ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ಪತ್ರಕರ್ತ ಜಯಶೀಲರಾವ್ ಇನ್ನಿಲ್ಲ

Last Updated 29 ಏಪ್ರಿಲ್ 2016, 9:29 IST
ಅಕ್ಷರ ಗಾತ್ರ

ಬೆಂಗಳೂರು:  ಹಿರಿಯ ಪತ್ರಕರ್ತ ಎಸ್‌.ವಿ. ಜಯಶೀಲರಾವ್ (87) ಅವರು ಅನಾರೋಗ್ಯದಿಂದಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು. ಎಚ್‌.ಡಿ. ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ, ಅವರ ಮಾಧ್ಯಮ ಸಲಹೆಗಾರರಾಗಿದ್ದರು.

ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದ ಅವರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪನೆಯಲ್ಲೂ ಮಹತ್ವದ ಪಾತ್ರ ವಹಿಸಿದ್ದರು. ಅಲ್ಲದೆ, ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ರಾಜ್ಯೋತ್ಸವ,  ಟಿಯೆಸ್ಸಾರ್  ಸೇರಿದಂತೆ ಹಲವು ಪ್ರಶಸ್ತಿಗಳು ಹಾಗೂ ಸನ್ಮಾನಗಳಿಗೆ ಅವರು ಭಾಜನರಾಗಿದ್ದರು.

ಇಂದು ಅಂತ್ಯಕ್ರಿಯೆ:  ಚಾಮರಾಜಪೇಟೆಯ ಸ್ಮಶಾನದಲ್ಲಿ ಶುಕ್ರವಾರ (ಏಪ್ರಿಲ್ 29) ಬೆಳಿಗ್ಗೆ 11 ಗಂಟೆಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

ಪತ್ರಿಕೋದ್ಯಮವನ್ನೂಬೆಳೆಸಿದರು
- ಖಾದ್ರಿ ಎಸ್‌. ಅಚ್ಯುತನ್
ಬೆಂಗಳೂರು: ಗುರುವಾರ ಸಂಜೆ ನಮ್ಮನ್ನಗಲಿದ ಹಿರಿಯ ಎಸ್‌.ವಿ. ಜಯಶೀಲರಾವ್ ಅವರನ್ನು ಕಂಡರೆ ಅವರ ಹತ್ತಿರ ಬಂದವರಿಗೆಲ್ಲ  ಪ್ರೀತಿ, ಗೌರವ, ಸಲುಗೆ ಹಾಗೂ ಸ್ನೇಹ. ದೇಶ ಸ್ವಾತಂತ್ರ್ಯ ಪಡೆದುಕೊಂಡ ಸಮಯದಿಂದ ಇಂದಿನವರೆಗಿನ ನಾಡ ವಿದ್ಯಮಾನಗಳೊಡನೆ ವಿಶೇಷವಾಗಿ, ಕರ್ನಾಟಕದ ರಾಜಕೀಯ ಸಮೀಪದರ್ಶಿ.

1947ರ ಸೆಪ್ಟೆಂಬರ್‌ನಲ್ಲಿ ಮೈಸೂರು ಸೀಮೆಯಲ್ಲಿ ಜವಾಬ್ದಾರಿ ಸರ್ಕಾರಕ್ಕಾಗಿ ಅಂತಿಮ ಹೋರಾಟ ನಡೆದಾಗ, ‘ಮೈಸೂರು ಚಲೋ’ ಸತ್ಯಾಗ್ರಹದಲ್ಲಿ ಜಯಶೀಲರಾಯರು ಸೆರೆವಾಸ ಕಂಡರು. ಅದೇ ವರ್ಷ ಬೆಂಗಳೂರಿನಲ್ಲಿ ‘ದೇಶ ಬಂಧು’ ಪತ್ರಿಕೆ ಮೂಲಕ ಪತ್ರಿಕೋದ್ಯಮ ಪ್ರವೇಶ. ನಂತರ 1948ರಲ್ಲಿ ‘ಪ್ರಜಾವಾಣಿ’ ಗೆ ಸೇರಿದರು.

ವರದಿಗಾರನಾಗಿ, ಪ್ರಧಾನ ವರದಿಗಾನಾಗಿ ‘ಪ್ರಜಾವಾಣಿ’ ಜತೆಯಲ್ಲೇ ಬೆಳೆದರು. ಟಿಯೆಸ್ಸಾರ್ ಗರಡಿಯ ಗಟ್ಟಿ ಕುಳ. ಕನ್ನಡ ಪತ್ರಿಕೋದ್ಯಮದಲ್ಲಿ ಅಂದಿನಿಂದಲೂ ವರದಿಗಾರಿಕೆಗೆ ಹೊಸ ಹೊಸ ಆಯಾಮ ನೀಡಿ, ನಿರಂತರವಾಗಿ ವಿದ್ಯಾರ್ಥಿ ಸದೃಶ್ಯ ಸದಭಿರುಚಿ ಕಾಯ್ದುಕೊಂಡರು. ಇದಕ್ಕೆ ಜ್ವಲಂತ ನಿದರ್ಶನವೇ 26 ವರ್ಷಗಳ ‘ಪ್ರಜಾವಾಣಿ’ ವರದಿಗಾರನಾಗಿ ಹತ್ತಿದ ಹಲವು ಮೆಟ್ಟಿಲುಗಳು.

ಮುಖ್ಯ ವರದಿಗಾರನಾಗಿ, ವರದಿಗಾರರಾಗಲು ಬಂದ ತರುಣರಿಗೆ ಅವರು ನೀಡಿದ ಸ್ಫೂರ್ತಿಯಿಂದಾಗಿ ಇಂದು ಅಸಂಖ್ಯಾತ ಪ್ರತಿಭಾವಂತರನ್ನು ಕಾಣುವಂತಾಗಿದೆ. ವರದಿಗಾರಿಕೆಯಲ್ಲಿ ‘ಎಸ್‌.ವಿ.ಜೆ’ ಎಂದೇ ಪರಿಚಿತರಾದ ರಾಯರು, ಅನೇಕ ಪ್ರಥಮಗಳನ್ನು ಸಾಧಿಸಿದರು. ಅದರಲ್ಲಿ ವಿಧಾನ ಮಂಡಲ ಸದನ ಸಮೀಕ್ಷೆಯೂ ಒಂದು.

ಈ ಸಮೀಕ್ಷೆ ಟೆಲಿವಿಷನ್ ಇಲ್ಲದ ಕಾಲದಲ್ಲಿ ಸಚಿತ್ರವಾಗಿ ಅವರ ಲೇಖನಿಯಲ್ಲಿ ಮೂಡಿ ಬರುತ್ತಿತ್ತು. ಸದನ ಕಲಾಪದ ವಿಮರ್ಶೆಯನ್ನು ಸದನದ ಹಕ್ಕುಚ್ಯುತಿಗೆ ಎಳ್ಳಷ್ಟೂ ಸಿಲುಕದೆ ಸದಸ್ಯರ ಮಾತಿನ ವೈಖರಿ, ಹಾವಭಾವ, ಸದಸ್ಯರು ಧ್ವನಿಯಲ್ಲಿದ್ದ ದನಿ, ಕಳಕಳಿಗಳನ್ನು ಓದುಗರಿಗೆ ಮನಮುಟ್ಟುವಂತೆ ಕಟ್ಟಿ ಕೊಡುತ್ತಿದ್ದರು.

ರಾಯರ ವರದಿಗಾರಿಕೆ ಮೈಸೂರು ಅರಸರ ಕಾಲದ ಅಂತಿಮ ಹಂತದಿಂದಿಡಿದು, ಕೆ.ಸಿ. ರೆಡ್ಡಿ , ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ನಿಜಲಿಂಗಪ್ಪ, ಬಿ.ಡಿ. ಜತ್ತಿ, ವೀರೇಂದ್ರ ಪಾಟೀಲ್, ದೇವರಾಜ ಅರಸು, ಗುಂಡೂರಾವ್‌ವರೆಗೆ ಬೆಸೆದುಕೊಂಡಿದೆ. ಇವರೆಲ್ಲರ ಆಡಳಿತದ ನಿಕಟದರ್ಶಿಯಾಗಿದ್ದ ಅವರು ಕನ್ನಡ ಪತ್ರಿಕೋದ್ಯಮದ ದಣಿವರಿಯದ ಲವಲವಿಕೆಯ ವರದಿಗಾರರಾಗಿ ತಾವೂ ಬೆಳೆದರು. ಪತ್ರಿಕೋದ್ಯಮವನ್ನೂ ಬೆಳೆಸಿದರು.

ಮತ್ತೊಬ್ಬರ ಮಾತನ್ನು ಆಲಿಸಿ, ತಮ್ಮ ಅಭಿಪ್ರಾಯವನ್ನು ಅವರ ಮೇಲೆ ನವಿರಾಗಿ ಮೂಡಿಸುತ್ತಿದ್ದ ‘ಎಸ್‌.ವಿ.ಜೆ’ ಒಬ್ಬ ಮನುಷ್ಯ ಪ್ರೇಮಿ. ಅವರ ಆ ಮಾನವೀಯ ಮುಖವೇ, ಅವರ ಮಾನವಾಸಕ್ತಿ ವರದಿಗಳ ‘ಯಾರಿವರು?’ ಅಂಕಣ. ಇದು ಕನ್ನಡ ಪತ್ರಿಕೋದ್ಯಮದ ಮೈಲಿಗಲ್ಲಾಯಿತು.

ಸಮಾಜದ ಅತಿ ದೊಡ್ಡವರಿಂದಿಡಿದು, ಹಮಾಲಿಯಂತಹ ತಳಮಟ್ಟದ ಸಾಮಾನ್ಯರಲ್ಲಿ ಅತಿ ಸಾಮಾನ್ಯರನ್ನು ಅವರು ಚಿತ್ರಿಸುತ್ತಿದ್ದ ಕ್ರಿಯಾಪದವಿಲ್ಲದ ಶೈಲಿ, ಒಂದು ರೀತಿಯ ಅವರ ಮಾನವ ಅಂತಃಕರಣಕ್ಕೆ ನಿದರ್ಶನ.

ಜಯಶೀಲರಾಯರ ಮತ್ತೊಂದು ಪ್ರಥಮವೆಂದರೆ ‘ಚುನಾವಣಾ ಸಮೀಕ್ಷೆ’. ಚುನಾವಣೆಗಳ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಪ್ರವಾಸ ಕೈಗೊಂಡು ವರದಿ ಮಾಡುತ್ತಿದ್ದ ಅವರ ಶೈಲಿ, ಇವತ್ತಿಗೂ ಕನ್ನಡ ಪತ್ರಿಕೋದ್ಯಮದ ಮಾನದಂಡವಾಗಿ ಉಳಿದಿದೆ. ಪತ್ರಿಕೋದ್ಯಮ ಪ್ರವೇಶಿಸಿದ ಆರಂಭದ ದಿನಗಳಿಂದಲೂ ಪತ್ರಕರ್ತರ ಯೋಗಕ್ಷೇಮದ ಬಗ್ಗೆ ಕಾಳಜಿ  ಹೊಂದಿದ್ದ ರಾಯರು, ಪತ್ರಕರ್ತರ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.

ಹಲವರು ಹಲವು ಸನ್ನಿವೇಶಗಳಿಂದಾಗಿ ಏನೇನೊ ಆಗಿ ಬದಲಾಗಿ ಬಿಡುತ್ತಾರೆ. ಆದರೆ, ರಾಯರಿಂದ ಸನ್ನಿವೇಶ, ಸಮಯವೇ ಮಾರ್ಪಾಡಾಗಿ ಬಿಡುತ್ತಿತ್ತು. ಅದೇ ಅವರ ದೊಡ್ಡಸ್ತಿಕೆ. ಸುತ್ತಲಿನವರಿಗೆ ದೊರೆತ ದೊಡ್ಡ ಆಸ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT