ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಾಲಯದ ತಪ್ಪಲಿನ ರಾಜ್ಯಗಳಲ್ಲಿ ಕಾದಿದೆ ಅಪಾಯ

Last Updated 26 ಏಪ್ರಿಲ್ 2015, 19:45 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಭೀಕರ ಭೂಕಂಪನ ನೇಪಾಳವನ್ನು ನಡುಗಿಸಿರುವ ಹೊತ್ತಲ್ಲೇ ಉತ್ತರ ಭಾರತದಲ್ಲೂ ಇದೇ ಬಗೆಯ ಅನಾಹುತವಾಗುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಹಿಮಾಲಯ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ಇರುವ ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್‌ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಯಾವುದೇ ಕ್ಷಣದಲ್ಲಿ ಭೂಕಂಪನವಾಗುವ ಸಂಭವವಿದೆ. ಅದು ಇವತ್ತೇ ಆಗಬಹುದು ಅಥವಾ 50 ವರ್ಷದ ನಂತರವೂ ಆಗಬಹುದು.
ಈ ಭಾಗದಲ್ಲಿ ಭೂಮಿಯಾಳದಲ್ಲಿ ಭೂಫಲಕಗಳ ಒತ್ತಡದಿಂದ ಬಿರುಕು ಮೂಡಿರುವುದನ್ನು ಗುರುತಿಸಲಾಗಿದೆ ಎಂದು ಅಹಮದಾಬಾದ್‌ ಮೂಲದ ಭೂಕಂಪನ ಸಂಶೋಧನಾ ಸಂಸ್ಥೆ ಮಹಾನಿರ್ದೇಶಕ ಬಿ.ಕೆ. ರಸ್ತೋಗಿ  ಅವರು ತಿಳಿಸಿದ್ದಾರೆ.

ಸುಮಾರು 4 ಕೋಟಿ ವರ್ಷಗಳ ಹಿಂದೆ ಭಾರತ ಭೂಖಂಡ ಈಗ ಹಿಮಾಲಯ ಪರ್ವತ ಶ್ರೇಣಿ ಇರುವ ಜಾಗದಿಂದ 5,000 ಕಿ.ಮೀ. ದಕ್ಷಿಣಕ್ಕೆ ಇತ್ತು. ಭೂಖಂಡಗಳ ಸ್ಥಳಾಂತರದಿಂದಾಗಿ ಭಾರತ ಉಪಖಂಡವನ್ನು ಹೊತ್ತ ಭೂಫಲಕ, ಏಷ್ಯಾ ಖಂಡವನ್ನು ಹೊತ್ತಿರುವ ಭೂಫಲಕದ ಸಮೀಪ ಬಂತು. ಇವೆರಡ ಘರ್ಷಣೆಯಿಂದಾಗಿ ಭೂಮಿ ಮೇಲೆದ್ದು ಮಡಿಕೆಯಾಗಿ ಹಿಮಾಲಯ ಪರ್ವತ ಶ್ರೇಣಿ ರೂಪುಗೊಂಡಿದೆ. ಈಗಲೂ ಭಾರತ ಭೂಖಂಡ ಏಷ್ಯಾ ಭೂಖಂಡವನ್ನು ಒತ್ತುತ್ತಿದೆ. ಈ ಚಲನೆ ವರ್ಷಕ್ಕೆ 2 ಸೆಂ.ಮೀಗಳಷ್ಟಿದೆ.

ಭೂಫಲಕಗಳ ಚಲನೆ ಕಾಲಕ್ರಮೇಣ ಒತ್ತಡವನ್ನು ಸೃಷ್ಟಿಸುತ್ತದೆ. ಈ ಒತ್ತಡದಿಂದಾಗಿ ಭೂಮಿಯ ಮೇಲ್ಮೈನಲ್ಲಿರುವ ಬಂಡೆಗಳು ಒಡೆಯುತ್ತವೆ. ಒತ್ತಡ ಎಲ್ಲೆಡೆ ಹರಡಿಹೋಗುತ್ತದೆ. ಆದರೆ, ಒತ್ತಡ ಮಿತಿಮೀರಿದಾಗ ಎಲ್ಲಿ ಬೇಕಾದರೂ ಕಂಪನವಾಗಬಹುದು. 
ಈ ಒತ್ತಡ ಹೆಚ್ಚಿದಾಗ ಪ್ರತಿ  100 ಕಿ.ಮೀ. ಅಂತರದ ಪ್ರದೇಶವೂ ಭೂಕಂಪನಕ್ಕೆ ಒಳಗಾಗುವ ಸಾಧ್ಯತೆಯಿದೆ.

ಹಿಮಾಲಯ ಪರ್ವತ ಶ್ರೇಣಿ ಕಾಶ್ಮೀರದಿಂದ ಅರುಣಾಚಲಪ್ರದೇಶದವರೆಗೆ  2000 ಕಿ.ಮೀ. ಉದ್ದಕ್ಕೆ ಹರಡಿಕೊಂಡಿದೆ. ಇಲ್ಲಿನ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಅತಿ ತೀವ್ರತೆಯ ಭೂಕಂಪನವಾಗುವ ಸಾಧ್ಯತೆಯಿದೆ.

ಶನಿವಾರದ ಭೂಕಂಪನ  ಭೂಮಿಯಾಳದ ಬಂಡೆಗಳನ್ನು 4 ಮೀಟರ್‌ಗಳಷ್ಟು ಮೇಲಕ್ಕೆತ್ತಿದೆ. ಭೂಕಂಪನದ ಕೇಂದ್ರದಿಂದ 100 ಕಿ.ಮೀ. ದೂರದವರೆಗೆ 50 ಮೀಟರ್‌ ವ್ಯಾಪ್ತಿಯಲ್ಲಿ ಭೂಮಿ ಬಿರುಕುಬಿಟ್ಟಿದೆ. ಭೂಕಂಪನ ಕೇಂದ್ರ ತೀವ್ರ ಭೂಕಂಪನವಾಗುವ ಸಾಧ್ಯತೆಯಿರುವ ಆಲ್ಫೈನ್‌ – ಹಿಮಾಲಯನ್‌ ವಲಯದಲ್ಲಿ ಬರುತ್ತಿದೆ.

ನ್ಯೂಜಿಲೆಂಡ್‌ನಿಂದ ಆರಂಭವಾಗುವ ಈ ಭೂಕಂಪನ ವಲಯ, ಆಸ್ಟ್ರೇಲಿಯಾ, ಇಂಡೋನೇಷ್ಯಾ, ಅಂಡಮಾನ್‌, ನಿಕೋಬಾರ್‌ ದ್ವೀಪಸಮೂಹ, ಈಶಾನ್ಯ ಭಾರತ ಅಲ್ಲಿಂದ ನೇಪಾಳ, ಜಮ್ಮು ಮತ್ತು ಕಾಶ್ಮೀರ, ಆಫ್ಘಾನಿಸ್ತಾನ, ಮೆಡಿಟರೇನಿಯನ್‌ ಸಮುದ್ರದ ಮೂಲಕ ಹಾಯ್ದು ಯುರೋಪ್‌ನಲ್ಲಿ ಅಂತ್ಯಗೊಳ್ಳುತ್ತದೆ. ಜಗತ್ತಿನಲ್ಲಿ ಸಂಭವಿಸುವ ಶೇ 10ರಷ್ಟು ಭೂಕಂಪನಗಳು ಈ ವಲಯದಲ್ಲಿ ಆಗುತ್ತವೆ ಎಂದು  ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಪಿ. ಆರ್‌. ವೈದ್ಯ ತಿಳಿಸಿದ್ದಾರೆ.

ಜಗತ್ತಿನ ಅತಿದೊಡ್ಡ ಭೂಕಂಪನ ವಲಯವಾದ ಪೆಸಿಫಿಕ್‌ ವಲಯ, ಪೆಸಿಫಿಕ್‌ ಮಹಾಸಾಗರದ ತೀರದ ಉದ್ದಕ್ಕೂ ಹರಡಿಕೊಂಡಿದ್ದು, ಜಗತ್ತಿನ ಶೇ 80ರಷ್ಟು ದೊಡ್ಡ ಭೂಕಂಪನಗಳು ಅಲ್ಲೇ ಸಂಭವಿಸುತ್ತವೆ. ಮತ್ತೊಂದು ಕಂಪನ ವಲಯವಾದ  ಮಿಡ್‌ಅಟ್ಲಾಂಟಿಕ್‌ ‌ ರಿಜ್‌ ಅಟ್ಲಾಂಟಿಕ್‌ ಮಹಾಸಾಗರವನ್ನು ಸೀಳಿಕೊಂಡು ಸಾಗಿದೆ. ಉತ್ತರದಲ್ಲಿ ಇದು ಯುರೇಷ್ಯಾ ಫಲಕ ಹಾಗೂ ಉತ್ತರ ಅಮೆರಿಕ ಫಲಕಗಳನ್ನು ಬೇರ್ಪಡಿಸುತ್ತದೆ. ದಕ್ಷಿಣದಲ್ಲಿ ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕ ಫಲಕಗಳನ್ನು ಬೇರ್ಪಡಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT