ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಸಾಲುತ್ತಾ?

Last Updated 1 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಎದೆಹಾಲಿನಿಂದ ಮಗು ಹಾಗೂ ತಾಯಿಗೆ ಆಗುವ ಪ್ರಯೋಜನಗಳನ್ನು ನಿರ್ವಿವಾದವಾಗಿ ಎಲ್ಲಾ ತಾಯಂದಿರು ಒಪ್ಪಿಕೊಂಡಿದ್ದಾರೆ. ಹೆರಿಗೆಯಾದ ದಿನದಿಂದ ತಮಗೆ ಹಾಲೇ ಬರುತ್ತಿಲ್ಲ. ಅಥವಾ ಹಾಲು ಸಾಕಾಗುತ್ತಿಲ್ಲ ಎಂದು ಹಲವು ತಾಯಂದಿರು ದೂರುವುದು ಸಾಮಾನ್ಯ. ಶೇಕಡ 5ಕ್ಕೂ ಹೆಚ್ಚು ಅಮ್ಮಂದಿರು ಬಲು ಬೇಗ ಎಳೆಮಗುವಿಗೆ ಪೂರಕ ಆಹಾರ ಪ್ರಾರಂಭಿಸುವುದು ಆತಂಕದ ವಿಷಯ. 2 ತಿಂಗಳೊಳಗೆ ನಾವು ಮಗುವಿಗೆ ಬೇರೆ ಹಾಕುತ್ತಿದ್ದೇವೆ. ಎದೆ ಹಾಲೇ ಬರುತ್ತಿಲ್ಲ ಎಂದು ಹಾಲು ಕುಡಿಸುವುದನ್ನೇ ನಿಲ್ಲಿಸಿದವರೂ ಇದ್ದಾರೆ.
ಎದೆಹಾಲು ಸಾಕಾಗುವುದಿಲ್ಲ, ನಿರ್ಣಯಿಸುವುದು ಹೇಗೆ?

ಬರೀ ಎದೆ ಹಾಲನ್ನೇ ಕುಡಿದ ಮಗು ದಿನದ 24ಗಂಟೆಗಳಲ್ಲಿ ಕನಿಷ್ಟ 6 ಬಾರಿಯಾದರೂ ಮೂತ್ರವಿಸರ್ಜನೆ ಮಾಡಬೇಕು. ಇದು ಹೆರಿಗೆಯಾದ ಮೊದಲ 3 ದಿನಗಳಲ್ಲಿ ಆಗದೇ ಇರಬಹುದು. ಯಾಕೆಂದರೆ ಆ ಸಮಯದಲ್ಲಿ ಮಗು ಗಿಣ್ಣ ಹಾಲನ್ನು (ಕೊಲೆಸ್ಟ್ರಮ್) ಕುಡಿಯುತ್ತದೆ. ಮೊದಲನೆಯ ವಾರದಲ್ಲಿ ಶೇ.10 ರಷ್ಟು ತೂಕ ಕಡಿಮೆಯಗುತ್ತದೆ. ನಂತರ ಪ್ರತಿ ವಾರವೂ ಮಗುವಿನ ತೂಕ 125 ಗ್ರಾಂ. ನಷ್ಟು ಹೆಚ್ಚಾಗುತ್ತದೆ.

ಮಗುವಿನ ಕಾರಣಗಳು 
*ಮಗು ತುಂಬಾ ಅಳುತ್ತದೆ.
*ತುಂಬಾ ಹೊತ್ತು ಹಾಲು ಕುಡಿಯುತ್ತದೆ ಮತ್ತು ಸ್ತನವನ್ನು ಬಿಡುವುದೇ ಇಲ್ಲ. ಪದೇ ಪದೇ ಹಾಲು ಕುಡಿಯುತ್ತದೆ.
*ಎದೆ ಹಾಲು ಕುಡಿಯುವುದನ್ನೇ ನಿರಾಕರಿಸುತ್ತದೆ. ಬೆರಳು ಚೀಪುತ್ತದೆ. ಮಗು ತುಂಬಾ ಸಣ್ಣಗಿದೆ. ಸರಿಯಾಗಿ ಹಿಡಿಯುವುದಕ್ಕೇ ಆಗುವುದಿಲ್ಲ. ಹಾಲು ಕುಡಿಲು ಬರುತ್ತಿಲ್ಲ.
*ಮಗು ಎದೆ ಹಾಲು ಕುಡಿದಾಗ ನಿದ್ರೆ ಮಾಡುವುದೇ ಇಲ್ಲ. ಬಾಟಲಿ ಹಾಲು ಕುಡಿದಾಗ ಚೆನ್ನಾಗಿ ನಿದ್ರೆ ಮಾಡುತ್ತದೆ.
*ಹಾಲು ಕುಡಿಸಿದ ಮೇಲೆ ಮಗುವಿನ ಹೊಟ್ಟೆ ಉಬ್ಬಿದಂತೆ ಅಥವಾ ತುಂಬಿದಂತೆ ಇರುವುದಿಲ್ಲ. 

ತಾಯಂದಿರ ಭ್ರಮೆ
*ಸ್ತನ ಹಾಲಿನಿಂದ ತುಂಬಿಕೊಳ್ಳುತ್ತಿಲ್ಲ ಮತ್ತು ಹಾಲು ಉಕ್ಕಿ ಹರಿಯುತ್ತಿಲ್ಲ. (ಬೇರೆಯವರ ಉದಾಹರಣೆ ಕೊಡುತ್ತಾ)
*ಎದೆಹಾಲು ತೊಟ್ಟಿಕ್ಕುತ್ತಿಲ್ಲ, ಹಾಲು ತೆಳುವಾಗಿದೆ.
*ಸಂಬಂಧಿಗಳು, ಪಕ್ಕದ ಮನೆಯವರು ಹಾಲು ಸಾಕಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ.

ಅತಿ ಸಾಮಾನ್ಯ ಕಾರಣ, ಮಗು ಅಳುತ್ತದೆ ಎನ್ನುವುದು. ಆದರೆ ನೆನಪಿರಲಿ ಮಗು ಕೇವಲ ಹಾಲಿಗಾಗಿ ಅಳುವುದಿಲ್ಲ. ಅಳುವಿಗೆ ಅನೇಕ ಕಾರಣಗಳಿವೆ. ಬಟ್ಟೆ ಒದ್ದೆಯಾದಾಗಲೂ ಅಳುತ್ತವೆ, ತಾಯಿ ಸಾಮೀಪ್ಯಕ್ಕಾಗಿಯೂ ಅಳ­ಬಹುದು. ಜೋರಾಗಿ ಅಳುವುದರಿಂದ ಹೊಟ್ಟೆ ಒತ್ತಿದಂತಾಗಿ ಮಗುವಿನ ಮಲಮೂತ್ರ ವಿಸರ್ಜನೆಗೆ ಸಹಾಯವಾಗುತ್ತದೆ.

ಎರಡು ತಿಂಗಳ ಹಿಂದೆ ಹೆರಿಗೆಯಾದ ಅನಿತಾ, ‘ಡಾಕ್ಟ್ರೇ ನಮ್ಮ ಮಗು ದಪ್ಪಾನೇ ಆಗಿಲ್ಲ. ಬರೀ ಅಳುತ್ತೆ. ಈಗ ಹಸುವಿನ ಹಾಲು ಹಾಕ್ತಾ ಇದೀನಿ’ ಎಂದಳು. ಅವಳು ಎದೆ ಹಾಲು ಕುಡಿಸುವ ರೀತಿಯ ಬಗ್ಗೆ ಕೇಳಿ ತಿಳಿದೆ. ಒಂದು ಕಡೆ ಕುಡಿಸುವಾಗಲೇ ತಪ್ಪಿಸಿ ಮಗುವನ್ನು ಇನ್ನೊಂದು ಕಡೆಗೆ ಕುಡಿಸುತ್ತಿದ್ದಳು ಅವರಜ್ಜಿ, ಇಲ್ಲದಿದ್ದರೆ ಒಂದೆಡೆ ದಪ್ಪ ಹಾಗೂ ಇನ್ನೊಂದೆಡೆ ಸಣ್ಣ ಆಗುತ್ತದೆಂದು ತಿಳಿಸಿದ್ದರಂತೆ.

ಪ್ರತಿ ಸ್ತನದಲ್ಲಿಯೂ ಮುಂದಿನ ಹಾಲು (ಪೋರ್‌ಮಿಲ್ಕ) ಮತ್ತು ಹಿಂದಿನ ಹಾಲು (ಹೈಂಡ್‌ಮಿಲ್ಕ್) ಎಂದಿರುತ್ತವೆ. ಮುಂದಿನ ಹಾಲು ಹೆಚ್ಚಿನ ಪ್ರಮಾಣದಲ್ಲಿದ್ದು ತಿಳುವಿರುತ್ತದೆ. ಪ್ರೊಟೀನ್, ವಿಟಮಿನ್, ಲ್ಯಾಕ್ಟೋಸ್ ಅಂಶ ಹೆಚ್ಚಿರುತ್ತವೆ. ಮಗುವಿನ ದಾಹ ತೀರಿಸುತ್ತದೆ. ಹಿಂದಿನ ಹಾಲು ಕೊನೆಗೆ ಬರುವಂತಹದ್ದು. ಇದು ಗಟ್ಟಿಯಿದ್ದು ಕೊಬ್ಬಿನಾಂಶ ಹೆಚ್ಚಿರುತ್ತದೆ. ಮಗುವಿನ ಹಸಿವನ್ನು ತಣಿಸಿ ಶಕ್ತಿ ನೀಡುತ್ತದೆ.

ಎರಡನ್ನೂ ಕುಡಿದ ಮಕ್ಕಳು ಚೆನ್ನಾಗಿ ನಿದ್ರಿಸುತ್ತವೆ, ಆರೋಗ್ಯ ಪೂರ್ಣವಾಗಿ ಬೆಳೆಯುತ್ತವೆ. ಮುಂದಿನ ಹಾಲನ್ನಷ್ಟೇ ಕುಡಿದರೆ ಹೆಚ್ಚಾಗಿರುವ ಲ್ಯಾಕ್ಟೋಸ್ ಅಂಶದಿಂದ ಹೊಟ್ಟೆ ಉಬ್ಬರಿಸಿ ಮಗು ಅಳಬಹುದು ಎಂದು ತಿಳಿ ಹೇಳಿದೆ. ತಿಂಗಳಲ್ಲಿ ಅವಳ ಮಗು ಒಂದು ಕೆ.ಜಿ ತೂಕವನ್ನು ಗಳಿಸಿತೆಂದು ಸಂತೋಷ ವ್ಯಕ್ತಪಡಿಸಿದಳು ಅನಿತಾ.

ಮೊದಲ 6ತಿಂಗಳು ಸ್ತನ್ಯಪಾನದ ಹೊರತಾಗಿ ಒಂದು ಹನಿ ನೀರಿನ ಅಗತ್ಯವೂ ಇಲ್ಲ (ಉರಿ ಬಿಸಿಲಿನಲ್ಲೂ). ಸ್ತನ್ಯಪಾನ ಒಂದು ಜೀವ ಉಳಿಸುವ ಗುರಿ/ ಜೀವನ ಗೆಲ್ಲುವ ಧ್ಯೇಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT