ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರ್ಮೋನ್‌ ಥೆರಪಿ ಶಸ್ತ್ರಚಿಕಿತ್ಸೆ

ಅಂಕುರ-88
Last Updated 11 ಮಾರ್ಚ್ 2016, 19:55 IST
ಅಕ್ಷರ ಗಾತ್ರ

ಅನಿಯಮಿತ ಋತುಬಂಧಕ್ಕೆ ಚಿಕಿತ್ಸೆ ಅನಿಯಮಿತ ಋತುಬಂಧಕ್ಕೆ ಸಂಬಂಧಿಸಿದಂತೆ ಯಾವುದಾದರೂ ಕಾಯಿಲೆಗಳಿದ್ದರೆ ಅವಕ್ಕೆ ಚಿಕಿತ್ಸೆ ನೀಡುವುದು ನಿಮ್ಮ ಗರ್ಭನಿರೋಧಕ ಮಾತ್ರೆಗಳನ್ನು ಬದಲಿಸುವುದು ಜೀವನ ಶೈಲಿಯನ್ನು ಬದಲಿಸುವುದು, ತೂಕ ನಿಯಂತ್ರಿಸುವುದು.

ಹೀಗೆ ಚಿಕಿತ್ಸೆಗಳನ್ನು ವೈಯಕ್ತಿಕ ಅಗತ್ಯಕ್ಕೆ ಅನುಗುಣವಾಗಿ ವಿಂಗಡಿಸಬಹುದಾಗಿದೆ. ಅನಿಯಮಿತ ಋತುಬಂಧಕ್ಕೆ ಕಾರಣವಾಗಿರುವ ಕಾಯಿಲೆಗಳನ್ನು ಮೊದಲು ಗುರುತಿಸಬೇಕು. ಇದು ಗರ್ಭಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳ ಒಂದು ಲಕ್ಷಣವೂ ಆಗಿರುತ್ತದೆ. ಅಲ್ಲದೇ ಹಾರ್ಮೋನುಗಳ ಪ್ರಮಾಣ, ಥೈರಾಯ್ಡ್‌ ಕಾರ್ಯವೈಖರಿ ಮುಂತಾದವೂ ಕಾರಣಗಳಾಗಿರುತ್ತವೆ. ಯಾವ ಕಾರಣದಿಂದಾಗಿ ಋತುಬಂಧ ಅನಿಯಮಿತವಾಗಿದೆ ಎಂದು ಅರಿಯಲು ರಕ್ತ ತಪಾಸಣೆಯನ್ನು ಕೈಗೊಳ್ಳಲಾಗುತ್ತದೆ.

ಪೊಲಿಸಿಸ್ಟಿಕ್‌ ಓವರಿ ಸಿಂಡ್ರೋಮ್‌ (ಪಿಸಿಓಎಸ್‌) ಮತ್ತು ಹೈಪೊ ಥೈರಾಯ್ಡಿಸಂ (ಥೈರಾಯ್ಡ್‌ ಗ್ರಂಥಿಗಳು ಅಗತ್ಯಕ್ಕಿಂತ ಕಡಿಮೆ ಸ್ರವಿಸುವ ಸ್ಥಿತಿ) ಇವುಗಳಿಂದಾಗಿ ಋತುಚಕ್ರವು ನಿಯಮಿತವಾಗಿ ಕಂಡು ಬರುವುದಿಲ್ಲ. ಕಾರಣ ಯಾವುದೇ ಇರಲಿ, ದೇಹವನ್ನು ನಿಯಮಿತವಾಗಿ ಅಂಡಾಣು ಬಿಡುಗಡೆಯಾಗುವಂತೆ ಮಾಡುವುದೇ ಚಿಕಿತ್ಸೆಯ ಉದ್ದೇಶವಾಗಿರುತ್ತದೆ.

ಗರ್ಭನಿರೋಧಕ ಮಾತ್ರೆಗಳು ಹಾರ್ಮೋನ್ ಸ್ರವಿಸುವಿಕೆಯ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿಯೂ ಋತುಚಕ್ರದಲ್ಲಿ ಏರುಪೇರುಗಳಾಗಿ ಗರ್ಭಿಣಿಯಾಗುವ ಸಾಧ್ಯತೆಯನ್ನು ಮುಂದೂಡುವಂತಾಗುತ್ತದೆ. ಈ ಸಂದರ್ಭದಲ್ಲಿ ಗರ್ಭಿಣಿಯಾಗಲು ಯತ್ನಿಸುತ್ತಿದ್ದರೆ ಫಲವಂತಿಕೆಯ ಔಷಧಿಗಳನ್ನು ನೀಡಲಾಗುತ್ತದೆ. ಋತುಚಕ್ರವನ್ನು ಸರಿಪಡಿಸಲಾಗುತ್ತದೆ. ಹೈಪೊ ಥೈರಾಯ್ಡಿಸಂ ಇದ್ದಲ್ಲಿ ಥೈರಾಯ್ಡ್‌ ಹಾರ್ಮೋನ್‌ ಸಪ್ಲಿಮೆಂಟ್ಸ್‌ ನೀಡಿ ಸರಿದೂಗಿಸಲಾಗುತ್ತದೆ.

ಗರ್ಭನಿರೋಧಕಗಳ ಬದಲಾವಣೆ: ಹಾರ್ಮೋನಲ್‌ ಆಧಾರಿತ ಗರ್ಭನಿರೋಧಕಗಳನ್ನು ಸೇವಿಸುವ ಸಂದರ್ಭದಲ್ಲಿ ಮೂರು ತಿಂಗಳ ನಂತರ ಅನಿಯಮಿತ ಋತುಚಕ್ರ ಉಂಟಾಗುತ್ತಿದ್ದಲ್ಲಿ ವೈದ್ಯರನ್ನು ಭೇಟಿ ಮಾಡಬೇಕು. ಕೆಲವು ಮಹಿಳೆಯರಿಗೆ  ನೆಕ್ಸಾಪ್ಲಾನಾನ್‌, ಡೆಪೊಪ್ರೊವೆರಾದಂಥ ಗರ್ಭನಿರೋಧಕ ಸೇವಿಸಿದಾಗ ಈ ಸಮಸ್ಯೆಗಳು ಕಂಡು ಬರುತ್ತವೆ. ಇಂಥ ಮಾತ್ರೆಗಳನ್ನು ಸೇವಿಸುವಾಗ ಎಚ್ಚರದಿಂದಿರಬೇಕು. ಉಪಪರಿಣಾಮಗಳ ಬಗ್ಗೆ ಬರೆದಿರುವುದನ್ನು ಓದಬೇಕು.

ಜೀವನಶೈಲಿ ಬದಲಾವಣೆ: ಕೆಲವೊಮ್ಮೆ ಮಹಿಳೆಯರು ಅಗತ್ಯಕ್ಕಿಂತ ಹೆಚ್ಚಿನ ವ್ಯಾಯಾಮ ಮತ್ತು ಕಸರತ್ತುಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅತಿಯಾದ ದೇಹದಂಡನೆಯಿಂದಲೂ ಋತುಚಕ್ರದಲ್ಲಿ ಏರುಪೇರಾಗುತ್ತವೆ. ಆಗಾಗ ದೇಹದಂಡಿಸುವುದನ್ನು ಕಡಿಮೆ ಮಾಡಿಕೊಳ್ಳಬೇಕು. ಅತಿ ತೀವ್ರವಾದ ಹಾಗು ದೈಹಿಕ ಶಕ್ತಿಯನ್ನು ಹೆಚ್ಚು ಬಯಸುವ ವ್ಯಾಯಾಮಗಳನ್ನು ಕಡಿಮೆ ಮಾಡಬೇಕು. ಆಗ ನಿಮ್ಮ ಋತುಚಕ್ರ ಮತ್ತೆ ಕ್ರಮಬದ್ಧವಾಗುತ್ತದೆ.

ಒತ್ತಡವೂ ನಮ್ಮ ದೇಹದಲ್ಲಿ ಹಲವು ಬದಲಾವಣೆಗಳನ್ನು ತರುತ್ತದೆ. ಋತುಕ್ರದಲ್ಲಿ ಏರುಪೇರು ಸಹ ಒತ್ತಡದ ಪರಿಣಾಮವಾಗಿರುತ್ತದೆ. ನಿರಾಳರಾಗುವ ತಂತ್ರಗಳನ್ನು ಕಲಿಯಬೇಕು. ಧ್ಯಾನ ಮತ್ತು ಆಪ್ತ ಸಮಾಲೋಚನೆಯೂ ಒತ್ತಡ ನಿರ್ವಹಣೆಯ ಪ್ರಮುಖ ಅಂಶಗಳಾಗಿವೆ. ನಿಮ್ಮ ತೂಕದಲ್ಲಿ ಆಗುವ ಬದಲಾವಣೆಗಳೂ ಋತುಚಕ್ರದಲ್ಲಿ ಬದಲಾವಣೆ ತರುತ್ತವೆ. ನಿಮ್ಮ ಅಂಡಾಣು ಬಿಡುಗಡೆಯ ಪ್ರಕ್ರಿಯೆಯು ನಿಮ್ಮ ತೂಕವನ್ನು ಅವಲಂಬಿಸಿರುತ್ತದೆ. ತೂಕ ಹೆಚ್ಚಾದಂತೆ ಅಂಡಾಣು ಬಿಡುಗಡೆಯೂ ಹೆಚ್ಚಾಗಬಹುದು. ಕೆಲವರಿಗೆ ಕಡಿಮೆಯೂ ಆಗಬಹುದು.

ಇದರಿಂದಾಗಿ ಅನಿಯಮಿತ ಋತುಚಕ್ರ ಉಂಟಾಗುತ್ತದೆ. ಆದರೆ ನಿಮ್ಮ ಎತ್ತರಕ್ಕೆ ತಕ್ಕಂತೆ ತೂಕವನ್ನು ಕಡಿಮೆ ಮಾಡಿಕೊಂಡರೆ ಕ್ರಮಬದ್ಧ ಋತುಚಕ್ರ ನಿಮ್ಮದಾಗುತ್ತದೆ. ಆದರೆ ಇದ್ದಕ್ಕಿದ್ದಂತೆ ತೂಕ ಕಳೆದುಕೊಂಡರೆ ಋತುಚಕ್ರ ಏರುಪೇರಾಗುವ ಸಾಧ್ಯತೆ ಇದ್ದೇ ಇರುತ್ತದೆ. ಕ್ರಮಬದ್ಧವಾದ ವ್ಯಾಯಾಮ, ತೂಕ ನಿಯಂತ್ರಣ, ಒತ್ತಡ ರಹಿತ ಬದುಕು ಇವೆಲ್ಲವೂ ನಿಮ್ಮ ಋತುಚಕ್ರವನ್ನು ಕ್ರಮಬದ್ಧಗೊಳಿಸುತ್ತವೆ.

ಹಾರ್ಮೋನ್‌ ಚಿಕಿತ್ಸೆ: ಅನಿಯಮಿತ ಋತುಚಕ್ರಕ್ಕೆ ಸಾಮಾನ್ಯ ಕಾರಣವೆಂದರೆ ಹಾರ್ಮೋನುಗಳಲ್ಲಿ ಆಗುವ ಅಸಮಾನ ಸ್ರವಿಸುವಿಕೆ. ಕೆಲವೊಮ್ಮೆ ಮಹಿಳೆಯರು ಸೇವಿಸುವ ಗರ್ಭನಿರೋಧಕ ಮಾತ್ರೆಗಳಲ್ಲಿ ಈಸ್ಟ್ರೋಜನ್‌ ಹಾಗೂ ಪ್ರೊಜೆಸ್ಟರಾನ್‌ ಹಾರ್ಮೋನುಗಳ ಸ್ರವಿಸುವಿಕೆಯ ಮೇಲೆ ಪರಿಣಾಮ ಬೀರುವ ಗುಣಗಳಿರುತ್ತವೆ. ಸಾಮಾನ್ಯವಾಗಿ ಇಂಥವೇ ಮಾತ್ರೆಗಳನ್ನು ನೀಡಲಾಗುತ್ತದೆ. ಕ್ರಮಬದ್ಧವಾದ ಋತುಚಕ್ರಕ್ಕಾಗಿ ಮತ್ತೆ ಹಾರ್ಮೋನುಗಳ ಸ್ರವಿಸುವಿಕೆಯ ಪ್ರಮಾಣವನ್ನು ನಿರ್ಧಾರಗೊಳಿಸುವ ಔಷಧಿಗಳನ್ನು ಸೇವಿಸಬೇಕಾಗುತ್ತದೆ. ಋತುಚಕ್ರದಲ್ಲಿ ಏರುಪೇರಾಗುವುದರಿಂದ ಹಾಗೂ ಗರ್ಭಿಣಿಯಾಗುವಲ್ಲಿ ಕಷ್ಟವಾಗುತ್ತಿದ್ದರೆ ಇದೇ ಚಿಕಿತ್ಸೆಯನ್ನೇ ಸೂಚಿಸಲಾಗುತ್ತದೆ.

ಶಸ್ತ್ರಚಿಕಿತ್ಸೆ: ಗರ್ಭಕೋಶದಲ್ಲಿ ಯಾವುದೇ ಬಗೆಯ ತೊಂದರೆಗಳಿದ್ದರೆ ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಬಹುದು. ಡಿಂಭನಾಳಗಳ ನಡುವೆ ಅಡೆತಡೆ ಇದ್ದರೆ ಋತುಚಕ್ರದಲ್ಲಿ ಏರುಪೇರಾಗುತ್ತದೆ. ಈ ಸಮಸ್ಯೆಗೆ ಸಣ್ಣದೊಂದು ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಬಹುದಾಗಿದೆ. ಕೆಲವೊಮ್ಮೆ ಹುಟ್ಟಿನಿಂದಲೇ ಗರ್ಭಕೋಶ ಅಥವಾ ಅಂಡಾಶಯಗಳಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಅವನ್ನೂ ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಲಾಗುತ್ತದೆ. ಸಂತಾನೋತ್ಪತ್ತಿಯ ಮಾರ್ಗವನ್ನು ಸರಿಪಡಿಸುವುದು ಈ ಶಸ್ತ್ರಚಿಕಿತ್ಸೆಯ ಉದ್ದೇಶವಾಗಿದೆ.

ನಿಮ್ಮ ವೈದ್ಯರನ್ನು ಕಾಣುವುದು ಯಾವಾಗ?
ಒಂದುವೇಳೆ ನಿಮ್ಮ ಋತುಚಕ್ರ ನಿಯಮಿತವಾಗಿರುತ್ತಿದ್ದು, ಒಮ್ಮೆ ಅನಿಯಮಿತವಾಗಿದೆ ಎನಿಸಿದರೆ ಅಥವಾ ಋತುಚಕ್ರದ ಅವಧಿಯಲ್ಲಿ ಗಮನಾರ್ಹವಾದ ಬದಲಾವಣೆ ಕಂಡು ಬಂದರೆ ನಿಮ್ಮ ವೈದ್ಯರು ನಿಮ್ಮನ್ನು ಪರೀಕ್ಷಿಸುತ್ತಾರೆ. ಇದಲ್ಲದೆ ಒಂದು ವೇಳೆ ಈ ಯಾವುದೇ ಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಂಡರೆ ಒಮ್ಮೆ ವೈದ್ಯರನ್ನು ಭೇಟಿ ಮಾಡಿ.
-ಒಂದು ವರ್ಷದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಋತುಚಕ್ರ ಮಿಸ್‌ ಆದಲ್ಲಿ,
-ಪ್ರತಿ 21 ದಿನಗಳಲ್ಲಿಯೇ ಋತುಚಕ್ರ ಮರುಕಳಿಸುತ್ತಿದ್ದರೆ,
-35ದಿನಗಳಿಗೂ ಮೀರಿ ಋತುಚಕ್ರ ಕಂಡು ಬರುತ್ತಿದ್ದರೆ,
-ಸಾಮಾನ್ಯವಾಗಿ ಆಗುವ ಋತುಸ್ರಾವಕ್ಕಿಂತ ಹೆಚ್ಚಿನ ಸ್ರಾವ ಕಂಡು ಬಂದಲ್ಲಿ,
-ಒಂದು ವಾರಕ್ಕಿಂತ ಹೆಚ್ಚಾಗಿ ಸ್ರಾವ ಕಂಡುಬಂದಲ್ಲಿ,
-ಋತುಚಕ್ರದ ಸಮಯದಲ್ಲಿ ಎಂದಿಗಿಂತಲೂ ಹೆಚ್ಚು ನೋವು ಕಂಡು ಬಂದಲ್ಲಿ, ಈ ಸಂದರ್ಭಗಳಿದ್ದರೆ ತಮ್ಮ ವೈದ್ಯರನ್ನು ಭೇಟಿ ಮಾಡಿ, ಅವರ ಸಲಹೆಯಂತೆ ನಡೆದುಕೊಳ್ಳಿ.

ಮಾಹಿತಿಗೆ ಸಂಪರ್ಕಿಸಿ: 18002084444.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT