ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ‘ಜೀ’ಯಲ್ಲಿ ಹಲೊ ಪ್ರತಿಭಾ

Last Updated 20 ಜನವರಿ 2015, 19:30 IST
ಅಕ್ಷರ ಗಾತ್ರ

ಇದೇ 27ರಿಂದ ಪ್ರತಿದಿನ ರಾತ್ರಿ 7.30ರಿಂದ ಜೀ ಹಿಂದಿ ವಾಹಿನಿಯಲ್ಲಿ ಪ್ರಸಾರವಾಗುವ ‘ಹಲೊ ಪ್ರತಿಭಾ’ ಒಂದು ವಿನೂತನ ಕಥೆಯನ್ನಾಧರಿಸಿ ವಿಶಿಷ್ಟ ಕಾರ್ಯಕ್ರಮ ಎನ್ನುವುದು ತಂಡದ ಘೋಷಣೆ.

ಮಹಿಳೆ ಎಂದರೆ ಕೇವಲ ಶೋಷಣೆ, ಕಣ್ಣೀರು ಅಥವಾ ಮನೆಯೊಡೆಯುವ ಕಥೆಗಳೇ ತುಂಬಿಕೊಂಡಿರುವ ಟೀವಿ ಜಗತ್ತಿನಲ್ಲಿ ‘ಜಿ’ ಟೀವಿಯ ‘ಹಲೊ ಪ್ರತಿಭಾ’ ಹೊಸತನವನ್ನು ತರಬಲ್ಲದೇ ಎನ್ನುವುದು ವೀಕ್ಷಕರ ಪ್ರಶ್ನೆ.

ಹೌದು, ಕುಟುಂಬ, ಮನೆ, ಮಕ್ಕಳು, ಗಂಡ, ಅತ್ತೆ–ಮಾವ ಎಂದು ಸುಮಾರು 16 ವರ್ಷಗಳ ಕಾಲ ಇತರರಿಗಾಗಿಯೇ ಬದುಕಿದ ಪ್ರತಿಭಾ, 16 ವರ್ಷಗಳ ನಂತರ ಅಂತಿಮವಾಗಿ ತನ್ನನ್ನು ತಾನು ತಿಳಿಯಲು ಹೇಗೆಲ್ಲ ಪ್ರಯತ್ನಿಸುತ್ತಾಳೆ  ಎನ್ನುವುದೇ ‘ಹಲೊ ಪ್ರತಿಭಾ’ ಶೋದ ತಿರುಳು ಎನ್ನುತ್ತದೆ ತಂಡ.

ಮುಖ್ಯಪಾತ್ರದಲ್ಲಿರುವ ನಟಿ ಬಿನ್ನಿ ಶರ್ಮಾ ಕೂಡ ಈ ಕಾರ್ಯಕ್ರಮದ ಬಗ್ಗೆ ಅಪಾರ ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಎರಡು ಮಕ್ಕಳ ತಾಯಿ, 36 ವರ್ಷದ ಪ್ರತಿಭಾ, ಮನದಲ್ಲಿ ನೂರಾರು ಕನಸುಗಳನ್ನು ಹೊತ್ತ ಮಹಾತ್ವಾಕಾಂಕ್ಷಿ ಮಹಿಳೆ. ಮದುವೆಯಾದ ನಂತರ ತನ್ನ ವಿಶೇಷ ಸಾಮರ್ಥ್ಯ–ಕೌಶಲಗಳನ್ನೆಲ್ಲ ಕಟ್ಟಿಟ್ಟು ಕೇವಲ ಕುಟುಂಬಕ್ಕಾಗಿ ದುಡಿದ ಪ್ರತಿಭಾ, ನಂತರ ತನ್ನತನದ ಸಂದಿಗ್ಧತೆಗೆ (identity crisis) ಸಿಲುಕಿಕೊಳ್ಳುತ್ತಾಳೆ ಎನ್ನುವ ಕಥೆ ಇದೆ.

‘ಪ್ರತಿಭಾ ನಮ್ಮೆಲ್ಲರ ಕಥೆ, ಪ್ರತಿಯೊಬ್ಬ ಮಹಿಳೆಯಲ್ಲಿ ಇಂತಹ ಒಬ್ಬ ಪ್ರತಿಭಾ ಇದ್ದೇ ಇರುತ್ತಾಳೆ. ಜೀವನದಲ್ಲಿ ಒಂದು ಹಂತದ ನಂತರ ತನ್ನದೇ ಆದ ಐಡೆಂಟಿಟಿಯನ್ನು ಆವಿಷ್ಕರಿಸುತ್ತ, ಕಳೆದುಕೊಂಡ ಆತ್ಮವಿಶ್ವಾಸವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತ ಸಾಗುವ ಪ್ರತಿಭಾಳ ಪಯಣದ ಅನ್ವೇಷಣೆಯ ಕಥೆ ಇದು...’ ಎನ್ನುವುದು ಬಿನ್ನಿ ವಿವರಣೆಯ ಲಹರಿ.

ಹಾಗಾದರೆ ಇದು ಶ್ರೀದೇವಿ ಅಭಿನಯದ ‘ಇಂಗ್ಲಿಷ್–ವಿಂಗ್ಲಿಷ್’ ಕಥೆಯ ದಾರಿಗೆ ಸೇರುವ ಮತ್ತೊಂದು ಕಥೆಯೇ ಎನ್ನುವ ಅನುಮಾನಕ್ಕೆ ತಂಡದ ಮತ್ತೊಬ್ಬ ಸದಸ್ಯ ಸಚಲ್ ತ್ಯಾಗಿ ಉತ್ತರ ನೀಡುವುದು ಹೀಗೆ:
‘ಇದು ಇಂಗ್ಲಿಷ್–ವಿಂಗ್ಲಿಷ್ ಚಿತ್ರದಿಂದ ಪ್ರೇರಣೆ ಪಡೆದಿದೆಯೇ ಎಂದು ಅನೇಕರು ಕೇಳಿದ್ದಾರೆ. ಆದರೆ ಭಾರತೀಯ ಪ್ರತಿಯೊಂದು ಮನೆಯಲ್ಲಿ ತನ್ನನ್ನು ತಾನು ಸವೆಸಿಕೊಳ್ಳುತ್ತ, ತನ್ನೇ ತಾನು ಮರೆಯುತ್ತ, ಮನೆಗಾಗಿ ಹೈರಾಣಾಗುವ ಹೆಣ್ಣು ಮಕ್ಕಳು ಸಿಗುತ್ತಾರೆ. ಅಂತಹ ಎಲ್ಲಾ ಹೆಣ್ಣುಮಕ್ಕಳ ನೈಜ ಬದುಕೇ ಇದಕ್ಕೆ ಪ್ರೇರಣೆ. ಕುಟುಂಬ, ಮನೆ, ಸಂಸಾರದ ಜಂಜಡಗಳಲ್ಲಿ ತಮ್ಮನ್ನು ತಾವು ಕಳೆದುಕೊಂಡ ಮಹಿಳೆಯರನ್ನು ಅವರಿಗೆ ಹುಡುಕಿಕೊಡುವುದೇ ಈ ಕಾರ್ಯಕ್ರಮದ ಉದ್ದೇಶ’.

‘ಭಾರತೀಯ ಮಧ್ಯಮ ವರ್ಗದ, ನಡು ವಯಸ್ಸಿನ ಎಲ್ಲಾ ಹೆಣ್ಣುಮಕ್ಕಳ ಜೀವನಗಾಥೆ ಇದು. ತನ್ನವರ ಯೋಗಕ್ಷೇಮ ನೋಡಿಕೊಳ್ಳುವುದರಲ್ಲಿಯೇ ದಿನ ಕಳೆಯುತ್ತ, ತನ್ನತನವನ್ನೇ ತಾನು ಕಳೆದುಕೊಳ್ಳುವ ಮಹಿಳೆ ಎಲ್ಲಾ ಮನೆಗಳಲ್ಲಿಯೂ ಇರುತ್ತಾಳೆ, ಅವಳ ಪ್ರತಿಭೆಯನ್ನು ಹೊರಗೆ ತರುವುದು ಹಾಗೂ ಅವಳೇನು ಎನ್ನುವುದನ್ನು ಅವಳಿಗೆ ತೋರಿಸುವುದೇ ಈ ಕಾರ್ಯಕ್ರಮ’ ಎನ್ನುತ್ತಾರೆ ಜಿ ಟಿವಿ ಕಾರ್ಯಕ್ರಮಗಳ ಮುಖ್ಯಸ್ಥೆ ನಮಿತ್ ಶರ್ಮಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT