ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವು ಕಡಿತ: ಗಂಭೀರ ಸಮಸ್ಯೆ

Last Updated 1 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಅ‌ತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಯಥೇಚ್ಛವಾಗಿರುವ ನಗರ ಬೆಂಗಳೂರು. ಆದರೆ ಸುತ್ತಮುತ್ತ ಹಳ್ಳಿಗಳಲ್ಲಿ ಹಾವು ಕಡಿತಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಜನರು ಸಾವನ್ನಪ್ಪುವ ಪ್ರಕರಣಗಳು ಹೇರಳವಾಗಿ ವರದಿ­ಯಾ­ಗು­ತ್ತಿ­ರು­ವುದು ವಿಪರ್ಯಾಸ.

ಪೀಣ್ಯ ಬಳಿಯ ಆಂಧ್ರಹಳ್ಳಿಯಲ್ಲಿ ಕಳೆದ ವಾರ ಮಹಿಳೆ­ಯೊಬ್ಬರಿಗೆ ಮಂಡಲದ ಹಾವು ಕಚ್ಚಿತ್ತು. ಎರಡು ಖಾಸಗಿ ಆಸ್ಪತ್ರೆ­ಗಳಿಗೆ ಓಡಾ­ಡಿದರೂ ಔಷಧಿ ದೊರಕದೆ ಸಾವನ್ನಪ್ಪಿದ್ದಾರೆ. ಖಾಸಗಿ ಮಾತ್ರ­ವಲ್ಲ, ಸರ್ಕಾರಿ ಆಸ್ಪತ್ರೆಗಳಲ್ಲೂ ಹಾವಿನ ವಿಷಕ್ಕೆ ಔಷಧಿಗಳ ಕೊರತೆ ಇದೆ ಎನ್ನುವುದು ಆತಂಕ ಹುಟ್ಟಿಸುವ ಸಂಗತಿ.

ದೇಶದಲ್ಲಿ ಹಾವಿನ ಕಡಿತದಿಂದ ಅತ್ಯಧಿಕ ಜನರು ಸಾವನ್ನಪ್ಪುವ 13 ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಹಾವಿನ ಕಡಿತದಿಂದ ಉಂಟಾಗುವ ಸಾವಿನ  ಸಂಖ್ಯೆಗಳನ್ನೂ ಇಲ್ಲಿ ಸರಿಯಾಗಿ ನಮೂ­ದಿಸ­ಲಾಗುತ್ತಿಲ್ಲ. ಆದರೆ ಬೆಂಗಳೂರು ಸುತ್ತಮುತ್ತವೇ ಪ್ರತಿವಾರ ಕನಿಷ್ಠ ಎರಡು ಹಾವಿನ ಕಡಿತದ ಸುದ್ದಿಗಳಾದರೂ ವರದಿಯಾಗುತ್ತಿವೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಹಾವು ಕಡಿತಕ್ಕೆ ಔಷಧಿಯ ಕೊರತೆ ಇದೆ ಎನ್ನುವುದು ನಮ್ಮ ಆರೋಗ್ಯ ಇಲಾಖೆಯ ಸೋಂಬೇರಿತನಕ್ಕೆ ಸಾಕ್ಷಿಯಂತಿದೆ. ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸರ್ಕಾರಿ ಆಸ್ಪತ್ರೆಗಳಿಗೆ ಈ ಔಷಧಿ ಪೂರೈಸುವ ಕರ್ನಾಟಕ ರಾಜ್ಯ ಔಷಧ ಸಂಗ್ರಹ ಮತ್ತು ಪೂರೈಕೆ ಸಂಸ್ಥೆ­ಯಲ್ಲೇ (ಕೆಎಸ್‌ಡಿಎಲ್‌ಡಬ್ಲ್ಯುಎಸ್‌) ಕಳೆದ ಆರು ತಿಂಗಳಿಂದ ಹಾವಿನ ಕಡಿತದ ಔಷಧಿ ಸಿಗುತ್ತಿಲ್ಲ. ಹಾಗಿದ್ದೂ ಸರ್ಕಾರ ಈ ಸಮಸ್ಯೆಯನ್ನು ಗಂಭೀರ­ವಾಗಿ ಪರಿಗಣಿಸದೆ ಇರುವುದು ಅಕ್ಷಮ್ಯ. ‘ಸರ್ಕಾರಕ್ಕೆ ಮಾಹಿತಿ ನೀಡ­ಲಾ­ಗಿದೆ. ಆದಷ್ಟು ಬೇಗ ಔಷಧಿ ಬರಬಹುದೆಂಬ ನಿರೀಕ್ಷೆಯಲ್ಲಿದ್ದೇವೆ’ ಎಂದು ಅಧಿಕಾರಿಗಳು ಉತ್ತರಿಸುತ್ತಾರೆ.

ಸಾಮಾನ್ಯವಾಗಿ ವಿಷಜಂತುಗಳ ಕಡಿತಕ್ಕೆ ತುರ್ತಾಗಿ ಚಿಕಿತ್ಸೆ ಒದಗಿಸದಿದ್ದರೆ ಪ್ರಾಣಾಪಾಯ ಖಚಿತ. ಇಷ್ಟೆಲ್ಲ ಅತ್ಯಾ­ಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಇಟ್ಟುಕೊಂಡೂ ಹಾವಿನ ಕಡಿತಕ್ಕೆ ನಮ್ಮಲ್ಲಿ ಔಷಧಿ ಸಿಗುತ್ತಿಲ್ಲ ಎಂದರೆ ಹೇಗೆ? ಪುಣೆಯ ಸೆರಮ್‌ ಇನ್ಸ್‌­ಟಿ­ಟ್ಯೂಟ್‌, ಹೈದರಾಬಾದಿನ ವಿನ್ಸ್‌ ಬಯೋಟೆಕ್‌, ಮುಂಬೈಯ ಹಾಫ್‌ಕಿನ್ಸ್‌ ಮುಂತಾದ ಕಂಪೆನಿಗಳಲ್ಲಿ ಹಾವಿನ ಕಡಿತಕ್ಕೆ ಔಷಧಿ ತಯಾರಾಗುತ್ತಿದೆ ಎನ್ನುವ ಮಾಹಿತಿ ಸರ್ಕಾರದ ಬಳಿಯೂ ಇದೆ.

ಸರ್ಕಾರ ಈ ಸಮಸ್ಯೆಯನ್ನು ಗಂಭೀರ­ವಾಗಿ ಪರಿಗಣಿಸಿ, ತಕ್ಷಣ ಸಾಕಷ್ಟು ಔಷಧಿ ದಾಸ್ತಾನಿಗೆ  ಹಾಗೂ ಅವುಗಳ ಸಕಾಲಿಕ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಹಾವಿನ ಕಡಿತದ ಔಷಧಿ­ಗಳ ತಯಾರಿಗೆ ಹಾವಿನ ವಿಷವನ್ನೇ ಬಳಸುವ ಹಿನ್ನೆಲೆಯಲ್ಲಿ ಈ ಔಷಧಿ ತಯಾರಿಕೆ­­­ಯನ್ನೇ ನಿಲ್ಲಿಸಬೇಕೆಂದು ಕೋರಿ ಪ್ರಾಣಿ ಹಕ್ಕುಗಳ ರಕ್ಷಣಾ ಸಂಸ್ಥೆ­ಯ­ವರು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಔಷಧಿ ಕೊರತೆಗೆ ಸ್ವಲ್ಪ ಮಟ್ಟಿಗೆ ಈ ಕಾರಣವೂ ಇರಬಹುದು. ಆದರೆ ಬೇರೆ ರಾಜ್ಯಗಳಲ್ಲಿ ಇಲ್ಲದಷ್ಟು ಕೊರತೆ ನಮ್ಮಲ್ಲಿ ಮಾತ್ರ ಕಾಡುವುದೇಕೆ?

ಹಾವಿನ ಕಡಿತಕ್ಕೆ ಸೂಕ್ತ ಪ್ರಥಮ ಚಿಕಿತ್ಸೆ ನೀಡುವ ಕುರಿತೂ ಗ್ರಾಮೀಣ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಬೇಕು. ಸಾರ್ವಜನಿಕರಿಗೂ ಪ್ರಥಮ ಚಿಕಿತ್ಸೆಯ ತಿಳಿವಳಿಕೆಯನ್ನು ವ್ಯಾಪಕವಾಗಿ ನೀಡಬೇಕಿದೆ. ಸರ್ಕಾರ ಈ ಕಡೆಗೆ ತಕ್ಷಣ ಗಮನಹರಿಸುವುದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT