ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಮಠಗೆ ಸಿದ್ದರಾಮಯ್ಯ ಸವಾಲು

Last Updated 6 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಇಂಧನ ಸಚಿವ ಡಿ.ಕೆ.­ಶಿವ­ಕುಮಾರ್‌ ವಿರುದ್ಧ ಯಾವುದೇ ತನಿಖಾ ಸಂಸ್ಥೆಯೂ ಆರೋಪಪಟ್ಟಿ ಸಲ್ಲಿಸಿಲ್ಲ. ಒಂದು ವೇಳೆ ಆರೋಪ­ಪಟ್ಟಿಯ ದಾಖಲೆ ಎಸ್‌.ಆರ್‌.­ಹಿರೇಮಠರ ಬಳಿ ಇದ್ದರೆ ಅದನ್ನು ಹಾಜರು­ಪಡಿಸಲಿ’ ಎಂದು ಮುಖ್ಯ­ಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಪ್ರದೇಶ ಕಾಂಗ್ರೆಸ್‌ ಸಮನ್ವಯ ಸಮಿತಿ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಶಿವಕುಮಾರ್‌ ಅವರ ಸಂಪುಟ ಸೇರ್ಪಡೆ­ಯನ್ನು ಸಮರ್ಥಿಸಿಕೊಂಡ ಮುಖ್ಯ­ಮಂತ್ರಿ, ‘ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿಲ್ಲ ಎಂಬುದನ್ನು ಖಚಿತಪಡಿಸಿ­ಕೊಂಡ ಬಳಿಕವೇ ಸಚಿವ ಸ್ಥಾನ ನೀಡಲಾಗಿದೆ’ ಎಂದರು.

ಶಿವಕುಮಾರ್‌ ವಿರುದ್ಧದ ದಾಖಲೆ­ಗಳನ್ನು ಹಿರೇಮಠರು ಹುಬ್ಬಳ್ಳಿಯಲ್ಲಿ ಬಿಡು­ಗಡೆ ಮಾಡಿರುವ ಕುರಿತು ಪತ್ರ­ಕರ್ತರು ಪ್ರಶ್ನಿಸಿದಾಗ, ‘ಆರೋಪಪಟ್ಟಿ ಸಲ್ಲಿಕೆಯಾಗದೆ ಸುಮ್ಮನೆ ಆರೋಪ ಮಾಡಲಾಗದು’ ಎಂದರು.

‘ಶಿವಕುಮಾರ್‌ ವಿರುದ್ಧ ಲೋಕಾ­ಯುಕ್ತ ಪೊಲೀಸರು ದಾಖಲಿಸಿದ್ದ ಪ್ರಥಮ ವರ್ತಮಾನ ವರದಿಗೆ (ಎಫ್‌ಐ­ಆರ್‌) ಹೈಕೋರ್ಟ್‌ ತಡೆಯಾಜ್ಞೆ ಇದೆ. ರೋಷನ್‌ ಬೇಗ್‌ ವಿರುದ್ಧ ನ್ಯಾಯಾ­ಲಯಕ್ಕೆ ಸಲ್ಲಿಸಿದ್ದ ಖಾಸಗಿ ದೂರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸಿರು­ವುದು ನಿಜ. ಆದರೆ, ಆ ಪ್ರಕರಣದ ತನಿಖೆಯೂ ಮುಗಿದಿಲ್ಲ, ಆರೋಪ­ಪಟ್ಟಿಯೂ ಸಲ್ಲಿಕೆಯಾಗಿಲ್ಲ. ಹೀಗಿರು­ವಾಗ ಇಬ್ಬರನ್ನೂ ದೋಷಿಗಳು ಎಂದು ತೀರ್ಮಾನಿಸಲು ಸಾಧ್ಯವಿಲ್ಲ’ ಎಂದರು.

‘ಬಿಜೆಪಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಗಳಾಗಿದ್ದ ಆರ್‌.ಅಶೋಕ, ಕೆ.ಎಸ್‌.ಈಶ್ವರಪ್ಪ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಲೋಕಾಯುಕ್ತ ದಾಳಿಯೂ ನಡೆದಿತ್ತು. ಆದರೂ, ಅವರು ಸಂಪುಟದಲ್ಲಿ ಮುಂದು­­­ವರಿದಿದ್ದರು. ಆರೋಪಪಟ್ಟಿ ಸಲ್ಲಿಕೆಯಾದ ಬಳಿಕವೂ ಕೆಲವರು ಸಂಪುಟದಲ್ಲಿದ್ದರು. ಬಿಜೆಪಿ  ಮುಖ್ಯ­ಮಂತ್ರಿ ­ಯಡಿ­ಯೂ­ರಪ್ಪ  ಜೈಲಿಗೆ ಹೋಗಿ ಬಂದಿದ್ದರು’ ಎಂದು ತಮ್ಮ ನಿಲುವು ಸಮರ್ಥಿಸಿಕೊಂಡರು.

ಲಾಡ್‌ ಸ್ವಇಚ್ಛೆಯಿಂದ ರಾಜೀನಾಮೆ: ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದ ಆರೋಪವಿದೆ ಎಂಬ ಕಾರಣಕ್ಕೆ ಸಂತೋಷ್‌ ಲಾಡ್‌ ಅವರಿಂದ ರಾಜೀ­ನಾಮೆ ಪಡೆದು, ಈಗ ಅಂಥದೇ ಆರೋ­ಪ­ವಿರುವವರನ್ನು ಸಂಪುಟಕ್ಕೆ ಸೇರಿಸಿ­ಕೊಂಡಿರುವುದು ಸರಿಯೇ ಎಂದು ಪ್ರಶ್ನಿಸಿದಾಗ, ‘ಲಾಡ್‌ ಅವರಿಂದ ನಾನು ರಾಜೀನಾಮೆ ಪಡೆದಿಲ್ಲ. ಅವರು ಸ್ವ­ಇಚ್ಛೆಯಿಂದ ರಾಜೀನಾಮೆ ನೀಡಿದ್ದರು’ ಎಂದು ಮುಖ್ಯಮಂತ್ರಿ ಹೇಳಿದರು.

ಇಬ್ಬರು ಸಚಿವರ ಸೇರ್ಪಡೆಯಿಂದ ಭ್ರಷ್ಟಾಚಾರದ ವಿಷಯದಲ್ಲಿ ಬಿಜೆಪಿ ವಿರುದ್ಧದ ಹೋರಾಟಕ್ಕೆ ಹಿನ್ನಡೆ ಆಗಿಲ್ಲ. ಬಿಜೆಪಿ ಮುಖಂಡರ ವಿರುದ್ಧದ ಪ್ರಕರಣ­ಗಳಿಗೂ, ತಮ್ಮ ಸರ್ಕಾರದ ಸಚಿವರ ವಿರುದ್ಧದ ಆರೋಪಗಳಿಗೂ ವ್ಯತ್ಯಾಸ­ವಿದೆ ಎಂದರು.

‘ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಹಲವು ಸಚಿವರ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾದ ಬಳಿಕವೂ ಅವರನ್ನು ಅಧಿಕಾರದಲ್ಲಿ ಮುಂದುವರಿಸಲಾಗಿತ್ತು.  ನಾವು ಆ ರೀತಿ ಮಾಡುವುದಿಲ್ಲ’ ಎಂದು ದಿಗ್ವಿಜಯ್‌ ಹೇಳಿದರು.

 ಸಂಪುಟ ರಚನೆ ಮುಖ್ಯಮಂತ್ರಿ ಪರ­ಮಾಧಿಕಾರ. ಅವರ ಆಯ್ಕೆಯ ಪ್ರಕಾ­ರವೇ ಸಂಪುಟದ ಸದ­ಸ್ಯರನ್ನು ನೇಮಕ ಮಾಡಲು ಅವಕಾ­ಶವಿದೆ. ಶಿವ­ಕುಮಾರ್‌ ಮತ್ತು ಬೇಗ್‌ ಅವ­­ರನ್ನು ಸಂಪುಟಕ್ಕೆ ಸೇರಿಸಿಕೊ­ಳ್ಳುವ ನಿರ್ಧಾ­ರ­ವನ್ನೂ ಅವರೇ ಕೈಗೊಂಡಿದ್ದಾರೆ ಎಂದರು.

ಕೋರ್ಟ್‌ ಹೇಳಿದರಷ್ಟೇ ದೋಷಿ
ಹಿರೇಮಠರು ಆರೋಪಪಟ್ಟಿ ಹಾಜ­ರು­ಪಡಿಸಿದರೆ ಸಚಿವರ ವಿರುದ್ಧ ಕ್ರಮ ಕೈಗೊಳ್ಳುತ್ತೀರಾ ಎಂಬ ಪ್ರಶ್ನೆಗೆ, ‘ಅವರು ದಾಖಲೆ ಹಾಜ­ರುಪಡಿಸಲಿ. ಆರೋಪಪಟ್ಟಿ ಇದ್ದರೂ, ದೋಷಿ ಎನ್ನಲಾಗದು. ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಆರೋಪ ಸಾಬೀತಾಗ­ಬೇಕಾ­­ಗುತ್ತದೆ’ ಎಂದರು.

ಪರಿಶೀಲಿಸಿಯೇ ಸ್ಥಾನ
‘ರೋಷನ್‌ ಬೇಗ್‌ ಮತ್ತು ಶಿವ­ಕುಮಾರ್‌ ಅವರನ್ನು ಸಂಪು­ಟಕ್ಕೆ ಸೇರಿ­­ಸಿಕೊಳ್ಳುವ ಮುನ್ನ ಅವರ ವಿರುದ್ಧ ಆರೋಪ­ಪಟ್ಟಿ ಸಲ್ಲಿಕೆಯಾ­ಗಿಲ್ಲ ಎಂಬುದು ಖಚಿತವಾದ ಬಳಿ­ಕವೇ ಸಂಪುಟದಲ್ಲಿ ಸ್ಥಾನ ನೀಡಲಾ­ಗಿದೆ’ ಎಂದು ದಿಗ್ವಿಜಯ್‌ ಸಿಂಗ್‌ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT