ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯರ ಕಟ್ಟೆಯಲ್ಲಿ ಒಂದಷ್ಟು ಹೊತ್ತು..

Last Updated 20 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಜಯನಗರ ನಾಲ್ಕನೇ ಬ್ಲಾಕ್‌ ಬಸ್‌ ನಿಲ್ದಾಣದಲ್ಲಿ ಇಳಿದಾಗ ಸಮಯ ಮಧ್ಯಾಹ್ನ ನಾಲ್ಕರ ಗಡಿ ದಾಟುತ್ತಿತ್ತು. ಆಕಾಶದಲ್ಲಿ ಸೂರ್ಯ ಮೋಡಗಳ ಪರದೆಯ ಒಳಹೊರಗೆ ಸರಿಯುತ್ತ ಕೆರೆ ದಂಡೆ ಆಟವಾಡುತ್ತಿದ್ದ. ಹಿರಿಯರ ಕಟ್ಟೆಯಲ್ಲಿನ ಕತೆಗಳನ್ನು ಕದ್ದು ಕೇಳಲು ಹೊರಟಿದ್ದ ಈ ಕಿರಿಯನಿಗೆ ಮಳೆ ಬಂದು ಎಲ್ಲಿ ಎಲ್ಲ ಹಾಳಾಗುವುದೋ ಎಂದು ಒಳಗೊಳಗೇ ಆತಂಕ ಶುರುವಾಗಿತ್ತು.

ಉದ್ದಕ್ಕೆ ಕಣ್ಣಾಡಿಸಿದರೆ ಮೂಲೆಯಿಂದ ಎರಡನೇ ಕಲ್ಲುಬೆಂಚಿನ ಮೇಲೆ ಕೂದಲು ಹಣ್ಣಾದ ಇಬ್ಬರು ಕೂತಿರುವುದು ಕಾಣಿಸಿತು. ಸುಮ್ಮನೆ ಅತ್ತ ನಡೆದು ಅವರತ್ತ ಲಕ್ಷ್ಯವೇ ಇಲ್ಲದವನಂತೇ ಬೇರೆಡೆ ನೋಡುತ್ತ ಪಕ್ಕವೇ ಕೂತು ಕಿವಿಗೊಟ್ಟೆ. ಅವರು ತೀರಾ ಮುದುಕರೇನೂ ಆಗಿರಲಿಲ್ಲ. ಒಬ್ಬರ ಕೈಯಲ್ಲಿ ಬ್ಯಾಂಕ್ ಪಾಸ್ ಬುಕ್ ಇತ್ತು. ಒಂದು ಸಣ್ಣ ಚೀಟಿಯಲ್ಲಿ ಏನನ್ನೋ ಬರೆದುಕೊಳ್ಳುತ್ತಾ ಪೆನ್‌ಶನ್, ಆ ಫಂಡ್ ಈ ಫಂಡ್ ಎಂದೆಲ್ಲಾ ಏನೇನೋ ಲೆಕ್ಕ ಹಾಕುತ್ತಿದ್ದರು. ಇನ್ನೊಬ್ಬರು ಅದನ್ನೇ ನೋಡುತ್ತಾ ಸಲಹೆ ಸೂಚನೆ ಕೊಡುತ್ತಿದ್ದರು. ಬಹುಶಃ ಸದ್ಯವೇ ನಿವೃತ್ತರಾದವರಿರಬೇಕು.

ಅಷ್ಟರಲ್ಲೇ ಸ್ವಲ್ಪ ಜಾಸ್ತಿ ವಯಸ್ಸಾದವರಂತೆ ತೋರುವ ಇನ್ನೂ ಮೂವರು ಇತ್ತಲೇ ಬಂದರು. ಒಬ್ಬರಂತೂ ಊರುಗೋಲು ಹಿಡಿದಿದ್ದರೂ ಒಮ್ಮೆಯೂ ಅದನ್ನು ನೆಲಕ್ಕೆ ಊರದೇ ಕೈಯಲ್ಲೇ ಹಿಡಿದುಕೊಂಡು ಬರುತ್ತಿದ್ದರು.

ಹೊಸದಾಗಿ ಬಂದವರಲ್ಲಿ ಇಬ್ಬರು ಆ ಕಡೆಗೆ ಹೋಗಿ ಕೂತರೆ ಕೋಲಿನ ತಾತ ನಾನಿದ್ದಲ್ಲಿಗೇ ಬಂದು, ‘ಸ್ವಲ್ಪ ಸರಿದು ಕೂತ್ಕೋತಿಯಾಪ್ಪಾ?’ ಎಂದು ಪಕ್ಕಕ್ಕೆ ಸರಿಸಿ ಆಸೀನರಾದರು. ಮೊದಲೇ ಬಂದಿದ್ದ ಇಬ್ಬರನ್ನು ಉದ್ದೇಶಿಸಿ ‘ಏನಿವತ್ತು ಇಬ್ಬರೂ ದಿನಕ್ಕಿಂತ ಬೇಗನೇ ಬಂದು ಕೂತಿದ್ದೀರಿ? ಏನು ವಿಶೇಷ?’ ಕೇಳಿದರು. ಪಾಸ್‌ಬುಕ್ ಹಿಡಿದ ತಾತ ‘ಏನಿಲ್ಲ, ಸುಮ್ಮನೇ ಮನೇಲಿ ಕೂತು ಬೇಜಾರಾಯ್ತು ಅದಕ್ಕೆ...’ ಎಂದು ತಡವರಿಸಿದರು.

ಮತ್ತೊಬ್ಬರು ಬೇಸರದ ದನಿಯಲ್ಲಿ ‘ಎಷ್ಟೊತ್ತು ಅಂತ ಮನೇಲೇ ಕೂತಿರೋದ್ರೀ? ಮಗ ಸೊಸೆ ಇಬ್ರೂ ಬೆಳಿಗ್ಗೆ ಏಳಕ್ಕೆ ಮನೆ ಬಿಟ್ರೆ ಬರೋದು ಎಂಟು ದಾಟಿದ ಮೇಲೆಯೇ. ಅದರಲ್ಲೂ ಒಂದೊಂದಿನ ಅದೆಂಥದ್ದೋ ಪಾರ್ಟಿ ಸುಡುಗಾಡು ಅಂತ ಇದ್ದುಬಿಟ್ಟರಂತೂ ಹನ್ನೊಂದು ದಾಟುತ್ತೆ. ನನ್ನ ಹೆಂಡತಿಯೋ ಟೀವಿ ಧಾರಾವಾಹಿ ಹಚ್ಚಿಕೊಂಡು ಕೂತುಬಿಟ್ರೆ ಮುಗಿದ್ಹೋಯ್ತು. ಮನೆ ಅಂದ್ರೆ ಮನೇ ಅಂತಾನೇ ಅನ್ಸೋದಿಲ್ಲಪ್ಪಾ. ಯಾರಾದ್ರೂ ಬಂದು ಕೊಂದು ಹೋದರೂ ಹೊರಗಿನ ಜಗತ್ತಿಗೆ ತಿಳಿಯೋದು ಮಗ ಸೊಸೆ ಆಫೀಸಿಂದ ಬಂದ ಮೇಲೆಯೇ’ ಎಂದು ಮುಖ ಹಿಂಡಿದರು. ಕೋಲಿನ ತಾತ ‘ಸುಮ್ನಿರ್ರಿ.. ಯಾರು ಯಾಕೆ ಕೊಲೆ ಮಾಡ್ತಾರೆ? ನೋಡಿಲ್ವಾ ಮೊನ್ನೆ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮೋದಿನೇ ಬುಲೆಟ್ ಪ್ರೂಫ್ ಗ್ಲಾಸ್ ಬೇಡ ಎಂದು ಹೇಗೆ ಭಾಷಣ ಮಾಡಿದ. ಅವನನ್ನೇ ಕೊಲ್ಲಲಿಲ್ಲ.

ನಮ್ಮಂಥ ಮುದುಕರನ್ನೆಲ್ಲಾ ಯಾರು ಯಾಕೆ ಕೊಲ್ತಾರೆ?’ ಎಂದು ನಕ್ಕರು. ಇನ್ನೊಬ್ಬರು ‘ಆದರೂ ಅವ ಗಂಡುಮಗ ನೋಡ್ರೀ. ಅವನ ಧೈರ್ಯ ಮೆಚ್ಚಬೇಕು’ ಎಂದು ತಲೆದೂಗಿದರು. ಆ ತುದಿಯಲ್ಲಿ ಕೂತಿದ್ದ ಗುಂಗರು ಕೂದಲಿನವರು ಅಲ್ಲಿಂದಲೇ ಬಾಗಿ ‘ಮೋದಿಗೇನು? ಆ ಜಾಗಕ್ಕೆ ಹೋಗೋವರನ್ನೆಲ್ಲಾ ತಪಾಸಣೆ ಮಾಡಿನೇ ಒಳಬಿಡ್ತಾರೆ. ಟೈಟ್ ಸೆಕ್ಯುರಿಟಿ ಇರ್ತದೆ. ಯಾರೂ ಕೊಲೆ ಮಾಡಕ್ಕಾಗಲ್ಲ ಅಂತ ಗೊತ್ತಿರತ್ತೆ; ಅದ್ಕೇ ಬುಲೆಟ್ ಪ್ರೂಫ್ ಬೇಡ ಅಂತ ನಾಟಕ ಮಾಡ್ತಾರಷ್ಟೇ. ಈ ರಾಜಕಾರಣಿಗಳ ನಾಟಕ ಎಲ್ಲ ನಿಜ ಅಂತ ನಂಬ್ಕೊಂಬಿಟ್ರೆ ಮುಗಿದುಹೋಯ್ತು’ ಎಂದು ಸ್ವಲ್ಪ ಗರಂ ಆಗಿಯೇ ಹೇಳಿದರು.

‘ಥೂ ಬಿಡ್ರಿ... ಎಷ್ಟೆಲ್ಲಾ ಒಳ್ಳೆ ವಿಷಯಗಳಿವೆ ಮಾತಾಡ್ಲಿಕ್ಕೆ, ಈ ಮರ, ರಸ್ತೆ, ಆಚೆಗಿನ ಜ್ಯೂಸ್ ಅಂಗಡಿ ಬಗ್ಗೆ ಮಾತಾಡ್ರಿ, ಮೋಡ ಕಟ್ಟಿದೆ. ಮಳೆ ಬರಬಹುದು. ಅದ್ರ ಬಗ್ಗೆ ಮಾತಾಡ್ರಿ, ನೋಡಿ ನೋಡಿ ಎಷ್ಟು ಚಂದ ಹೆಣ್ಮಕ್ಕಳು ಹೋಗ್ತಿರ್ತಾರೆ. ಅವ್ರ ಬಗ್ಗೆ ಮಾತಾಡ್ರೀ.. ಆ ದರಿದ್ರ ರಾಜಕಾರಣಿಗಳ ಹೆಸರಲ್ಲಿ ನೀವ್ಯಾಕ್ರಿ ಕಿತ್ತಾಡ್ತಿರಾ?’ ಎಂದ ತಾತ ಬಹುಶಃ ಯಾವುದೋ ಕಾಲೇಜಿನಲ್ಲಿ ಕನ್ನಡ ಪ್ರೊಫೆಸರ್ ಆಗಿದ್ದರು ಅನಿಸುತ್ತದೆ.

ಅವರ ಮಾತು ಮುಗಿಯುವುದರೊಳಗೆ ಕೋಲಿನ ತಾತ ‘ಏನು ರಸ್ತೆಯಲ್ಲಿ ಹೋಗ್ತಿರೋರನ್ನು ನೋಡಿ ನಿಮ್ಮ ಪ್ರಾಯ ತಿರುಗಿ ಬಂದಂಗಿದೆ’ ಎಂದು ಹುಬ್ಬು ಹಾರಿಸಿದ್ದೇ ಎಲ್ಲರೂ ದೊಡ್ಡದಾಗಿ ನಕ್ಕರು. ಅದಕ್ಕೆ ಅವರು ‘ಏ ಹಂಗೇನಿಲ್ಲ. ಈಗಿನ ಹೆಣ್ಮಕ್ಕಳನ್ನು ನೋಡಿ, ಹೆಂಗೆ ಲವ್ ಮಾಡಿದ ಹುಡುಗನ ತಬ್ಕೊಂಡು ರಾಜಾರೋಷವಾಗಿ ಬೈಕ್‌ನಲ್ಲಿ ಅಡ್ಡಾಡ್ತಾರೆ. ಖುಷಿಯಾಗ್ತದೆ ಅವ್ರನ್ನು ನೋಡಿದ್ರೆ’ ಎಂದರು.

ಪಾಸ್‌ಬುಕ್ ಅಜ್ಜ ‘ಅಕಸ್ಮಾತ್ ಬೈಕಿನಲ್ಲಿ ಕೂತುವರು ನಿಮ್ಮ ಮಗಳೋ, ಮೊಮ್ಮಗಳೋ ಆಗಿದ್ರೂ ಹೀಗೆ ಖುಷಿಯಾಗ್ತಿತ್ತಾ?’ ಎಂದು ಮಹತ್ವವಾದ ಸವಾಲೊಂದನ್ನು ಹಾಕಿದವರಂತೆ ಪಕ್ಕದವರ ಮುಖ ದಿಟ್ಟಿಸಿದರು. ಅವರ ನಡುವೆಯೇ ಕೂತಿದ್ದರೂ ಅದುವರೆಗೂ ಒಂದೂ ಮಾತನಾಡದಿದ್ದ ಚೂಪು ಮೂಗಿನ ಅಜ್ಜ ತನ್ನಷ್ಟಕ್ಕೇ ಎಂಬಷ್ಟು ಸಣ್ಣ ದನಿಯಲ್ಲಿ ‘ಖುಷಿ ಸಾಯಲಿ, ದುಃಖ ಕೊಡಲಿಕ್ಕಾದರೂ ಮಕ್ಕಳು, ಮೊಮ್ಮಕ್ಕಳು ಕಣ್ಣೆದುರಿದ್ದರೆ ಸಾಕಿತ್ತು...’ ಎಂದದ್ದೇ ಎಲ್ಲರೂ ಒಮ್ಮೆಲೇ ಗಪ್ಪಾಗಿಬಿಟ್ಟರು.

ಅಷ್ಟರಲ್ಲಿಯೇ ಹುಡುಗನೊಬ್ಬ ಓಡಿಬಂದು ಕೋಲಿನ ತಾತನ ಎದುರು ನಿಂತು ‘ಅಜ್ಜಾ ಅಜ್ಜಾ... ಅಮ್ಮ ಕರೀತಿದ್ದಾರೆ. ಮಳೆ ಬರೋ ಹಾಗಿದೆ, ಬೇಗ ಮನೆಗೆ ಬರಬೇಕಂತೆ. ಮಳೆಯಲ್ಲಿ ನೆನೆಯಬಾರದಂತೆ’ ಎಂದು ಕೈ ಹಿಡಿದೆಳೆದ. ಕೋಲಿನ ತಾತನಿಗೆ ಅವಮಾನವಾಯಿತೇನೋ? ‘ಬರ್ತೀನಿ ಹೋಗೋ. ನಾನೇನು ಪುಟ್ಟ ಹುಡುಗನೇ, ಕೈ ಹಿಡ್ಕೊಂಡು ಕರ್ಕೊಂಡ್ಹೋಗೋಕೆ? ಎಂದು ಕೈ ಕೊಡವಿಕೊಂಡರು. ಆ ಹುಡುಗ ಸಿಟ್ಟಿನಿಂದ ‘ಏನಾದ್ರೂ ಮಾಡ್ಕೋ, ಆಮೇಲೇ ಅಮ್ಮನ ಹತ್ರ ಬೈಯ್ಸಿಕೋ, ನಂಗೇನಾಗ್ಬೇಕು?’ ಎಂದು ಬಂದ ಹಾಗೆಯೇ ಓಡಿಹೋದ. ಕೋಲಿನ ತಾತ ಪೆಚ್ಚು ನಗೆ ನಕ್ಕು, ‘ಇವಂದೊಂದು ಹೀಗೆ ಯಾವಾಗ್ಲೂ..’ ಎಂದರು.

ಅಷ್ಟರಲ್ಲೇ ಸೂರ್ಯ ತನ್ನ ಕೆರೆದಂಡೆ ಆಟದಲ್ಲಿ ಸೋತು ಮೋಡಗಳ ಹಿಂಡಿನಲ್ಲಿ ಹೆಡೆಮುರಿ ಬಂಧಿತನಾಗಿದ್ದ. ವಿಜಯದ ಖುಷಿಯಲ್ಲಿ ದಪ್ ದಪ್ ಎಂದು ಒಂದೊಂದೇ ದಪ್ಪ ಹನಿಗಳು ಬೀಳಲು ಶುರುವಾಗಿದ್ದೇ ಕಲ್ಲುಬೆಂಚಿನಲ್ಲಿದ್ದ ಮಾತಿನಲ್ಲಿಯೇ ಹಗುರಗೊಳ್ಳುತ್ತಿದ್ದ ಜೀವಗಳೆಲ್ಲ ‘ಈ ಮಳೇಲಿ ತೋಯ್ದರೆ ನಾಲ್ಕು ದಿನ ಮಲಗುವುದು ಗ್ಯಾರಂಟಿ’ ಎಂತಲೂ ‘ನಾಲ್ಕೇನೂ ಶಾಶ್ವತವಾಗಿ ಮಲಗಿದ್ರೂ ಮಲಗಿದ್ರೆ... ಇನ್ಮೇಲೆಲ್ಲ ಯಾವಾಗ ಹೆಂಗೆ ಅಂತ ಹೇಳಕ್ಕಾಗಲ್ಲ ಹ್ಹೇ ಹ್ಹೇ ..’ ಎಂದು ಜೋಕೋ ಸೀರಿಯಸ್ಸೋ ಗೊತ್ತಾಗದ ದನಿಯಲ್ಲಿ ಗೊಣಗುತ್ತಾ ಗಡಿಬಿಡಿಯಲ್ಲಿ ಎದ್ದು ಚೆಲ್ಲಾಪಿಲ್ಲಿಯಾಗಿ ಹೋದರು.

ಕಲ್ಲು ಬೆಂಚು ಮಾತ್ರ ಯಾವ ಗಡಿಬಿಡಿಯೂ ಇರದೇ ಎಲ್ಲವನ್ನೂ ಹೀರಿಕೊಂಡು ನಿಶ್ಚಲವಾಗಿ ಕೂತೇ ಇತ್ತು, ನಾಳೆ ಸಂಜೆಗಾಗಿ ಕಾಯುತ್ತ..
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT