ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಲರಿ ಶ್ವೇತಭವನ ಪ್ರವೇಶಿಸುವರೇ...

ವಿದೇಶ ವಿದ್ಯಮಾನ
Last Updated 19 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಹಿಲರಿ ಕ್ಲಿಂಟನ್ ತಮ್ಮ ಉಮೇದುವಾರಿಕೆ ಘೋಷಿಸಿರುವ ಬೆನ್ನಲ್ಲೇ ಅಂತರರಾಷ್ಟ್ರೀಯ ಮಟ್ಟದ ರಾಜಕೀಯ ವಲಯದಲ್ಲಿ ನಾನಾ ರೀತಿಯ ಲೆಕ್ಕಾಚಾರಗಳು ಶುರುವಾಗಿವೆ.  ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿಯಾದ ಹಿಲರಿ ನಿರೀಕ್ಷೆಯಂತೆ ಡೆಮಾಕ್ರಟಿಕ್ ಪಕ್ಷದಿಂದ ಕಣಕ್ಕೆ ಇಳಿಯುವುದಾಗಿ ಕಳೆದ ವಾರ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಹಾಲಿ ಅಧ್ಯಕ್ಷ ಬರಾಕ್ ಒಬಾಮ ಅವರು ಇದನ್ನು ಅನುಮೋದಿಸಿ, ಬಹಿರಂಗವಾಗಿ ಬೆಂಬಲ ನೀಡಿರುವುದು ಆ ಪಕ್ಷದಲ್ಲೇ ಹಲವು ನಾಯಕರ ಹುಬ್ಬೇರಿಸಿದೆ.

ದ್ವಿಪಕ್ಷ ಪದ್ಧತಿ ಇರುವ ಅಮೆರಿಕದಲ್ಲಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳನ್ನು ಆಂತರಿಕ ಚುನಾವಣೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯಾ ಪಕ್ಷಗಳಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದ ತಲಾ ಒಬ್ಬ ಅಭ್ಯರ್ಥಿ ಅಂತಿಮವಾಗಿ ಅಧ್ಯಕ್ಷ ಚುನಾವಣೆಯ ಕಣದಲ್ಲಿ ಉಳಿಯುತ್ತಾರೆ. ಆಂತರಿಕ ಚುನಾವಣೆ ಮೂಲಕವೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪದ್ಧತಿ ಇರುವುದರಿಂದ, ಚುನಾವಣೆಗೆ ಮೊದಲೇ ಹಾಲಿ ಅಧ್ಯಕ್ಷರು ಯಾರಿಗೂ ಬಹಿರಂಗ ಬೆಂಬಲ ನೀಡುವಂತಿಲ್ಲ. ಆದರೆ, ಒಬಾಮ ಅವರು ಇದಕ್ಕೆ ತಿಲಾಂಜಲಿ ನೀಡಿ ಹಿಲರಿ ಅವರಿಗೆ ಬೆಂಬಲ ಸೂಚಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಒಬಾಮ ಎರಡನೇ ಸಲ ಅಧ್ಯಕ್ಷರಾಗಿದ್ದು, ಅಮೆರಿಕದ ಸಂವಿಧಾನದ ಪ್ರಕಾರ ಮೂರನೇ ಬಾರಿಗೆ ಅಧ್ಯಕ್ಷರಾಗಲು ಅವಕಾಶ ಇಲ್ಲ. ಹೀಗಾಗಿ ಅವರು ಮತ್ತೊಮ್ಮೆ ಕಣಕ್ಕೆ ಇಳಿಯುವ ಪ್ರಶ್ನೆಯೇ ಇಲ್ಲ. ಬೇರೆಯವರಿಗೆ ಅವಕಾಶ ಮಾಡಿಕೊಡುವುದು ಅನಿವಾರ್ಯ ಆಗಿರುವುದರಿಂದ ಒಬಾಮ ಅವರು ಸಹಜವಾಗಿಯೇ ಹೆಚ್ಚಿನ ಜನಪ್ರಿಯತೆ ಹೊಂದಿರುವ ಹಿಲರಿಗೆ ಬೆಂಬಲ ಸೂಚಿಸಿದ್ದಾರೆ. ಅಷ್ಟೆ ಅಲ್ಲದೆ ಇನ್ನೂ ಒಂದೇ ಹೆಜ್ಜೆ ಮುಂದೆ ಹೋಗಿರುವ ಅವರು, ಹಿಲರಿ ಅಮೆರಿಕದ ಅತ್ಯುತ್ತಮ ಅಧ್ಯಕ್ಷರಾಗಬಲ್ಲರು ಎಂದೂ ಮೆಚ್ಚುಗೆ ಸೂಚಿಸಿದ್ದಾರೆ.
‘ಸಾರ್ವತ್ರಿಕ ಚುನಾವಣೆಯಲ್ಲಿ ಹಿಲರಿ ನನ್ನ ಕಟ್ಟಾ ಬೆಂಬಲಿಗರಾಗಿದ್ದರು.  ವಿದೇಶಾಂಗ ಇಲಾಖೆಯ ಕಾರ್ಯದರ್ಶಿಯಾಗಿದ್ದ ಅವರು  ಗಣನೀಯ ಸೇವೆ ಸಲ್ಲಿಸಿದ್ದಾರೆ.   ನನಗೆ ಒಳ್ಳೆಯ ಸ್ನೇಹಿತೆಯೂ ಆಗಿರುವ ಆಕೆ ಅಮೆರಿಕದ ದಕ್ಷ ಅಧ್ಯಕ್ಷೆಯಾಗಲಿದ್ದಾರೆ’ ಎಂಬ ಭರವಸೆಯನ್ನೂ ಒಬಾಮ ವ್ಯಕ್ತಪಡಿಸಿದ್ದಾರೆ.

2008ರ ಚುನಾವಣೆಯಲ್ಲಿ ಒಬಾಮ ಎದುರಿಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಹಿಲರಿ ಅವರು , ಪ್ರಾಥಮಿಕ ಹಂತದ ಚುನಾವಣೆಯಲ್ಲೇ ಪರಾಭವಗೊಂಡಿದ್ದರು. ಆದರೂ, ಒಬಾಮ ಅವರು ಹಿಲರಿ ಅವರನ್ನು ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಕ ಮಾಡುವ ಮೂಲಕ ಎದುರಾಳಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ರಾಜಕೀಯ ತಂತ್ರಗಾರಿಕೆಯನ್ನು ಪ್ರಯೋಗಿಸಿದ್ದರು. ವಿದೇಶಾಂಗ ಕಾರ್ಯದರ್ಶಿಯಾಗಿ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದ ಹಿಲರಿ, ಮತ್ತೊಮ್ಮೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಸ್ಥಾನಕ್ಕೆ ಸ್ಪರ್ಧೆ ಮಾಡುವ ಮೂಲಕ ಶ್ವೇತಭವನದ ಮೇಲಿನ ಆಸೆಯನ್ನು ಬಹಿರಂಗಪಡಿಸಿದ್ದಾರೆ.

ಹಾದಿ ಸುಗಮವಲ್ಲ:  ಹಿಲರಿ ಅವರಿಗೆ ಒಬಾಮ ಅವರ ಬೆಂಬಲ ಇದ್ದರೂ,  ಅಭ್ಯರ್ಥಿ ಸ್ಥಾನದ ಹಾದಿ ಸುಗಮವಾಗಿಲ್ಲ. ಈ ಬಾರಿಯೂ ಸ್ಪರ್ಧೆ ಎದುರಿಸಬೇಕಾಗಿದೆ. ಮೇರಿಲ್ಯಾಂಡ್‌ನ ಮಾಜಿ ಗವರ್ನರ್ ಮಾರ್ಟಿನ್ ಒ ಮಲ್ಲೇಯ್ ಸೇರಿದಂತೆ ಹಲವರು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳಾಗಲು ಉತ್ಸುಕರಾಗಿದ್ದಾರೆ.  ಈಗಿನ ಮಟ್ಟಿಗೆ ಹಿಲರಿ ಅವರೇ ಪ್ರಬಲ ಅಭ್ಯರ್ಥಿ ಎಂದು ಮಾಧ್ಯಮಗಳು ಉಲ್ಲೇಖಿಸಿವೆ.

ಮೊದಲ ಮಹಿಳಾ ಅಧ್ಯಕ್ಷೆ:  2016ರ ಕೊನೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳಾಗಲು ಈಗಿನಿಂದಲೇ ಪೈಪೋಟಿ ನಡೆದಿದೆ. ಅಮೆರಿಕದ ಮಾಜಿ ಪ್ರಥಮ ಮಹಿಳೆಯಾದ ಹಿಲರಿ ಎರಡನೇ ಪ್ರಯತ್ನದಲ್ಲಾದರೂ ಶ್ವೇತಭವನದ ಚುಕ್ಕಾಣಿ ಹಿಡಿಯಲು ಗಂಭೀರ ಪ್ರಯತ್ನ ನಡೆಸಿದ್ದಾರೆ. ಅವರಿಗೆ ಶೇ 60ರಷ್ಟು ಮತಗಳು ಬೀಳಲಿವೆ ಎಂದು ‘ಟೈಮ್’ ನಿಯತಕಾಲಿಕೆ ತಿಳಿಸಿದೆ. ಮಾರ್ಟಿನ್ ಅವರಿಗೆ ಶೇ 1ರಷ್ಟು ಹಾಗೂ ಸೆನೆಟ್ ಸದಸ್ಯ ಬರ್ನಿ ಸ್ಯಾಂಡಸರ್್ ಅವರಿಗೆ ಶೇ 4ರಷ್ಟು ಮತಗಳು ದೊರಕಲಿವೆ ಎಂದು ತಿಳಿಸಲಾಗಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಲರಿ ಗೆದ್ದರೆ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ.

ವಿಶ್ವದ ಪ್ರಮುಖ ರಾಜಕೀಯ ನಾಯಕರ ಗಮನ ಸೆಳೆದಿರುವ 67 ವರ್ಷದ ಹಿಲರಿ, 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೆ, ಅಂತರರಾಷ್ಟ್ರೀಯ ಸಂಬಂಧಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಲೆಕ್ಕಾಚಾರಗಳೂ ಈಗಾಗಲೇ ಆರಂಭವಾಗಿವೆ. ಪಾದರಸದಂತೆ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಹಿಲರಿ ಅವರ ವಿರುದ್ಧವೂ ಹಿಂದೆ ದೂರುಗಳು ಕೇಳಿಬಂದಿದ್ದವು. ಸರ್ಕಾರಿ ಇ-ಮೇಲ್ ಖಾತೆಯನ್ನು ಖಾಸಗಿಯಾಗಿ ಬಳಸಿಕೊಳ್ಳುವ ಮೂಲಕ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ,ಈ ಬಗ್ಗೆ ತಲೆಕೆಡಿಸಿಕೊಳ್ಳದ ಹಿಲರಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.

ನ್ಯೂಯಾರ್ಕ್‌ನ ನಿಯತಕಾಲಿಕವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ  ಶ್ವೇತಭವನದ ಆಸೆಯಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಹಿಲರಿ, ‘ ಆಸೆಯೂ ಇದೆ. ವಾಸ್ತವದ ಅರಿವೂ ಇದೆ. ಈಗ ಅಧಿಕಾರದಲ್ಲಿ ಇರುವವರು ಎದುರಿಸುತ್ತಿರುವ ಸಮಸ್ಯೆ, ಗೊಂದಲಗಳ ಬಗ್ಗೆಯೂ ಗೊತ್ತಿದೆ. ನಾನು ಎಲ್ಲಿಯೇ ಇರಲಿ, ಯಾವುದೇ ಹುದ್ದೆ ಅಲಂಕರಿಸಲಿ, ನನ್ನ ಜನ ಹಾಗೂ ದೇಶಕ್ಕೆ ಯಾವ ರೀತಿಯ ಮೌಲ್ಯಗಳು ಉತ್ತಮ ಅನಿಸುತ್ತವೆಯೋ ಅವುಗಳ ಪ್ರತಿಪಾದನೆಗೆ ಮುಂದಾಗುತ್ತೇನೆ’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಯಾರು?: ರಿಪಬ್ಲಿಕನ್ ಪಕ್ಷದಿಂದ ಕಣಕ್ಕೆ ಇಳಿಯುವುದಾಗಿ ಫ್ಲಾರಿಡಾ ಸೆನೆಟ್ ಸದಸ್ಯ ಮಾರ್ಕೊ ರೂಬಿಯೊ ಪ್ರಕಟಿಸಿದ್ದು, ಅವರಿಗೆ ಶೇ 40ರಷ್ಟು ಹಾಗೂ ಫ್ಲಾರಿಡಾ ಗವರ್ನರ್ ಜೆಬ್ ಬುಷ್ ಅವರಿಗೆ ಶೇ 54ರಷ್ಟು ಮತಗಳು ಬೀಳಲಿವೆ ಎಂದು ಹೇಳಲಾಗಿದೆ. ಟೆಕ್ಸಾಸ್ ಸೆನೆಟ್ ಸದಸ್ಯ ಟೆಡ್ ಕ್ರೂಜ್, ವಿಸ್ಕಾನ್ಸಿನ್ ಗವರ್ನರ್ ಸ್ಕಾಟ್ ವಾಕರ್ ಅವರೂ ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾಗಲು ಪ್ರಯತ್ನ ನಡೆಸಿದ್ದಾರೆ. 43 ವರ್ಷದ ರೂಬಿಯೊ ಕಣಕ್ಕೆ ಇಳಿದರೆ, ಇದುವರೆಗೆ ಸ್ಪರ್ಧೆ ಮಾಡಿದವರ ಪೈಕಿ ಅತ್ಯಂತ ಕಿರಿಯ ವಯಸ್ಸಿನವರಾಗಲಿದ್ದಾರೆ.

ಮಧ್ಯಮ ವರ್ಗದವರ ಆರ್ಥಿಕ ಭದ್ರತೆ ಮತ್ತು ಕಾರ್ಮಿಕರ ಕೆಲಸದ ಅವಕಾಶವನ್ನು ಹೆಚ್ಚಿಸುವುದಕ್ಕೆ ಒತ್ತು ನೀಡುವುದಾಗಿ ಹಿಲರಿ ಹೇಳಿದ್ದಾರೆ. ಈಗಾಗಲೇ ಪ್ರಚಾರ ಕಣಕ್ಕೆ ಧುಮುಕಿರುವ ಅವರು ಈ ಅಂಶಗಳನ್ನೇ ಪ್ರಮುಖವಾಗಿ ಪ್ರಸ್ತಾಪಿಸುತ್ತಿದ್ದಾರೆ.

ಭಾರತದ ಜತೆಗಿನ ಸಂಬಂಧ ಗಟ್ಟಿ: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಪತ್ನಿಯಾಗಿರುವ ಹಿಲರಿ, ಅಮೆರಿಕದ ಪ್ರಥಮ ಮಹಿಳೆಯಾಗಿ 1995ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಆಗಿನಿಂದಲೂ ಭಾರತದೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಿದ್ದು, ಅವರು ಅಧ್ಯಕ್ಷರಾದರೆ ಭಾರತ ಸೇರಿದಂತೆ ಏಷ್ಯಾದ ರಾಷ್ಟ್ರಗಳೊಂದಿಗಿನ ಸಂಬಂಧ ಮತ್ತಷ್ಟು ಬಲಗೊಳ್ಳಲಿದೆ ಎಂದು ವಿಶ್ಲೇಷಿಸಲಾಗಿದೆ.

ಪ್ರತಿರೋಧ: ಹಿಲರಿ ಸ್ಪರ್ಧೆಯ ಘೋಷಣೆ ಹೊರ ಬೀಳುತ್ತಿದ್ದಂತೆಯೇ, ರಿಪಬ್ಲಿಕನ್ ಪಕ್ಷದ ನಾಯಕರು ಹಿಲರಿ ವಿರುದ್ಧ ಕಿಡಿಕಾರಿದ್ದಾರೆ. ಹಿಲರಿ ಅವರಿಗೆ ಅಧಿಕಾರ ದಾಹ ಇದೆ. ಆಡಳಿತಯಂತ್ರ ಮತ್ತಷ್ಟು ಕುಸಿಯಲಿದ್ದು, ಭ್ರಷ್ಟಾಚಾರ ಹೆಚ್ಚಾಗಲಿದೆ ಎಂದು ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಲು ಬಯಸಿರುವ ಸೆನೆಟ್ ಸದಸ್ಯ ರಾಂಡ್ ಪೌಲ್ ವ್ಯಂಗ್ಯವಾಡಿದ್ದಾರೆ.

ಚುನಾವಣೆಗೆ ಇನ್ನೂ ಸಾಕಷ್ಟು ಕಾಲಾವಕಾಶ ಇದ್ದು, ಮುಂದಿನ ದಿನಗಳಲ್ಲಿ ಆಗಬಹುದಾದ ಬದಲಾವಣೆಗಳನ್ನು ಈಗಲೇ ಊಹಿಸುವುದು ಕಷ್ಟ. ಹಿಲರಿ ಆಂತರಿಕ ಚುನಾವಣೆಯಲ್ಲಿ  ಗೆದ್ದು, ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾದರೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ ವಿಶ್ವದಾದ್ಯಂತ ತೀವ್ರ ಕುತೂಹಲ ಮೂಡಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT