ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿನ ಡಿಗ್ರಿ ಹೆಚ್ಚಳ ಹೀಗೆ

Last Updated 25 ಮೇ 2015, 19:30 IST
ಅಕ್ಷರ ಗಾತ್ರ

ಹಾಲಿನಲ್ಲಿ ಜಿಡ್ಡಿನ ಅಂಶ ಮತ್ತು ಎಸ್‌ಎನ್‌ಎಫ್ ಸೇರಿಸಿ ಕನಿಷ್ಠ ಶೇ 13.50 ಇದ್ದಲ್ಲಿ ಮಾತ್ರ ಹಾಲನ್ನು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಖರೀದಿಸಲಾಗುತ್ತದೆ. ರೈತರ ಭಾಷೆಯಲ್ಲಿ ಹೇಳಬೇಕೆಂದರೆ ಡಿಗ್ರಿ ಬಂದರೆ ಮಾತ್ರ ಹಾಲಿಗೆ ಬೆಲೆ. ಹಾಗಿದ್ದಲ್ಲಿ ಈ ಡಿಗ್ರಿ ಯಾಕೆ ಬರುವುದಿಲ್ಲ ಮತ್ತು ಎಸ್ಎನ್ಎಫ್ ಯಾಕೆ ಕಡಿಮೆಯಾಗುತ್ತದೆ ಎಂಬ ಪ್ರಶ್ನೆಗೆ ಪಶುವೈದ್ಯ ಡಾ.ಎನ್.ಬಿ. ಶ್ರೀಧರ ಇಲ್ಲಿ ಉತ್ತರಿಸಿದ್ದಾರೆ.

ಆಕಳ ಹಾಲಿನಲ್ಲಿ ಜಿಡ್ಡನ್ನು ಹೊರತುಪಡಿಸಿದ ಘನ ಪದಾರ್ಥಕ್ಕೆ ಎಸ್‌ಎನ್‌ಎಫ್ (Solid not fat) ಎನ್ನುತ್ತಾರೆ. ಇದು ಹಾಲು ಎಷ್ಟು ಗಟ್ಟಿಯಾಗಿದೆ ಎಂದು ತಿಳಿಸುವ ಮಾನದಂಡ. ಎಸ್‌ಎನ್‌ಎಫ್ ನಲ್ಲಿ ಪ್ರೊಟೀನ್ ಅಂಶ ಶೇ 3.3-3.5, ಲ್ಯಾಕ್ಟೋಸ್ ಅಂಶ ಶೇ 5.3-6.3 ಮತ್ತು ಇತರ ಘನ ಪದಾರ್ಥಗಳಾದ ಬೂದಿಯ ಅಂಶ

ಶೇ 0.75-1ಇರಬಹುದು. ಆಕಳಿನ ರಕ್ತದಲ್ಲಿ ಇರುವ ಮೂಲವಸ್ತುಗಳ ಆಧಾರದ ಮೇಲೆ ಎಸ್‌ಎನ್‌ಎಫ್‌ ಉತ್ಪಾದನೆಗೆ ಅವಶ್ಯವಿರುವ ಪ್ರೊಟೀನ್ ಮತ್ತು ಲ್ಯಾಕ್ಟೋಸ್ ಅಂಶ ಅವಲಂಬಿಸಿದೆ. ಪ್ರೊಟೀನ್ ಅಂಶ ಜಾಸ್ತಿಯಾಗಬೇಕಾದರೆ ರಕ್ತದಲ್ಲಿ ಹೆಚ್ಚಿನ ಪ್ರಮಾಣದ ಅಮೈನೊ ಆಮ್ಲಗಳು ಇರಬೇಕು. ಲ್ಯಾಕ್ಟೋಸ್ ಅಂಶ ಜಾಸ್ತಿ ಆಗಬೇಕಾದರೆ ಗ್ಲೂಕೋಸ್ ಅಂಶ ಹೆಚ್ಚಿರಬೇಕು.

ಸಮಸ್ಯೆ ಬಗೆಹರಿಸಲು...
ಹಾಲಿನ ವಿವಿಧ ಅಂಶಗಳು ಶೇ 50ರಷ್ಟು ಅನುವಂಶೀಯತೆಯ ಮೇಲೆ ಅವಲಂಬಿತವಾಗಿದ್ದರೆ,
ಶೇ 45 ಅಂಶ ಆಕಳಿಗೆ ನೀಡುವ ಆಹಾರ ಮತ್ತು ಉಳಿದ ಶೇ 5 ಇತರ ಅಂಶಗಳ ಮೇಲೆ ಅವಲಂಬಿತವಾಗಿವೆ.
ಅನುವಂಶೀಯತೆ : ಮಿಶ್ರತಳಿಯ ಹಸುಗಳಾದ ಎಚ್‌ಎಫ್‌ ಮತ್ತು ಜರ್ಸಿ ತಳಿಗಳ ಆಕಳುಗಳಲ್ಲಿ ಹಾಲಿನಲ್ಲಿನ ವಿವಿಧ ಘನ ಅಂಶಗಳ ಸಾಂದ್ರತೆ ದೇಸಿ ಹಸುಗಳಿಗೆ ಹೋಲಿಸಿದರೆ ಕಡಿಮೆ. ಎಮ್ಮೆಯ ಹಾಲಿನಲ್ಲಿ ಹೆಚ್ಚಿನ ಘನ ಪದಾರ್ಥ ಮತ್ತು ಜಿಡ್ಡು ಜಾಸ್ತಿ ಇರುತ್ತದೆ (ಶೇ 5.5-10). ಹಾಲಿನ ಉತ್ಪಾದನೆ ಜಾಸ್ತಿಯಾದ ಹಾಗೆ ಜಿಡ್ಡು ಮತ್ತು ಪ್ರೊಟೀನ್‌ಗಳ ಅಂಶ ಕಡಿಮೆಯಾಗುತ್ತಾ ಬರುತ್ತದೆ.
ಪೋಷಕಾಂಶ: ಹಾಲು ಹಿಂಡುವ ಜಾನುವಾರುಗಳಿಗೆ ಪ್ರತಿ ಲೀಟರ್ ಹಾಲಿಗೆ ಅರ್ಧ ಕೆ.ಜಿ ಪಶು ಆಹಾರ ಹಾಗೂ ಶರೀರ ನಿರ್ವಹಣೆಗೆ ಒಂದು ಕೆ.ಜಿ. ಆಹಾರದಂತೆ ದಿನನಿತ್ಯ 2-3 ಬಾರಿ ವಿಭಜಿಸಿ ನೀಡಬೇಕು. ಸಾಕಷ್ಟು ಹಸಿ ಹುಲ್ಲನ್ನು ( ಹೈಬ್ರಿಡ್ ನೇಪಿಯರ್, ಕಾಂಗೋ ಸಿಗ್ನಲ್, ಇತ್ಯಾದಿ), ಒಣ ಹುಲ್ಲನ್ನು ( ಜೋಳದ ದಂಟು, ರಾಗಿ ಹುಲ್ಲು  ಇತ್ಯಾದಿ) ನೀಡಬೇಕು. ಹೀಗೆ ಮಾಡಿದರೆ ಎಸ್‌ಎನ್‌ಎಫ್‌ ಸಮಸ್ಯೆಯನ್ನು ತಕ್ಕಮಟ್ಟಿಗೆ ಬಗೆಹರಿಸಬಹುದು.

ಎಸ್ಎನ್‌ಎಫ್‌ ಮಟ್ಟ ಹೆಚ್ಚಿಸುವುದು ಹೀಗೆ...
ಒಂದು ಹಸು ಕಡಿಮೆ ಎಸ್‌ಎನ್‌ಎಫ್‌ ಇರುವ ಹಾಲು ನೀಡಲು ಪ್ರಾರಂಭಿಸಿದರೆ ಅದನ್ನು ಸಾಮಾನ್ಯ ಸ್ಥಿತಿಗೆ ತರಲು ಹಲವು ತಿಂಗಳುಗಳೇ ಬೇಕಾದೀತು ಮತ್ತು ಕೆಲ ವೊಮ್ಮೆ ಅವು ಸರಿಯಾಗದೇ ಇರುವ ಸಾಧ್ಯತೆಯೂ ಇದೆ. 

ಸರಳವಾಗಿ ಹೇಳಬೇಕೆಂದರೆ ಶೇ 9 ರಷ್ಟು ಎಸ್‌ಎನ್‌ಎಫ್‌ನಲ್ಲಿ ಪ್ರೊಟೀನ್ ಅಂಶ ಸುಮಾರು ಶೇ 3.30, ಕೇಸಿನ್ ಅಂಶ ಶೇ 2.50 ಮತ್ತು ಅಲ್ಬುಮಿನ್ ಅಂಶ ಶೇ 0.5, ಲ್ಯಾಕ್ಟೋಸ್ ಅಂಶ  ಶೇ 4.95 ಇರುತ್ತವೆ. ಖನಿಜಾಂಶಗಳು ಮತ್ತು ವಿಟಮಿನ್‌ಗಳು ಕೇವಲ ಶೇ 0.50 ಇರುತ್ತವೆ. ಆದ್ದರಿಂದ ಇವುಗಳನ್ನು ಹೆಚ್ಚಿಸಿದರೆ ಪ್ರಯೋಜನವಾಗಲಿಕ್ಕಿಲ್ಲ. ಈಗ ಒಂದೊಂದೇ ಅಂಶಗಳತ್ತ ಗಮನ ಹರಿಸೋಣ. 

ಮೊದಲನೆಯದಾಗಿ ಹಾಲಿನಲ್ಲಿರುವ ಘನ ಪದಾರ್ಥವಾದ ಪ್ರೊಟೀನ್ ಹೆಚ್ಚಿಸಲು ಇರುವ ಒಂದೇ ಮಾರ್ಗವೆಂದರೆ ಉತ್ತಮ ಗುಣಮಟ್ಟದ ಹಿಂಡಿಯನ್ನು ಹಾಕುವುದು. ಜೀರ್ಣವಾಗುವ ಹಾಗೂ ಕಚ್ಚಾ ಪ್ರೊಟೀನ್ ಮತ್ತು ಬೈಪಾಸ್ ಪ್ರೊಟೀನ್ ಇರುವ ಹಿಂಡಿಗಳನ್ನು ನಿಗದಿತ ಪ್ರಮಾಣದಲ್ಲಿ ನೀಡಿದರೆ ಶೇ 5ರಷ್ಟು ಘನ ಪದಾರ್ಥ ಜಾಸ್ತಿಯಾಗಬಹುದು. ಉದಾ: ಹತ್ತಿಕಾಳು ಹಿಂಡಿಯನ್ನು ಹೆಚ್ಚುವರಿಯಾಗಿ ಪ್ರತಿ ದಿನ ಒಂದು ಕೆ.ಜಿ ನೀಡುವುದು ಉತ್ತಮ. ಸಮತೋಲನ ಪಶು ಆಹಾರಕ್ಕೆ ಶೇ 0.50ರಷ್ಟು ಪ್ರಮಾಣದಲ್ಲಿ ಯೂರಿಯಾ ಸೇರಿಸಿದರೂ ಘನ ಪದಾರ್ಥ ಹಾಲಿನಲ್ಲಿ ಸ್ವಲ್ಪ ಜಾಸ್ತಿಯಾಗುತ್ತದೆ.

ಎರಡನೆಯದಾಗಿ, ಲ್ಯಾಕ್ಟೋಸ್ ಅಂಶ ಹಾಲಿನಲ್ಲಿ ಇರುವ ಘನಪದಾರ್ಥ ಹೆಚ್ಚಿಸುವ ನಿಟ್ಟಿನಲ್ಲಿ ಆಕಳುಗಳಿಗೆ ಹೆಚ್ಚಿನ ಶಕ್ತಿಯ ಅಂಶವನ್ನು ಒದಗಿಸುವ ಪದಾರ್ಥಗಳಾದ ಮೆಕ್ಕೆಜೋಳದ ಪುಡಿ, ರಾಗಿ ಹುಡಿ, ಅಕ್ಕಿ ನುಚ್ಚು ಇತ್ಯಾದಿ ಪದಾರ್ಥಗಳನ್ನು ನಿಗದಿತ ಪ್ರಮಾಣದಲ್ಲಿ ನೀಡಬೇಕು.

ಸಮತೋಲ ಪಶು ಆಹಾರದ ಜೊತೆ ಹೆಚ್ಚುವರಿಯಾಗಿ ನುಣ್ಣನೆ ಪುಡಿ ಮಾಡಿದ ಮೆಕ್ಕೆಜೋಳವನ್ನು ಪ್ರತಿ ದಿನ ಒಂದು ಕೆ.ಜಿ ಪ್ರಮಾಣದಲ್ಲಿ 30-40 ದಿನ ನೀಡುವುದ ರಿಂದ ಇದರ ಪ್ರಮಾಣವನ್ನು ಹೆಚ್ಚಿಸಬಹುದು ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಆದರೆ, ಮೆಕ್ಕೆ ಜೋಳದ ಪುಡಿಯನ್ನು ಹಾಕಿದಾಗ ದೊಡ್ಡ ಹೊಟ್ಟೆಯಲ್ಲಿ ಆಮ್ಲತೆ ಜಾಸ್ತಿಯಾಗುವುದರಿಂದ ಇದರ ಜೊತೆ ಪ್ರತಿ ದಿನ 30ಗ್ರಾಂನಷ್ಟು ಅಡುಗೆ ಸೋಡಾವನ್ನೂ ನೀಡಿದರೆ ಒಳಿತು. ‌

ಬಹಳಷ್ಟು ಜಾನುವಾರುಗಳು ಶಕ್ತಿಯನ್ನು ನೀಡುವ ಆಹಾರದ ಕೊರತೆಯಿಂದ ಬಳಲುವುದರಿಂದ ಅವುಗಳಿಗೆ ಹೆಚ್ಚಿನ ಪ್ರಮಾಣದ ಶಕ್ತಿಯನ್ನು ನೀಡುವ ಆಹಾರ ನೀಡಿ ದರೆ ಖಂಡಿತ ಉತ್ತಮ ಪರಿಣಾಮ ಪಡೆಯಬಹುದು.

ಮೂರನೆಯದಾಗಿ, ಬಹಳಷ್ಟು ಸಲ ಕಡಿಮೆ ಎಸ್‌ಎನ್‌ಎಫ್‌ ನೀಡುವಂತಹ ಆಕಳುಗಳಿಗೆ ಉತ್ತಮ ಗುಣಮಟ್ಟದ ಖನಿಜ ಮಿಶ್ರಣವನ್ನು ನೀಡುವ ಸಲಹೆ ನೀಡುತ್ತಾರೆ. ಇದರಿಂದ ನೇರವಾಗಿ ಹಾಲಿನಲ್ಲಿನ W ಪದಾರ್ಥ ಜಾಸ್ತಿಯಾಗದಿದ್ದರೂ ಅಪರೋಕ್ಷವಾಗಿ ಸಹಾಯವಾಗುತ್ತದೆ. ಈಗಾಗಲೇ ತಿಳಿಸಿದಂತೆ ವಿವಿಧ ಖನಿಜಗಳನ್ನು ಹೊಂದಿದ ಖನಿಜ ಮಿಶ್ರಣವನ್ನು ನಿಗದಿತ ಪ್ರಮಾಣದಲ್ಲಿ ನೀಡುವುದರಿಂದ ವಿವಿಧ ಕಿಣ್ವಗಳ ಚಟುವಟಿಕೆ ಜಾಸ್ತಿಯಾಗುತ್ತದೆ. ಅಲ್ಲದೇ ಖನಿಜಗಳು ಕಿಣ್ವಗಳ ಕ್ಷಮತೆಯನ್ನು ಹೆಚ್ಚಿಸುವುದರ ಮೂಲಕ ಅವು ಉತ್ತಮವಾಗಿ ಕೆಲಸ ನಿರ್ವಹಿಸುವಂತೆ ಮಾಡುತ್ತವೆ. ಇದರಿಂದ ಹಾಲಿನಲ್ಲಿನ ವಿವಿಧ ಘನ ಪದಾರ್ಥಗಳು ಜಾಸ್ತಿಯಾಗಬಹುದು.
ನಾಲ್ಕನೆಯದಾಗಿ, ಕೆಲವು ಔಷಧ ಕಂಪೆನಿಗಳು ವಿವಿಧ ಹೆಸರಿನಲ್ಲಿ ಹಾಲಿನಲ್ಲಿರುವ ಎಸ್‌ಎನ್‌ಎಫ್‌ ಅಂಶವನ್ನು ಕೂಡಲೇ ಹೆಚ್ಚಿಸುವ ತರಹದ ವಸ್ತುಗಳನ್ನು ಮಾರಾಟ ಮಾಡುತ್ತವೆ. ಇವುಗಳಲ್ಲಿ ಖನಿಜಗಳು, ಈಸ್ಟ್ ಮತ್ತು ವಿಟಮಿನ್‌ಗಳು ಇರುತ್ತವೆ.  ಇದರಿಂದ ಸ್ವಲ್ಪ ಪ್ರಮಾಣದ ಸಹಾಯವಾದರೂ ಅವುಗಳ ಬೆಲೆಗೆ ಹೋಲಿಸಿದರೆ, ಅಂತಹ ಪರಿಣಾಮಕಾರಿಯಲ್ಲ ಎಂಬ ಅಭಿಪ್ರಾಯಕ್ಕೆ ಬರಬಹುದು. ಅವುಗಳನ್ನು ಉತ್ತಮ ಪೋಷಕಾಂಶಗಳ ಜೊತೆ ಪೂರಕವಾಗಿ ಬಳಸಬಹುದು ಅಷ್ಟೇ. 

ಐದನೆಯದಾಗಿ, ಆಕಳುಗಳಿಗೆ ಅವು ಕುಡಿಯುವಷ್ಟು ನೀರನ್ನು ನೀಡುವುದು ಅತ್ಯಂತ ಅವಶ್ಯ. ಏಕೆಂದರೆ, ಶರೀರದಲ್ಲಿನ ವಿವಿಧ ಕ್ರಿಯೆಗಳಿಗೆ ನೀರು ಬಹಳ ಅವಶ್ಯ. ಯಾವಾಗಲೂ ಜಾನುವಾರಿನ ಮುಂದೆಯೇ ನೀರನ್ನು ಇಟ್ಟರೆ ಅದು ಅದಕ್ಕೆ ಬೇಕಾದಷ್ಟು ನೀರನ್ನು ಕುಡಿದು ಕೊಳ್ಳುತ್ತದೆ. ಬೇಸಿಗೆಯಲ್ಲಿ ಇದು ಅತ್ಯವಶ್ಯಕ. ಇದರಿಂದ ಹಾಲಿನ ಕಡಿಮೆ ಎಸ್‌ಎನ್‌ಎಫ್‌ ಸಮಸ್ಯೆ ದೂರವಾಗುತ್ತದೆ.  
ಒಟ್ಟಾರೆಯಾಗಿ ಹೇಳಬೇಕೆಂದರೆ, ರಾಸುಗಳಿಗೆ ಸೂಕ್ತ ರೀತಿಯಲ್ಲಿ ಪಶು ಅಹಾರವನ್ನು ಸಮತೋಲನಗೊಳಿಸಿ ಸೂಕ್ತ ಪ್ರಮಾಣದಲ್ಲಿ ನೀಡಬೇಕು. ಏನೇ ಮಾಡಿದರೂ ಎಸ್ಎನ್ಎಫ್‌ ಪ್ರಮಾಣವನ್ನು ಶೇ5 ರಿಂದ 8ರಷ್ಟು ಮಾತ್ರ ಏರಿಸಲು ಸಾಧ್ಯ ಎನ್ನುವ ಸತ್ಯವನ್ನು ಅರ್ಥ ಮಾಡಿಕೊಳ್ಳ ಬೇಕು. ಲೇಖಕರ ಸಂಪರ್ಕ ಸಂಖ್ಯೆ: (080–23415352)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT