ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯರಿಗೆ ಬದುಕುವ ಹಕ್ಕಿಲ್ಲವೆ?

Last Updated 14 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಒಂದು ತಿಂಗಳಿನಿಂದ ನಮ್ಮ ಮನೆಗೆ ನೀರು ಬಾರದೆ ಕಡೆಗೆ ಖಾಸಗಿ ಪ್ಲಂಬರ್‌ ಒಬ್ಬರನ್ನು ಹಿಡಿದು ಹಳೆಯ ಪೈಪ್‌ಗಳನ್ನು ಬದಲಾಯಿ­ಸಿದ ಮೇಲೆ ಸ್ವಲ್ಪ ನೀರು ಬರುತ್ತದೆ. ಸುಮಾರು ₨ 2,000 ಖರ್ಚು  ಮಾಡ­ಬೇಕಾ­ಯಿತು. ಮಳೆ ಬರತೊಡಗಿದ್ದರಿಂದ ಅಗೆದ ಗುಂಡಿಯ ಮೇಲೆ ಮಣ್ಣಿನ ದಿಬ್ಬವನ್ನು  ಮಾಡಿ ಮಾರನೆಯ ದಿನ ಕೆಲಸ ಮುಗಿಸು­ವಂತೆ ವ್ಯವಸ್ಥೆ ಮಾಡಿಕೊಳ್ಳಲಾಯಿತು. ಇದು ನಮ್ಮ ಕಾಂಪೌಂಡ್‌ನಿಂದ ಎರಡೂವರೆ ಅಡಿ ದೂರವಿದೆ. ನೀರಿನ ಪೈಪು ಹಾದು ಹೋಗಿ­ರು­ವುದು ಅಲ್ಲೇ. ಇದು ಸಾರ್ವಜನಿಕ ರಸ್ತೆಗೆ ಲಗತ್ತಾಗಿಲ್ಲ.

ಚಾಲಕನೊಬ್ಬ ತನ್ನ ಕಾರನ್ನು ಗೋಡೆಗೆ ಒತ್ತರಿಸುವಂತೆ ತಂದು, ಸಡಿಲ­ವಾದ ಮಣ್ಣಿನ ದಿಬ್ಬದ ಮೇಲೆ ಹತ್ತಿಸಿ ನಿಲ್ಲಿ­ಸಿದ. ನೀರಿನ ಕೊಳವೆ ಹಾಕಿರುವ ಮಣ್ಣಿನ ಗುಡ್ಡೆಯ ಮೇಲೆ ಚಕ್ರವನ್ನು ಹತ್ತಿಸ­ಬಾರ­ದಾ­ಗಿತ್ತೆಂದೂ, ಪೈಪ್‌ ಒಡೆದು ನೀರು ಉಕ್ಕುತ್ತಿದೆ­ಯೆಂದೂ ಆತನಿಗೆ ತಿಳಿಸಿದೆ. ಆ ಚಾಲಕನು ನನಗೆ ಹೀನಾಮಾನ ಬೈಯ್ದ. ಅವನಿಗೆ ಸಹಾಯಕರಾಗಿ ಕಾರಿನಲ್ಲಿ ಬಂದಿದ್ದವರೂ ಸೊಂಟದ ಕೆಳಗಿನ ಭಾಷೆಯಲ್ಲಿ ನನ್ನನ್ನು ನಿಂದಿಸಿದ್ದಲ್ಲದೇ ನನ್ನ  ಮೇಲೆ ಕೈಮಾಡಲು ಬಂದರು. ಆನಂತರ ಗುಂಪಿಗೆ ಸೇರ್ಪಡೆ­ಯಾದ ಮಹಿಳೆಯೊಬ್ಬರು ನನಗೆ ಬೆದರಿಕೆ ಹಾಕಿದ್ದಲ್ಲದೇ ‘ನಿನಗೆ ಬರೀ ಒದ್ದರೆ ಸಾಲದು, ನಿನ್ನ ಕತೆ ಮುಗಿಸಿಬಿಡುತ್ತೇನೆ ಇರು’ ಎನ್ನುತ್ತಾ ಎಲ್ಲಿಂದಲೊ ಐದಾರು ಜನರನ್ನು ಕರೆಸಿ­ಕೊಂಡರು. ಕೊನೆಗೆ ಅವರಿವರು ಸೇರಿ, ಈ ಗುಂಪಿನಿಂದ ನನಗೆ ಏಟುಗಳು ಬೀಳುವುದನ್ನು ತಪ್ಪಿಸಿದರು.

ಪೊಲೀಸರಿಗೆ ದೂರು ಕೊಡುತ್ತೇನೆ ಎಂದಾಗ ನನಗೆ ₨ 2,000 ಕೊಟ್ಟು ಸುಮ್ಮ­ನಾ­ಗಿಸಲು ನೋಡಿದರು. ನಾನು ಹಣವನ್ನು ಮುಟ್ಟಲಿಲ್ಲ. ಮನೆಯಿಂದ ಪೊಲೀಸ್‌ ಠಾಣೆ  4 ಕಿ.ಮೀ. ದೂರದಲ್ಲಿದೆ. ನನ್ನ ಬಳಿ ವಾಹನವಿಲ್ಲ, ನಡೆಯಲು ತ್ರಾಣವಿಲ್ಲ. ಒಬ್ಬಂಟಿ­ಗನಾದ ನನ್ನ ವಯಸ್ಸು 70ರ ಸಮೀಪದಲ್ಲಿದೆ. ಹಿರಿಯ ನಾಗರಿಕನಾದ ನನ್ನನ್ನು ಅವರು ಬೆದರಿಸಿದಂತೆ ಒದ್ದುಪದ್ದು ಮಾಡಿದರೆ ಬಹುಶಃ ನಾನು ಚೇತರಿಸಿ­ಕೊಳ್ಳಲಾರೆ. ಅವರು ಬೇಕಾದಷ್ಟು ಹಣ ಉಳ್ಳವರು. ನನ್ನ ಬಳಿ ಇಲ್ಲ. ಹಣಬಲದ ಒಂದೇ ಕಾರಣಕ್ಕೆ ಅವರು, ಅಸಹಾಯ­ಕ­ರಾದ ನಮ್ಮಂಥವರ ಮೇಲೆ ಹಿಂಸಾಚಾರ­ಮಾಡಬಹುದೇ? ಈ ದೇಶದಲ್ಲಿ ನಮ್ಮಂತಹ ಹಿರಿಯ ನಾಗರಿಕರಿಗೆ ಬದುಕುವ ಹಕ್ಕೇ ಇಲ್ಲವೆ? ಇತ್ತೀಚೆಗೆ ಮರ್ಯಾದೆಯಿಂದ ಬಾಳುವುದೇ ದುಸ್ತರವಾಗುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT