ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಸೆಗೆ ಅಹಿಂಸೆ ಮದ್ದು

ಪರಮತ, ಪರಧರ್ಮವನ್ನು ಗೌರವಿಸಿದಾಗ ಮಾತ್ರ ಶ್ರೇಷ್ಠತೆಯ ವ್ಯಸನ ಇಲ್ಲವಾಗುತ್ತದೆ
Last Updated 23 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಪೃಥ್ವಿದತ್ತ ಚಂದ್ರ ಶೋಭಿ ಅವರ ಲೇಖನ ‘ಅಂತ್ಯ ಸ್ಪಷ್ಟವಾಗಿ ಗೋಚರಿಸದ ಯುದ್ಧಗಳು’ (ಪ್ರ.ವಾ., ನ. 20) ಐಎಸ್ ಮತ್ತು ಅಂತಹ ಸಂಘಟನೆಗಳನ್ನು ನಿಗ್ರಹಿಸಲಾರದ ಪರಿಸ್ಥಿತಿಯನ್ನು ವಿಶದೀಕರಿಸುತ್ತದೆ.

ಪ್ಯಾರಿಸ್ ದಾಳಿಯಲ್ಲಿ ಅಮಾಯಕರಾದ ನೂರಾರು ಜನ ಜೀವ ತೆತ್ತರು. ಆಮೇಲೆ ಸಿರಿಯಾದ ರಖ್ಖಾ ನಗರದ ಮೇಲೆ ಫ್ರಾನ್ಸ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ನಿಷ್ಪಾಪಿ ಮಕ್ಕಳು ಪ್ರಾಣ ಕಳೆದುಕೊಂಡರು. ರಷ್ಯಾದ ವಿಮಾನ ಸ್ಫೋಟಿಸಿದ್ದು ತಾನೇ ಎಂದು ಐಎಸ್ ದೊಡ್ಡ ಸಾಧನೆ ಎನ್ನುವ ರೀತಿಯಲ್ಲಿ ಹೇಳಿಕೊಂಡಿದೆ.

ಒಟ್ಟಾರೆ ಇವೆಲ್ಲವುಗಳಿಂದ ಆದ ಸಾವು, ನೋವುಗಳನ್ನು ನೋಡುವಾಗ ಎದೆ ನಡುಗುತ್ತದೆ. ಬಲಿಷ್ಠ ದೇಶಗಳು ಸಮರೋಪಾದಿಯಲ್ಲಿ ಮಾಡಿಕೊಳ್ಳುತ್ತಿರುವ ಸಿದ್ಧತೆಗಳನ್ನು ಗಮನಿಸಿದರೆ ಇದು ಇಷ್ಟಕ್ಕೇ ನಿಲ್ಲುವುದಿಲ್ಲ, ಇನ್ನಷ್ಟು ಸಾವು ನೋವು, ಲೂಟಿಗಳು ನಡೆಯಲಿವೆ ಎಂದು ತೋರುತ್ತದೆ.

ಎಲ್ಲೋ ನಡೆಯತ್ತಿರುವ ಘಟನೆಗಳು ಇವು ಎಂದು ನಾವು ಬೆಚ್ಚಗೆ ಕುಳಿತುಕೊಳ್ಳುವ ಕಾಲ ಇದಲ್ಲ. ಇದು ದೇಶ ದೇಶಗಳ ಮೇಲಿನ ಯುದ್ಧವೂ ಅಲ್ಲ. ಇವೆಲ್ಲ ಧರ್ಮದ ಹೆಸರಿನಲ್ಲಿ ಆಗುತ್ತಿವೆ ಎಂದು ಕೈ ತೊಳೆದುಕೊಳ್ಳಲೂ ಆಗುವುದಿಲ್ಲ. ಆರಂಭದಲ್ಲಿ ಶಕ್ತ ರಾಷ್ಟ್ರಗಳು ತಮ್ಮ ಅನುಕೂಲಕ್ಕಾಗಿ ಹುಟ್ಟು ಹಾಕಿದ ಸಂಘಟನೆಗಳು ಈಗ ತಮ್ಮ ದಾತಾರರ ಅಂಕೆ ಮೀರಿ ಧರ್ಮವನ್ನು ಬಳಸಿಕೊಂಡು ಬೆಳೆಯುತ್ತಿವೆ.

ಧರ್ಮ ಎನ್ನುವ ಅಫೀಮನ್ನು ತಲೆಗೇರಿಸಿಕೊಂಡವರು ತಮ್ಮನ್ನು ತಾವು ಕೊಂದುಕೊಳ್ಳಲೂ ಹೇಸುವುದಿಲ್ಲ ಎನ್ನುವುದನ್ನು ಅರಿತು, ಜಗತ್ತಿನಾದ್ಯಂತ ಹಲವಾರು ಸಂಸ್ಥೆಗಳು ಅಮಾಯಕರನ್ನು ಪ್ರಚೋದಿಸಿ ತಮ್ಮ ಗುರಿಯನ್ನು ಸಾಧಿಸಿಕೊಳ್ಳುತ್ತಿವೆ. ಒಂದು ಸಂಘಟನೆಯನ್ನು ನಿರ್ಮೂಲಗೊಳಿಸಿದರೆ ಬೇರೆ ಬೇರೆ ಹೆಸರಿನಲ್ಲಿ ಅದೇ ಉದ್ದೇಶಕ್ಕಾಗಿ ಮತ್ತಷ್ಟು ಸಂಘಟನೆಗಳು ಉದ್ಭವವಾಗುತ್ತಿವೆ. ಇದಕ್ಕೆ ಮಾಲಿಯ ಮೇಲೆ ನಡೆದ ಅಟ್ಟಹಾಸವೇ ಸಾಕ್ಷಿ. ಹೆಸರು ಕೇಳರಿಯದ ಅಲ್-ಮೊರಾಬಿತೂನ್ ಎಂಬ ಸಂಘಟನೆಯೊಂದು 27 ಜನರನ್ನು ಕೊಂದು, ಹಲವರನ್ನು ಒತ್ತೆಯಾಳಾಗಿ ಇರಿಸಿಕೊಂಡಿತು.

ಧರ್ಮದ ಹೆಸರಿನಲ್ಲಿ ಈ ರಕ್ತದೋಕುಳಿ ನಡೆಯುತ್ತಿದ್ದರೂ ಇದಕ್ಕೆ ಅದೇ ಹೇತುವಲ್ಲ. ಹಲವು ದೇವರುಗಳನ್ನು ಪೂಜಿಸುವ ಹಲವು ಮತ, ಪಂಥಗಳಿರುವಂತೆ ಏಕದೇವೋಪಾಸನೆ ಮಾಡುವ ಧರ್ಮಗಳೂ ಇವೆ. ಇವೆಲ್ಲ ಸಹಜೀವನವನ್ನು ಬೋಧಿಸುತ್ತವೆ, ಧಾರ್ಮಿಕನಾದವನು ಮತ್ತೊಬ್ಬನನ್ನು ಕೊಲ್ಲಲು ಹೇಳಲಾರ ಎನ್ನುವುದೆಲ್ಲ ಪ್ರವಚನಕ್ಕೆ ಸರಿ. ವಾಸ್ತವದಲ್ಲಿ, ಅದು ಶ್ರೇಷ್ಠ, ಇದು ಕನಿಷ್ಠ ಎನ್ನುವ ತಾರತಮ್ಯದ ಮೇಲೆ ವ್ಯಕ್ತಿಗಳನ್ನು ವಿಭಜಿಸಿ, ಸಮಾಜವನ್ನು ಒಡೆಯಲಾಗುತ್ತದೆ.

ಧರ್ಮದ ಮೇಲೆ ಕಟ್ಟಿದ ದೇಶಗಳಾವುವೂ ನೆಮ್ಮದಿಯಿಂದಿಲ್ಲ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿದ್ದರೂ ಅಧಿಕಾರ, ಅಂತಸ್ತು ಮತ್ತಿತರ ಸ್ವಹಿತಾಸಕ್ತಿಗಳಿಗಾಗಿ ನಿರಂತರವಾಗಿ ಜನರನ್ನು ಎತ್ತಿಕಟ್ಟಲಾಗುತ್ತದೆ. ಮತ್ತೊಬ್ಬರ ಜಾತಿ, ಧರ್ಮದ ಬಗ್ಗೆ ಸಹಿಷ್ಣುತೆಯನ್ನು ಬೆಳೆಸಿಕೊಳ್ಳಲು ಹೇಳುವುದು ಸ್ವಲ್ಪ ಮಟ್ಟಿಗೆ ಸರಿಯಿರಬಹುದು. ಆದರೆ ಅದಕ್ಕಿಂತಲೂ ಗೌರವವನ್ನು ಬೆಳೆಸಿಕೊಳ್ಳುವುದು ಮುಖ್ಯವಾದುದು. ಪರಮತ, ಪರಧರ್ಮವನ್ನು ಗೌರವಿಸಿದಾಗ ಮಾತ್ರ ಶ್ರೇಷ್ಠತೆಯ ವ್ಯಸನ ಇಲ್ಲವಾಗುತ್ತದೆ.

ಈಗಿನ ಈ ವಿಷಮ ಪರಿಸ್ಥಿತಿಗೆ ಉಗ್ರಗಾಮಿಗಳಷ್ಟೇ ಬಲಿಷ್ಠ ರಾಷ್ಟ್ರಗಳೂ ಕಾರಣವಾದ್ದರಿಂದ ಪ್ರಾಂಜಲ ಮನಸ್ಸಿನಿಂದ ಪರಸ್ಪರ ತಪ್ಪೊಪ್ಪಿಕೊಳ್ಳಬೇಕಾಗಿದೆ. ಸ್ವಪ್ರತಿಷ್ಠೆ ಇದಕ್ಕೆ ಅಡ್ಡಿ ಬರಬಹುದಾದರೂ ಸ್ವಸ್ಥ ಜಗತ್ತಿನ ದೃಷ್ಟಿಯಿಂದ ಇಂತಹದೊಂದು ಕೆಲಸಕ್ಕೆ ಮುಂದಾಗಬೇಕು. ಪಶ್ಚಿಮದ ದೇಶಗಳು ಕಿಡಿಕಾರುವ  ಸಿರಿಯಾ ಅಧ್ಯಕ್ಷ ಬಸರ್ ಅಲ್‌ ಅಸ್ಸಾದ್‌ರನ್ನೂ ಸೇರಿಸಿ ಮಾತುಕತೆಗೊಂದು ವೇದಿಕೆ ಸಿದ್ಧವಾದರೆ ಒಳಿತು. ಇದರ ಜತೆಗೆ, ಬೇರೆಬೇರೆ ದೇಶಗಳಲ್ಲಿ ನೆಲೆಸಿರುವ ಭಯೋತ್ಪಾದಕರನ್ನು ನ್ಯಾಯಯುತ ವಿಚಾರಣೆಗೆ ಒಳಪಡಿಸುವ ತೀರ್ಮಾನವನ್ನೂ ಕೈಗೊಳ್ಳಬಹುದು.

ಕಣ್ಣಿಗೆ ಕಾಣದ ವೈರಿಯ ಮೇಲೆ ಯುದ್ಧವನ್ನು ಸಾರಿದರೆ ಅದಕ್ಕೆ ಬಲಿಯಾಗುವವರು ಹೆಚ್ಚಾಗಿ ನಿರಪರಾಧಿಗಳು, ಜಗತ್ತನ್ನು ಅರಿಯದ ಕಂದಮ್ಮಗಳು. ಯುದ್ಧೋನ್ಮಾದದಿಂದ ಮಾರಣಹೋಮ ಹೆಚ್ಚಾಗಬಲ್ಲದೇ ಹೊರತು ಶಾಂತಿ ನೆಲೆಸಲಾರದು. ಉಗ್ರಗಾಮಿಗಳು ತಮ್ಮ ಕೃತ್ಯದಿಂದ ಸಮಾಜದಲ್ಲಿ ಅಶಾಂತಿಯನ್ನು ಹೆಚ್ಚು ಮಾಡಬಲ್ಲರೇ ವಿನಾ ನೆಮ್ಮದಿಯ ಬದುಕನ್ನು ನೀಡಲಾರರು. ಹಿಂಸೆಯನ್ನು ದೂರೀಕರಿಸಿದಾಗ ಮಾತ್ರ ಇರುವುದೊಂದೇ ಭೂಮಿಯನ್ನು ನೆಲೆಸಲು ಯೋಗ್ಯವನ್ನಾಗಿ ಮಾಡಬಹುದು.

ಮಹಾತ್ಮ ಗಾಂಧಿ ಅಹಿಂಸೆಯ ವ್ರತವನ್ನು ಬೋಧಿಸಿದಾಗ ಅವರನ್ನು ಛೇಡಿಸಿದವರು, ವಿರೋಧಿಸಿದವರು ಇದ್ದರು. ಆದರೆ ಅವರು ಪಟ್ಟು ಬಿಡದೆ ಅದೇ ಮಾರ್ಗದಲ್ಲಿ ಸಾಗಿ ಬಲಿಷ್ಠ ಬ್ರಿಟಿಷ್ ಸರ್ಕಾರ ಮಂಡಿಯೂರುವಂತೆ ಮಾಡಿದರು. ಈಗ ಅವರಿದ್ದರೆ ಏನು ಮಾಡುತ್ತಿದ್ದರು ಎಂದು ಊಹಿಸಬಹುದು.

ಅವರ ಮಾದರಿಯನ್ನು ಅನುಸರಿಸಿದ ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲ ಸಾಕಷ್ಟು ನೋವುಂಡರೂ ತಮ್ಮ ಗುರಿಯನ್ನು ಸಾಧಿಸುವಲ್ಲಿ ಯಶಸ್ಸು ಕಂಡರು. ಇದಕ್ಕೆ ಇತ್ತೀಚಿನ ಉದಾಹರಣೆ ಮ್ಯಾನ್ಮಾರ್‌ನ ಆಂಗ್ ಸಾನ್ ಸೂಕಿ. ಪ್ರಬಲ ಸೇನಾಡಳಿತದ ವಿರುದ್ಧ ಅಹಿಂಸಾತ್ಮಕ ಹೋರಾಟ ಮಾಡಿದ ಆಕೆ ಈಗ ತಮ್ಮ ರಾಷ್ಟ್ರವನ್ನು ಮುನ್ನಡೆಸುವ ಹಂತಕ್ಕೆ ಬಂದಿದ್ದಾರೆ.

ಮತ್ತೊಬ್ಬ ಗಾಂಧಿ, ಮಂಡೇಲಾರಿಗಾಗಿ ನಾವು ಕಾಯಬೇಕಿಲ್ಲ. ಈಗಿರುವ ನಾಯಕರಲ್ಲಿ ಯಾರಾದರೂ ಧರ್ಮಗಳನ್ನು ಗೌರವದಿಂದ ಕಾಣುವ, ಅಹಿಂಸಾತ್ಮಕವಾಗಿ ಮನ ಒಲಿಸುವ ಕೆಲಸದ ನೇತೃತ್ವ ವಹಿಸಬಹುದು. ಅದು ನಮ್ಮಿಂದಲೇ ಯಾಕೆ ಪ್ರಾರಂಭವಾಗಬಾರದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT