಕ್ತಿಯಿಂದ ಕಲಿತ ಇಂಗ್ಲಿಷ್‌, ನನ್ನ ಪ್ರಬಂಧಗಳ ರಚನೆಗೆ, ಸಂಶೋಧನಾ ಸಾಹಿತ್ಯ ಸೃಷ್ಟಿಗೆ ಬಹುದೊಡ್ಡ ಕೊಡುಗೆ ನೀಡಿತು!’.
- ಚಿತ್ರಗಳು: ಆನಂದ ಬಕ್ಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT