ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಮೌಲ್ಯ ಸ್ಥಾಪನೆ

ವಿಶ್ವ ಹಿಂದೂ ಪರಿಷತ್‌ ಮುಖಂಡ ಅಶೋಕ್ ಸಿಂಘಾಲ್
Last Updated 21 ಡಿಸೆಂಬರ್ 2014, 19:58 IST
ಅಕ್ಷರ ಗಾತ್ರ

ನವದೆಹಲಿ/ ಹೈದರಾಬಾದ್‌/ಚೆನ್ನೈ (ಪಿಟಿಐ, ಐಎಎನ್‌ಎಸ್‌): ಹಿಂದೂ ಧರ್ಮಕ್ಕೆ ಮರುಮತಾಂತರ­ಗೊಳಿಸುವ ‘ಘರ್‌ ವಾಪಸಿ’ ಕಾರ್ಯಕ್ರಮ ವಿವಾದಕ್ಕೆ ಗ್ರಾಸವಾಗಿ ಸಂಸತ್‌ನಲ್ಲಿ ಕೋಲಾಹಲ ಎಬ್ಬಿಸಿರುವ ಸಂದರ್ಭ­ದಲ್ಲೇ, ‘ದೇಶದಲ್ಲಿ ಹಿಂದೂ ಮೌಲ್ಯ­ಗಳನ್ನು ಪುನರ್‌ಸ್ಥಾಪಿಸ­ಲಾಗುವುದು’ ಎಂದು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಹೇಳಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ‘ದೇಶ­ದಲ್ಲಿ ಹಿಂದೂ ಸಮಾಜ ಸ್ಥಾಪಿಸ­ಲಾ­ಗುವುದು’ ಎಂದು ಶನಿವಾರ ಹೇಳಿ­ದ್ದರು. ಮರುದಿನವೇ   ವಿಎಚ್‌ಪಿ ಮುಖಂಡ ಸಿಂಘಾಲ್‌ ಹೀಗೆ ಹೇಳಿದ್ದಾರೆ.

‘ಹಿಂದೂ ಪರ ಸಂಘಟನೆಗಳ ೫೦ ವರ್ಷಗಳ ಹೋರಾಟದ ಫಲವಾಗಿ ೮೦೦ ವರ್ಷಗಳಾದ ಮೇಲೆ ದೆಹಲಿಯ ಅಧಿಕಾರವು ಮರಳಿ

ಕ್ರೈಸ್ತರ  ಮರುಮತಾಂತರ
ವಲಸಾಡ್‌ (ಗುಜರಾತ್‌):
ವಲಸಾಡ್ ಜಿಲ್ಲೆಯ ಅರನಾಯ್‌ ಗ್ರಾಮ­­­ದಲ್ಲಿ ಭಾನುವಾರ ಧಾರ್ಮಿಕ ವಿಧಿ­ಗಳನ್ನು ನಡೆಸಿ ೨೨೫ ಜನ ಬುಡಕಟ್ಟು ಕ್ರೈಸ್ತರನ್ನು ಹಿಂದೂ­ಗಳಾಗಿ ಮರು­ಮತಾಂತರ ಮಾಡಿರು­ವುದಾಗಿ ವಿಶ್ವ ಹಿಂದೂ ಪರಿಷತ್‌ ಹೇಳಿದೆ. ‘ಈ ಮತಾಂತರವು ‘ಘರ್‌ ವಾಪಸಿ’ ಕಾರ್ಯಕ್ರಮದಡಿ ಸ್ವಯಂ­ಪ್ರೇರಿತವಾಗಿ ನಡೆದಿದೆ’ ಎಂದು ಸಂಘಟನೆಯ ಜಿಲ್ಲಾ ಮುಖ್ಯಸ್ಥ ನಾತು ಪಟೇಲ್‌ ಹೇಳಿದ್ದಾರೆ.

***
ಜಗತ್ತಿನ ಜನರನ್ನೆಲ್ಲಾ ಮತಾಂತರ­ಗೊಳಿಸುವ ಉದ್ದೇಶ­ವನ್ನು ಸಂಘಟನೆ ಯಾವತ್ತೂ ಹೊಂದಿಲ್ಲ. ಆದರೆ, ಜಗತ್ತಿನ ಜನರೆಲ್ಲರ ಹೃದಯ ಗೆಲ್ಲುವ ಆಸೆ ಹೊಂದಿದೆ  
– ಅಶೋಕ್ ಸಿಂಘಾಲ್

***
ಮತಾಂತರ ನಿಷೇಧ ಕಾನೂನನ್ನು ಏಕಪಕ್ಷೀಯವಾಗಿ ಜಾರಿ­ಗೊಳಿಸುವ ಉದ್ದೇಶ ಸರ್ಕಾರಕ್ಕಿಲ್ಲ
  – ಕೇಂದ್ರ ಸಚಿವ ವೆಂಕಯ್ಯನಾಯ್ಡು
ಮರುಮತಾಂತರದ ಬಗೆಗಿನ ವಿವಾದ ಎನ್‌ಡಿಎ ಸರ್ಕಾರದ ಅಭಿವೃದ್ಧಿ ಕಾರ್ಯಸೂಚಿಯನ್ನು ದಿಕ್ಕು
ತಪ್ಪಿ­ಸುವುದಿಲ್ಲ
  – ಅಮಿತ್‌ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಹಿಂದೂಗಳಿಗೆ ಸಿಕ್ಕಿದೆ. ನಮ್ಮ ಸಂಸ್ಕೃತಿ ಮತ್ತು ಧರ್ಮವನ್ನು ದಮನಿಸುವ ಕಾರ್ಯ ಹಲವು ಶತಮಾನಗಳಿಂದ ನಡೆದು ಬಂದಿದೆ. ಇದೀಗ ೮೦೦ ವರ್ಷಗಳ ನಂತರ ಹಿಂದೂತ್ವವನ್ನು ಸಂರಕ್ಷಿಸುವ ಸರ್ಕಾರ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಿದೆ. ೧೨ನೇ ಶತಮಾನದಲ್ಲಿ ರಜಪೂತ ದೊರೆ ಪೃಥ್ವಿರಾಜ್‌ ಚೌಹಾಣ್‌ ಸೋತ ಮೇಲೆ ಇದೇ ಮೊದಲ ಸಲ ಇಲ್ಲಿ ಹಿಂದೂಗಳಿಗೆ ಅಧಿಕಾರ ಸಿಕ್ಕಿದೆ’ ಎಂದರು.

ಇಸ್ಲಾಮಿಕ್‌ ಭಯೋತ್ಪಾದನೆ ಎಷ್ಟು ಅಪಾಯಕಾರಿ ಎಂಬುದು ಆಸ್ಟ್ರೇಲಿಯಾ, ಮಧ್ಯ ಏಷ್ಯಾ, ಯೂರೋಪ್‌­ಗಳನ್ನು ನೋಡಿದರೆ ಗೊತ್ತಾಗುತ್ತದೆ. ಜಾಗತಿಕ ಮಟ್ಟದಲ್ಲಿ ಬೇರೆ ಬೇರೆ ಶಕ್ತಿಗಳು ತಂತಮ್ಮ ಅಧಿ­ಕಾರ ಸ್ಥಾಪಿಸಲು ಪೈಪೋಟಿಗೆ ಬಿದ್ದಿರು­ವುದನ್ನು ಗಮನಿಸಿ­ದರೆ ಮತ್ತೊಂದು ಜಾಗತಿಕ ಯುದ್ಧ ಅನಿವಾರ್ಯ ಎಂಬ ಸ್ಥಿತಿ ಇದೆ ಎಂದರು.

ಏಕಪಕ್ಷೀಯ ನಿರ್ಧಾರ ಇಲ್ಲ: ಇದೇ ವೇಳೆ, ಕೇಂದ್ರ ಸಂಸದೀಯ ವ್ಯವಹಾರ­ಗಳ ಸಚಿವ ಎಂ.ವೆಂಕಯ್ಯನಾಯ್ಡ ಅವರು ಹೈದರಾಬಾದ್‌ನಲ್ಲಿ ಮಾತ­ನಾಡಿ, ‘ದೇಶದ ಧರ್ಮನಿರಪೇಕ್ಷ ತತ್ವ ಆಪತ್ತಿಗೆ ಸಿಲುಕಿದೆ ಎಂದು ಕಾಂಗ್ರೆಸ್‌ ಹುಯಿಲೆಬ್ಬಿಸುತ್ತಿದೆ. ಆದರೆ, ನಮ್ಮ ಸರ್ಕಾರವೇನೂ ಹಾಗೆ ಭಾವಿಸಿಲ್ಲ. ಕಾಂಗ್ರೆಸ್‌ನ ಮತಬುಟ್ಟಿ ಆಪತ್ತಿಗೆ ಸಿಲುಕುವ ಅಪಾಯವಿರಬಹುದು ಅಷ್ಟೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

ಮತಾಂತರ ಅಥವಾ ಮರು­ಮತಾಂತರದ ಬಗ್ಗೆ ಪ್ರತಿಪಕ್ಷಗಳು ಅರ್ಥಪೂರ್ಣ ಚರ್ಚೆಗೆ ಮುಂದಾಗು-­ವುದಾದರೆ ಅದಕ್ಕೆ ಅವಕಾಶ ಮಾಡಿ­ಕೊಡಲು ಸರ್ಕಾರ ಸಿದ್ಧ. ಮತಾಂತರ, ಮರುಮತಾಂತರ ಇವೆಲ್ಲಾ ದೇಶವು ಸ್ವಾತಂತ್ರ್ಯ ಪಡೆಯುವ ಮುನ್ನವೇ ಇದ್ದವು. ಅವು ಈಗಲೂ ಮುಂದುವ­ರಿದಿವೆ. ಆದ್ದರಿಂದ ಪ್ರತಿ­ಪಕ್ಷಗಳು ಇದನ್ನೇ ನೆಪ ಮಾಡಿ­ಕೊಂಡು ಸದನದ ಕಲಾಪಕ್ಕೆ ಭಂಗ ಎಸಗ­ಬಾರದು. ರಾಜ್ಯಸಭೆಯ ಕಲಾಪದಲ್ಲಿ ಭಾಗಿಯಾಗಿ  ಪ್ರಮುಖ ಮಸೂದೆ­ಗಳನ್ನು ಅಂಗೀಕರಿಸಲು ನೆರವಾಗಬೇಕು ಎಂದರು.

ಇನ್ನು ಎರಡು ದಿನಗಳ ಕಲಾಪವಷ್ಟೇ ಬಾಕಿ ಇದೆ. ಲೋಕಸಭೆಯಲ್ಲಿ ಇದುವರೆಗೆ ೧೭ ಮಸೂದೆಗಳು ಅಂಗೀ­ಕಾ­ರ­ವಾಗಿದ್ದರೆ ರಾಜ್ಯಸಭೆಯಲ್ಲಿ ೧೧ ಮಸೂದೆಗಳಷ್ಟೇ ಅಂಗೀಕಾರಗೊಂಡಿವೆ. ಕಾಂಗ್ರೆಸ್‌ ಮತ್ತು ಎಡ ಪಕ್ಷಗಳ ಹಟಮಾರಿತನವೇ ಇದಕ್ಕೆ ಕಾರಣ ಎಂದು ಅವರು ಚುಚ್ಚಿದರು.

ಕೆಲ ದಿನಗಳ ಹಿಂದೆ ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ಸಂಸತ್‌ನಲ್ಲಿ ಮಾತನಾಡಿ, ‘ಬಲವಂತ ಮತಾಂತರದ ವಿರುದ್ಧ ಕಾನೂನು ಜಾರಿಗೊಳಿಸಲು ಸರ್ಕಾರ ತಯಾರಿದೆ. ಜಾತ್ಯತೀತ ಸಿದ್ಧಾಂತಕ್ಕೆ ಬದ್ಧವೆಂದು ಹೇಳಿಕೊಳ್ಳುವ ಪಕ್ಷಗಳು ಇದಕ್ಕೆ ಸಿದ್ಧ ಇವೆಯೇ’ ಎಂದು ಸವಾಲು ಹಾಕಿದ್ದರು.

ದಿಕ್ಕುತಪ್ಪುವುದಿಲ್ಲ– ಅಮಿತ್ ಷಾ: ಈ ಬೆಳವಣಿಗೆಗಳ ನಡುವೆಯೇ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರು ಈ ಬಗ್ಗೆ ಚೆನ್ನೈನಲ್ಲಿ ಮಾತ­ನಾಡಿ, ‘ಮರುಮತಾಂತರದ ಬಗೆಗಿನ ವಿವಾದವು ಎನ್‌ಡಿಎ ಸರ್ಕಾರದ ಅಭಿವೃದ್ಧಿ ಕಾರ್ಯಸೂಚಿಯ ದಿಕ್ಕು­ತಪ್ಪಿಸುವುದಿಲ್ಲ’ ಎಂದಿದ್ದಾರೆ.

ಮರುಮತಾಂತರ ಕಾರ್ಯ­ಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಪಾತ್ರದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದ ಷಾ, ‘ಆರ್‌ಎಸ್‌ಎಸ್‌ ರಾಷ್ಟ್ರೀಯ ಸಂಘಟನೆಯಾಗಿದೆ. ಅದರ ಕಾರ್ಯ­ಕ್ರಮಗಳ ಬಗ್ಗೆ ನನಗೆ ಯಾವುದೇ ಸಂಶಯವಿಲ್ಲ’ ಎಂದರು.

ಸಿಪಿಎಂ ಆಗ್ರಹ: ದೇಶದಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್‌ ಪ್ರಾಯೋಜಿತ ಮರುಮತಾಂತರ ಕಾರ್ಯ­ಕ್ರಮಗಳಿಗೆ ತಕ್ಷಣವೇ ತಡೆಯೊಡ್ಡಬೇಕು ಎಂದು ಸಿಪಿಎಂ ಆಗ್ರಹಿಸಿದೆ.

ಮತಾಂತರದ ಬಗ್ಗೆ ಬಿಜೆಪಿ ಮತ್ತು ಆರ್ಎಸ್‌ಎಸ್‌ ದ್ವಂದ್ವ ಹೇಳಿಕೆಗಳನ್ನು ನೀಡುತ್ತಿವೆ. ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಮರುಮತಾಂತರದ ಪರವಾಗಿ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಬಿಜೆಪಿ ಮತ್ತು ಆರ್ಎಸ್‌ಎಸ್‌ ಮುಖಂಡರು ಬಲವಂತ ಮತಾಂತರದ ವಿರುದ್ಧ ಕಾನೂನು ಜಾರಿಗೊಳಿಸಲು ಒತ್ತಾಯಿಸುತ್ತಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಸಿಪಿಎಂ ದೂರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT