ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿನ ಫೈನಲ್‌ ಪಂದ್ಯಗಳ ಮೆಲುಕು

Last Updated 27 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ವಿಶ್ವಕಪ್‌ ಟೂರ್ನಿಯ ಮತ್ತೊಂದು ಫೈನಲ್‌ ಬಂದಿದೆ. ಒಂದು ದಿನ ಕಳೆದರೆ ಸಾಕು ಆತಿಥ್ಯ ವಹಿಸಿರುವ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ವಿಶ್ವ ಚಾಂಪಿಯನ್‌ ಪಟ್ಟಕ್ಕಾಗಿ ಪೈಪೋಟಿ ನಡೆಸಲಿವೆ. ವಿಶೇಷವೆಂದರೆ ಹೋದ ಸಲದ ವಿಶ್ವಕಪ್‌ನಲ್ಲಿಯೂ ಟೂರ್ನಿಗೆ ಆತಿಥ್ಯ ವಹಿಸಿದ್ದ ಭಾರತ ಮತ್ತು ಶ್ರೀಲಂಕಾ ತಂಡಗಳೇ ಫೈನಲ್‌ ಆಡಿದ್ದವು. ಹಿಂದಿನ ಹತ್ತು ಫೈನಲ್‌ಗಳು ಹೇಗಿದ್ದವು. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ.

* 1975 (ವೆಸ್ಟ್‌ ಇಂಡೀಸ್‌–ಆಸ್ಟ್ರೇಲಿಯಾ)
ಚೊಚ್ಚಲ ಟೂರ್ನಿಯಾಗಿದ್ದ ಕಾರಣ  ವಿಶ್ವಕಪ್ ಗೆಲ್ಲುವ ಅವಕಾಶ ಯಾರಿಗೆ ಒಲಿಯಲಿದೆ ಎನ್ನುವ ಕುತೂಹಲ ಸಾಕಷ್ಟಿತ್ತು. ಐತಿಹಾಸಿಕ ಲಂಡನ್‌ನ ಲಾರ್ಡ್ಸ್‌ ಅಂಗಳದಲ್ಲಿ ನಡೆದ ಫೈನಲ್‌ನಲ್ಲಿ ವೆಸ್ಟ್‌ ಇಂಡೀಸ್‌ ವಿಶ್ವವಿಜೇತವಾಗಿ ಮೆರದಾಡಿತ್ತು. ಮೊದಲು ಬ್ಯಾಟ್ ಮಾಡಿದ್ದ ವಿಂಡೀಸ್‌ 292 ರನ್‌ ಗುರಿ ನೀಡಿತ್ತು. ಕಾಂಗರೂಗಳ ನಾಡಿನ ಪಡೆ 274 ರನ್‌ ಗಳಿಸಿ 17 ರನ್‌ಗಳ ಅಂತರದಲ್ಲಿ ಸೋಲು ಕಂಡಿತ್ತು.

* 1979 (ವೆಸ್ಟ್‌ ಇಂಡೀಸ್‌–ಇಂಗ್ಲೆಂಡ್‌)
ಕೆರಿಬಿಯನ್‌ ನಾಡಿನ ತಂಡ ವಿಶ್ವ ಕ್ರಿಕೆಟ್‌ನಲ್ಲಿ ತಾನೇ ಬಲಾಢ್ಯ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿತು. ಸತತ ಎರಡನೇ ಬಾರಿ ಟ್ರೋಫಿಯ ಒಡೆಯನಾಗಿತ್ತು. ಈ ಪಂದ್ಯವೂ ಲಾರ್ಡ್ಸ್ ಅಂಗಳದಲ್ಲಿ ನಡೆದಿತ್ತು. ಮೊದಲು ಬ್ಯಾಟ್‌ ಮಾಡಿದ್ದ ವಿಂಡೀಸ್‌ 286 ರನ್‌ ಗಳಿಸಿತ್ತು. ಆಂಗ್ಲರ ತಂಡ 194 ರನ್‌ಗೆ ಆಲೌಟ್‌ ಆಗಿತ್ತು. ಸರ್‌ ವಿವ್ ರಿಚರ್ಡ್ಸ್‌ (ಅಜೇಯ 138) ರನ್‌ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

* 1983 (ಭಾರತ–ವೆಸ್ಟ್‌ ಇಂಡೀಸ್)
ಏಕದಿನ ಕ್ರಿಕೆಟ್‌ನಲ್ಲಿ ಸಾರ್ವಭೌಮನಾಗಿ ಮೆರೆದಾಡುತ್ತಿದ್ದ ವಿಂಡೀಸ್‌ ತಂಡದ ವಿಜಯದ ಓಟಕ್ಕೆ ಲಗಾಮು ಹಾಕಿದ ವಿಶ್ವಕಪ್‌ ಇದು. ‘ಕಪಿಲ್‌ ಡೆವಿಲ್ಸ್‌’ ಪಡೆ ಲಾರ್ಡ್ಸ್‌ ಅಂಗಳದಲ್ಲಿ 43 ರನ್‌ಗಳ ಗೆಲುವು ಪಡೆದು ಚೊಚ್ಚಲ ಟ್ರೋಫಿ ತಂದುಕೊಟ್ಟಿದ್ದರು. ಮೊದಲು ಬ್ಯಾಟ್‌ ಮಾಡಿದ್ದ ಕಪಿಲ್ ದೇವ್ ನಾಯಕತ್ವದ ಭಾರತ ತಂಡ 183 ರನ್‌ಗಳನ್ನಷ್ಟೇ ಕಲೆ ಹಾಕಿತ್ತು.  60 ಓವರ್‌ಗಳ ಪಂದ್ಯದಲ್ಲಿ ಸಣ್ಣ ಗುರಿಯೇ ವಿಂಡೀಸ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಿತು. ಬಲ್ವಿಂದರ್ ಸಿಂಗ್‌ ಸಂಧು, ಮದನ್‌ ಲಾಲ್‌, ಮೋಹಿಂದರ್ ಅಮರನಾಥ್‌ ಅವರ ಚುರುಕಿನ ಬೌಲಿಂಗ್ ಬಲದಿಂದ ಭಾರತ ಎದುರಾಳಿ ತಂಡವನ್ನು 140 ರನ್‌ಗಳಿಗೆ ಕಟ್ಟಿ ಹಾಕಿ ಚಾರಿತ್ರಿಕ ಸಾಧನೆ ಮಾಡಿತ್ತು. ಜೊತೆಗೆ ವಿಂಡೀಸ್‌ ಟ್ರೋಫಿ ಪ್ರಾಬಲ್ಯಕ್ಕೆ ಲಗಾಮು ಹಾಕಿತ್ತು.

* 1987 (ಆಸ್ಟ್ರೇಲಿಯಾ–ಇಂಗ್ಲೆಂಡ್‌)
ಇದು ಇಂಗ್ಲೆಂಡ್ ಹೊರಗೆ ನಡೆದ ಮೊದಲ ವಿಶ್ವಕಪ್‌ ಆಗಿತ್ತು. ಕೋಲ್ಕತ್ತದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿಶ್ವ ಚಾಂಪಿಯನ್‌ ಆಗಿತ್ತು. ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಕಾಂಗರೂ ಪಡೆ 254 ರನ್‌ ಗುರಿ ನೀಡಿತ್ತು. ಆಂಗ್ಲರ ಬಳಗ 246 ರನ್‌ಗಳನ್ನಷ್ಟೇ ಗಳಿಸಿ ಏಳು ರನ್‌ಗಳ ಅಂತರದಲ್ಲಿ ಟ್ರೋಫಿ ಗೆಲ್ಲುವ ಅವಕಾಶ ಹಾಳು ಮಾಡಿಕೊಂಡಿತ್ತು. ಈ  ತಂಡಕ್ಕೆ ಇದುವರೆಗೂ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಮೊದಲ ಮೂರು ವಿಶ್ವಕಪ್‌ಗಳು 60 ಓವರ್‌ಗಳದ್ದಾಗಿತ್ತು. 1987ರ ಟೂರ್ನಿಯಿಂದ ಹತ್ತು ಓವರ್‌ ಕಡಿಮೆ ಮಾಡಲಾಯಿತು.

* 1992 (ಪಾಕಿಸ್ತಾನ–ಇಂಗ್ಲೆಂಡ್‌)
ಟೂರ್ನಿಗೆ ಆತಿಥ್ಯ ವಹಿಸಿದ್ದ ನ್ಯೂಜಿಲೆಂಡ್ ತಂಡವನ್ನು ಸೆಮಿಫೈನಲ್‌ನಲ್ಲಿ ಮಣಿಸಿ ಪಾಕಿಸ್ತಾನ ಫೈನಲ್‌ ಪ್ರವೇಶಿಸಿತ್ತು. ಇನ್ನೊಂದು ಆತಿಥ್ಯ ರಾಷ್ಟ್ರ ಆಸ್ಟ್ರೇಲಿಯಾ ಲೀಗ್‌ ಹಂತದಿಂದಲೇ ಹೊರಬಿದ್ದಿತ್ತು. ಇಂಗ್ಲೆಂಡ್ ಸತತ ಎರಡನೇ ಬಾರಿ ಫೈನಲ್‌ ಪ್ರೇವೇಶಿಸಿ ನಿರಾಸೆಗೆ ಒಳಗಾಗಿತ್ತು.

ಕ್ರಿಕೆಟ್‌ನ ದೊಡ್ಡ ಟೂರ್ನಿಯ ಫೈನಲ್‌ ಮೆಲ್ಬರ್ನ್‌ ಕ್ರೀಡಾಂಗಣದಲ್ಲಿ ನಡೆದಿತ್ತು. ಪಾಕಿಸ್ತಾನ 250 ರನ್ ಗುರಿ ನೀಡಿತ್ತು. ಆಂಗ್ಲರ ಬಳಗ 22 ರನ್‌ಗಳಿಂದ ಸೋಲಿಗೆ ಶರಣಾಗಿತ್ತು. ಈ ತಂಡಕ್ಕೆ ಎರಡನೇ ಬಾರಿ ಟ್ರೋಫಿ ಜಯಿಸುವ ಅವಕಾಶ ತಪ್ಪಿ ಹೋಯಿತು.

ತಲಾ ಎರಡು ವಿಕೆಟ್‌ ಪಡೆದಿದ್ದ ವಾಸೀಮ್ ಅಕ್ರಮ್‌ ಮತ್ತು ಮಷ್ತಾಕ್‌ ಅಹ್ಮದ್‌ ಪಾಕ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಮ್ರಾನ್‌ ಖಾನ್‌ ನಾಯಕರಾಗಿದ್ದರು. 2015ರ ವಿಶ್ವಕಪ್‌ ಟೂರ್ನಿಗೂ ಮೆಲ್ಬರ್ನ್ ಅಂಗಳವೇ ಆತಿಥ್ಯ ವಹಿಸಿದೆ.

* 1996 (ಶ್ರೀಲಂಕಾ–ಆಸ್ಟ್ರೇಲಿಯಾ)
ಆರನೇ ಟೂರ್ನಿಗೆ ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನ ಜಂಟಿ ಆತಿಥ್ಯ ವಹಿಸಿದ್ದವು. ಏಷ್ಯಾದ ತಂಡ ಲಂಕಾ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ವಿರುದ್ಧ ಏಳು ವಿಕೆಟ್‌ಗಳ ಗೆಲುವು ಪಡೆದು ಮೊದಲ ಪ್ರಶಸ್ತಿ ಎತ್ತಿ ಹಿಡಿದಿತ್ತು.

ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಮೊದಲು ಬ್ಯಾಟ್‌ ಮಾಡಿ 241 ರನ್‌ ಗಳಿಸಿತ್ತು. ಸಿಂಹಳೀಯ ನಾಡಿನ ಪಡೆ 20 ಎಸೆತಗಳು ಬಾಕಿ ಇರುವಂತೆಯೇ ಗುರಿ ಮುಟ್ಟಿತ್ತು. ಅರವಿಂದ ಡಿಸಿಲ್ವಾ ಶತಕ ಗಳಿಸಿ ಗೆಲುವಿನ ರೂವಾರಿಯಾಗಿದ್ದರು.

* 1999 (ಆಸ್ಟ್ರೇಲಿಯಾ–ಪಾಕಿಸ್ತಾನ)
ನಾಲ್ಕು ವಿಶ್ವಕಪ್‌ಗಳ ಬಳಿಕ ಮತ್ತೆ ಟೂರ್ನಿಗೆ ಆತಿಥ್ಯ ವಹಿಸುವ ಅವಕಾಶ ಲಂಡನ್‌ನ ಲಾರ್ಡ್ಸ್‌ ಅಂಗಳಕ್ಕೆ ಲಭಿಸಿತ್ತು. ಈ ಕ್ರೀಡಾಂಗಣದಲ್ಲಿ ನಡೆದ ಮೂರನೇ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎಂಟು ವಿಕೆಟ್‌ಗಳ ಸುಲಭ ಗೆಲುವು ಪಡೆದಿತ್ತು. ಪಾಕ್‌ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿ 132 ರನ್‌ಗೆ ಆಲೌಟ್ ಆಗಿತ್ತು. ಸಾಧಾರಣ ಗುರಿಯನ್ನು  ಕಾಂಗರೂ ಪಡೆ  121 ಎಸೆತಗಳಲ್ಲಿ  ತಲುಪಿತ್ತು. ಶೇನ್‌ ವಾರ್ನ್‌ (4) ಪಾಕ್‌ ತಂಡವನ್ನು ಅಲ್ಪ  ಮೊತ್ತಕ್ಕೆ ಕಟ್ಟಿ ಹಾಕಲು ಪ್ರಮುಖ ಪಾತ್ರ ವಹಿಸಿದ್ದರು.

* 2003 (ಆಸ್ಟ್ರೇಲಿಯಾ–ಭಾರತ)
ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್‌ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಭಾರತ ಎರಡನೇ ಬಾರಿ ಟ್ರೋಫಿ ಗೆಲ್ಲುವ ಕನಸು ನುಚ್ಚು ನೂರಾಗಿತ್ತು. ಸೌರವ್ ಗಂಗೂಲಿ ಸಾರಥ್ಯದ ಭಾರತ 125 ರನ್‌ಗಳ ಸೋಲು ಕಂಡಿತ್ತು. ರಿಕಿ ಪಾಂಟಿಂಗ್‌ ಶತಕದ ಬಲದಿಂದ ಆಸ್ಟ್ರೇಲಿಯಾ 360 ರನ್‌ ಗುರಿ ನೀಡಿತ್ತು. ‘ದಾದಾ’ ಪಡೆ 234 ರನ್‌ಗೆ ತನ್ನ ಹೋರಾಟವನ್ನು ಮುಗಿಸಿತ್ತು. ಪಾಂಟಿಂಗ್‌ ಪಂದ್ಯ ಶ್ರೇಷ್ಠ ಮತ್ತು ಸಚಿನ್‌ ತೆಂಡೂಲ್ಕರ್‌ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು.

* 2007 (ಆಸ್ಟ್ರೇಲಿಯಾ–ಶ್ರೀಲಂಕಾ)
ಲಂಕಾ ತಂಡ ಎರಡನೇ ಸಲ  ಟ್ರೋಫಿ ಗೆಲ್ಲುವ ಕನಸಿಗೆ ಅಡ್ಡಿಯಾದ ಆಸ್ಟ್ರೇಲಿಯಾ ನಾಲ್ಕನೇ ಬಾರಿ ಚಾಂಪಿಯನ್‌ ಆಗಿತ್ತು. ಬರ್ಬಡಾಸ್‌ನ ಕೆನ್ಸಿಂಗ್ಟನ್‌ ಓವಲ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ 281 ರನ್‌ ಗಳಿಸಿತ್ತು. ಲಂಕಾ ಪಡೆ 215 ರನ್‌ಗೆ ಆಲೌಟ್‌ ಆಗಿತ್ತು. ಆರಂಭಿಕ ಬ್ಯಾಟ್ಸ್‌ಮನ್‌ ಆ್ಯಡಮ್‌ ಗಿಲ್‌ಕ್ರಿಸ್ಟ್‌ ಶತಕ ಗಳಿಸಿದ್ದರಿಂದ ಆಸ್ಟ್ರೇಲಿಯಾಕ್ಕೆ ಸವಾಲಿನ ಗುರಿ ನೀಡಲು ಸಾಧ್ಯವಾಗಿತ್ತು.

* 2011 (ಭಾರತ–ಶ್ರೀಲಂಕಾ)
ಈ ವಿಶ್ವಕಪ್‌ ಭಾರತದ ಚರಿತ್ರೆಯ ಪುಟಗಳಲ್ಲಿ ಸದಾ ನೆನಪಿನಲ್ಲಿ ಉಳಿಯುವಂಥದ್ದು. ಮಹೇಂದ್ರ ಸಿಂಗ್ ದೋನಿ ನಾಯಕತ್ವದ ತಂಡ ತವರಿನ ಅಂಗಳದಲ್ಲಿ ಮೊದಲ ಟ್ರೋಫಿ ಜಯಿಸಿತ್ತು.

1983ರ ಬಳಿಕ ಭಾರತ ಎರಡನೇ ಸಲ ಫೈನಲ್‌ ತಲುಪಿತ್ತು. 2003ರಲ್ಲಿ ನಿರಾಸೆ ಕಂಡಿತ್ತು. ಆದರೆ, 2011ರಲ್ಲಿ ಮುಂಬೈನ ವಾಂಖೆಡೆ ಅಂಗಳದಲ್ಲಿ ಲಂಕಾ ತಂಡವನ್ನು ಆರು ವಿಕೆಟ್‌ಗಳಿಂದ ಮಣಿಸಿತ್ತು. ಗೌತಮ್‌ ಗಂಭೀರ್‌ (97) ಮತ್ತು ದೋನಿ (ಅಜೇಯ 91) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಟೂರ್ನಿಯುದ್ದಕ್ಕೂ ಶ್ರೇಷ್ಠ ಆಟವಾಡಿದ್ದ ಯುವರಾಜ್‌ ಸಿಂಗ್‌ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT