ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿವುಡ್‌ ಶೈಲಿಯ ‘ಮಾಸ್ಟರ್ ಮೈಂಡ್’

Last Updated 24 ಜುಲೈ 2014, 19:30 IST
ಅಕ್ಷರ ಗಾತ್ರ

ಸರಿಯಾಗಿ ಒಂದು ವರ್ಷದ ಬಳಿಕ ‘ಮಾಸ್ಟರ್ ಮೈಂಡ್’ ಸುದ್ದಿಮಿತ್ರರ ಎದುರು ಪ್ರತ್ಯಕ್ಷವಾಗಿದ್ದ! ಈ ವಿಳಂಬಕ್ಕೆ ಕಾರಣಗಳ ಸರಮಾಲೆಯನ್ನೇ ನಿರ್ಮಾಪಕ – ನಿರ್ದೇಶಕ ಕುಮಾರ್ ಗೋವಿಂದ್ ಕೊಟ್ಟರು. ಬ್ಯಾಂಕಾಕ್‌ನಲ್ಲಿ ತಾಣ ಆಯ್ಕೆ ಮಾಡಲು ಹುಡುಕಾಟ ನಡೆಸಿದ್ದು, ಬಹುತೇಕ ಅಲ್ಲೇ ಚಿತ್ರೀಕರಣ ನಡೆಸಿದ್ದು, ನಂತರದ ಕೆಲಸಗಳಲ್ಲಿ ವಿಳಂಬವಾಗಿದ್ದು ಇತ್ಯಾದಿ ಇತ್ಯಾದಿ...

ತಮ್ಮ 21 ವರ್ಷಗಳ ವೃತ್ತಿ ಬದುಕಿನಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯಿಂದ ಮಾಡಿದ ಚಿತ್ರ ‘ಮಾಸ್ಟರ್ ಮೈಂಡ್’ ಎಂದು ಕುಮಾರ್ ಗೋವಿಂದ್ ಹೇಳಿಕೊಂಡರು. ಈವರೆಗೆ ಮೂವತ್ತೊಂದು ಸಿನಿಮಾಗಳಲ್ಲಿ ಅಭಿನಯಿಸಿರುವ ಗೋವಿಂದ್, ಈ ಅವಧಿಯಲ್ಲಿ ಅನುಭವಿಸಿದ ಅವಮಾನ ಹಾಗೂ ಬಹುಮಾನಗಳೆರಡನ್ನೂ ಪತ್ರಿಕಾಗೋಷ್ಠಿಯಲ್ಲಿ ತೆರೆದಿಟ್ಟರು. ‘ಏನೆಲ್ಲ ಕಷ್ಟ ಅನುಭವಿಸಿಯೂ ಇಷ್ಟು ದಿನಗಳ ಕಾಲ ತಾವು ಚಿತ್ರರಂಗದಲ್ಲಿ ಇರುವುದಕ್ಕೆ ಕಾರಣ ಮಾಧ್ಯಮಗಳು’ ಎಂದು ಸ್ಮರಿಸಿದರು.

ಬ್ಯಾಂಕಾಕ್‌ನಲ್ಲಿ ಮೂರು ವಾರಗಳ ಅವಧಿಯನ್ನು ಚಿತ್ರೀಕರಣ ನಡೆಸುವ ಸ್ಥಳ ಹುಡುಕಲೆಂದೇ ಅವರು ಕಳೆದಿದ್ದಾರಂತೆ. ‘ಒಂದೊಳ್ಳೆ ಸಿನಿಮಾ ಮಾಡುವ ಕನಸು ಇತ್ತು. ಅದನ್ನು ಮಾಡಿದ್ದೇನೆ’ ಎಂದ ಗೋವಿಂದ್‌, ಸೆನ್ಸಾರ್ ಮಂಡಳಿ ಸದಸ್ಯೆಯೊಬ್ಬರು ಈ ಸಿನಿಮಾ ನೋಡಿ ‘ಹಾಲಿವುಡ್ ಥರ ಮಾಡಿದ್ದೀರಿ’ ಎಂದು ಉದ್ಗರಿಸಿದ್ದನ್ನು ಖುಷಿಯಿಂದ ಹಂಚಿಕೊಂಡರು.

ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಪರಿಪಾಠವನ್ನು ಕುಮಾರ್ ಗೋವಿಂದ್ ಇಲ್ಲೂ ಮುಂದುವರಿಸಿದ್ದಾರೆ. ಕಾಸರಗೋಡಿನ ರಾಜವರ್ಧನ್ ಚಿತ್ರದ ನಾಯಕ. ಡ್ಯೂಪ್‌ ಇಲ್ಲದೇ ಸ್ಟಂಟ್‌ಗಳಲ್ಲಿ ಪಾಲ್ಗೊಂಡಿದ್ದನ್ನು ಅವರು ಹೇಳಿಕೊಂಡರು. ಈಗಾಗಲೇ ತಮಗೆ ಮಲೆಯಾಳಂ ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಬಂದಿದ್ದರೂ, ‘ಮಾಸ್ಟರ್ ಮೈಂಡ್’ ತೆರೆ ಕಾಣುವ ತನಕ ಬೇರಾವ ಚಿತ್ರ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದರು. ಆರ್ಕಿಟೆಕ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಜವರ್ಧನ್‌ಗೆ ಕಳರಿಪಯಟ್ಟು ಹಾಗೂ ಕುಂಗ್‌ಫು ಗೊತ್ತಂತೆ.

ರಾಜವರ್ಧನ್ ಜತೆ ನಾಯಕಿಯಾಗಿರುವ ದಿವ್ಯಾ ಗೌಡ ಅವರು ಈ ಚಿತ್ರ ತಮಗೆ ಇನ್ನಷ್ಟು ಅವಕಾಶ ತಂದುಕೊಡುವ ನಿರೀಕ್ಷೆಯಲ್ಲಿದ್ದಾರೆ. ಇನ್ನೊಬ್ಬ ನಾಯಕಿ ತಮನ್ನಾ, ಪಂಜಾಬ್ ಮೂಲದವರು. ಕನ್ನಡ ಕಲಿತು ತಮ್ಮ ಪಾತ್ರಕ್ಕೆ ತಾವೇ ಧ್ವನಿ ನೀಡಿದ್ದಾಗಿ ಖುಷಿಯಿಂದ ಹೇಳಿಕೊಂಡರು. ಗೋವಿಂದ್ ಸಹೋದರ ಕೃಷ್ಣ ಮಾತನಾಡಿದರು. ಪತ್ರಿಕಾಗೋಷ್ಠಿಗೂ ಮುನ್ನ ಚಿತ್ರದ ಪ್ರೊಮೋ ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT