ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸಿಗೆಯ ಬೆಸುಗೆ!

ಅರಿವು ಹರವು
Last Updated 4 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಹಾಸಿಗೆ ಮತ್ತು ಶ್ರೀಮಂತಿಕೆ ನಡುವೆ ಒಂದು ಸಂಬಂಧವಿದೆ. ವ್ಯಕ್ತಿಯೊಬ್ಬ ಮಲಗುವ ಹಾಸಿಗೆ ನೋಡಿ ಆತನ ಸಿರಿವಂತಿಕೆ ಅಳೆಯಬಹುದು ಎಂದು ಹೇಳುವವರಿದ್ದಾರೆ. ಜನರ ಆಸೆಗಳಿಗೆ ಮಿತಿ ಹೇರುವ, ವೆಚ್ಚದ ಮೇಲಿನ ನಿಯಂತ್ರಣದ ಅಗತ್ಯವನ್ನು ಪ್ರತಿಪಾದಿಸುವ ‘ಹಾಸಿಗೆ ಇದ್ದಷ್ಟೇ ಕಾಲು ಚಾಚು’ ಎಂಬ ನಾಣ್ಣುಡಿಯು ಹಾಸಿಗೆ ಮತ್ತು ಸಿರಿವಂತಿಕೆ ನಡುವಣ ಸಂಬಂಧವನ್ನು ಸಾರಿ ಹೇಳುತ್ತದೆ. ಮನುಕುಲದ ಆರಂಭದಿಂದಲೂ ಮಾನವನಿಗೆ ಜೊತೆಯಾದ ‘ಹಾಸಿಗೆ’ ಅಲಿಯಾಸ್‌ ‘ಬೆಡ್‌’ ನಮ್ಮ ಈ ದಿನದ ವಸ್ತು.

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹಾಸಿಗೆ ಮತ್ತು ಮಂಚವನ್ನು ಒಳಗೊಂಡ ಪೀಠೋಪಕರಣವನ್ನು ‘ಬೆಡ್‌’ ಎಂದು ಕರೆಯುತ್ತಾರೆ. (ನಮ್ಮಲ್ಲೂ ಈಗ ಹೀಗೆಯೇ ಕರೆಯಲಾಗುತ್ತದೆ) ಹಾಸಿಗೆಗೆ ಪ್ರತ್ಯೇಕವಾಗಿ ‘ಮ್ಯಾಟ್ರೆಸ್‌’ ಎಂಬ ಹೆಸರಿದೆ. ಗಮನಿಸ ಬೇಕಾದ ಅಂಶ ಎಂದರೆ, ಮಂಚ ಮತ್ತು ಹಾಸಿಗೆ ಎರಡೂ ಜೊತೆಗೆ ಬೆಳೆದು ಬಂದಂಥದ್ದು. ಒಂದನ್ನು ಬಿಟ್ಟು ಇನ್ನೊಂದು ಇರಲು ಸಾಧ್ಯವಿಲ್ಲ. ಅಂದ ಮಾತ್ರಕ್ಕೆ ಎರಡೂ ಕಡ್ಡಾಯವೇನಲ್ಲ. ಮಂಚವನ್ನು ಬಳಸದೆ ಕೇವಲ ಹಾಸಿಗೆಯಲ್ಲಿ ಮಲಗುವ, ಹಾಸಿಗೆ ಉಪಯೋಗಿಸದೆ ಕೇವಲ ಮಂಚದ ಮೇಲೆ ಮಲಗುವ ಮಂದಿಯೂ ಇದ್ದಾರೆ. ಪಂಜಾಬ್‌, ರಾಜಸ್ತಾನ ಸೇರಿದಂತೆ ಉತ್ತರ ಭಾರತದಲ್ಲಿ ಬಳಕೆಯಲ್ಲಿರುವ, ಹಗ್ಗವನ್ನು ನೇಯ್ದು ಮಾಡಿದ ಮಂಚವನ್ನು (ಚರ್ಪಾಯಿ) ಇದಕ್ಕೆ ಉದಾಹರಣೆಯನ್ನಾಗಿ ಕೊಡಬಹುದು.

ಹಾಸಿಗೆ, ಮಾನವನ ಜೀವನದ ಹಾಸು ಹೊಕ್ಕಾಗಿದ್ದು ಇತ್ತೀಚೆಗೇನಲ್ಲ. 79 ಸಾವಿರ ವರ್ಷಗಳಿಂದ ಮಾನವ ಮತ್ತು ಹಾಸಿಗೆ ನಂಟು ಇದೆ! ಕ್ರಿ.ಪೂ 77000ರಲ್ಲೇ ಹಾಸಿಗೆ ಬಳಕೆಯಲ್ಲಿತ್ತು. ದಕ್ಷಿಣ ಆಫ್ರಿಕಾದ ಸಿಬುಡು ಗುಹೆಯಲ್ಲಿ ಇದರ ಕುರುಹುಗಳು ಪತ್ತೆಯಾಗಿವೆ.  ಹುಲ್ಲಿನ ಕಂತೆ ಅಥವಾ ಮರಗಳ ಎಲೆಗಳು, ಪ್ರಾಣಿಗಳ ಚರ್ಮ ಆ ಕಾಲದ ಹಾಸಿಗೆ ಯಾಗಿತ್ತು. ಮಲಗಿರುವ ಸಂದರ್ಭದಲ್ಲಿ ನೆಲದಲ್ಲಿನ ಮಣ್ಣು, ಕೊಳೆ ದೇಹಕ್ಕೆ ತಾಕದಂತೆ ಮಾಡಲು ಹಾಗೂ ಕ್ರಿಮಿ ಕೀಟಗಳಿಂದ ಮುಕ್ತಿಪಡೆಯುವ ಉಪಾಯವಾಗಿ ಅಂದಿನ ಕಾಲದ ಜನರು ಇವುಗಳನ್ನು ಹಾಸಿ ಅದರ ಮೇಲೆ ಮಲಗುತ್ತಿದ್ದರು. ದಿನ ಕಳೆದಂತೆ ಅದು ಹಾಸಿಗೆಯಾಗಿ ಬದಲಾಯಿತು. ಸುಪ್ಪತ್ತಿಗೆಯ ಸ್ಪರ್ಶವೂ ಅದಕ್ಕೆ ದೊರಕಿತು.

ಸ್ಕಾಟ್ಲೆಂಡಿನ ಉತ್ತರ ಭಾಗದಲ್ಲಿರುವ ಸಂರಕ್ಷಿತ ಗ್ರಾಮವೊಂದರಲ್ಲಿ ಕಲ್ಲಿನಿಂದ ಮಾಡಿದ ಮಂಚಗಳು ಪತ್ತೆಯಾಗಿವೆ. ಕ್ರಿ.ಪೂ 3200-2200ರ ಅವಧಿಯಲ್ಲಿ ಇಲ್ಲಿ ಜನವಾಸ ಇತ್ತು. ಇದೇ ಅವಧಿಯಲ್ಲಿ ಪರ್ಷಿಯಾದಲ್ಲಿ ಟಗರುಗಳ ಚರ್ಮವನ್ನು ಹಾಸಿಗೆಯಾಗಿ ಬಳಸುತ್ತಿದ್ದರು. ಸಾಮಾನ್ಯ ಈಜಿಪ್ಟಿಯನ್ನರು ತಾಳೆ ಜಾತಿಯ ಮರದ ರೆಂಬೆಯ ಮೇಲೆ ಮಲಗುತ್ತಿದ್ದರು. ಸಿರಿವಂತ ಈಜಿಪ್ಟಿಯನ್ನರು ಎತ್ತರದಲ್ಲಿ ಮಂಚ ಕಟ್ಟಿಕೊಳ್ಳುತ್ತಿದ್ದರಂತೆ. ಅದನ್ನು ಮೆಟ್ಟಿಲುಗಳ ಮೂಲಕ ಹತ್ತಬೇಕಿತ್ತು. ಹಾಸಿಗೆ ತಲೆದಿಂಬುಗಳನ್ನೂ (ತಲೆ ಇಡುವುದಕ್ಕಾಗಿ ಅರ್ಧ ಸಿಲಿಂಡರ್‌ ಆಕಾರದ ಲೋಹ ಇಲ್ಲವೇ ಮರದಿಂದ ಮಾಡಿದ ಸಾಧನ) ಅವರು ಬಳಸುತ್ತಿದ್ದರು. ಕೆಲವು ಧನಿಕರ ಬಳಿ ಚಿನ್ನ ಲೇಪಿತ ಮಂಚಗಳೂ ಇದ್ದವು. ದಂತ ಸೇರಿದಂತೆ ಬೆಲೆ ಬಾಳುವ ವಸ್ತುಗಳಿಂದ ಅಲಂಕರಿಸುವ ಪದ್ಧತಿಯೂ ಅಲ್ಲಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ.

ಕ್ರಿ.ಪೂ 200ರ ವೇಳೆಗೆ ಪುರಾತನ ರೋಮ್‌ನಲ್ಲಿ ಸುಧಾರಿತ ಹಾಸಿಗೆಗಳು ಲಭ್ಯವಾದವು. ಲಾಳದ ಕಡ್ಡಿ, ಒಣಹುಲ್ಲು, ಉಣ್ಣೆ ಮತ್ತು ಹಕ್ಕಿಯ ಗರಿಗಳಿಂದ ಹಾಸಿಗೆ  ತಯಾರಿಸುವ ವಿಧಾನವನ್ನು ಅವರು ಕಂಡುಕೊಂಡಿದ್ದರು. ಇದು ಇನ್ನಷ್ಟು ಮೆತ್ತನೆ ಅನುಭವ ನೀಡು ತ್ತಿತ್ತು. ಹಾಸಿಗೆಗೆ ಐಷಾರಾಮದ ಸ್ಪರ್ಶ ಸಿಕ್ಕಿದ್ದು ರೋಮ್‌ನಲ್ಲಿ. ಹಲವು ಉದ್ದೇಶದ (ಮಲಗಲು, ಮದುವೆ, ಓದಲು ಇತ್ಯಾದಿ) ಹಾಸಿಗೆಗಳೂ ಅಲ್ಲಿ ತಯಾರಾದವು.

ಮಧ್ಯಕಾಲೀನ ಯೂರೋಪ್‌ನಲ್ಲಿ ಹಾಸಿಗೆ ತಯಾರಿಕೆಯಲ್ಲಿ ಮತ್ತಷ್ಟು ಸುಧಾರಣೆಗಳಾದವು. 12ನೇ ಶತಮಾನದ ವೇಳೆಗೆ ಕೆತ್ತನೆಗಳನ್ನು ಹೊಂದಿದ ಮಂಚಗಳು ಬಂದವು. ಮಡಚಬಹುದಾದ ಹಾಸಿಗೆಗಳೂ ಮಾರುಕಟ್ಟೆಗೆ ಬಂದವು. 14ನೇ ಶತಮಾನದಲ್ಲಿ ರೇಷ್ಮೆಯಂಥ ದುಬಾರಿ ವಸ್ತುಗಳನ್ನು ಬಳಸಿ ಮಾಡಿದ ಹಾಸಿಗೆಗಳು ಹೆಚ್ಚು ಜನಪ್ರಿಯಗೊಂಡವು. 17ನೇ ಶತಮಾನದಲ್ಲಿ ಹಾಸಿಗೆಗಳ ಹೊಸ ಶಕೆ ಆರಂಭಗೊಂಡಿತು. ಯೂರೋಪ್‌ನಲ್ಲಿ ಹಾಸಿಗೆ ತಯಾರಿಕಾ ಕ್ಷೇತ್ರದಲ್ಲಿ ಹಿಂದೆಂದೂ ಕಂಡರಿಯದ ಬದಲಾವಣೆಗಳಾದವು. ಹೊಸ ಹೊಸ ಕಲ್ಪನೆಗಳು ಹೊರಹೊಮ್ಮಿದವು. ಇಂಗ್ಲೆಂಡ್‌ನ ರಾಜಾಡಳಿತ ಸುಪ್ಪತ್ತಿಗೆಯ ಹಾಸಿಗೆಯ ಕಲ್ಪನೆಗೆ ಹೊಸ ರೂಪವನ್ನೇ ನೀಡಿತು.

18ನೇ ಶತಮಾನದಲ್ಲಿ ಕಬ್ಬಿಣದ ಮಂಚಗಳು ತಯಾರಾದವು. ಹಾಸಿಗೆ ತಯಾರಿಕೆಗೆ ಹತ್ತಿ ಮತ್ತು ಉಣ್ಣೆ ಬಳಕೆ ಆರಂಭವಾಯಿತು. 19ನೇ ಶತಮಾನದ ಅಂತ್ಯಕ್ಕೆ ಸ್ಪ್ರಿಂಗ್‌, ಸ್ಪಾಂಜು ಬಳಸಿ ಮಾಡಿದ ಹಾಸಿಗೆಗಳು ಬಂದವು.  ಕ್ರಮೇಣ ಗಾಳಿ ತುಂಬಿದ ಹಾಸಿಗೆಗಳು, ವಲ್ಕನೀಕೃತ ರಬ್ಬರ್‌ನಿಂದ ಮಾಡಿದ ಹಾಸಿಗೆಗಳು (1940ರ ದಶಕ), ನೀರಿನ ಹಾಸಿಗೆಗಳು (ವಾಟರ್‌ಬೆಡ್‌) (1960ರ ದಶಕದಲ್ಲಿ) ಬಂದವು. ವೈಜ್ಞಾನಿಕ ಉದ್ದೇಶದ ಹಾಸಿಗೆಗಳೂ ತಯಾರಾದವು.  21ನೇ ಶತಮಾನದಲ್ಲಿ ನಿಂತು ಹಾಸಿಗೆ ಬೆಳೆದು ಬಂದ ಪರಿ ನೋಡಿದರೆ ಅಚ್ಚರಿಯಾಗುತ್ತದೆ. ಆರಂಭದಿಂದ ಇಲ್ಲಿವರೆಗೆ ಹಾಸಿಗೆ ತಯಾರಿಕೆಯಲ್ಲಿ ಅದೆಷ್ಟು ಮಾರ್ಪಾಡಾಗಿದೆ? ಕಾಲಕ್ಕೆ ತಕ್ಕಂತೆ ವಿವಿಧ ಕಂಪೆನಿಗಳು ಹೊಸ ನಮೂನೆಯ ಹಾಸಿಗೆಗಳನ್ನು ತಯಾರಿಸುತ್ತಲೇ ಇವೆ. ಗ್ರಾಹಕರು ತಮ್ಮ ಜೇಬಿನ ಸಾಮರ್ಥ್ಯಕ್ಕೆ ತಕ್ಕಂತ ಹಾಸಿಗೆಗಳನ್ನು ಕೊಳ್ಳುತ್ತಲೇ ಇದ್ದಾರೆ. ಈ ಪ್ರಕ್ರಿಯೆ ಇನ್ನೂ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT