ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಟೆಲ್ ಎಂಬ ನಮ್ಮನೆ

ಹಾಸ್ಟೆಲ್‌ ನೆನಪು
Last Updated 1 ಜುಲೈ 2016, 19:30 IST
ಅಕ್ಷರ ಗಾತ್ರ

ಎಲ್ಲೊ ಹುಟ್ಟಿ, ಎಲ್ಲೊ ಬೆಳೆದು, ಎಲ್ಲೊ ಸೇರುವ ನಮಗೆ ಕೊನೆಗೆ ಉಳಿಯುವುದು ನೆನಪುಗಳು ಮಾತ್ರ. ಜೀವನವೇ ಹಾಗೇ ಓಡುವ ನದಿಯಂತೆ ತಿರುವು, ಅಡ್ಡಿಗಳ ಜೊತೆಯಲ್ಲೇ ಪಯಾಣ.

ಪದವಿಯವರೆಗೂ ನಮ್ಮ ಊರಿನಲ್ಲಿಯೆ ವಿದ್ಯಾಭ್ಯಾಸ ಮುಗಿಸಿದ ನಾನು ಸ್ನಾತಕೋತ್ತರ ಪದವಿಗಾಗಿ  ಅದುವರೆಗೂ ಕಾಣದ ಬೆಂಗಳೂರಿಗೆ ಬರಬೇಕಾದ ಅನಿವಾರ್ಯ ಸ್ಥಿತಿ ಬಂದಾಗ ಹಾಸ್ಟೆಲ್‌ ಎಂಬ ಹೊಸದೊಂದು ಜಗತ್ತಿಗೆ ಕಾಲಿಡುವುದು ನನಗೆ ಅನಿವಾರ್ಯವಾಗಿತ್ತು.

ಅಪ್ಪ ಅಮ್ಮನನ್ನು ಬಿಟ್ಟು ಒಂದು ದಿನವೂ ಒಂಟಿಯಾಗಿರದ ನಾನು ಹಾಸ್ಟೆಲ್‌ ನೆನೆದು ಒಮ್ಮೆಲೆ ದುಃಖ ಉಕ್ಕಿ ಬಂದಿತ್ತು. ಆದರೆ ಶಿಕ್ಷಣ ಎಂಬ ಬೃಹತ್‌ ಸಾಗರದಲ್ಲಿ ನಮ್ಮ ಪಯಣ ಒಂದೆಡೆ ಯಾಗಿರದು ಎಂದು ಭಾವಿಸಿ ಬೇಸರದಿಂದಲೇ ಊರಿನಿಂದ ಹಾಸ್ಟೆಲ್‌ಗೆ ಕಡೆಗೆ ಹೆಜ್ಜೆ ಹಾಕಿದೆ.

ಹಾಸ್ಟೆಲ್‌ನಲ್ಲಿ ವಾರ್ಡನ್‌, ಹುಡುಗಿಯರು ಹೇಗಿರುತ್ತಾರೆಂಬ ಭಯ, ಅಂಜಿಕೆಯಂದಿಗೆ ಹಾಸ್ಟೆಲ್‌ನ ಪ್ರವೇಶ ಪಡೆದೆ. ಅದಿನ್ನು ಹೊಸದಾಗಿ ಪ್ರರಂಭವಾದ ಹಾಸ್ಟೆಲ್‌ ಆದ್ದರಿಂದ ದಾಖಲಾತಿಗಳು ಬಹಳ ಕಡಿಮೆ, ಹುಡುಗಿಯರು ಕಡಿಮೆ ಇದ್ದರು. ನಾನು ಉಳಿದುಕೊಂಡ ಹಾಸ್ಟೆಲ್‌ನ ಮೊದಲನೇ ಮಹಡಿಯಲ್ಲಿ ನನಗೆ ಸ್ಥಳವನ್ನು ಕಾಯ್ದಿರಿಸಲಾಗಿತ್ತು.

ಮೊದಲನೇ ದಿನ ಮನೆಯ ನೆನಪು ಬಹಳವಾಗಿ ನನ್ನನ್ನು ಕಾಡಿತಾದರೂ ಬರು ಬರುತ್ತ ಹಾಸ್ಟೆಲ್‌ ಜೀವನಕ್ಕೆ ಹೊಂದುಕೊಂಡಿದ್ದೆ. ನಮ್ಮ ಹಾಸ್ಟೆಲ್‌ನಲ್ಲಿ   ಪಿಯುಸಿ, ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹುಡುಗಿಯರು ಇದ್ದುದರಿಂದ ಅಲ್ಲಿ ನಾನೇ ಸೀನಿಯರ್‌ ಆದ್ದರಿಂದ ಬೇರೆಯವರ ಕಿರುಕುಳವಿಲ್ಲದೆ ಇರಲು ಸಾಧ್ಯವಾಗಿತ್ತು.

ಆದರೆ ವಾರ್ಡನ್‌ ಮಾತ್ರ ಬಹಳ ಕಟ್ಟುನಿಟ್ಟು, ಹಾಸ್ಟೆಲ್‌ನ ಹಲವು ನಿಯಮಗಳನ್ನು ನಮ್ಮ ಮೇಲೆರಿ ನಮ್ಮನ್ನು ಅದರಲ್ಲಿ ಬಂಧಿಸುವ ಪ್ರಯತ್ನ ಅವರದ್ದು ಆದರೆ ಅವರಿಗೆ ತಿಳಿಯದಂತೆ ಅದನ್ನು ಮುರಿದು ಅದಕ್ಕೆ ವಿರುದ್ಧವಾಗಿ ನಡೆಯುವುದು ನಮ್ಮ ಅಭ್ಯಾಸವಾಗಿತ್ತು. ಹಾಸ್ಟೆಲ್‌ನಲ್ಲಿ ಇರುವವರು ಜೀನ್ಸ್‌, ಲೆಗ್ಗಿನ್‌, ಟೀ ಶರ್ಟ್‌ ಹಾಗೂ ದುಪ್ಪಟ್ಟ ಇಲ್ಲದ ಉಡುಗೆಗಳನ್ನು ತೊಡುವಂತಿರಲಿಲ್ಲ.

ಇದು ನಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆ ಎಂಬ ಭಾವನೆ, ಕೋಪ ಎಲ್ಲವೂ ವಾರ್ಡನ್‌ ಮೇಲೆ ಬರುತ್ತಿತ್ತು. ವಾರ್ಡನ್‌ಗೆ ಗೊತ್ತಾಗದ ಹಾಗೆ ಅವರು ನಿಷೇಧಿಸಿದ್ದ ಬಟ್ಟೆಗಳನ್ನು ಹಾಕುತ್ತಿದ್ದೆ.

ಅದು ವಾರ್ಡನ್‌ಗೆ ತಿಳಿಯದ ಹಿಂಬದಿಯ ಬಾಗಿಲಿನಿಂದ ಕಾಲೇಜಿಗೆ ಹೋಗುತ್ತಿದ್ದೆ ಇಷ್ಟೆಲ್ಲ ಸಾಹಸ ನಾನೊಬ್ಬಳೇ ಮಾಡಲು ಹೇಗೆ ಸಾಧ್ಯ ಇದಕ್ಕೆ ನನ್ನ ಗೆಳತಿಯರು ನನಗೆ ಸಾಥ್‌ ನೀಡುತ್ತಿದ್ದರು.

ಕೆಲವೊಮ್ಮೆ ತಡವಾದರೆ ವಾರ್ಡನ್‌ ಪ್ರಶ್ನೆಗಳ ಸುರಿಮಳೆಯನ್ನೆ ಸುರಿಸುತ್ತಿದ್ದರು. ಅದರಿಂದ ತಪ್ಪಿಸಿಕೊಳ್ಳಲು ಸ್ನೇಹಿತೆಯರ ಸಹಾಯ ಪಡೆದು ಹಿಂಬದಿಯ ಬಾಗಿಲಿನಿಂದ ನನ್ನನ್ನು ಬರಮಾಡಿಕೊಳ್ಳುತ್ತಿದ್ದರು.

ಭಾಷೆ ಬೇರೆ, ಊರು ಬೇರೆ, ತರಗತಿಗಳು ಬೇರೆ ಬೇರೆಯಾದರೂ ನಮ್ಮ ಭಾವಗಳು ಒಂದೇ ಆಗಿದ್ದವು.  ಹತ್ತು ಜನರಿದ್ದ ನಮ್ಮ ಮಹಡಿಯಲ್ಲಿ ಒಂದು ದಿನವೂ ಒಬ್ಬರಲ್ಲೂ ಮನಃಸ್ತಾಪಗಳಾಗದಷ್ಟು ಆತ್ಮೀಯತೆ ನಮ್ಮಲ್ಲಿ ಬೆಳೆದಿತ್ತು. ಒಡಹುಟ್ಟಿದ ಅಣ್ಣನ ಕಾಳಜಿ, ತಾಯಿಯ ಮಮತೆ, ತಂಗಿಯಂತೆ ಒಡನಾಟ – ಎಲ್ಲವೂ ಹಾಸ್ಟೆಲ್‌ನಲ್ಲಿ ಸಿಗುತ್ತದೆ ಎಂದು ನಾನು ಭಾವಿಸಿರಲಿಲ್ಲ.

ನನ್ನ ಜೀವನದ ಅದ್ಭುತ ಕ್ಷಣಗಳನ್ನು ಅಲ್ಲಿ ಪಡೆದುಕೊಂಡಿದ್ದೇನೆ. ಸ್ನಾತಕೋತ್ತರ ಪದವಿ ಮುಗಿದು ಹಾಸ್ಟೆಲ್‌ ಬಿಡುವಾಗ, ಗೆಳತಿಯರು ಅವರ ತುಂಟಾಟದ ಮಾತುಗಳನ್ನು ನೆನೆದು  ಮೊದಲನೇ ದಿನ ಮನೆಯನ್ನು ಬಿಟ್ಟು ಬಂದಂತಹ ಭಾವನೆ ನನ್ನನ್ನು ಕಾಡುತ್ತಿತ್ತು. 

*

ಮರೆಯಲಾಗದ ಸಿಹಿ–ಕಹಿ
ಮಾಸ್ಟರ್ ಡಿಗ್ರಿಯವರೆಗೂ ನನ್ನ ವಿದ್ಯಾಭ್ಯಾಸವೆಲ್ಲ ‘ಡೇ ಸ್ಕಾಲರ್’ ಆಗಿಯೇ ಕಳೆದಿದ್ದರಿಂದ  ಸಹಜವಾಗಿಯೇ ಹಾಸ್ಟೆಲ್ ವಾಸ ಅಂದರೆ  ನನಗೆ ಕುತೂಹಲ, ಆಸೆ ಇತ್ತು.  ಮನೆಯಿಂದಲೇ ಕಾಲೇಜಿಗೆ ಹೋಗುವ  ನಮಗೆ ನಂಟರಿಷ್ಟರು, ಕೆಲಸ ಬೊಗಸೆ ಕಲಿಯಬೇಕೆಂಬ ಒತ್ತಡ ಹೀಗೆ – ನೂರೆಂಟು ಕಟ್ಟುಪಾಡುಗಳು. ಹಾಸ್ಟೆಲ್‌ನಲ್ಲಿನ ಹುಡುಗಿಯರು ಆರಾಮಾಗಿ ಕ್ಲಾಸಿಗೆ ಆಗಮಿಸುತ್ತಿದ್ದರೆ ನಮಗೆ ಅವರೇ ಸ್ವತಂತ್ರರು  ಎಂದೆನಿಸುತ್ತಿತ್ತು. 

ಇಂತಿಪ್ಪ ಹಾಸ್ಟೆಲ್ ವಾಸ  ಮದುವೆ, ಸಂಸಾರ – ಎಂದೆಲ್ಲ ಜೀವನದಲ್ಲಿ ವ್ಯಸ್ತರಾಗಿರುವಾಗ ಒದಗಿದರೆ ಅದು ಬೇರೆಯದೇ ಅನುಭವ.  2006ರಲ್ಲಿ ನಾನು ಹೈದರಾಬಾದಿನ ಇಂಗ್ಲಿಷ್ ಮತ್ತು ಫಾರಿನ್ ಭಾಷಾ ಅಧ್ಯಯನ ಯುನಿವರ್ಸಿಟಿಯಲ್ಲಿ ಒಂದು ಕೋರ್ಸ್ ಮಾಡಿದೆ.

ಅದರ ಸಲುವಾಗಿ ಅಲ್ಲಿ ಒಂದು ತಿಂಗಳು ಕಾಂಟಾಕ್ಟ್ ಪ್ರೋಗ್ರಾಮ್ ಇತ್ತು.  ಮನೆಯ ಜಂಜಾಟವಿಲ್ಲದೆ ಓದುವ ಸದವಕಾಶ.  ವಿಶಾಲವಾದ ಕ್ಯಾಂಪಸ್.  ರಾತ್ರಿ ಎಂಟು ಗಂಟೆಯವರೆಗೆ ಬೇಕಾದರೂ ಓದಬಹುದಾದ ಅಪ್ರತಿಮ ಲೈಬ್ರರಿ.  ಬೆಳಗಿನಿಂದ ಸಂಜೆ ವರೆಗೆ ಕ್ಲಾಸುಗಳು, ಆ ಮೇಲೆ ಅಸೈನ್ಮೆಂಟ್‌ಗಳು.  

ಆದರೇನು ಅಕಾಲದಲ್ಲಿನ ವಸಂತನ ಹಾಗೆ ಅನುಭವ.  ನನ್ನ ರೂಮ್ ಮೇಟ್‌ಗೆ  ರಾತ್ರಿ ಎರಡು ಗಂಟೆವರೆಗೆ ಓದುವ ಅಭ್ಯಾಸ.  ನನಗೆ  ಬೇಗ ಮಲಗಿ ಬೇಗ ಏಳುವ ಆಸೆ.  ಸಾಲದ್ದದಕ್ಕೆ ನನ್ನ ರೂಮ್‌ಮೇಟ್  – ಜಾರ್ಖಂಡ್‌ನವಳು – ಮದುವೆ ನಿಶ್ಚಯವಾಗಿತ್ತು.

ನನಗೆ ನಿದ್ರೆ ಬಂದಿದೆ ಎಂದುಕೊಂಡು ಆಕೆ ತನ್ನ ನಲ್ಲನೊಡನೆ ನಡೆಸುವ ಸರಸ ಸಲ್ಲಾಪಗಳನ್ನೆಲ್ಲ ಕೇಳಿಸಿಕೊಂಡೂ ಮರುದಿನ ಏನೂ ಅರಿಯದವಳಂತೆ ಬದುಕಬೇಕಾದ ಪೀಕಲಾಟ. ಇನ್ನು ಹಾಸ್ಟೆಲ್‌ನಲ್ಲಿ ಆಂಧ್ರದ ಖಾರ ಪೆಪ್ಪರ್ ರಸಂ, ಅನ್ನ, ಸಾಂಬಾರ್ ರುಚಿಯಾಗಿಯೇ ಇತ್ತೆನ್ನಿ! ಆದರೆ ಸಂಜೆಯಾಗುತ್ತಿದ್ದಂತೆ ಮನೆಯ ನೆನಪು ಕಾಡುತ್ತಿತ್ತು.

ಒಂದು ಬಾರಿಯಂತೂ ನನ್ನ ಮಗಳಿಗೆ ಜ್ವರ ಬಂದು ಅಡ್ಮಿಟ್ ಆಗಿದ್ದಾಳೆ ಎಂಬ ಸುದ್ದಿ ಕೇಳಿ ಆ ದಿನವಿಡೀ ನಾನು ಮಂಕು ಬಡಿದು ಕುಳಿತಿದ್ದೆ.  ಕೊನೆಗೂ ಒಂದು ತಿಂಗಳು ಕಾಂಟಾಕ್ಟ್ ಪೋಗ್ರಾಮ್ ಮುಗಿದು  ಊರಿಗೆ ಬಂದಾಗ ಓಡೋಡಿ ಬಂದು ತಬ್ಬಿಕೊಂಡ ಮಗಳು.  ಮೌನವಾಗಿ ಸಂತಸ ವ್ಯಕ್ತಪಡಿಸಿದ ಗಂಡ. ಹೀಗೆ ನನ್ನ ಹಾಸ್ಟೆಲ್ ಪರ್ವದ ನೆನಪು ಸಿಹಿ–ಕಹಿ.
-ಜಯಶ್ರೀ ಬಿ. ಕದ್ರಿ

*
ಆ ಗೆಳತಿಯರು ಇಂದು ಎಲ್ಲಿದ್ದಾರೋ?
ಇಪ್ಪತ್ತೆಂಟು ವರ್ಷಗಳ ಹಿಂದಿನ ಮಾತು. ಹಳ್ಳಿಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾದ ನಾನು ಪಿಯುಸಿಗೆಂದು ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜ್ ಹಾಸ್ಟೆಲ್ ಸೇರಿದೆ. ಅಲ್ಲಿಯವರೆಗೆ ನಾನು ಮನೆಯಿಂದಲೇ ಶಾಲೆಗೆ ಹೋಗುತ್ತಿದ್ದೆ. ಹಾಸ್ಟೆಲ್ ವಾಸ ನನಗೆ ಪ್ರಥಮ ಅನುಭವ.

ನನ್ನ ರೂಮಿನಲ್ಲಿ ಒಟ್ಟು ನಾವು ನಾಲ್ಕು ಮಂದಿ ಇದ್ದೆವು. ನಾನೊಬ್ಬಳೇ ರೈತನ ಮಗಳು. ಉಳಿದವರಲ್ಲಿ ಒಬ್ಬಳು ಬ್ಯಾಂಕ್ ಡಿವಿಜನಲ್ ಮೆನೇಜರ್‌ನ ಮಗಳು, ಇನ್ನೊಬ್ಬಳು ಪ್ರಸಿದ್ಧ ಡಾಕ್ಟರ್‌ನ ಮಗಳು, ಮತ್ತೊಬ್ಬಳು ಯುನಿವರ್ಸಿಟಿ ಪ್ರೊಫೆಸರ್‌ನ ಮಗಳು. ಅವರೆಲ್ಲರೂ ಹೈಫೈ ಸೊಸೈಟಿಯಿಂದ ಬಂದವರಾದ್ದರಿಂದ ಸಹಜವಾಗಿಯೇ ಚೆನ್ನಾಗಿ ಇಂಗ್ಲಿಷ್ ಮಾತಾಡುತ್ತಿದ್ದರು.

ಆಧುನಿಕ ಉಡುಪುಗಳಾದ ಪ್ಯಾಂಟ್-ಶರ್ಟ್, ಸ್ಕರ್ಟ್-ಬನಿಯನ್, ಚೂಡಿದಾರ್ ಧರಿಸುತ್ತಿದ್ದರು. ಕೂದಲನ್ನು ಬಾಬ್ ಮಾಡಿಸಿಕೊಂಡಿದ್ದರು. ಮುಖಕ್ಕೆ ಬಗೆಬಗೆ ಕ್ರೀಂ, ತುಟಿಗೆ ಲಿಪ್‌ಸ್ಟಿಕ್, ಮೈಗೆ ಪರ್‌ಫ್ಯೂಮ್ ಹಚ್ಚುತ್ತಿದ್ದರು. ನನ್ನ ಹತ್ತಿರ ಉದ್ದ ಲಂಗ-ರವಿಕೆ ಬಿಟ್ಟರೆ ಬೇರೆ ಡ್ರೆಸ್ ಇರಲಿಲ್ಲ.

ತಲೆ ತುಂಬ ಎಣ್ಣೆ ಹಾಕಿ ಗಟ್ಟಿಗೆ ಜಡೆ ಹೆಣೆದು ಪಾಂಡ್ಸ್ ಪೌಡರ್ ತೆಳುವಾಗಿ ಲೇಪಿಸಿ ಹಣೆ ಮಧ್ಯೆ ಬಿಂದಿ ಇಟ್ಟು ಬಿಟ್ಟರೆ ನನ್ನ ಅಲಂಕಾರ ಮುಗಿಯಿತು. ಕನ್ನಡ ಮಾಧ್ಯಮದಲ್ಲಿ ಕಲಿತುದುದರಿಂದ ಇಂಗ್ಲಿಷ್ ಮಾತಾಡಲೂ ಬರುತ್ತಿರಲಿಲ್ಲ. ನಡವಳಿಕೆಯಲ್ಲೂ ಹಳ್ಳಿಕಳೆ. ನಗರದ ನಯನಾಜೂಕು ನನಗೆ ಗೊತ್ತಿರಲಿಲ್ಲ.

ನನ್ನ ಈ ಆಧುನಿಕ ರೂಮ್‌ಮೇಟ್ಸ್‌ಗಳು ಕ್ಲಾಸ್‌ನಲ್ಲೂ ನನ್ನ ಸಹಪಾಠಿಗಳಾಗಿದ್ದರು. ಆದರೆ ಅವರು ಹಳ್ಳಿಯವಳಾದ ನನ್ನ ಜೊತೆ ಬೆರೆಯುತ್ತಿರಲಿಲ್ಲ. ನಾನೂ ಅವರ ಸುದ್ದಿಗೆ ಹೋಗದೆ ನನ್ನಷ್ಟಕ್ಕೆ ಇರುತ್ತಿದ್ದೆ. ಅವರು ಮೂವರೂ ಒಟ್ಟಿಗೆ ಊಟ, ತಿಂಡಿ ಮಾಡುತ್ತಿದ್ದರು. ಒಟ್ಟಿಗೆ ಕೂತು ಓದುತ್ತಿದ್ದರು.

ವಾರವಾರ ಶಾಪಿಂಗ್ ಎಂದು ಹೊರಗೆ ತಿರುಗಾಡಲು ಹೋಗುತ್ತಿದ್ದರು. ಅವರ ಜೊತೆ ಪೇಟೆ ಸುತ್ತಲು ಬೇಕಾದ ದುಡ್ಡೂ ನನ್ನ ಹತ್ತಿರ ಇರಲಿಲ್ಲ. ಮೊದಮೊದಲು ನನಗೆ ತುಂಬ ದುಃಖ ಆಗುತ್ತಿತ್ತು.

ನಗರದ ಈ ಕಾಲೇಜಿಗೆ ಸೇರಬಾರದಿತ್ತು ಎಂದು ಅನಿಸುತ್ತಿತ್ತು. ಆದರೆ ನಾನು ವಿಜ್ಞಾನವಿಭಾಗ ಇಷ್ಟಪಟ್ಟುದುದರಿಂದ ನಗರದ ಕಾಲೇಜು ಅನಿವಾರ್ಯವಾಗಿತ್ತು. ಹೊಂದಿಕೊಳ್ಳದೆ ಬೇರೆ ಉಪಾಯ ಇರಲಿಲ್ಲ.

ಹೀಗೆ ದಿನಗಳು ನಿಧಾನವಾಗಿ ಉರುಳುತ್ತಿದ್ದವು. ಕ್ಲಾಸ್ ಟೆಸ್ಟ್ ಬಂತು. ನಾನು ಕನ್ನಡ ಮೀಡಿಯಂನವಳಾದರೂ ಆ ನನ್ನ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ರೂಮ್‌ಮೇಟ್‌ಗಳಿಗಿಂತ ಜಾಸ್ತಿ ಅಂಕ ತೆಗೆದಿದ್ದೆ. ಕಲಿಯುವಿಕೆಯಲ್ಲಿ ಮುಂದೆ ಇದ್ದುದರಿಂದ ಲೆಕ್ಚರರ್‌ಗಳು ನನ್ನನ್ನು ವಿಶೇಷವಾಗಿ ಇಷ್ಟ ಪಡತೊಡಗಿದರು.

ಅಲ್ಲಿಯವರೆಗೂ ದೂರ ಇದ್ದ ನನ್ನ ರೂಮ್‌ಮೇಟ್ ಹುಡುಗಿಯರು ಈಗ ಬಳಿ ಬರಲಾರಂಭಿಸಿದರು. ಅರ್ಥವಾಗದ ಗಣಿತದ ಸಮಸ್ಯೆಗಳನ್ನು ಬಿಡಿಸಲು ಸಹಾಯ ಕೇಳಲಾರಂಭಿಸಿದರು. ‘ಸಹನಾ, ಕೆಮೆಸ್ಟ್ರಿ ನೋಟ್ಸ್ ಕೊಡು, ಈ ಬಾಟನಿ ರೆಕಾರ್ಡ್ ಹೇಗೆ ಮಾಡುವುದು ಹೇಳಿಕೊಡು,

ಕಂಬೈನ್ಡ್ ಸ್ಟಡಿ ಮಾಡೋಣ, ಈ ಬಾರಿ ಶಾಪಿಂಗ್‌ಗೆ ನಾವು ಹೋಗುವಾಗ ನಿನ್ನನ್ನೂ ಕರೆದುಕೊಂಡು ಹೋಗುತ್ತೇವೆ...’ ಹೀಗೆ ಹೇಳುತ್ತ ನನ್ನೊಂದಿಗೆ ಬೆರೆಯಲಾರಂಭಿಸಿದರು.

ಕ್ರಮೇಣ ನಾವು ಎಷ್ಟು ಸ್ನೇಹಿತೆಯರಾದೆವು ಎಂದರೆ ಒಬ್ಬರನ್ನು ಒಬ್ಬರು ಬಿಟ್ಟು ಇರುತ್ತಿರಲಿಲ್ಲ. ಈಗ ದಿನಗಳು ವೇಗವಾಗಿ ಕಳೆದುಹೋಗುತ್ತಿವೆ ಎಂದು ಅನಿಸುತ್ತಿತ್ತು. ನಂತರ ಪಿಯು ಮುಗಿದದ್ದೇ ಗೊತ್ತಾಗಲಿಲ್ಲ.

ಸೀಮಾ, ಸಂಧ್ಯಾ, ಸುಪ್ರಿಯಾ ಹೆಸರಿನ ನನ್ನ ಆ ಗೆಳತಿಯರು ಇಂದು ಎಲ್ಲಿದ್ದಾರೋ, ಹೇಗಿದ್ದಾರೋ ಒಂದೂ ತಿಳಿಯದು. ಎಲ್ಲಿದ್ದರೂ ಸುಖವಾಗಿರಲಿ ಎಂದು ನನ್ನ ಮನ ಬಯಸುತ್ತದೆ.
-ಸಹನಾ ಕಾಂತಬೈಲು

*
ಮಧ್ಯರಾತ್ರಿ ಹುಟ್ಟುಹಬ್ಬ ಆಚರಣೆ
ಮೊದಲಿನಿಂದಲೂ ಹಾಸ್ಟೆಲ್‌ನಲ್ಲಿರಬೇಕೆಂಬ ಆಸೆ ನನ್ನದ್ದು. ಆದರೆ ಈ ಮೊದಲು ಎಂದೂ ಹಾಸ್ಟೆಲ್‌ನಲ್ಲಿ ಇದ್ದವಳಲ್ಲ. ಕೊನೆಗೂ ಆಸೆ ಕೈಗೂಡಿತು. ಹಾಸ್ಟೆಲ್‌ಗೆ ಬಂದೂ ಆಯಿತು. ತರತರಹದ ಹುಡುಗಿಯರು, ಅವರ ಭಾಷೆ, ಉಡುಗೆ ತೊಡುಗೆ ಎಲ್ಲವೂ ಒಂದು ರೀತಿಯಲ್ಲಿ ಚೆನ್ನಾಗಿತ್ತು. ನೋಡಿದವರೆಲ್ಲ ಆತ್ಮೀಯತೆಯಿಂದ ಮಾತನಾಡಿಸುವವರೇ. ಫ್ರೆಶರ್ಸ್ ಡೇ, ಸೆಂಡ್ ಆಫ್ ಅಂತೆಲ್ಲ ಮಜಾ ಮಾಡಿದ್ದೆ ಮಾಡಿದ್ದು.

ನಡುನಡುವೆ ಸಣ್ಣ ಕೋಳಿ ಜಗಳಗಳು. ಅದು ಎರಡು ದಿನ ಕೂಡ ಇರುತ್ತಿರಲಿಲ್ಲ. ಮತ್ತೆ ಒಬ್ಬರನ್ನೊಬ್ಬರು ಛೇಡಿಸುತ್ತ ಮಾತಾಡಿಕೊಂಡಿರುವುದು. ನಮ್ಮ ಮಧ್ಯರಾತ್ರಿ ಹುಟ್ಟುಹಬ್ಬದ ಆಚರಣೆಗಳು, ಹಾಸ್ಟೆಲ್‌ಗೆ ಲೇಟಾಗಿ ಬರುವುದು ಎಲ್ಲವೂ ಒಂದು ಕ್ರೆಜ್ ಆಗಿತ್ತು.

ಒಂದೇ ಎರಡೇ ನಾವು ಮಾಡಿದ್ದು – ಸ್ನೇಹಿತೆಯರ ತಪ್ಪುಗಳನ್ನು ಸರಿಪಡಿಸುತ್ತ, ಬುದ್ಧಿವಾದ ಹೇಳುತ್ತ, ಮನೆ ನೆನಪಾದಾಗ ಒಬ್ಬರಿಗೊಬ್ಬರು ಸಮಾಧಾನ ಹೇಳುತ್ತ, ಕುಳಿತು ಚರ್ಚಿಸುತ್ತ ಎರಡು ವರ್ಷ ಹೇಗೆ ಕಳೆದೆವು ತಿಳಿಯಲೇ ಇಲ್ಲ.

ಹಾಸ್ಟೆಲ್‌ನಲ್ಲಿ ನಮ್ಮನ್ನ ಎಮ್.ಎ.ಗಳು ಎಂದು ಕರೆಯುತ್ತಿದ್ದರು. ಏಕೆಂದರೆ ಅದು ಸೈನ್ಸ್‌ ಹಾಸ್ಟೆಲ್. ಇದೇ ಮೊದಲು ಆರ್ಟ್ಸ್ ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡಿದ್ದರು. ಅದೂ ಒಂದು ತರಹ ಹೆಮ್ಮೆಯ ವಿಷಯವೇ. ನೀರಿಗಾಗಿ, ಮೆಸ್‌ಗಾಗಿ ಸ್ಟ್ರೈಕ್‌ ಮಾಡಿದ್ದೆ ಮಾಡಿದ್ದು. 

ಎರಡನೇ ಸೆಮಿಸ್ಟರ್‌ ಫೈನಲ್ ಪರೀಕ್ಷೆಯ ಮೊದಲನೆ ದಿನ ಬೆಳಿಗ್ಗೆ ಎದ್ದು ನೋಡಿದರೆ ಇಡೀ ಹಾಸ್ಟೆಲ್‌ನಲ್ಲಿ ಹನಿ ನೀರಿಲ್ಲ. ಬಾಟಲ್‌ಗಳಲ್ಲಿ ಇದ್ದ ಕುಡಿಯುವ ನೀರಲ್ಲೇ ಮುಖ ತೊಳೆದು ಪರೀಕ್ಷೆಗೆ ಓಡಿದ್ದು. ಒಂದು ಹೊಸ ಅನುಭವವೇ ಸರಿ. ಒಂದು ರೀತಿ ನೋಡಿದರೆ ಇವೆಲ್ಲ ಸಮಸ್ಯೆಗಳೇ ಅಲ್ಲ. ಬದುಕಿನ ದೊಡ್ಡ ದೊಡ್ಡ ಸಮಸ್ಯೆಗಳನ್ನು ಎದುರಿಸಲು ಕಲಿಯಬೇಕಾದ ಪಾಠ ಹಾಸ್ಟೆಲ್‌ನಲ್ಲಿದೆ.

ಕೇವಲ ಮಜವೊಂದೆ ಅಲ್ಲ, ಪರೀಕ್ಷೆಯ ಸಮಯದಲ್ಲಿ ರಾತ್ರಿಯಿಡೀ ಓದುವುದು, ನಡುವೆ ಬೇಜಾರಾದಾಗ ಏನೇನೊ ಮಾತಾಡಿಕೊಂಡು ನಗುವುದು, ಮತ್ತೆ ಓದುವುದು, ಓದಿ ಮುಗಿದ ನಂತರ ಅದನ್ನು ಚರ್ಚಿಸುವುದು – ಹೀಗೆ ಒಬ್ಬರಿಗೊಬ್ಬರು ಓದಲು ಪ್ರೋತ್ಸಾಹಿಸುವುದು.

ನಿಜವಾಗಿಯೂ ಒಂದು ಕುಟುಂಬದ ಅನುಭವವೇ ಆಗಿತ್ತು. ಜೂನಿಯರ್ಸ್‌ಗಳ ಮುಂದೆ ಆರಂಭದಲ್ಲಿ ಸಿನಿಯಾರಿಟಿಯನ್ನು ಪ್ರದರ್ಶಿಸುತ್ತ, ಕ್ರಮೇಣ ಅವರೊಂದಿಗೆ ಆಪ್ತರಾಗಿ ಬೆಳೆದೆವು. ಎಲ್ಲರೂ ಸೇರಿ ಡಾನ್ಸ್‌ ಮಾಡುವುದು, ಕಾರ್ಯ ಕ್ರಮಗಳಿಗೆ ಹೋಗುವುದು, ಸಿನಿಮಾಗೆ ಹೋಗುವುದು ಎಲ್ಲವೂ ಈಗ ಕೇವಲ ನೆನಪಿನಾಳದಲ್ಲಿ ಉಳಿದಿವೆ.

ಎಷ್ಟು ಬೇಗ ಎಲ್ಲವೂ ಮುಗೀತಾ ಬಂತು! ಹಿಂದಿರುಗಿಬರುವಾಗ ಕಿರಿಯ ಸ್ನೇಹಿತೆಯರು ‘ನೀವಿಲ್ಲದೆ ಹೇಗಿರುವುದು’ ಎಂದಾಗ ಮಂದಹಾಸ ಒಂದೇ ನಮ್ಮ ಬಳಿ ಇದ್ದ ಉತ್ತರವಾಗಿತ್ತು. ಕೂಡಿ ಬಾಳುವುದು, ಹಂಚಿ ತಿನ್ನುವುದು, ಸಹಕಾರ, ಒಬ್ಬರಿಗೊಬ್ಬರು ಸ್ಪಂದಿಸುವುದು –  ಹಾಸ್ಟೆಲ್ ಕಲಿಸುವ ಜೀವನಪಾಠಗಳನ್ನು ಬೇರೆಲ್ಲೂ ಕಲಿಯಲು ಸಾಧ್ಯವಿಲ್ಲ. ತುಂಬಿದ ಕಣ್ಣುಗಳಿಂದ, ಹೃದಯಭಾರದಿಂದ ಹಾಸ್ಟೆಲ್ ಬಿಟ್ಟು ಬಂದಾಯ್ತು.
-ಪ್ರಿಯಾಂಕಾ ಎಸ್‌.ಎಚ್‌.

*
ಹಾಸ್ಟೆಲ್‌ನ ಆ ಮಧುರ ದಿನಗಳು
ಪಿ.ಯು. ಮುಗಿಸಿ ಬಿ.ಇ. ಪದವಿಗೆಂದು ಬಾಗಲಕೋಟೆಗೆ ತೆರಳಿದೆ. ಕಾಲೇಜ್ ಪ್ರವೇಶ ಮುಗಿಸಿ ಅಲ್ಲೇ ಇರೋ ಹಾಸ್ಟೇಲ್‌ಗೆ ಅಡ್ಮಿಶನ್ ಕೂಡ ಮಾಡ್ಸಿದ್ದಾಯ್ತು. ಒಂದೇ ಊರಿಂದ ಬಂದಿರೋ ನಾವು ಮೂರು ಜನಕ್ಕೂ ಒಂದೇ ರೂಂ ಬೇಕು ಅಂತ ಹಠ ಕೂಡ ಮಾಡಿದ್ದಾಯ್ತು.

ನಮ್ಮ ರೂಂ ಹಾಗಿರಬಹುದು ಹೀಗಿರಬಹುದು - ಅಂತ ಎಷ್ಟೋ ಮೂಲಸೌಕರ್ಯಗಳು ನನ್ನ ಮನದಲ್ಲಿ ಬಂದು ಹೋದವು. ಮಲಪ್ರಭಾ ಲೇಡೀಸ್‌ ಹಾಸ್ಟೇಲ್ ನಮಗೋಸ್ಕರವೇ ಬಾಗಿಲು ತೆರೆದು ಕಾಯುತ್ತಿದ್ದಂತೆ ಕಾಣಿಸುತ್ತಿತ್ತು.

ಸೆಪ್ಟೆಂಬರ್ 1, 2012 ಗಂಡನ ಮನೆಗೆ ಹೋಗುವ ಹಾಗೆ ಮನೆಗೆ ಮತ್ತು ಅಕ್ಕಪಕ್ಕದ ಜನರಿಗೆ ಟಾಟಾ ಹೇಳಿ ನಾಲ್ಕೈದು ಬ್ಯಾಗುಗಳು, ಒಂದು ಬೆಡ್ ಮತ್ತು ಒಂದು ಬಕೇಟಿನೊಂದಿಗೆ ಹಾಸ್ಟೆಲ್ ಕಡೆಗೆ ಅಪ್ಪ-ಅಮ್ಮನ ಜೊತೆ ಹೊರಟೆ.

ಮೊದಲ ಸಲ ಮನೆ ಬಿಟ್ಟು ದೂರ ಇರಬೇಕಲ್ಲ ಎನ್ನುವ ಭಯವೋ ಏನೋ, ಹಾಸ್ಟೆಲ್‌ಗೆ ಬರುವ ಹಿಂದಿನ ದಿನವನ್ನು ನಿದ್ರೆಯಿಲ್ಲದೆ ಕಳೆದೆ. ಇದರ ಜೊತೆ ಜ್ವರ ಬಂದು ಆರೋಗ್ಯ ಸ್ವಲ್ಪ ಕೈ ಕೊಟ್ಟಿತ್ತು. ಅವತ್ತು ನನ್ನ ಹುಟ್ಟುಹಬ್ಬ ಬೇರೆ.

ಆವತ್ತಿನ ದಿನದಿಂದ ನನ್ನ ಜೀವನದ ಹೊಸ ಅಧ್ಯಾಯ ಶುರುವಾಯ್ತು. ಆರು ಜನ ಇರಬಹುದಾದಂತಹ ರೂಂ. ಉಳಿದ ಮೂರು ಜನ ಅಪರಿಚಿತರು. ಅದಾಗಲೇ ಅವರ ಲಗೇಜ್ ಇಟ್ಟು ತಮ್ಮ ಸ್ಥಳವನ್ನು ಕಾಯ್ದಿರಿಸಿದ್ದರು. ಸಂಜೆ ಅಪ್ಪ-ಅಮ್ಮನ್ನ ಕಷ್ಟ ಪಟ್ಟು ವಾಪಸ್ ಕಳಿಸಿದೆ.

ಅದೇ ರಾತ್ರಿ ಹಾಸ್ಟೆಲಿನ ರೂಲ್ಸ್ ಹೇಳೋಕೆ ಸೀನಿಯರ್‌ಗಳಿಂದ ಮೀಟಿಂಗ್. ಪ್ರಥಮ ವರ್ಷದ ಜೂನಿಯರ್ಸ್‌ ಮೆಸ್‌ನಲ್ಲಿ ‘ಎಲ್ ಶೇಪ್’ನಲ್ಲೇ ಕುಳಿತು ಊಟ ಮಾಡುವುದು ಕಡ್ಡಾಯ ಅನ್ನೋ ನಿಯಮ ನನ್ನಲ್ಲಿ ಹೆದರಿಕೆ ಹುಟ್ಟಿಸಿತು. ಆದರೆ ದಿನ ಕಳೆದಂತೆ ಹಾಸ್ಟೆಲ್ ನಮ್ಮದೆ ಮನೆ ಆಗಿಬಿಟ್ಟಿತು.

ನಾಲ್ಕು ವರ್ಷ ಅಂದ್ರೆ ಸುಮ್ನೆನಾ? ಎಷ್ಟು ಸಾಧ್ಯವೋ ಅಷ್ಟು ಹಾಸ್ಟೆಲ್ ಲೈಫ್‌ನ ಮಜಾ ಮಾಡಿದ್ವಿ. ಬಾಗಲಕೋಟೆಯ ವಿದ್ಯಾಗಿರಿ, ನವನಗರ ತಿರುಗಿ ತಿರುಗಿ ಬೇಜಾರಾಗಿಬಿಟ್ಟಿತು. ಕಾಲೇಜು ಸರ್ಕಲ್ಲೇ ನಮ್ಮ ಎಲ್ಲ ಚಟುವಟಿಕೆಗಳ ಕೇಂದ್ರ. ಅಲ್ಲಿ ಹೋಗದೇ ಇರೋ ಹೋಟೆಲ್‌ ಇಲ್ಲ, ರುಚಿ ನೋಡದೇ ಇರೋ ಚಾಟ್ ಸೆಂಟರ್ ಇಲ್ಲ. ಹಾಸ್ಟೆಲ್ ಲಾಸ್ಟ್ ಟೈಮ್ ಮೀರಿದಾಗ ಕಾಂಪೌಂಡ್ ಕೂಡ ಹಾರಿದ್ದಿದೆ.

ವಾಚ್‌ಮೆನ್ ಅಂಕಲ್‌ಗೆ ಸುಳ್ಳು ಹೇಳಿದ್ದಕ್ಕಂತೂ ಲೆಕ್ಕವೇ ಇಲ್ಲ. ಊಟದ ವಿಷಯದಲ್ಲಿ ಮ್ಯಾನೇಜರ್ ಜೊತೆಗೆ ಜಗಳ ಕಾಯ್ದಿದ್ದು ಕಡಿಮೆ ಸಾರಿ ಏನಲ್ಲ!. ಆದರೆ ಅದು ಕ್ಷಣಿಕವಾಗಿರುತ್ತಿತ್ತು. ಬಿಸಿ ಚಪಾತಿಗೋಸ್ಕರ ಅಗಾಗ ಸ್ವಲ್ಪ ಗರಂ ಆಗಿದ್ದಿದೆ. ನೀರಿಗಾಗಿ ಹಾಹಾಕಾರವಾಗಿದ್ದೂ ಇದೆ.  

ಹಾಡು, ಕುಣಿತ, ಮೋಜು-ಮಸ್ತಿ, ಬರ್ತ್‌ಡೇ ಸೆಲೆಬ್ರೇಶನ್ಸ್, ಇದರ ಮಧ್ಯೆ ಪರೀಕ್ಷೆಗಳು, ಓದು, ಸೆಮಿನಾರ್ಸ್‌, ಪ್ರಸೆಂಟೇಶನ್ಸ್, ಅಸೈನ್‌ಮೆಂಟ್ಸ್, ಪ್ರಾಜೆಕ್ಟ್ ಡೆಮೊ, ಆಲ್ ಇನ್ ಒನ್ ಅನ್ನೋ ತರಹ ಇತ್ತು.

ಇದಷ್ಟೇ ಅಲ್ಲದೆ ಜೀವನ ಅಂದ್ರೆ ಏನಂತ ಹಾಸ್ಟೆಲ್ ಕಲಿಸಿದೆ. ಅಲ್ಲಿ ನಾವು ನಮ್ಮದೇ ಆದ ವೈಯಕ್ತಿಕ ಜೀವನ ನಡೆಸಬೇಕಾಗುತ್ತೆ. ನಮಗಾಗಿ ಯಾರೂ ಕಷ್ಟ ಪಡೋರು ಇರಲ್ಲ. ನಮ್ಮ ನಿರ್ಧಾರಗಳನ್ನು ನಾವೇ ತಗೋಬೇಕಾಗುತ್ತೆ. ನಮ್ಮ ಖರ್ಚು ವೆಚ್ಚಗಳನ್ನು ಕೊಟ್ಟಿರೋ ಪಾಕೆಟ್ ಮನಿಯಲ್ಲಿಯೇ ಮುಗಿಸಿಕೊಳ್ಳಬೇಕಾಗುತ್ತೆ. ನಮ್ಮ ನಿಜವಾದ ಜಿಪುಣತನ ನಮಗೇ ಗೊತ್ತಾಗೋ ಕಾಲ ಅದು.

ನಾಲ್ಕೈದು ಜನ ಒಟ್ಟಿಗೆ ಒಂದೇ ಪ್ಲೇಟಿನಲ್ಲಿ ಊಟ ಮಾಡುವ ಸುಖವನ್ನು ಕೇವಲ ಹಾಸ್ಟೆಲ್ ವಾಸಿಗಳಷ್ಟೇ ಬಲ್ಲರು. ಅದು ಅಮೃತಕ್ಕೆ ಸಮಾನವೆನಿಸುತ್ತಿತ್ತು. ಪರೀಕ್ಷೆ ಸಮೀಪಿಸುತ್ತಿದ್ದಂತೆ ಹಾಸ್ಟೆಲ್‌ನಲ್ಲಿ ನಿದ್ದೆಗೆಟ್ಟು ಓದುವುದು ಸಾಮಾನ್ಯ.

ಓದದೇನೆ ಫ್ರೆಂಡ್ ಹೇಳಿದ್ದಷ್ಟೇ ಕೇಳಿ ಹೆಚ್ಚು ಅಂಕಗಳನ್ನು ಪಡೆದ ಉದಾಹರಣೆಗಳು ಸಾಕಷ್ಟು. ಆಗಾಗ ಹಾಸ್ಟೆಲ್‌ನಲ್ಲಿ ಗುಂಯ್‌ಗುಡುತ್ತಿದ್ದ ಅನೌನ್ಸ್‌ಮೆಂಟ್‌ಗಳು ನಗೆಗೀಡುಮಾಡಿದ್ದರೂ ಅವನ್ನೆಲ್ಲಾ ಈಗ ಮತ್ತೆ ಕೇಳಬೇಕೆಂದೆನಿಸುತ್ತದೆ.

ಕೊನೆಗೊಂದು ದಿನ ಹಾಸ್ಟೆಲ್ ಡೇ ಮಾಡಿ ನಮ್ಮನ್ನೆಲ್ಲಾ ದೂರ ಮಾಡೇಬಿಟ್ರು ಜೂನಿಯರ್ಸ್‌. ಎಲ್ಲರಿಗೂ ಕಣ್ಣೀರಿನೊಂದಿಗೆ ಬಾಯ್ ಹೇಳಿ, ದುಃಖತಪ್ತ ಭಾರ ಮನಸ್ಸನ್ನು ಹೊತ್ತು ಮನೆಯ ಕಡೆಗೆ ಬರಬೇಕಾಯಿತು.
-ಉಮಾ ಕೆ. ಸಾಲಿಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT