ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗಂತಾರೆ...

ಸಂಸದರ ವೇತನಕ್ಕೆ ಆಯೋಗ
Last Updated 2 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಅರ್ಥಪೂರ್ಣ ಕಲಾಪಕ್ಕೆ ಒತ್ತು ಕೊಡಿ
ಬಹುಶಃ ಸಂಸದರೇ ತಮ್ಮ ವೇತನ– ಭತ್ಯೆ ಕುರಿತು ತೀರ್ಮಾನಿಸುವ ಬದಲು ಹೊರಗಿನವರು ಶಿಫಾರಸು ಮಾಡಲಿ ಎನ್ನುವ

ಉದ್ದೇಶದಿಂದ ಸಂಸದರ ಸಂಬಳ– ಭತ್ಯೆ ಕುರಿತ ಶಿಫಾರಸಿಗೆ ಸ್ವತಂತ್ರ ಆಯೋಗ ರಚಿಸಲು ಸರ್ಕಾರ ಚಿಂತಿಸಿರಬಹುದು. ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಸಂಸದರು, ಶಾಸಕರಿಗೆ ವೇತನ, ಭತ್ಯೆ ಅತಿ ಮುಖ್ಯವಾಗುತ್ತದೆ. ಅಡ್ಡ ದಾರಿ ಹಿಡಿದವರಿಗೆ ಇದು ಯಕಃಶ್ಚಿತ್‌ ಅನಿಸಬಹುದು.

1962ರಲ್ಲಿ ನಾನು ಮೊದಲ ಸಲ ಶಾಸಕನಾದಾಗ ಸಂಬಳ ₹ 150. ಈಗ ಶಾಸಕರು– ಸಂಸದರ ಸಂಬಳ ಎಷ್ಟಿದೆ ಎಂಬ ವಿವರಗಳಿಗೆ ಹೋಗುವುದಿಲ್ಲ. ಎಂ.ಪಿ.ಗಳ ಕ್ಷೇತ್ರ ಅಭಿವೃದ್ಧಿ ಯೋಜನೆಯಡಿ ಪ್ರತಿ ವರ್ಷ ಐದು ಕೋಟಿ ರೂಪಾಯಿ ಬರುತ್ತದೆ. ಈ ಹಣವನ್ನು ತಮ್ಮ ಕ್ಷೇತ್ರದಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳಿಗೆ ಹಂಚಬೇಕಾಗುತ್ತದೆ. ಕೆಲವರು ಕಮಿಷನ್‌ ಪಡೆದು ಅನುದಾನ ಕೊಡುತ್ತಾರೆ. ಇಂಥ ಪ್ರಕರಣಗಳು ಲೋಕಸಭೆಯಲ್ಲೇ ಚರ್ಚೆ ಆಗಿವೆ. ಉತ್ತರದ ರಾಜ್ಯವೊಂದರ ಮಾಜಿ ಮುಖ್ಯಮಂತ್ರಿಯೊಬ್ಬರು ಸಂಸದರ ನಿಧಿ ಹೇಗೆ ದುರ್ಬಳಕೆ ಮಾಡಿಕೊಂಡರೆಂಬ ಸಂಗತಿ ಎಲ್ಲರಿಗೂ ಗೊತ್ತಿದೆ. ಆ ಬಗ್ಗೆ ಪ್ರಸ್ತಾಪಿಸುವುದಿಲ್ಲ.

ಒಂದೂವರೆ ವರ್ಷ ಮುಖ್ಯಮಂತ್ರಿ, ಹತ್ತೂವರೆ ತಿಂಗಳು ಪ್ರಧಾನಿ ಆಗಿದ್ದೆ. ಆಗ ಶಾಸಕರು ಅಥವಾ ಸಂಸದರು ವೇತನ ಜಾಸ್ತಿ ಮಾಡಿ ಎಂದು ಅರ್ಜಿ ಹಾಕಲಿಲ್ಲ. ತಮ್ಮ ನೋವು ಹೇಳಿಕೊಳ್ಳಲಿಲ್ಲ. ಆದರೆ, ಈಗ ಕಾಲ ಬದಲಾಗಿದೆ. ಜನಪ್ರತಿನಿಧಿಗಳ ನಿರೀಕ್ಷೆಗಳೂ ಹೆಚ್ಚಾಗಿವೆ. ಅದನ್ನು ತಪ್ಪು ಎಂದು ಹೇಳುವುದಿಲ್ಲ. ಶಾಸಕರು, ಸಂಸದರ ಮನೆಗಳಿಗೆ ಪ್ರತಿನಿತ್ಯ ನೂರಾರು ಜನ ಬರುತ್ತಾರೆ. ಬಂದವರನ್ನು ಉಪಚರಿಸಬೇಕಾಗುತ್ತದೆ. ಅದಕ್ಕೆ ಹಣ ಬೇಕಾಗುತ್ತದೆ. ಆದರೆ ನಾವು ಪಡೆಯುವ ಸೌಲಭ್ಯಗಳಿಗೆ ತಕ್ಕಂತೆ ಕೆಲಸ ಮಾಡುತ್ತಿದ್ದೇವೆಯೇ ಎಂಬ ಬಗ್ಗೆ  ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ. ನಾನು ಅಮೆರಿಕ ಮತ್ತಿತರ ದೇಶಗಳನ್ನು ನೋಡಿ ಬಂದಿದ್ದೇನೆ. ಅಲ್ಲಿ ಜನಪ್ರತಿನಿಧಿಗಳು ಅಥವಾ ಶಾಸನ ಸಭೆಗಳು ಹೇಗೆ ನಡೆಯುತ್ತವೆ, ಎಂತೆಂಥ ವಿಷಯಗಳ ಮೇಲೆ ಚರ್ಚೆ ನಡೆಯುತ್ತದೆ ಎಂಬುದನ್ನು ಗಮನಿಸಿದ್ದೇನೆ. ಅಮೆರಿಕದ ‘ಹೌಸ್‌ ಕಮಿಟಿ’ ವರ್ಷದಲ್ಲಿ ಒಂದು ತಿಂಗಳು ಬಿಟ್ಟು ಮಿಕ್ಕ ಹನ್ನೊಂದು ತಿಂಗಳೂ ಸಭೆ ಸೇರುತ್ತದೆ. ನಮ್ಮ ಸಂಸತ್ತು ನೋಡಿ!

ಮಾಜಿ ಪ್ರಧಾನಿಯಾದ ನನಗೆ ಸಂಸತ್ತಿನಲ್ಲಿ ಮೊದಲ ಸಾಲಿನ ಆಸನ ನಿಗದಿ ಮಾಡಿದ್ದಾರೆ. ಆದರೆ ಮಾತನಾಡಲು ಅವಕಾಶವನ್ನೇ ಕೊಡುವುದಿಲ್ಲ. ಪಕ್ಷಗಳ ಬಲಾಬಲದ ಮೇಲೆ ಸಮಯ ನಿಗದಿ ಮಾಡಿದ್ದಾರೆ. ಇಬ್ಬರು ಸದಸ್ಯರಿರುವ ನಮ್ಮ ಪಕ್ಷ 16ನೇ ಸ್ಥಾನದಲ್ಲಿದೆ. ಮಾತನಾಡುವುದಕ್ಕೆ ಮೂರು ನಿಮಿಷ ಕೊಡುತ್ತಾರೆ. ಗಂಭೀರ ವಿಷಯಗಳನ್ನು ಪ್ರಸ್ತಾಪಿಸಲು ನಿಯಮ 193ರ ಅಡಿ ನೋಟಿಸ್‌ ಕೊಟ್ಟರೆ ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡಿ ಎನ್ನುತ್ತಾರೆ. ಇದು ಸಂಸತ್‌ ನಡೆಸುವ ರೀತಿಯೇ?

ಸಂಸದರ ಸಂಬಳ, ಸಾರಿಗೆ, ಭತ್ಯೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಕ್ಕಿಂತಲೂ ಅರ್ಥಪೂರ್ಣವಾಗಿ ಸದನವನ್ನು  ನಡೆಸಲು ಚಿಂತಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಆಲೋಚನೆ ನಡೆಯದಿದ್ದರೆ ನಮ್ಮ ಸಂಸದೀಯ ವ್ಯವಸ್ಥೆ ಮೇಲೆ ಜನರಿಗೂ ಜುಗುಪ್ಸೆ ಬರಬಹುದು.
ಎಚ್‌.ಡಿ.ದೇವೇಗೌಡ, ಸಂಸತ್‌ ಸದಸ್ಯ

ಕಾಲಕಾಲಕ್ಕೆ ಪರಾಮರ್ಶೆ ನಡೆಯಲಿ

ಸಮಾಜದಲ್ಲಿ ರಾಜಕಾರಣಿಗಳ ಬಗ್ಗೆ ಒಂದು ರೀತಿಯ ನಕಾರಾತ್ಮಕ ಧೋರಣೆ ಬೆಳೆದು ಬಿಟ್ಟಿದೆ. ಶಾಸಕರು, ಸಂಸದರು ಅಥವಾ  ಸಾರ್ವಜನಿಕ ಜೀವನದಲ್ಲಿ ಇರುವವರು ಏನೇ ಮಾಡಿದರೂ ತಪ್ಪು ಎಂಬ ಭಾವನೆ ಬಂದಿದೆ. ಜನರಲ್ಲಿ ಈ ಅಭಿಪ್ರಾಯ ಬರಲು ನಾವೂ ಕಾರಣ. ಆದರೆ, ಎಲ್ಲರೂ ಹೀಗಿರುವುದಿಲ್ಲ. ಯಾರೋ ಕೆಲವರನ್ನು ನೋಡಿ ಎಲ್ಲರನ್ನೂ ಅಳೆಯುವುದು ಸರಿಯಲ್ಲ. ಶೇ 90ರಷ್ಟು ಸಂಸದರಿಗೆ ತಮ್ಮ ಕ್ಷೇತ್ರ, ರಾಜ್ಯ ಮತ್ತು ರಾಷ್ಟ್ರದ ಬಗ್ಗೆ ನಿಷ್ಠೆಯಿದೆ. ಶೇ 10ರಷ್ಟು ಜನಪ್ರತಿನಿಧಿಗಳು ಉದಾಸೀನ ತೋರಬಹುದು.

ಜನಪ್ರತಿನಿಧಿಗಳಿಗೆ ಸಿಗುತ್ತಿರುವ ಸೌಲಭ್ಯಗಳನ್ನು ವಿಮರ್ಶಿಸುವಾಗ ಈ ಶೇ 90 ಭಾಗವನ್ನು ನೆನಪಿನಲ್ಲಿಡಬೇಕು. ಸರ್ಕಾರಿ ಅಧಿಕಾರಿಗಳು ಅಥವಾ ನೌಕರರು ಪಡೆಯುತ್ತಿರುವ ಸಂಬಳ, ಸಾರಿಗೆ ಜತೆ ತಾಳೆ ಹಾಕಿ ನೋಡಬೇಕು. ಆಯೋಗ ರಚನೆಯಿಂದ ಜನರ ತಪ್ಪು ಕಲ್ಪನೆಯೂ ನಿವಾರಣೆ ಆಗುತ್ತದೆ. ಸಂಸದರೇ ತಮ್ಮ ಸಂಬಳ, ಸಾರಿಗೆ ಬಗ್ಗೆ ತೀರ್ಮಾನಿಸುವ ಬದಲು ಆಯೋಗ ಶಿಫಾರಸು ಮಾಡುವುದು ಸ್ವಾಗತಾರ್ಹ.

ಸಂಸದರಲ್ಲಿ ಎಲ್ಲರೂ ಅಗರ್ಭ ಶ್ರೀಮಂತರು ಇರುವುದಿಲ್ಲ. ಯಾರೋ ಕೆಲವರು ಇರಬಹುದು. ಅವರು ಸಂಬಳಕ್ಕೆ ಪ್ರಾಮುಖ್ಯತೆ ಕೊಡದೆ ಇರಬಹುದು. ಉಳಿದವರಿಗೆ ಸಂಬಳ, ಸಾರಿಗೆ, ಭತ್ಯೆ ಮುಖ್ಯವಾಗುತ್ತದೆ. ಕಾಲಕಾಲಕ್ಕೆ ಜನಪ್ರತಿನಿಧಿಗಳಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಪರಾಮರ್ಶೆ ನಡೆಯಬೇಕು. ಈ ವಿಷಯದಲ್ಲಿ ಜನರಿಗಿರುವ ತಪ್ಪು ತಿಳಿವಳಿಕೆ ನಿವಾರಿಸುವ ಹೊಣೆಯೂ ನಮ್ಮ ಮೇಲಿದೆ. ಈ ಸಂಗತಿಯನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.
ಬಿ.ಕೆ.ಹರಿಪ್ರಸಾದ್‌,  ರಾಜ್ಯಸಭಾ ಸದಸ್ಯ

ಕನಿಷ್ಠ ₹ 3 ಲಕ್ಷ ವೇತನ ಇರಲಿ
ಒಬ್ಬ ಪ್ರಾಮಾಣಿಕ ಸಂಸದನಿಗೆ ತಿಂಗಳಿಗೆ ಕೊಡುತ್ತಿರುವ ₹ 50 ಸಾವಿರ ವೇತನ ಯಾವುದಕ್ಕೂ ಸಾಕಾಗುವುದಿಲ್ಲ.  ಹೀಗಾಗಿ ಕನಿಷ್ಠ ₹ 3 ಲಕ್ಷ ಆದರೂ

ಕೊಡಬೇಕಾಗುತ್ತದೆ. ಮೈಸೂರಿನಲ್ಲಿರುವ ಮನೆ ಬಾಡಿಗೆಗೆ ₹ 22 ಸಾವಿರ ಕೊಡುತ್ತಿದ್ದೇನೆ. ವಿದ್ಯುತ್‌ ಮತ್ತು ನೀರಿನ ಬಿಲ್‌ ₹ 3 ಸಾವಿರ. ಮಗಳ ಶಾಲೆ ಶುಲ್ಕ ವರ್ಷಕ್ಕೆ ₹ 90 ಸಾವಿರ.  ಈ ಖರ್ಚುಗಳ ಜತೆಗೆ ಕುಟುಂಬ ನಿರ್ವಹಣೆ ಬೇರೆ.  ಇವೆಲ್ಲವೂ ₹ 50 ಸಾವಿರ ವೇತನದಿಂದ ಸಾಧ್ಯವೇ?

ಕ್ಷೇತ್ರ ಭತ್ಯೆ ರೂಪದಲ್ಲಿ ಬರುವ ₹ 45 ಸಾವಿರ ಮನೆ ಮತ್ತು  ಕಚೇರಿಗೆ ಬರುವ ಜನರಿಗೆ ಕಾಫಿ–ಟೀ ಕೊಡುವುದಕ್ಕೂ ಸಾಕಾಗುವುದಿಲ್ಲ. ಕನಿಷ್ಠ ಅಂದರೂ ದಿನಕ್ಕೆ 300 ಜನ ಬರುತ್ತಾರೆ.  ಬಂದವರಿಗೆ ಕಾಫಿ– ಟೀ ಕೊಡುವುದು ಸಂಪ್ರದಾಯ. ಇದಕ್ಕೆ ಏನಿಲ್ಲ ಅಂದರೂ ದಿನಕ್ಕೆ ₹ 2,500 ಬೇಕು. ತಿಂಗಳಿಗೆ ಎಷ್ಟಾಯಿತು ನೀವೇ ಲೆಕ್ಕ ಹಾಕಿ?

ಸ್ಟೇಷನರಿ ಸಲುವಾಗಿ ₹ 15 ಸಾವಿರ ಕೊಡುವುದು ಕೂಡ ಯಾವುದಕ್ಕೂ ಸಾಕಾಗುವುದಿಲ್ಲ. ತಿಂಗಳಿಗೆ ಎರಡು ಕಾರ್ಟ್ರಿಡ್ಜ್‌ ಬದಲಿಸಬೇಕಾಗುತ್ತದೆ. ದೇವಸ್ಥಾನ, ರೈಲ್ವೆ ಟಿಕೆಟ್‌, ಶಾಲೆ ಸೀಟು ಹೀಗೆ ಹಲವು ಕಾರಣಗಳಿಗಾಗಿ ಜನರಿಗೆ ಲೆಟರ್‌ ಕೊಡಬೇಕಾಗುತ್ತದೆ. ದಿನಕ್ಕೆ ಕನಿಷ್ಠ ಅಂದರೂ 20–30 ಲೆಟರ್‌ ಕೊಡುತ್ತೇನೆ. ಇದನ್ನು ₹ 15 ಸಾವಿರದಲ್ಲಿ ನಿರ್ವಹಿಸುವುದು ಹೇಗೆ ?

ಸಂಸದರಿಗೆ ವೈದ್ಯಕೀಯ ವೆಚ್ಚ ಕೂಡ ಪೂರ್ಣ ಸಿಗುತ್ತದೆ ಎನ್ನುವ ಅಭಿಪ್ರಾಯ ಜನರಲ್ಲಿದೆ. ನನ್ನದೇ ಅನುಭವ ಹೇಳುತ್ತೇನೆ. ನನ್ನ ಪತ್ನಿಗೆ ಒಂದು ಕಾಲು ಇಲ್ಲ. ಹೀಗಾಗಿ ಕೃತಕ ಕಾಲಿಗೆ ಎಷ್ಟಾಗುತ್ತದೆ ಎಂದು ಸಂಸತ್ತಿನ ಕಚೇರಿಯಲ್ಲಿ ವಿಚಾರಿಸಿದೆ. ಅದಕ್ಕೆ ಅಲ್ಲಿನ ಅಧಿಕಾರಿಗಳು ₹ 10 ಸಾವಿರ ಕೊಡುತ್ತೇವೆ ಅಂದರು. ಈ 10 ಸಾವಿರದಲ್ಲಿ ಜೈಪುರದ ಕಾಲು ಕೂಡ ಬರುವುದಿಲ್ಲ ಎಂದು ಸುಮ್ಮನಾದೆ. ಇದು ನಮ್ಮ ಪರಿಸ್ಥಿತಿ. ಪತ್ರಕರ್ತನಾಗಿದ್ದಾಗ ನನ್ನ ವೇತನ ₹ 1.33 ಲಕ್ಷ ಇತ್ತು. ಇದರ ಜತೆಗೆ ವರ್ಷಕ್ಕೆ ನನ್ನ ಪುಸ್ತಕಗಳ ರಾಯಲ್ಟಿ ₹ 6 ಲಕ್ಷ ಬರುತ್ತಿತ್ತು. ಇವೆಲ್ಲ ಸೇರಿ ತಿಂಗಳಿಗೆ ₹ 1.83 ಲಕ್ಷ  ಬರುತ್ತಿತ್ತು. ಈಗ ದಿಢೀರ್‌ ₹  50 ಸಾವಿರಕ್ಕೆ ಇಳಿದರೆ ನನ್ನ ಗತಿ ಏನಾಗಬಾರದು.

ಶೇಕಡ 100ರಷ್ಟು ವೇತನ ಹೆಚ್ಚಳಕ್ಕೆ ಶಿಫಾರಸು ಮಾಡಿದ್ದನ್ನು ಟಿ.ವಿ.ಯಲ್ಲಿ  ಕೆಲವರು ಗೇಲಿ ಮಾಡಿ ಮಾತನಾಡಿದರು. ಶೇಕಡ ನೂರರಷ್ಟು ವೇತನ ಹೆಚ್ಚಳ ಅಂದರೂ ಈಗಿನ 50 ಸಾವಿರದಿಂದ ಒಂದು ಲಕ್ಷ ಆಗುತ್ತದೆ ಅಷ್ಟೆ. ಅದರಿಂದಲೂ ನಮ್ಮ ಜೀವನ ಮಟ್ಟ ಸುಧಾರಿಸುವುದಿಲ್ಲ. ಸಂಸದರಲ್ಲಿ ಪ್ರಾಮಾಣಿಕತೆ ನಿರೀಕ್ಷೆ ಮಾಡಬೇಕಾದರೆ ಮೊದಲು ಅವರ ವೇತನ ಹೆಚ್ಚಿಸಬೇಕು. ಅಮೆರಿಕ, ಇಂಗ್ಲೆಂಡ್‌ ಸೇರಿದಂತೆ ಹಲವು ದೇಶಗಳಲ್ಲಿ ಶೇ 99ರಷ್ಟು ಜನಪ್ರತಿನಿಧಿಗಳು ಪ್ರಾಮಾಣಿಕರಿರುತ್ತಾರೆ. ಕಾರಣ ಅಲ್ಲಿ ವೇತನ ಹೆಚ್ಚು ಇದೆ.  ನಮ್ಮಲ್ಲಿನ ಬಹುತೇಕ ರಾಜಕಾರಣಿಗಳು ರಿಯಲ್ ಎಸ್ಟೇಟ್‌ ಸೇರಿದಂತೆ ತಮ್ಮದೇ ವ್ಯವಹಾರ ಇಟ್ಟುಕೊಂಡಿರುತ್ತಾರೆ. ಅಂತಹವರಿಗೆ ಕಡಿಮೆ ವೇತನ ಕೊಟ್ಟರೂ ಕಷ್ಟ ಆಗದು.  ಆದರೆ, ನಮ್ಮಂತಹವರಿಗೆ ಕಷ್ಟ ಆಗುತ್ತದೆ. ಹೀಗಾಗಿ ವೇತನ ಹೆಚ್ಚಳದ ಪರ ಇದ್ದೇನೆ.
ಪ್ರತಾಪ್‌ ಸಿಂಹ, ಸಂಸತ್‌ ಸದಸ್ಯ

ವೇತನದಿಂದಲೇ ಜೀವನ ನಿರ್ವಹಣೆ ಸಲ್ಲ

ಸಂಸದರೇ ಸೇರಿಕೊಂಡು ವೇತನ ಹೆಚ್ಚಿಸಿಕೊಳ್ಳುವುದರ ಬದಲು, ಪ್ರತ್ಯೇಕ ವೇತನ ಆಯೋಗ ರಚಿಸುವುದು  ಸರಿಯಾದ ತೀರ್ಮಾನ. ಆದರೆ, ಈ ಆಯೋಗ ಸಂಸದರು ನೌಕರರಲ್ಲ ಎಂಬುದನ್ನು ಗಮನದಲ್ಲಿ ಇಟ್ಟು ತನ್ನ ಶಿಫಾರಸುಗಳನ್ನು ಮಾಡಬೇಕಾಗುತ್ತದೆ.
ಸಂಸದರಿಗೆ ವೇತನ ನೀಡುವುದು ಜೀವನ ನಿರ್ವಹಣೆಗೆ ಅಲ್ಲ. ಅವರು ಸಮಾಜ ಸೇವೆ ಸಲುವಾಗಿ ರಾಜಕಾರಣಕ್ಕೆ ಬಂದಿದ್ದಾರೆ. ಹೀಗಾಗಿ ಅವರು ಜೀವನ ನಿರ್ವಹಣೆಗೆ ಬೇಕಾಗುವಷ್ಟು ವೇತನ ಅಪೇಕ್ಷೆ ಮಾಡುವುದು ಸರಿಯಲ್ಲ. ನಾನು ಸಚಿವ ಮತ್ತು ದೆಹಲಿ ಪ್ರತಿನಿಧಿಯಾಗಿ ಕೆಲಸ ಮಾಡಿದಾಗಲೂ ವೇತನ, ಮನೆ ಬಾಡಿಗೆ ಭತ್ಯೆ ಪಡೆಯಲಿಲ್ಲ. 2013ರಿಂದ ಶಾಸಕರ ವೇತನ ಕೂಡ ಪಡೆಯುತ್ತಿಲ್ಲ. ಇದು ನನ್ನ ಪಾಲಿಸಿ. ಮುಂದೆ ಸಚಿವನಾದರೂ ಯಾವ ವೇತನ ಮತ್ತು ಭತ್ಯೆಗಳನ್ನು ಪಡೆಯುವುದಿಲ್ಲ.
ಬಸವರಾಜ ರಾಯರೆಡ್ಡಿ, ಶಾಸಕ, ಮಾಜಿ ಸಂಸದ

ಪ್ರತ್ಯೇಕ ಆಯೋಗ ಅನಗತ್ಯ

ಸಂಸದರ ವೇತನ ಹೆಚ್ಚಳ ಕುರಿತು ಶಿಫಾರಸು ಮಾಡುವ ಅಧಿಕಾರ ಇರುವುದು ಸಂಸತ್ತಿನ ಸಮಿತಿಗೆ. ಅದು ಕೊಟ್ಟ ವರದಿಯನ್ನು ಅಂಗೀಕರಿಸುವುದು

ಮೊದಲಿನಿಂದಲೂ ನಡೆದುಬಂದಿರುವ ಸಂಪ್ರದಾಯ. ಇದು ನಿಯಮ ಕೂಡ. ಆದರೆ, ಸರ್ಕಾರ ಸಮಿತಿಯ ಶಿಫಾರಸುಗಳನ್ನು ಪಕ್ಕಕ್ಕೆ ಇಟ್ಟು ಈಗ ವೇತನ ಆಯೋಗ ರಚಿಸಲು ಮುಂದಾಗಿರುವುದು ಸರಿಯಾದ ತೀರ್ಮಾನವಲ್ಲ.
ಸಂಸದರ ವೇತನ ಪರಿಷ್ಕರಣೆ ಸಮಿತಿಯೂ ಸುದೀರ್ಘವಾಗಿ ಚರ್ಚೆ ನಡೆಸಿ ಕೆಲವು ತೀರ್ಮಾನಗಳನ್ನು ಮಾಡಿದೆ. ನಾನು ಕೂಡ ಆ ಸಮಿತಿಯ  ಸದಸ್ಯ. ನಮ್ಮ ಸಮಿತಿಯ ಶಿಫಾರಸುಗಳು ಸರಿಯಾಗಿಯೇ ಇವೆ. ಸರ್ಕಾರ ಯಾವ ಕಾರಣಕ್ಕೆ ಆಯೋಗ ರಚನೆ  ಪ್ರಸ್ತಾವ ಇಟ್ಟಿದೆಯೋ ಗೊತ್ತಾಗುತ್ತಿಲ್ಲ. ಆಯೋಗದ ಸದಸ್ಯರಿಂದಲೂ ವರದಿ ಪಡೆಯುವ ಅಗತ್ಯ ಏನಿತ್ತು? ಸಂಸದೀಯ ಸಮಿತಿ ವರದಿಯನ್ನು ಒಪ್ಪುವುದೇ ಒಳ್ಳೆಯದು.
ಸಿ.ಎಸ್.ಪುಟ್ಟರಾಜು, ಸಂಸತ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT