ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿದ್ದ ಕಾಳಜಿ ಎಲ್ಲಿ?

ಅಕ್ಷರ ಗಾತ್ರ

ಬಿಜೆಪಿ ಅಧಿಕಾರ ಅವಧಿಯಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಎಂಬುದು ‘ಮ್ಯೂಸಿಕಲ್ ಚೇರ್‌’ ರೀತಿ ಆಗಿತ್ತು. ಆ ಪಕ್ಷದ ಅಧಿಕಾರ ಅವಧಿ ಮುಗಿಯುತ್ತಿದ್ದಂತೆ ಬೇಸತ್ತ ಜನರು ಹಸ್ತಕ್ಕೆ ಹಸ್ತಲಾಘವ ನೀಡಿದ್ದರಲ್ಲಿ ಆಶ್ಚರ್ಯವೇನಿಲ್ಲ.

ಬಡವರ ಆಶಾಕಿರಣವಾಗಿ ಸಿದ್ದರಾಮಯ್ಯನವರು ಮೂಡಿಬಂದರು. ವಿಧವೆಯರು, ವೃದ್ಧರು, ಕೂಲಿ ಕಾರ್ಮಿಕರು ಸಿದ್ದರಾಮಯ್ಯನವರು ಆರಂಭಿಸಿದ ‘ಅನ್ನಭಾಗ್ಯ’ ಯೋಜನೆಯಿಂದ ನೆಮ್ಮದಿಯಿಂದ  ಬದುಕುತ್ತಿದ್ದಾರೆ. ಆದರೆ, ಸಿದ್ದರಾಮಯ್ಯನವರ ನೇರ ನುಡಿ, ಖಡಾಖಂಡಿತವಾಗಿ ತಾವೇ ಕೈಗೊಳ್ಳುವ ತೀರ್ಮಾನ, ಕೆಲವೊಮ್ಮೆ ಮೂಲ ಕಾಂಗ್ರೆಸ್ಸಿಗರಲ್ಲಿ ಅಸಮಾಧಾನ ತರುತ್ತಿದೆ.

ಪಣ ತೊಟ್ಟು ಮುಖ್ಯಮಂತ್ರಿಯಾದ ಅವರನ್ನು ಬೆರಳು ಮಾಡಿ ತೋರಿಸಿ ಕುಗ್ಗಿಸುವಂತಹ ಶತ್ರುಗಳು ವಿರೋಧ ಪಕ್ಷಗಳಲ್ಲಿ ಇಲ್ಲದಿದ್ದರೂ... ವಲಸೆ ಬಂದು ಗದ್ದುಗೆಗೇರಿದ ಸಿದ್ದರಾಮಯ್ಯ ಅವರಿಗೆ ಸ್ವಪಕ್ಷದಲ್ಲೇ ಶತ್ರುಗಳಿದ್ದಾರೆಂದರೆ ತಪ್ಪಾಗಲಾರದು. ಆದರೆ, ಪಕ್ಷದ ಹೈಕಮಾಂಡ್‌, ಮೂಲ ಕಾಂಗ್ರೆಸ್ಸಿಗರ ಮಾತಿಗೆ ಕಿವಿಗೊಟ್ಟು ಮುಖ್ಯಮಂತ್ರಿ ಬದಲಾವಣೆ ಮಾಡಿದರೆ ಹಿಂದೆ ಅಧಿಕಾರದಲ್ಲಿದ್ದ  ಪಕ್ಷದ ಅವಧಿಯಲ್ಲಿ ಆದಂತೆ ಮ್ಯೂಸಿಕಲ್‌ ಚೇರ್‌ ಆಟ ಶುರುವಾಗಬಹುದೇನೊ ಎಂಬ ಭೀತಿ!

ತಾವೇ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸುವುದಾಗಿ ಆಗಾಗ್ಗೆ ಸಭೆ–ಸಮಾರಂಭಗಳಲ್ಲಿ ಹೇಳಿಕೊಳ್ಳುವ ಮುಖ್ಯಮಂತ್ರಿಗಳು, ತಮ್ಮ ಮುಂದಿನ ಅಧಿಕಾರ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಯತ್ತ ಹೆಚ್ಚು  ಗಮನ ಹರಿಸಬೇಕಾಗಿದೆ.

ಕಳಸಾ ಬಂಡೂರಿ ಯೋಜನೆಗಾಗಿ ಹೋರಾಟ ತೀವ್ರಗೊಂಡಿದ್ದ ಸಂದರ್ಭದಲ್ಲಿ ನೆಪ ಮಾತ್ರಕ್ಕಾದರೂ ರೈತರ ಬಳಿ ಸುಳಿದಿಲ್ಲ ಮುಖ್ಯಮಂತ್ರಿಗಳು. ರೈತರು ಆತ್ಮಹತ್ಯೆ ಮಾಡಿಕೊಂಡರೂ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರಕಿಸಿಕೊಡುವಂಥ  ವ್ಯವಸ್ಥೆ ರೂಪಿಸುವ ಪ್ರಯತ್ನ ಆಗಿಲ್ಲ. ಅಲ್ಲಲ್ಲಿ ಒತ್ತುವರಿ ನೆಪದಲ್ಲಿ ಮಧ್ಯಮ ವರ್ಗದ ಜನರ ನಿವೇಶನಗಳನ್ನೇ ಕಸಿದುಕೊಂಡು ಜನಸಾಮಾನ್ಯರನ್ನು ದಿವಾಳಿ ಎಬ್ಬಿಸಿ  ಸರ್ಕಾರಕ್ಕೆ ಸಾವಿರಾರು ಕೋಟಿ ಆಸ್ತಿ ದಕ್ಕಿದೆ ಎಂದು  ಬೀಗುವುದು ಎಷ್ಟು ಸರಿ? ಜನಸಾಮಾನ್ಯರನ್ನು ಒಕ್ಕಲೆಬ್ಬಿಸಿ ಸರ್ಕಾರ ಹಣ ಮಾಡಬೇಕೇ? ಮತ ಯಾಚನೆ ವೇಳೆ, ‘ಅಧಿಕಾರ ನೀಡಿದರೆ ಆಸರೆಯಾಗಬಲ್ಲೆವು’ ಎಂಬ ವಚನ ಇದೇನಾ?

ನಗರಕ್ಕೆ ವಲಸೆ ಬಂದು ಗಾರ್ಮೆಂಟ್‌ಗಳಲ್ಲಿ ಮತ್ತು ಟ್ಯಾಕ್ಸಿ ಚಾಲಕರಾಗಿ ದುಡಿಯುತ್ತಿರುವ ಅದೆಷ್ಟೊ ರೈತ ಕುಟುಂಬಗಳು ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಿದ ದಿನ ನಿಟ್ಟುಸಿರುಬಿಟ್ಟಿದ್ದವು. ತಮ್ಮದೇ ವರ್ಗದ ಮುಖ್ಯಮಂತ್ರಿಗಳು ರೈತರ ಜೀವನಕ್ಕೆ ಆಸರೆಯಾಗುತ್ತಾರೆಂದು ಭಾವಿಸಿದ್ದರು. ಬಯಸಿಯೋ ಬಯಸದೆಯೋ ಅನೇಕರು ಮುಖ್ಯಮಂತ್ರಿ ಪದವಿಗೆ ಬಂದು ಹೋಗಿದ್ದಾರೆ. ಹಾಗೆ ಬಂದವರೆಲ್ಲ ಇತಿಹಾಸದಲ್ಲಿ ಉಳಿಯುವುದಿಲ್ಲ. ಉಳಿಯುವವರು ಕೆಲವರು ಮಾತ್ರ.  ಹಟ ತೊಟ್ಟು ಕಷ್ಟಪಟ್ಟು ಪಡೆದ  ಮುಖ್ಯಮಂತ್ರಿ ಸ್ಥಾನವನ್ನು  ಬಳಸಿಕೊಂಡು ಜನಸಾಮಾನ್ಯರ ಬವಣೆ ಇನ್ನಾದರೂ ನಿವಾರಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT