ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಟ್ಟು ಹೊಯ್ಯಮ್ಮಾ ಕಾವಲಿಗೆ...

ಪ್ರಬಂಧ
Last Updated 23 ಮೇ 2015, 19:30 IST
ಅಕ್ಷರ ಗಾತ್ರ

ಈ ದೋಸೆ ಕಾವಲಿ ನಮ್ಮ ಮುಖದ ಹಾಗೆ! ಅದಕ್ಕೂ ಎರಡು ಸುಂದರ ಕಿವಿಗಳಿವೆ ಮತ್ತು ನಮ್ಮೊಳಗಿನ ಮೌನ ಮಾತುಕತೆಗಳನ್ನು ಅವುಗಳ ಮೂಲಕವೆ ಕೇಳಿಸಿಕೊಂಡು ಸುಮ್ಮನಿರುತ್ತದೆ. ಕಾವಲಿಗೆ ಕಣ್ಣುಗಳೂ ಇವೆ. ಅದೂ ಎರಡಲ್ಲ ಹತ್ತಾರು! ಈ ಕಣ್ಣುಗಳಿಗಾಗಿಯೆ ಮನೆಯೊಡತಿ ಗ್ಯಾಸ್‌ ಸ್ಟೌವಿನೆದುರು ನಿಂತು ಕಾಯುತ್ತಿರುತ್ತಾಳೆ! ಈ ಕಣ್ಣುಗಳು ಹಿಟ್ಟಿನ ಕಣ್ಣುಗಳು, ಈ ಕಣ್ಣುಗಳು ದೋಸೆಯ ಕಣ್ಣುಗಳು! ಈ ಪುಟಾಣಿ ಕಣ್ಣುಗಳು ದೋಸೆಯ ತುಂಬಾ ಮೂಡದೆ ಇದ್ದರೆ ಕಾವಲಿ ಬೇಸರಗೊಳ್ಳುತ್ತದೆ; ತನ್ನ ಮುಖ ಮುಚ್ಚಿಕೊಳ್ಳುವ ಪ್ರಯತ್ನವಾಗಿ ದೋಸೆಯ ಒಂದೆರಡು ತುಂಡುಗಳನ್ನು ಮುಖಕ್ಕೇ ಅಂಟಿಸಿಕೊಂಡುಬಿಡುತ್ತದೆ!

ಈ ಕಾವಲಿಯ ಹಿಂದೆ ದೊಡ್ಡದೊಂದು ಪರಂಪರೆಯೇ ಇದೆ! ಕಾವಲಿಯ ಹಿಂದೆ ಅಜ್ಜಿಯ ಪ್ರೀತಿ, ತಾಯಿಯ ವಾತ್ಸಲ್ಯ ಇರುವುದರಿಂದಲೇ ಅದು ಕಾವಲಿಯ ವೃತ್ತವನ್ನು ಮೀರಿ ಬೆಳೆಯುತ್ತದೆ! ಮದುವೆಯಾಗಿ ಮೊಟ್ಟ ಮೊದಲು ಬಾಡಿಗೆ ಮನೆ ಮಾಡಿದಾಗ ಇವಳಜ್ಜಿ ಕೊಟ್ಟ ಕಾವಲಿಯಲ್ಲಿದ್ದುದು ಬರೀ ದೋಸೆಯಲ್ಲ, ಪ್ರೀತಿಯ ಮಹಾ ಆಸೆಯೂ ಅದರೊಳಗಿತ್ತು! ಅದು ಮೊಮ್ಮಗಳ ಮನೆಯಲ್ಲಿ ಹಸಿವಿರಬಾರದು ಎನ್ನುವ ಆಸೆ. ಅದು ಮನೆ ತುಂಬಾ ನಗು ಉಕ್ಕಬೇಕು, ಬಯಸಿದ್ದೆಲ್ಲಾ ಸಿಕ್ಕಬೇಕು ಎನ್ನುವ ಆಸೆ!

ಅದಕ್ಕೇ ಅಜ್ಜಿ ಮದುವೆಗಿನ್ನೂ ಎರಡು ತಿಂಗಳಿರುವಾಗಲೆ ಆ ಕಾವಲಿ ಖರೀದಿಸಿ, ಅದನ್ನು ತನ್ನ ಕೈ ಗುಣದಿಂದ ಪಳಗಿಸಿ ಪುಟ್ಟಿಗಾಗಿ ತೆಗೆದಿರಿಸಿದ್ದಲ್ಲವೆ? ಹೊಸತನ್ನು ಹಾಗೆಯೇ ಕೊಟ್ಟರೆ ಹೊಸ ಮದುಮಗಳ ಪಳಗದ ಕೈಗೆ ದೋಸೆ ಎದ್ದೀತೆ? ಮಗುವಿಗೆ ಎಣ್ಣೆ ಹಚ್ಚಿದಂತೆ ಕಾವಲಿಗೂ ಎಣ್ಣೆ ಸವರಿಟ್ಟು ಅದಕ್ಕೆ ಅಂಟಿದ ಕಬ್ಬಿಣದ ಕಲ್ಮಶ ತೆಗೆದು, ನಾಲ್ಕಾರು ಬಾರಿ ತಿಕ್ಕಿ ತೊಳೆದ ಮೇಲೂ ಅಜ್ಜಿಗೆ ಸಮಾಧಾನವೆ ಇಲ್ಲ! ಅದೇ ಕಾವಲಿಯಲ್ಲಿ ಐದಾರು ಬಗೆಯ ದೋಸೆ ಮಾಡಿ ಮನೆಯಲ್ಲಿದ್ದವರಿಗೆ ಉಣಬಡಿಸಿದ ಮೇಲೆಯೆ ಅಜ್ಜಿಗೆ ಖುಷಿಯಾಗುವುದಲ್ಲವೆ?

ಅದು ‘ಬರಿಯಕ್ಕಿ ದೋಸೆಯೂ ಏಳುತ್ತದೆ’ ಎಂದು ಹೇಳಿ ಅಜ್ಜಿ ಕೊಟ್ಟ ಕಾವಲಿ! ಹೌದಲ್ಲಾ? ದೋಸೆ ಹಾಕಲು, ಅದನ್ನು ಸುಂದರವಾಗಿ ಎಲ್ಲೂ ಮುರಿಯದಂತೆ ಎಬ್ಬಿಸಲು ನನ್ನವಳಿಗೆ ಆಗಲೂ ಕಷ್ಟವಾಗಿರಲೇ ಇಲ್ಲ! ಇದು ಅಜ್ಜಿ ಕೊಟ್ಟ ಬಳುವಳಿಯ ಸ್ಪರ್ಶ! ಈ ಕಾವಲಿಯಿದೆಯಲ್ಲಾ ಅದು ‘ಅಜ್ಜಿ–ಅರ್ಜಿತ–ಆಸ್ತಿ!’ ಇದು ಪಿತ್ರಾರ್ಜಿತ ಆಸ್ತಿಗಿಂತಲೂ ಅಮೂಲ್ಯವಾದುದು! ತಂದೆಯಿಂದ ಬರಬಹುದಾದ ಆಸ್ತಿಯಲ್ಲಿರುವ ದಾಯಾದಿ ಕಲಹ ಇಲ್ಲಿ ಇಲ್ಲವೇ ಇಲ್ಲ! ಕಾವಲಿ ತನ್ನನ್ನು ತಾನೇ ಬಿಸಿಗೆ ಒಡ್ಡಿಕೊಳ್ಳಬಹುದು! ಆದರೆ ಅದು ಅಣ್ಣ–ತಮ್ಮ, ತಂಗಿಯ ನಡುವಿರುವ ಸಂಬಂಧವನ್ನು ಕುದಿಸುವುದೇ ಇಲ್ಲ, ಬಿಸಿಮಾಡುವುದೇ ಇಲ್ಲ! ಅಷ್ಟೇ ಏಕೆ, ಇದು ಹೆಣ್ಣುಮಕ್ಕಳಿಗೆ ಮಾತ್ರ ಸೇರುವ ಆಸ್ತಿ! ಅಮ್ಮನ ಚಿನ್ನಕ್ಕಾದರೆ ಮಗನೂ ಕೈ ಚಾಚುತ್ತಾನೆ. ಆದರೆ ಈ ಕಾವಲಿ ಯಾರಿಗೆ ಬೇಕು? ಕೊಟ್ಟರೂ ಬೇಡವೆಂದು ಹೇಳಿ ಉದಾರತೆ ಮೆರೆಯಲು ಕಾವಲಿ ಬೇಕೇ ಬೇಕು!

ಹಿಟ್ಟು ಎಷ್ಟು ಮುಖ್ಯವೋ ಅದಕ್ಕಿಂತ ಹೆಚ್ಚು ಮುಖ್ಯ ಈ ಕಾವಲಿ! ಹಿಟ್ಟು ಹದವಾಗಿದ್ದೂ ಕಾವಲಿ ಮುದವಾಗಿಲ್ಲದಿದ್ದರೆ ದೋಸೆ ಏಳುವುದಿಲ್ಲ! ಅದಕ್ಕೇ ಇರಬೇಕು, ಹಳೆಯ ಕಾವಲಿಗಿರುವ ‘ಹೊಸತನ’ ಹೊಸ ಕಾವಲಿಗಿರುವುದಿಲ್ಲ! ಈ ಕಾವಲಿಗೆ ಎಷ್ಟು ಬಿಸಿ ಮುಟ್ಟಬೇಕು, ಹೇಗೆ ಕಾವಲಿಡೀ ಹರಡಬೇಕು ಎಂದು ತಿಳಿಯುವುದು ಅದರೊಂದಿಗೇ ಬೆಳೆದ ಗೃಹಿಣಿಗೆ ಮಾತ್ರ! ಮಗಳು ತಾಯಿಯ ಮಾತು ಕೇಳಿ ದೋಸೆ ಹೊಯ್ದರೆ ಬಚಾವ್‌! ಅದಿಲ್ಲದೆ ತಾನೇ ಬುದ್ಧಿವಂತೆಯೆಂದು ವರಸೆ ಮಾಡಿದರೆ ಕಾವಲಿ ದೋಸೆ ಬಿಟ್ಟುಕೊಡುವುದೇ ಇಲ್ಲ!

ಇಲ್ಲಿ ಅಜ್ಜಿ ಮತ್ತೊಂದು ಕಾರಣಕ್ಕಾಗಿಯೇ ನೆನಪಾಗುತ್ತಾಳೆ! ಕಾವಲಿಗೆ ತಕ್ಕ  ಸಟ್ಟುಗ ಬೇಕು ಎನ್ನುವ ಅಜ್ಜಿ ಮಾತು ನೆನಪಾಗುತ್ತದೆ! ದೊಡ್ಡದೂ ಅಲ್ಲ, ಸಣ್ಣದೂ ಅಲ್ಲ ಎನ್ನುವುದು ಅಜ್ಜಿ ಅಳತೆ! ಕಾವಲಿಯ ಮೇಲಿಟ್ಟಾಗ ಅಂಗೈ ಅಗಲದಷ್ಟು ಹೊರಬರಲಿ ಎನ್ನುವ ಲೆಕ್ಕಾಚಾರ ಅವಳದ್ದು! ಸ್ವಲ್ಪ ಹೆಚ್ಚು ಕಡಿಮೆಯಾದರೇನಂತೆ ಎನ್ನುವ ಕಿರಿಯರ ಕಿರಿ ಕಿರಿಗೆ ಅವಳು ಬಗ್ಗಿದ್ದೇ ಇಲ್ಲ! ದೊಡ್ಡದಾದರೆ ದೋಸೆ ಅಂಟಿಕೊಂಡೀತು ಎಂದಾಳು! ಚಿಕ್ಕದಾದರೆ ದೋಸೆ ಏಳದೆ ಮುಷ್ಕರ ಹೂಡೀತು ಎಂದಾಳು! ಅಂತೂ ಕಾವಲಿಗೆ ಮುಚ್ಚುವ ಅರ್ಧ ಗೋಲಾಕಾರದ ಮುಚ್ಚಳವೂ ಹೇಳಿ ಮಾಡಿಸಿದಂತಿರಬೇಕು ಎನ್ನುವ ಅಜ್ಜಿಗೆ ಇರುವುದು ‘ತಿನ್ನುವ ದಾಹ’ವಲ್ಲ, ತನ್ನನ್ನೇ ನಂಬಿದ ಜೀವಗಳಿಗೆ ರುಚಿ ರುಚಿಯಾದ ದೋಸೆ ‘ತಿನ್ನಿಸುವ ಮೋಹ!’.

ದೋಸೆ ಹೊಯ್ಯುವುದೂ ಒಂದು ದಿವ್ಯ ಕಲೆಯೆ! ಅಜ್ಜಿಯೋ ದೊಡ್ಡಮ್ಮನೋ ಹೆಂಡತಿಯೋ ದೋಸೆ ಹೊಯ್ಯುವುದನ್ನು ನೋಡುವಾಗ ಇದೇನು ಮಹಾ ಎನಿಸುವುದೂ ಸಾಮಾನ್ಯವೆ! ಅದಕ್ಕೇ ಅಲ್ಲವೆ, ಗಂಡ ಮಕ್ಕಳು ಬಿಸಿ ಬಿಸಿ ದೋಸೆಗಾಗಿ ಕಾಯುತ್ತಾ ‘ಇನ್ನೂ ಆಗಿಲ್ಲವೆ’ ಎಂದು ಗಲಾಟೆ ಮಾಡುವುದು? ಆದರೆ ನಾವೇ ಸ್ವತಃ ದೋಸೆ ಹೊಯ್ಯುವಾಗಲೇ ಅದರ ಕಷ್ಟ–ನಷ್ಟ  ತಿಳಿಯುವುದು. ಏನುಮಾಡಿದರೂ ಏಳದ ದೋಸೆಯೆದುರು ಮುಖ ತಗ್ಗಿಸಿ ನಿಂತಾಗ ‘ಈಗ ಗೊತ್ತಾಯ್ತೆ?’ ಎಂದು ಹೆಂಡತಿ ಸ್ವಲ್ಪ ಚುಚ್ಚಿದಾಗ ಸಿಟ್ಟಾಗದೆ ಇದ್ದರೆ ನೀವು ಒಳ್ಳೆಯ ಗಂಡನೆಂದು ಅರ್ಥ! ಸಿಟ್ಟಾದಿರೋ ‘ದೋಸೆ ಶಾಪ’ ತಟ್ಟಿಯೇ ತಟ್ಟುತ್ತದೆ!

ಇರಲಿ ಬಿಡಿ. ಹಿಟ್ಟಿನ ಪಾತ್ರೆಗೆ ಸೌಟು ಹಾಕಿ ಒಂದೆರಡು ಸಲ ತಿರುಗಿಸಿ ಹಿಟ್ಟು ದಪ್ಪವಾಗಿದೆಯೆ? ಸರಿಯಾಗಿದೆಯೆ? ಎಂದು ಕಣ್ಣಂದಾಜು ಮಾಡುವುದು ಹೊಯ್ಯುವ ಕ್ರಿಯೆಯ ಮೊದಲ ಹಂತ! ಆ ಮೇಲೆ ಹಿಟ್ಟನ್ನು ಸೌಟಿನಲ್ಲಿ ತೆಗೆದು ಕಾವಲಿಯ ನಡು ಮಧ್ಯಕ್ಕೆ ಸುರಿದು, ಅದರ ಮೇಲೆ ಸೌಟನ್ನು ವೃತ್ತಾಕಾರವಾಗಿ ತಿರುಗಿಸುತ್ತ ಹಿಟ್ಟು ಕಾವಲಿಯನ್ನು ಹದವಾಗಿ ವ್ಯಾಪಿಸುವಂತೆ ಮಾಡುವುದೊಂದು ಮಹಾ ಕೈಚಳಕವೆ ಸರಿ! ಇದೀಗ ಮುಚ್ಚಳ ಮುಚ್ಚಿ ಕಾಯುವ ಕೆಲಸ! ಎಷ್ಟು ಹೊತ್ತು? ಇದು ಗಡಿಯಾರ ನೋಡಿಕೊಂಡು ಮಾಡುವ ಕೆಲಸವಲ್ಲ! ಇದು ಅಂದಾಜಿನ ಅನುಭವ! ಆ ಅಂದಾಜಿನ ಕ್ಷಣ ಮುಗಿದಾಗ ಮುಚ್ಚಳ ಬದಿಗಿರಿಸಿ ದೋಸೆ ಎಬ್ಬಿಸುವ ಅತೀ ಕಷ್ಟದ ಕೆಲಸ ನಡೆಯುತ್ತದೆ! ದೋಸೆಯನ್ನು ಕಾವಲಿಯಿಂದ ಬೇರ್ಪಡಿಸಿ ಗಂಡನ ತಟ್ಟೆಗೆ ಹಾಕುವಾಗ ಅನುಭವಿಸುವ ಸುಖವನ್ನು ಹೆಂಡತಿ ಯಾರ ಬಳಿಯಲ್ಲೂ ಹೇಳಿಕೊಳ್ಳುವುದೇ ಇಲ್ಲ!

ಎಷ್ಟೊಂದು ಬಗೆಯ ದೋಸೆಗಳಿಗೆ ಈ ಕಾವಲಿ ಸಾಕ್ಷಿಯಾಗಿದೆಯೆಂದು ಯಾರೂ ಲೆಕ್ಕವಿಟ್ಟವರೆ ಇಲ್ಲ! ಹೋಗಲಿ ಬಿಡಿ ಎಂದರೆ ಒಂದು ದಿನದಲ್ಲೆ ಹೊಯ್ದ ದೋಸೆಗಳ ಲೆಕ್ಕ ತಿಂದವರಿಗೂ ಇರುವುದಿಲ್ಲ, ತಿನ್ನಿಸಿದವರಿಗೂ ಇರುವುದಿಲ್ಲ! ಲೆಕ್ಕವಿಟ್ಟರೆ ಕಾವಲಿಗೆ ಅವಮಾನ ಮಾಡಿದಂತೆ! ಅಜ್ಜಿಯಿದ್ದಿದ್ದರೆ ಹೀಗೆ ಹೇಳುತ್ತಿದ್ದಳೋ ಏನೋ– ‘ಲೆಕ್ಕವಿಟ್ಟರೆ ತಿಂದವರಿಗೆ ಹೊಟ್ಟೆ ಉಬ್ಬರಿಸೀತು’. ಮನೆಗೆ ಬಂದ ನೆಂಟರೊಬ್ಬರು ಇಷ್ಟು ದೋಸೆ ತಿಂದರು ಎಂದು ನಕ್ಕರೂ ಅಜ್ಜಿಗೆ ಸಿಟ್ಟು ಬರುತ್ತಿತ್ತು? ಎಲ್ಲರೂ ನಿಮ್ಮ ಹಾಗಲ್ಲ! ಹಿಂದಿನವರು ತಿನ್ನುವುದೇ ಹೀಗೆ; ತಿನ್ನುವುದಕ್ಕೇ ದಾಕ್ಷಿಣ್ಯ ಮಾಡಿದರೆ ಹೇಗೆ ಎಂದು ಬುದ್ಧಿ ಹೇಳಿ ದೋಸೆಯ ಮರ್ಯಾದೆ ಉಳಿಸುತ್ತಿದ್ದಳು!

ಈ ಕಾವಲಿ ನಮ್ಮ ಕನಸಿನ ಹಾಗೆ ಬಹುರೂಪಿ, ನಮ್ಮ ಬಾಯಿ ಚಪಲದ ಹಾಗೆ ವಿಶ್ವರೂಪಿ! ಹಸಿವಿಗೆ ಇತಿಯಿದೆ! ಆದರೆ ‘ತೊಡುವಿಗೆ’ ಅಂದರೆ ಬಾಯಿ ಚಪಲಕ್ಕೆ ಮಿತಿಯಿದೆಯೆ? ಅದಕ್ಕೆ ಸಾದಾ ದೋಸೆ, ಉತ್ತಪ್ಪ, ನೀರ್‌ದೋಸೆ, ಮಸಾಲೆದೋಸೆ, ಸೆಟ್‌ದೋಸೆ, ರವಾದೋಸೆ, ಒಗ್ಗರಣೆದೋಸೆ, ಮೈದಾದೋಸೆಗಳೆಲ್ಲಾ ಬೇಕು! ಇಷ್ಟಕ್ಕೂ ತೃಪ್ತಿಯಾಗದೆ ತೊಡು ಮುಳ್ಳುಸೌತೆ, ಕ್ಯಾರೆಟ್‌, ಬೀಟ್‌ರೂಟುಗಳ ದೋಸೆ ಬೇಕು ಎನ್ನುತ್ತದೆ! ಅದೇ ಕಾವಲಿ, ಬೇರೆ ಬೇರೆ ದೋಸೆಗಳ ವೈವಿಧ್ಯ ಸಿರಿ! ಈ ಕಾವಲಿ ಸೃಷ್ಟಿಸುವ ಮಾಯಾಜಗತ್ತಿನಲ್ಲಿ ‘ದೋಸೆ ಮೋಡಿ’ ನಡೆಯುತ್ತದೆ! ಕಾವಲಿ ಎನ್ನುವ ರಂಗಮಂಚ ಇಲ್ಲದಿರುತ್ತಿದ್ದರೆ ಹಸಿವು ತಣಿಸುವ ನಾಟಕ, ನೃತ್ಯ, ಯಕ್ಷಗಾನಗಳು ನಡೆಯುತ್ತಲೇ ಇರುತ್ತಿರಲಿಲ್ಲ!

ರಂಗಮಂಚ ಈಗ ಸ್ವಲ್ಪ ಬದಲಾಗಿದೆ! ಈಗ ‘ಪ್ರಯೋಗ’ ಸರಳವಾಗಲಿ ಎಂದು ನಾನ್‌ಸ್ಟಿಕ್‌ ಬಯಲು ರಂಗಮಂಚದ ಪ್ರವೇಶವಾಗಿದೆ! ಇಲ್ಲಿ ಯಾವ ಪಾತ್ರವೂ, ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ! ಮರುದಿನ ನೋಡಿದರೆ ನಾಟಕ ನಡೆದ ಕುರುಹೂ ಕಾಣದಂತೆ ಇಡೀ ಬಯಲು ಸುಮ್ಮನಿರುತ್ತದೆ!
ದೋಸೆ ಏಳುವುದಿಲ್ಲ ಎನ್ನುವವರಿಗಾಗಿ ಎದ್ದುಬಂದ ‘ಅಂಟಿಕೊಳ್ಳದ ಕಾವಲಿ’ಯ ಆತ್ಮೀಯತೆಯೇ ಬೇರೆ. ಹಿಂದಿನ ಪಳೆಯುಳಿಕೆಯಂತಿರುವ ಕಾವಲಿಯ ಅನುಬಂಧವೇ ಬೇರೆ! ನಾನ್‌ಸ್ಟಿಕ್ಕಿನೊಳಗಿಂದ ಎದ್ದುಬಂದ ದೋಸೆಯ ರುಚಿಯೂ ಬೇರೆ! ಅದು ಪರಂಪರೆಯ ರುಚಿಗೆ ಸಾಟಿಯಾಗಲಾರದು! ದೋಸೆಗಿರುವ ‘ರೋಸ್‌್ಟ ತನ’ ಹದವಾಗಿ ಕೆಂಪಾಗುವುದು ಎನ್ನುತ್ತೇವಲ್ಲಾ? ಅದು ಅಂಟುರಹಿತ ದೋಸೆಗೆ ಒಗ್ಗುವುದೆ ಇಲ್ಲ! ಅಮ್ಮ ಅದನ್ನು ಮುಟ್ಟಿಯೂ ನೋಡಲಾರಳು! ಮಗಳಿಗದು ಇಷ್ಟವಾದರೂ ಆದೀತು! ಆದರೆ ಎಷ್ಟು ದಿನ?

ಅಮ್ಮನಿಗೆ ಫೋನ್‌ ಮಾಡಿದ ಮಗಳು ‘ಮುಂದಿನ ತಿಂಗಳು ಊರಿಗೆ ಬರುತ್ತಿದ್ದೇನೆ, ನನಗೊಂದು ದೋಸೆ ಕಾವಲಿ ಮತ್ತು ಗುಳಿಯಪ್ಪದ ಕಾವಲಿ ತೆಗೆದಿಡು’ ಎಂದು ಹೇಳುವಾಗ ಕಾವಲಿಯ ಸಂಚಾರೀ ಭಾವ ಮತ್ತೆ ಆರಂಭವಾಗುತ್ತದೆ! ಅಮ್ಮ ಪೇಟೆ ಸವಾರಿ ಮಾಡಿಯೇ ಮಾಡುತ್ತಾಳೆ, ಕಾವಲಿ ಕೊಂಡು ತರುತ್ತಾಳೆ ಮತ್ತು ಎಣ್ಣೆ ಹಚ್ಚಿ ಅದರ ಆರೈಕೆ ಮಾಡಿಯೇ ಮಾಡುತ್ತಾಳೆ! ಒಂದು ಬೆಳ್ಳಂ ಬೆಳಿಗ್ಗೆ ಇವತ್ತು ದೋಸೆ ಹೇಗಿದೆಯೆಂದು ಗಂಡನಿಗೆ ಯಕ್ಷ ಪ್ರಶ್ನೆ ಹಾಕಿ ಹೊಸ ಕಾವಲಿಯ ದೋಸೆಯೆಂದು ತಾನೇ ಉತ್ತರ ನೀಡಿ ಖುಷಿ ಪಡುವಾಗ ಕಾವಲಿ ಹಸ್ತಾಂತರಕ್ಕೆ ಸಿದ್ಧವಾಗುತ್ತದೆ!

“ಹಿಟ್ಟು ಹೊಯ್ಯಮ್ಮಾ ಕಾವಲಿಗೆ
ದೋಸೆಗೆ ಸಾವಿರ ಕಣ್ಣು ಬರಲಿ;
ದೋಸೆ ಎತ್ತಮ್ಮಾ ಕಾವಲಿಯಿಂದ
ಮರಿಮಗನ ಹಸಿವು ತಣ್ಣಗಾಗಲಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT