ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಮೆ–ನಿರಭಿಮಾನದ ನಡುವೆ...

Last Updated 18 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಐತಿಹಾಸಿಕ ಹಾಗೂ ಪ್ರಾಕೃತಿಕ ಪರಂಪರೆಯ ತಾಣಗಳು ನಮ್ಮ ಹೆಮ್ಮೆಯ ಪ್ರತೀಕ ಮಾತ್ರವಲ್ಲ, ಅವು ಜಗತ್ತಿಗೆ ನಮ್ಮ ಹೆಚ್ಚುಗಾರಿಕೆಯನ್ನು ತೋರುವ ಬೆಳಕಿಂಡಿಗಳು. ಈ ಸಾಂಸ್ಕೃತಿಕ ತಾಣಗಳ ಬಗ್ಗೆ ಹಲವು ದೇಶಗಳು ಉತ್ಸಾಹ ವ್ಯಕ್ತಪಡಿಸುತ್ತಿದ್ದರೆ, ಕೆಲವೆಡೆ ಇರುವುದನ್ನು ಹಾಳುಗೆಡಹುವ ಪ್ರಯತ್ನಗಳೂ ನಡೆದಿವೆ. ಈ ಹೆಮ್ಮೆ ಮತ್ತು ಅಭಿಮಾನ ಶೂನ್ಯತೆಗಳ ನಡುವೆ ಮತ್ತೊಂದು ‘ವಿಶ್ವ ಪರಂಪರೆ ದಿನ’ (ಏ. 18) ಸಂದುಹೋಗಿದೆ.

ಅರವತ್ತು ವರ್ಷಗಳ ಹಿಂದಿನ ಮಾತು. ಈಜಿಪ್ಟ್‌ ಸರ್ಕಾರ ಬೃಹತ್ ಅಣೆಕಟ್ಟೊಂದನ್ನು ನಿರ್ಮಿಸಲು ನಿರ್ಧರಿಸಿತು. ಅದುವೇ ಅಸ್ವಾನ್ ಅಣೆಕಟ್ಟು. ಸಮೃದ್ಧ ನಾಗರಿಕತೆಯ ಹಲವು ಕುರುಹುಗಳನ್ನು ತನ್ನಲ್ಲಿಟ್ಟುಕೊಂಡ ನೈಲ್ ನದಿಯ ತಟದಲ್ಲಿರುವ, ಪ್ರಾಚೀನ ನುಬಿಯಾ ಕಣಿವೆಯ ಅಗಾಧವಾದ ಸಾಂಸ್ಕೃತಿಕ ಸಂಪತ್ತು ಅದೇ ಜಲಾಶಯದ ನೀರಿನಲ್ಲಿ ಮುಳುಗಡೆಯಾಗಿ ನಾಮಾವಶೇಷವಾಗುವ ಅಪಾಯದ ಮುನ್ಸೂಚನೆಯೂ ಚರ್ಚೆಗೆ ಬಂತು.

ಹೀಗೆ ವಿಶ್ವದ ಗಮನ ಸೆಳೆದ ನುಬಿಯಾ ಕಣಿವೆಯ ಪಾರಂಪರಿಕ ಸ್ಮಾರಕಗಳನ್ನು ಉಳಿಸುವ ಬಗೆಗೆ ಸಾರ್ವಜನಿಕ ಎಚ್ಚರವೊಂದು ರೂಪುಗೊಂಡಿತು. ಸಾವಿರಾರು ವರ್ಷಗಳ ಹಿಂದಿನ ಅತ್ಯುನ್ನತ ನಾಗರಿಕತೆಯ ಪ್ರತೀಕಗಳಾದ ಭವ್ಯ ಕಟ್ಟಡಗಳು, ನೂರಾರು ಸ್ಮಾರಕಗಳು ಪ್ರಾಕೃತಿಕ ವಿಕೋಪಗಳಿಂದ ಮತ್ತು ಮನುಷ್ಯರ ಅವಜ್ಞೆಯಿಂದ ಅಳಿವಿನಂಚಿಗೆ ಬಂದು ನಿಂತಿರುವುದು ಜಗತ್ತಿನಾದ್ಯಂತ ಚರ್ಚೆಗೆ ಕಾರಣವಾಯಿತು. ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ‘ಯುನೆಸ್ಕೊ’ ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿ, ನುಬಿಯಾ ಕಣಿವೆಯ ಸಂರಕ್ಷಣೆಯ ಯೋಜನೆಗೆ ನೆರವಿನ ಕೈಚಾಚಿತು. ಇದರ ಪರಿಣಾಮವಾಗಿ ಕಣಿವೆಯುದ್ದಕ್ಕೂ ಉತ್ಖನನ ಕಾರ್ಯಗಳು ನಡೆದು ಹಲವಾರು ಆಲಯ, ಕಟ್ಟಡಗಳು ಸಂರಕ್ಷಣೆಗೊಳಗಾಗಿವೆ. ಎರಡು ದಶಕಗಳಿಗೂ ಹೆಚ್ಚುಕಾಲ ಜರುಗಿದ ಈ ಉತ್ಖನನ ಅಭಿಯಾನದಲ್ಲಿ ಸಿಕ್ಕಿದ ಹತ್ತು ಹಲವು ಅದ್ಭುತ ಕಲಾರಚನೆಗಳನ್ನು, ನುಬಿಯಾ ಸಂರಕ್ಷಣೆಗೆ ಸಹಕರಿಸಿದ  ದೇಶಗಳಿಗೆ ಈಜಿಪ್ಟ್‌ ಉಡುಗೊರೆಯಾಗಿ ನೀಡಿದೆ. ಇಂತಹ ಅಪೂರ್ವ ಕಲಾಕುಸುರಿಯ ಆಲಯವೊಂದು ನ್ಯೂಯಾರ್ಕ್‌ನ ‘ಮೆಟ್ರೊಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌’ನಲ್ಲಿ ದಿನನಿತ್ಯ ಅಸಂಖ್ಯಾತ ನೋಡುಗರನ್ನು ಆಕರ್ಷಿಸುತ್ತಿದೆ.

ನುಬಿಯಾದಲ್ಲಿನ ಯಶಸ್ವಿ ಕಾರ್ಯಾಚರಣೆಯಿಂದ ಉತ್ತೇಜನೆಗೊಂಡ ‘ಯುನೆಸ್ಕೊ’ ಮಾನವ ಇತಿಹಾಸದಲ್ಲಿ ಮಹತ್ವ ಪಡೆದುಕೊಂಡ ಐತಿಹಾಸಿಕ ನೆಲೆಗಳು, ಚಾರಿತ್ರಿಕ ಸ್ಮಾರಕಗಳನ್ನು ಸಂರಕ್ಷಿಸುವ ಗೊತ್ತುವಳಿಯೊಂದನ್ನು 1972ರಲ್ಲಿ ಅಂಗೀಕರಿಸಿತು. ವಿಶ್ವ ಸಮುದಾಯದ ಹಿತಾಸಕ್ತಿ ರಕ್ಷಣೆಯ ಮುಖ್ಯ ಉದ್ದೇಶವಿರುವ ಈ ಕಾರ್ಯ ಯೋಜನೆಗೆ ಸದಸ್ಯತ್ವ ಪಡೆದುಕೊಂಡ ಸದಸ್ಯ ರಾಷ್ಟ್ರಗಳು, ತಮ್ಮಲ್ಲಿರುವ ವಿಶ್ವಪರಂಪರೆಯ ಸ್ಮಾರಕ ಮತ್ತು ತಾಣಗಳ ಸಂರಕ್ಷಣೆಯ ಹೊಣೆ ನಿರ್ವಹಿಸಬೇಕಾದುದು ಅಗತ್ಯವಾಗಿದ್ದು, ಆ ನಿಟ್ಟಿನಲ್ಲಿ ಯುನಿಸ್ಕೊ ಕೂಡ ಹಲವು ಬಗೆಯ ಸವಲತ್ತುಗಳನ್ನು ಒದಗಿಸುತ್ತಿದೆ.

ಪರಂಪರೆಯ ಹಿರಿಮೆ
ಸ್ಮಾರಕ, ಕಟ್ಟಡ, ಅರಣ್ಯ, ಪರ್ವತ, ದ್ವೀಪ, ಮರುಭೂಮಿ, ಸಮುಚ್ಛಯ, ಸರೋವರ, ಪುಟ್ಟಪಟ್ಟಣ, ನಗರ– ಇವೆಲ್ಲವನ್ನೂ ‘ವಿಶ್ವ ಪರಂಪರಾ ತಾಣ’ಗಳ ವ್ಯಾಪ್ತಿಯಲ್ಲಿ ಗುರ್ತಿಸಲಾಗುತ್ತಿದೆ. ಆರಂಭದಲ್ಲಿ ಸ್ಮಾರಕ ಹಾಗೂ ಐತಿಹಾಸಿಕ ಕಟ್ಟಡಗಳಿಗೆ ಮಾತ್ರ ಈ ಮನ್ನಣೆ ಸೀಮಿತವಾಗಿತ್ತು. ಆ ಕಾಲಘಟ್ಟದಲ್ಲಿ ವೆನಿಸ್, ಇಟಲಿಯ ಚಾರಿತ್ರಿಕ ಅವಶೇಷಗಳು, ಈಗ ಪಾಕಿಸ್ತಾನದಲ್ಲಿರುವ ಮೆಹೆಂಜದಾರೋ ಪುರಾತನ ನಗರ, ಇಂಡೋನೇಷ್ಯಾ ವಿಶಿಷ್ಟ ಕಲಾ ಆವರಣಗಳ ಸಂರಕ್ಷಣೆಯನ್ನು ಯುನೆಸ್ಕೊ ಯಶಸ್ವಿಯಾಗಿ ನಿರ್ವಹಿಸಿದೆ. 

ಮಾನವನ ಸೃಜನಶೀಲ ಪ್ರತಿಭೆ ಮತ್ತು ಸಾಂಸ್ಕೃತಿಕ ಮಹತ್ವದ ಕೃತಿಗಳೊಂದಿಗೆ ನೈಸರ್ಗಿಕ ಸೌಂದರ್ಯ ಹಾಗೂ ಪ್ರಾಕೃತಿಕ ಭೂಸಂರಚನೆಗಳೂ ಪ್ರಸ್ತುತ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರ್ಪಡೆಯಾಗುತ್ತಿವೆ. ಐತಿಹಾಸಿಕ ಸ್ಮಾರಕಗಳನ್ನು ಜತನದಿಂದ ಸಂರಕ್ಷಿಸಿ ಮುಂದಿನ ಪೀಳಿಗೆಗೂ ಅವುಗಳ ಅರಿವು ಮೂಡಿಸುವುದು ಈ ಯೋಜನೆಯ ಉದ್ದೇಶ. ಪ್ರಸ್ತುತ 160 ದೇಶಗಳಲ್ಲಿನ ಅಪಾಯದಂಚಿನಲ್ಲಿರುವ 981 ತಾಣಗಳು ಈ ಯಾದಿಯಲ್ಲಿವೆ. ಈ ತಾಣಗಳ ನಿರ್ವಹಣೆಯೇನೂ ಸರಳವಾದ ಸಂಗತಿಯಲ್ಲ. ಸದಸ್ಯ ರಾಷ್ಟ್ರಗಳ ಆರ್ಥಿಕ ನೆರವಿನೊಂದಿಗೆ ತಾಣಗಳ ನಿರ್ವಹಣೆ ಮಾಡಬೇಕಾದ್ದು ‘ಯುನೆಸ್ಕೊ’ಗೆ ಅನಿವಾರ್ಯ. ಆದರೆ ಬಹುತೇಕ ದೇಶಗಳು ತಮ್ಮ ವಂತಿಗೆ ನೀಡುವಲ್ಲಿ ಸರಿಯಾದ ಕ್ರಮ ಪಾಲಿಸದಿರುವುದು ಯುನೆಸ್ಕೊಗೆ ತಲೆನೋವಾಗಿದೆ. ಸಣ್ಣ ದೇಶಗಳಿರಲಿ, ಅಮೆರಿಕದಂತಹ ಬಲಾಢ್ಯ ದೇಶ ಕೂಡ ಪ್ಯಾಲೆಸ್ಟೇನ್ ಸಮಸ್ಯೆಯನ್ನು ಮುಂದಿಟ್ಟುಕೊಂಡು ತನ್ನ ದೇಣಿಗೆಯನ್ನು ಕೊಟ್ಟಿಲ್ಲವೆಂದರೆ ಬೇರೆ ದೇಶಗಳ ಪರಿಸ್ಥಿತಿ ಊಹಿಸಬಹುದು.

ವಿಶ್ವ ಪರಂಪರೆಯ ತಾಣಗಳ ಸಂರಕ್ಷಣಾ ನಿಧಿಗೆ ತುರ್ತು ನಿಧಿಯಾಗಿ 2014ರಲ್ಲಿ ಕತಾರ್ ದೇಶ 10 ಮಿಲಿಯನ್ ಡಾಲರ್‌ಗಳ ನೆರವು ನೀಡಿತು. ಇದರಿಂದಾಗಿ ಯುನೆಸ್ಕೊ ಸ್ವಲ್ಪ ಉಸಿರು ಬಿಡುವಂತಾಗಿದೆಯಾದರೂ, ಮುಂದಿನ ದಿನಗಳಲ್ಲಿ ಹಣಕಾಸು ಸಮಸ್ಯೆ ಉಲ್ಬಣಿಸುವುದು ಖಚಿತ ಎಂದು ‘ಯುನೆಸ್ಕೊ’ ಜನರಲ್ ಐರಾನ ಬೋಕೋವಾ ಅಭಿಪ್ರಾಯಪಟ್ಟಿದ್ದಾರೆ.

ಜಗತ್ತಿನ ಪ್ರಕೃತಿ ಮತ್ತು ಸಂಸ್ಕೃತಿ ನಡುವಣ ಸೇತುವೊಂದನ್ನು ನಿರ್ಮಿಸುವ ಮೂಲಕ ಪಾರಂಪರಿಕ ತಾಣಗಳನ್ನು ಜತನದಿಂದ ಕಾಪಾಡುವ ಕೆಲಸಕ್ಕೆ ಯುನೆಸ್ಕೊ ಕೈಹಾಕಿ 43 ವರ್ಷಗಳು ಕಳೆದಿವೆ. ಮಾನವ ಇತಿಹಾಸದ ಅವಿಭಾಜ್ಯ ಅಂಗಗಳಾಗಿರುವ ಐತಿಹಾಸಿಕ – ನೈಸರ್ಗಿಕ ಸ್ಮಾರಕಗಳನ್ನು ಸಂರಕ್ಷಿಸುವುದಕ್ಕೆ ಇರುವ ಅಡಚಣೆಗಳಲ್ಲಿ ಬಹುಮುಖ್ಯವಾದುದು ಆರ್ಥಿಕ ಕೊರತೆ, ಇದರ ಜೊತೆಗೆ ಆತಂಕವಾದದ ಬೆದರಿಕೆ ಕೂಡ ಇದೆ. ಹಣಕಾಸು ಸಮಸ್ಯೆ ತಾತ್ಕಾಲಿಕ ಎನ್ನಬಹುದಾದರೂ ಭಯೋತ್ಪಾದನೆ, ಧಾರ್ಮಿಕ ಅಸಹನೆಗಳಿಂದ ಜಗತ್ತು ಮಾನವ ಚರಿತ್ರೆಯ ಮುಖ್ಯ ಭಾಗಗಳನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿಗೆ ತಲುಪಿರುವುದು ಕಟು ವಾಸ್ತವ. ಆಫ್ಘಾನಿಸ್ಥಾನದಲ್ಲಿ ಸುಂದರ ಬುದ್ಧ ಪ್ರತಿಮೆಗಳು ಭಯೋತ್ಪಾದಕರಿಂದ ನಾಶವಾಗಿವೆ. ಇರಾಕ್‌ನ ಮೊಸಲ್‌ನಲ್ಲಿ ‘ಐಸಿಸ್’ ಬಂಡುಕೋರು 6 ಸಾವಿರ ವರ್ಷಗಳಷ್ಟು ಪ್ರಾಚೀನವಾದ ಚಾರಿತ್ರಿಕ ಕಟ್ಟಡಗನ್ನು ನೆಲಕ್ಕೆ ಉರುಳಿಸಿದ್ದಾರೆ.

ಪಾರಂಪರಿಕ ತಾಣಗಳ ರಸಬಳ್ಳಿ
ರಾಜ ಮಹಾರಾಜರು ತಮ್ಮ ಹೆಸರು ಅಥವಾ ವಂಶ ಚಿರಸ್ಥಾಯಿಯಾಗಿ ಉಳಿಯಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ಕಲೆ, ಸಾಹಿತ್ಯ, ಸಂಗೀತ, ವಾಸ್ತುಶಿಲ್ಪಗಳಿಗೆ ಪ್ರೋತ್ಸಾಹ ನೀಡುತ್ತಾರೆ. ಈ ಮೂಲಕ ರೂಪುಗೊಳ್ಳುವ ಕಲಾಕೃತಿಗಳು ಒಂದು ಸಮುದಾಯ ಹಾಗೂ ಪ್ರದೇಶದ ಹಿರಿಮೆಯಾಗಿ ಗುರ್ತಿಸಿಕೊಳ್ಳುತ್ತವೆ. ಅಂತೆಯೇ ಕೆಲವು ನಾಗರಿಕತೆಗಳು ಅಥವಾ ಜನಾಂಗಗಳು ನಾನಾ ಬಗೆಯ ಸಂದೇಶಗಳನ್ನು ಹೊರ ಜಗತ್ತಿಗೆ ತಿಳಿಸಲು ವೈವಿಧ್ಯಮಯ ಕಟ್ಟಡಗಳನ್ನು, ಮನೋಹರ ಸ್ಮಾರಕಗಳನ್ನು ನಿರ್ಮಿಸಿರುವುದುಂಟು. ಅದೇ ಇತಿಹಾಸವಾಗಿ ನಮ್ಮ ಮುಂದಿದೆ. ಇಂತಹ ಉಜ್ವಲ ಪರಂಪರೆಯನ್ನು ಉಳಿಸುವ ಮಹೋನ್ನತ ಆಶಯಗಳಿಗೆ ವಿಶ್ವದಾದ್ಯಂತ ವ್ಯಾಪಕ ಪ್ರತಿಕ್ರಿಯೆ ಬಂದಿರುವ ಕಾರಣದಿಂದಲೇ ‘ಯುನೆಸ್ಕೊ’ ಪರಂಪರೆಯ ಪಟ್ಟಿ ವರ್ಷ ಕಳೆದಂತೆ ಬೆಳೆಯುತ್ತಲೇ ಇದೆ.

ಯುನೆಸ್ಕೊ ದಾಖಲೆಗಳ ಪ್ರಕಾರ ಪ್ರಪಂಚದಲ್ಲಿರುವ ವಿಶ್ವ ಪರಂಪರೆಯ ತಾಣಗಳ ಪೈಕಿ 779 ಸಾಂಸ್ಕೃತಿಕ, 197 ಪ್ರಾಕೃತಿಕ ಹಾಗೂ ಉಳಿದ 161 ತಾಣಗಳು ವಿಭಿನ್ನ ಬಗೆಯವು. ಇಟಲಿಯಲ್ಲಿ ಅತಿ ಹೆಚ್ಚು– ಎಂದರೆ 50 ಪಾರಂಪರಿಕ ತಾಣಗಳಿವೆ. ನಂತರದ ಸ್ಥಾನ ಚೀನಾ (47) ದೇಶಕ್ಕೆ. ಸ್ಪೇನ್, ಫ್ರಾನ್ಸ್, ಜರ್ಮನಿ, ಮೆಕ್ಸಿಕೊ ದೇಶಗಳಲ್ಲೂ ಹೆಚ್ಚಿನ ಪಾರಂಪರಿಕ ತಾಣಗಳನ್ನು ಗುರ್ತಿಸಲಾಗಿದೆ.

ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಭಾರತ ಕೂಡ ಹಿಂದುಳಿದಿಲ್ಲ. ದೇಶದುದ್ದಕ್ಕೂ ಆಲಯಗಳು, ಬಸದಿಗಳು, ಚರ್ಚ್‌ಗಳು, ಮಸೀದಿಗಳು, ಸ್ಥೂಪಗಳು, ಗುರುದ್ವಾರಗಳು, ವಿಹಾರಗಳು, ಜೊತೆಗೆ ಅರಮನೆಗಳು, ಕೋಟೆ ಕೊತ್ತಲುಗಳು ಯಥೇಚ್ಛವಾಗಿ ಹರಡಿಕೊಂಡಿವೆ. ಸಾವಿರಾರು ಸಾಂಸ್ಕೃತಿಕ ಹಾಗೂ ಪ್ರಾಕೃತಿಕ ತಾಣಗಳ ಭಂಡಾರವಿರುವ ಭಾರತದಲ್ಲಿ ಯುನೆಸ್ಕೊ ಅಧಿಕೃತವಾಗಿ ಗುರ್ತಿಸಿರುವ ವಿಶ್ವ ಪರಂಪರೆಯ ತಾಣಗಳು 32.
ಯುನೆಸ್ಕೊ ಮೊಟ್ಟಮೊದಲಿಗೆ ಜಾಗತಿಕ ಪರಂಪರಾ ಪಟ್ಟಿ ಮಾಡಿದಾಗ ಭಾರತದಿಂದ ಸೇರಿಕೊಂಡ ಎರಡು ತಾಣಗಳೆಂದರೆ– ಅಜಂತಾ ಗುಹೆಗಳು ಮತ್ತು ಆಗ್ರಾದ ಪುರಾತನ ಕೋಟೆ. ಆ ಬಳಿಕ ತಾಜ್‌ಮಹಲ್, ಎಲಿಫೆಂಟಾ ಗುಹಾಲಯಗಳು, ಕುತುಬ್ ಮಿನಾರ್, ಜೈಪುರದ ಜಂತರ್ ಮಂತರ್, ಫತೇಪುರ್ ಸಿಕ್ರಿ, ಕೊನಾರ್ಕ್‌ನ ಸೂರ್ಯದೇಗುಲ, ತಂಜಾವೂರಿನ ಬೃಹದೇಶ್ವರ ಆಲಯ, ಸಾಂಚಿಯ ಸ್ಥೂಪ, ಎಲ್ಲೋರಾ – ಗೋವೆಯ ಚರ್ಚ್ ಇತ್ಯಾದಿಗಳು ಆ ಪಟ್ಟಿಗೆ ಸೇರಿಕೊಂಡಿವೆ.

ಬಯಲು ವಸ್ತು ಸಂಗ್ರಹಾಲಯವೆಂದು ವಿಖ್ಯಾತವಾಗಿರುವ ಹಂಪಿ (1986) ಹಾಗೂ ವಿವಿಧ ವಾಸ್ತು ಶೈಲಿಗಳ ತೊಟ್ಟಿಲು ಎನ್ನಿಸಿಕೊಂಡಿರುವ ಪಟ್ಟದಕಲ್ಲು (1987) ವಿಶ್ವ ಸಾಂಸ್ಕೃತಿಕ ಪರಂಪರೆಯ ತಾಣಗಳಲ್ಲಿರುವ ಕರ್ನಾಟಕದ ಎರಡು ಸ್ಥಳಗಳು.

ಭಾರತದ ಪ್ರಯತ್ನಗಳು
ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ 2014ರಲ್ಲಿ ಭಾರತದ ಮತ್ತೆರಡು ಹೊಸ ತಾಣಗಳು ಸೇರ್ಪಡೆಯಾದವು. ಅವೆಂದರೆ, ಹಿಮಾಚಲ ಪ್ರದೇಶದ ಕುಲುವಿನಲ್ಲಿರುವ ‘ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್’ ಹಾಗೂ ಗುಜರಾತ್‌ನ ಸುಂದರ ಮೆಟ್ಟಿಲುಗಳಿರುವ ‘ರಾಣಿಯ ಬಾವಿ’. ಅಂದಹಾಗೆ, ಇವೆರಡೂ ಯುನೆಸ್ಕೊ ಪಟ್ಟಿಗೆ ಸೇರಲು ತೆಗೆದುಕೊಂಡ ಅವಧಿ ಹತ್ತು ವರ್ಷ! ಏಕೆಂದರೆ, ಯಾವ ಸ್ಮಾರಕ ಅಥವಾ ಪ್ರದೇಶವನ್ನು ಯುನೆಸ್ಕೊ ವಿಶ್ವ ಪರಂಪರೆಯ ಪಟ್ಟಿಗೆ ಏಕಾಏಕಿ ಸೇರಿಸಿಕೊಳ್ಳುವುದಿಲ್ಲ. ನಾನಾ ಬಗೆಯ ಮಾನದಂಡಗಳನ್ನು ಉಪಯೋಗಿಸಿ, ಅದರಲ್ಲಿ ವಾಸ್ತವ ವಿಚಾರಗಳು ಹೊರಬಂದರೆ ಮಾತ್ರ ಅವು ಜಾಗತಿಕ ಯಾದಿಗೆ ಸೇರುವ ಅರ್ಹತೆ ಪಡೆಯುತ್ತವೆ. ಪ್ರಸ್ತುತ ಭಾರತದ ಇನ್ನೂ 51 ತಾಣಗಳು ವಿಶ್ವ ಪರಂಪರೆಯ ಪಟ್ಟಿಗೆ ನಾಮಕರಣಗೊಂಡಿವೆ.

ಭಾರತದ ತಾತ್ಕಾಲಿಕ ಪಟ್ಟಿಯಲ್ಲಿ ಕರ್ನಾಟಕದ ಇನ್ನೂ ಐದು ತಾಣಗಳಿವೆ. ಶ್ರೀರಂಗ ಪಟ್ಟಣದ ದ್ವೀಪಕಲ್ವ, ಬೇಲೂರು–ಹಳೆಬೀಡು ಹೊಯ್ಸಳ ಸಮುಚ್ಛಯ, ಗುಲ್ಬರ್ಗ, ವಿಜಯಪುರ, ಬೀದರ್‌ನ ದಖನಿ ಸುಲ್ತಾನರ ಸ್ಮಾರಕಗಳು, ಹಾಗೂ ಪಶ್ಚಿಮ ಘಟ್ಟ ಪ್ರದೇಶಗಳು. ಈಗಾಗಲೇ ಇವುಗಳನ್ನು ಕುರಿತ ಪ್ರಾಥಮಿಕ ಪರಿಶೀಲನಾ ಕಾರ್ಯ ಚಾಲ್ತಿಯಲ್ಲಿದೆ.

ಭವ್ಯ ಪರಂಪರೆಯ ವಾರಸುದಾರರಾದ ನಾವು ಇಲ್ಲಿಯವರೆಗೆ ಐತಿಹಾಸಿಕವಾಗಿ ಹಾಗೂ ಪ್ರಾಕೃತಿಕವಾಗಿ ಕಳೆದುಕೊಂಡಿರುವುದೇ ಹೆಚ್ಚು. ಈಗಿರುವ  ಸ್ಮಾರಕಗಳನ್ನು ಸುಸ್ಥಿತಿಯಲ್ಲಿರಿಸುವ ಜೊತೆಗೆ ವಿಶ್ವ ಪರಂಪರೆಯ ತಾಣಗಳನ್ನು ಕುರಿತಂತೆ ಅರಿವು ಮೂಡಿಸಲು ಜಗತ್ತಿನಾದ್ಯಂತ ಪ್ರತಿ ಏಪ್ರಿಲ್ 18ರಂದು ವಿಶ್ವ ಪರಂಪರೆಯ ದಿನವನ್ನು ಯುನೆಸ್ಕೊ ಆಚರಿಸುತ್ತದೆ. ಇದರೊಂದಿಗೆ ಭಾರತದಲ್ಲಿ ‘ವಿಶ್ವ ಪರಂಪರೆಯ ಸಪ್ತಾಹ’ವನ್ನು ನವೆಂಬರ್‌ನಲ್ಲಿ ಆಚರಿಸಲಾಗುತ್ತಿದೆ.

ನಮ್ಮ ತಾಜ್‌ಮಹಲ್, ಅಜಂತಾ, ಖಜುರಾಹೋ ದೇವಾಲಯ ಸಮುಚ್ಛಯ, ಕೋನಾರ್ಕ್ ಸೂರ್ಯ ದೇಗುಲಗಳನ್ನು ಉದಾಹರಿಸಿ ಹೆಮ್ಮೆ ಪಟ್ಟುಕೊಳ್ಳುತ್ತೇವೆ. ಆದರೆ ದೇಶದುದ್ದಕ್ಕೂ ಇರುವ ಅಸಂಖ್ಯಾತ ಐತಿಹಾಸಿಕ ಸ್ಥಳಗಳ ಬಗ್ಗೆ ಯೋಚಿಸುವುದೂ ಇಲ್ಲ. ಕಳೆದ ದಶಕದಲ್ಲಿ 35 ಸ್ಮಾರಕಗಳು ನಾಪತ್ತೆಯಾಗಿವೆ ಎಂದು ಸಂಸತ್‌ಗೆ ಭಾರತೀಯ ಪುರಾತತ್ವ ಇಲಾಖೆ ಕೊಟ್ಟಿರುವ ಮಾಹಿತಿ ನಮ್ಮ ಸಾಂಸ್ಕೃತಿಕ ನಿರ್ಲಕ್ಷ್ಯಕ್ಕೆ ಉದಾಹರಣೆಯಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT