ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಆಸಕ್ತರಿಗೆ ‘ಸಮರ್ಪಣ’

ಗುಲ್ ಮೊಹರ್
Last Updated 31 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಸಕ್ತರಿಗೆ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾರರಿಗೆ, ಯುವ ತಲೆಮಾರಿನ ಸಂಗೀತಗಾರರಿಗೆ ಜತೆಗೆ, ಮುಂದಿನ ತಲೆಮಾರಿಗೆ ಉಪಯುಕ್ತ ವಾಗುವ ಸಿ.ಡಿ ಹಾಗೂ ಕೃತಿಯೊಂದು ಮೈಸೂರಲ್ಲಿ ಬಿಡುಗಡೆಯಾಗಿವೆ. ಸಿ.ಡಿ ಹಾಗೂ ಕೃತಿಯ ಹೆಸರು ‘ಸಮರ್ಪಣ’.

ಇವುಗಳನ್ನು ಮೈಸೂರಿನ ಸ್ವರ ಸಂಕುಲ ಸಂಗೀತ ಸಭಾ ಹೊರತಂದಿದೆ. ಸಿ.ಡಿಯಲ್ಲಿರುವ 1,896 ರಚನೆಗಳನ್ನು  ಪಂ. ಇಂದೂಧರ ನಿರೋಡಿ ಹಾಡಿದ್ದಾರೆ. ಅವರು ಹಾಡಿದ್ದು ವಿಷ್ಣು ನಾರಾಯಣ ಭಾತಖಂಡೆ ಸಂಗ್ರಹಿಸಿದವು. 20ನೇ ಶತಮಾನದಲ್ಲಿ ಆರಂಭದಲ್ಲಿ ವಕೀಲರಾಗಿದ್ದ ಅವರು ಮುಂಬೈ ಹಾಗೂ ಕರಾಚಿ ನಡುವೆ ಸಂಚರಿಸುತ್ತಿದ್ದರು. ಜತೆಗೆ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿತಿದ್ದರು. ಇದರ ಪರಿಣಾಮ ವಕೀಲಿಕೆ ಮಾಡುತ್ತಲೇ ದೇಶದಾದ್ಯಂತ ಸಂಚರಿಸಿ ಹೆಸರಾಂತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರರನ್ನು ಭೇಟಿಯಾಗಿ ರಚನೆಗಳನ್ನು ಸಂಗ್ರಹಿಸಿದರು.

ಅವುಗಳಲ್ಲಿ ದ್ರುಪದ್‌, ಖಯಾಲ್, ಠುಮ್ರಿ, ತರಾನಾ ಮೊದಲಾದ ರಚನೆಗಳನ್ನು ಸಂಗ್ರಹಿಸಿದರು. ಹಾಗೆ ಸಂಗ್ರಹಿಸಿದ್ದನ್ನು ‘ಹಿಂದೂಸ್ತಾನಿ ಸಂಗೀತ ಪದ್ಧತಿ– ಕ್ರಮಿಕ್ ಪುಸ್ತಕ ಮಾಲಿಕೆ’ಯಾಗಿ ಒಟ್ಟು ಆರು ಸಂಪುಟಗಳಲ್ಲಿ ಪ್ರಕಟಿಸಿದರು. ಇದರಲ್ಲಿ ಭಾತಖಂಡೆ ರಚಿಸಿದ ಲಕ್ಷಣಗೀತೆ, ಸ್ವರಗೀತೆಗಳೂ ಸೇರಿದ್ದು, ಒಟ್ಟು 1,896 ರಚನೆಗಳು ಕೃತಿಗಳಲ್ಲಿವೆ. ಈ ಎಲ್ಲವೂ ಓದಲು ಬರುವವರಿಗೆ ಮಾತ್ರ ಸಾಧ್ಯ. ಆದರೆ, ಓದಲು ಬಾರದವರಿಗೆ? ಇದಕ್ಕಾಗಿ ಆಡಿಯೊ ರೆಕಾರ್ಡಿಂಗ್‌ ಮಾಡಿದರೆ ಯಾರು ಬೇಕಾದರೂ ಕೇಳಬಹುದು, ಕಲಿಯಬಹುದು ಎಂದು ಭಾತಖಂಡೆ ಅವರ ಶಿಷ್ಯರಾದ ರತನ್‌ ಜನ್ಕರ್‌  ಅವರ ಶಿಷ್ಯರೂ ಕನ್ನಡಿಗರೂ ಆದ ಕೆ.ಜಿ. ಗಿಂಡೆ ಅವರು ಕೊಲ್ಕತ್ತದ ಸಂಗೀತ ರಿಸರ್ಚ್‌ ಅಕಾಡೆ ಮಿಯ ಮೂಲಕ ಆಡಿಯೊ ರೆಕಾರ್ಡಿಂಗ್ ಹೊರತರಲು ಯತ್ನಿಸಿದರು. 

ಆದರೆ, ಅವರಿಗೂ ಪೂರ್ತಿಗೊಳಿಸಲು ಸಾಧ್ಯವಾಗಲಿಲ್ಲ. ಹೀಗೆ, ನಿಂತುಹೋಗಿದ್ದ ಈ ಯೋಜನೆಯನ್ನು ಗಿಂಡೆ ಅವರ ಶಿಷ್ಯರಾದ ಮೈಸೂರಲ್ಲಿ ನೆಲೆಸಿರುವ ಪಂ. ಇಂದೂಧರ ನಿರೋಡಿ ಈಗ ಪೂರ್ಣಗೊಳಿಸಿದ್ದಾರೆ. ಆಕಾಶವಾಣಿಯ ಗಾಯಕ, ಆಗ್ರಾ ಘರಾಣಾದ ಹಿರಿಯ ವಿದ್ವಾಂಸ ನಿರೋಡಿಯವರು ಭಾತಖಂಡೆಯವರ ಎಲ್ಲ ರಚನೆಗಳನ್ನು ಅಭ್ಯಸಿಸಿ ಹಾಡಿದ್ದಾರೆ. ಜತೆಗೆ, ಎಲ್ಲ ರಚನೆಗಳ ಸಾಹಿತ್ಯವನ್ನು ‘ಸಮರ್ಪಣ’ ಶೀರ್ಷಿಕೆಯಲ್ಲಿ ಕೃತಿಯಾಗಿ ಹೊರತಂದಿದ್ದಾರೆ. ಇದರಲ್ಲಿ ಯೋಜನೆ ಕುರಿತು ಪೀಠಿಕೆ, ಕೃತಿಗಳ ಪಟ್ಟಿಯನ್ನು ಹಿಂದಿಯಲ್ಲಿ ನೀಡಲಾಗಿದೆ. ‘ಈ ಕೃತಿಯನ್ನು ಕನ್ನಡದಲ್ಲಿ ಪ್ರಕಟಿಸಿದ್ದರೆ ಸೀಮಿತವಾಗುತ್ತಿತ್ತು.

ದೇಶದಾದ್ಯಂತ ತಲುಪಲಿ ಎಂಬ ಕಾರಣಕ್ಕೆ ಹಿಂದಿಯಲ್ಲಿ ತಂದೆವು. ಆದರೆ, ಇಂಗ್ಲಿಷಿನಲ್ಲಿ ಸರಿಯಾದ ಪದಗಳು ಸಿಗದ ಕಾರಣ ಹೊರತಂದಿಲ್ಲ’ ಎಂದು ನಮ್ರತೆಯಿಂದ ಹೇಳುತ್ತಾರೆ 80ರ ಪ್ರಾಯದ ನಿರೋಡಿ. ‘ಬೇರೆಯವರು ಕಲಿತರೆ ಗುಣಮಟ್ಟ ಕಡಿಮೆ ಆಗುತ್ತದೆ ಎಂಬ ಕಾರಣಕ್ಕೆ 19ನೇ ಶತಮಾನದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿಸುತ್ತಿರಲಿಲ್ಲ. ಸರ್ಕಾರ, ಸಂಘ–ಸಂಸ್ಥೆಗಳ ನೆರವಿಲ್ಲದೆ ಏಳೆಂಟು ಲಕ್ಷ ರೂಪಾಯಿ ವೆಚ್ಚ ಮಾಡಿ ಸಿ.ಡಿ ಹಾಗೂ ಪುಸ್ತಕವನ್ನು ಹೊರತರಲಾಗಿದೆ. ಆಸಕ್ತರು ₹3 ಸಾವಿರ ಅಥವಾ ಅದಕ್ಕೂ ಹೆಚ್ಚು ದೇಣಿಗೆಯಾಗಿ ನೀಡಿ ಕೊಳ್ಳಬಹುದು.

ಇದಕ್ಕೆ ಸೆಕ್ಷನ್‌ 80–ಜಿ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಇದೆ ಎನ್ನುತ್ತಾರೆ ಸ್ವರ ಸಂಕುಲ ಸಂಗೀತ ಸಭಾದ ಅಧ್ಯಕ್ಷ ಡಾ.ಎಂ.ಎಸ್‌. ಭಾಸ್ಕರ್ (99019 02969).  ಈ ಕಾರ್ಯಕ್ಕಾಗಿ ಪಂ. ಇಂದೂಧರ ನಿರೋಡಿ (94806 29238) ಅವರು ಬರೋಬ್ಬರಿ ಎಂಟು ವರ್ಷಗಳವರೆಗೆ ಶ್ರಮಿಸಿದ್ದಾರೆ. ಅವರಿಗೆ ಹಾರ್ಮೋನಿಯಂನಲ್ಲಿ ಪಂ.ವೀರಭದ್ರಯ್ಯ ಹಿರೇಮಠ, ತಬಲಾದಲ್ಲಿ ಪಂ.ರಮೇಶ ಧನ್ನೂರ ಹಾಗೂ ಪಂ.ಭೀಮಾಶಂಕರ ಬಿದನೂರ ಸಾಥ್‌ ನೀಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT