ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗಿರಲಿ ಗ್ರಂಥಾಲಯ

ಸೂರು ಸ್ವತ್ತು
Last Updated 18 ಜೂನ್ 2015, 19:30 IST
ಅಕ್ಷರ ಗಾತ್ರ

ಗ್ರಂಥಾಲಯ ಮನೆಯ ಯಾವ ಭಾಗದಲ್ಲಿ, ಹೇಗೆ ಇರಬೇಕು ಎನ್ನುವ ಪ್ರಶ್ನೆಗಳು ಅನೇಕರಲ್ಲಿ ಇರುತ್ತವೆ. ಅವಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನವಿದು.

ಸಾಹಿತ್ಯದಲ್ಲಿ ಒಲವಿರುವವರಿಗೆ ಪುಸ್ತಕಗಳೆಂದರೆ ಅತೀ ಮುದ್ದು... ಒಂದೊಂದೇ ಪುಸ್ತಕವನ್ನು ಖರೀದಿ ಮಾಡಲು ಆರಂಭಿಸಿ ಕೊನೆಗೆ ಮನೆಯಲ್ಲಿ ಪುಸ್ತಕಗಳನ್ನು ಇಡಲು ಜಾಗವೇ ಇಲ್ಲದಂತಾಗಿರುವ ಅನೇಕ ಉದಾಹರಣೆಗಳನ್ನು ನಾವು ಕಾಣಬಹುದು.  ಇಂತಹ ಪುಸ್ತಕ ಪ್ರೇಮಿಗಳು ಅವರ ಸಂಗ್ರಹದ ಪುಸ್ತಕಗಳನ್ನು ಮಕ್ಕಳಂತೆ ಜೋಪಾನ ಮಾಡಿರುತ್ತಾರೆ. ಇವರು ಹೊಸದಾಗಿ ಮನೆಯನ್ನೇನಾದರೂ ಕಟ್ಟಿಸಲು ಇಚ್ಛಿಸಿದರೆ ಮೊದಲು ಪ್ರಾಶಸ್ತ್ಯ ಕೊಡುವುದು ಈ ಪುಸ್ತಕಗಳಿಗೆ. 

ಇಷ್ಟು ದಿನ ದೂಳು ಹಿಡಿದಿದ್ದ ಹೊತ್ತಿಗೆಗಳಿಗೆ ತಾವು ನಿರ್ಮಿಸುವ ಮನೆಯಲ್ಲಿ ಒಂದು ಸುಂದರ ಸ್ಥಳಾವಕಾಶ ಕಲ್ಪಿಸಬೇಕೆಂಬ ಆಸೆ ಎಲ್ಲಾ ಪುಸ್ತಕ ಪ್ರೇಮಿಗಳದ್ದು. ಇವರಿಗೆ ಹೊತ್ತು ಕಳೆಯಲು ನೆರವಾಗುವುದು ಈ ಹೊತ್ತಿಗೆಗಳೇ. ಕೆಲವರಿಗಂತೂ ಪುಸ್ತಕಗಳೇ ಸ್ನೇಹಿತರಂತೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಪುಸ್ತಕ ಪ್ರೇಮಿಗಳಿಗೆ ಇ–ಬುಕ್‌ಗಳಿಗಿಂತ ಹೆಚ್ಚು ಆಪ್ತವಾಗುವುದು ಕೈಯಲ್ಲಿ ಪುಸ್ತಕ ಹಿಡಿದು ಓದುವುದು. ಹಾಗಾಗಿ ಆನ್‌ಲೈನ್‌ನಲ್ಲಿ ಪುಸ್ತಕಗಳು ಲಭ್ಯವಿದ್ದರೂ ಕೆಲವರು ಪುಸ್ತಕ ಖರೀದಿ ಮಾಡಿ ಓದುವ ಅಭ್ಯಾಸವನ್ನಿಟ್ಟುಕೊಂಡಿರುತ್ತಾರೆ.

ಹಾಗಾದರೆ ಹೊಸ ಮನೆಗಳಲ್ಲಿ ಸುಂದರ ಗ್ರಂಥಾಲಯಗಳನ್ನು ನಿರ್ಮಿಸುವುದು ಹೇಗೆ? ಯಾವ ಯಾವ ಅಂಶಗಳತ್ತ ಗಮನ ಹರಿಸಬೇಕು? ಎಂಬೆಲ್ಲಾ ವಿಷಯಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಈ ಕುರಿತು ವಾಸ್ತುಶಿಲ್ಪಿ ಚೇತನ್‌ ಶಿವಪ್ರಸನ್ನ ಅವರು ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

*  ಮನೆಯಲ್ಲಿ ಗ್ರಂಥಾಲಯಗಳನ್ನು ನಿರ್ಮಿಸುವಾಗ ಗಮನ ಹರಿಸಬೇಕಾದ ವಿಷಯಗಳೇನು?
ವಾಸ್ತುಶಿಲ್ಪ ಎನ್ನುವುದು ಸಂಪೂರ್ಣವಾಗಿ ನಮ್ಮ ಗ್ರಾಹಕರನ್ನು ಅವಲಂಬಿಸಿರುತ್ತದೆ. ಅವರು ನೀಡುವ ಜಾಗದ ಅಳತೆ, ಆರ್ಥಿಕ ಸಬಲತೆ ಹಾಗೂ ಅವಶ್ಯಕತೆಗಳನ್ನು ಹೇಳಿದರೆ ಅದಕ್ಕೆ ತಕ್ಕಂತೆ ನಾವು ಯೋಜನೆಗಳನ್ನು ರೂಪಿಸುತ್ತೇವೆ. ಮನೆಯಲ್ಲಿ ಗ್ರಂಥಾಲಯಗಳನ್ನು ನಿರ್ಮಿಸುವಾಗಲೂ ನಾವು ಇದೇ ನಿಯಮಗಳನ್ನು ಪಾಲಿಸುವುದು. ಅವರಿಗೆ ಯಾವ ರೀತಿಯ ಗ್ರಂಥಾಲಯ ಬೇಕು ಎನ್ನುವುದನ್ನು ಮೊದಲು ಖಾತರಿಪಡಿಸಿಕೊಳ್ಳುತ್ತೇವೆ.  ಫ್ಯಾಮಿಲಿ ಫ್ರೆಂಡ್ಲಿ ಲೈಬ್ರರಿ (ಕುಟುಂಬ ಸ್ನೇಹಿ ಗ್ರಂಥಾಲಯ), ಸೀರಿಯಸ್‌ ಲೈಬ್ರರಿ (ಗಂಭೀರ ಗ್ರಂಥಾಲಯ), ಡಿಸ್‌ಪ್ಲೇ ಲೈಬ್ರರಿ (ಪ್ರದರ್ಶನ ಯೋಗ್ಯ ಗ್ರಂಥಾಲಯ) ಹೀಗೆ ಹಲವಾರು ಬಗೆಯ ಗ್ರಂಥಾಲಯಗಳಿವೆ. ಹಾಗೆಯೇ ಅವರ ವೃತ್ತಿ ಹಾಗೂ ಜೀವನ ಶೈಲಿಯನ್ನು ಗಮನದಲ್ಲಿರಿಸಿಕೊಂಡು ಗ್ರಂಥಾಲಯಗಳ ಯೋಜನೆಯನ್ನು ರೂಪಿಸಲಾಗುತ್ತದೆ.

ಮನೆಯಲ್ಲಿ ಗ್ರಂಥಾಲಯಗಳ ನಿರ್ಮಾಣ ಸವಾಲಿನದ್ದು ಎನ್ನಬಹುದು. ನಮಗೆ ಇತ್ತೀಚೆಗೆ ಹೆಚ್ಚು ಜಾಗ ಸಿಗುವುದಿಲ್ಲ. ಸಿಗುವ ಕಡಿಮೆ ಜಾಗದಲ್ಲಿ ಸೃಜನಶೀಲತೆ ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕೆ ನ್ಯಾಚುರಲ್‌ ಲೈಟಿಂಗ್‌ ಅತ್ಯವಶ್ಯಕ. ಬೇಸ್‌ಮೆಂಟ್‌ಗಳಲ್ಲಿ ಗ್ರಂಥಾಲಯ ನಿರ್ಮಿಸಿದರೆ ಬಹಳ ಉಪಯೋಗವಿದೆ.

ಮೊಬೈಲ್‌ ಫೋನ್‌ ನೆಟ್‌ವರ್ಕ್‌ಗಳು ಬೇಸ್‌ಮೆಂಟ್‌ಗೆ ತಲುಪುವುದಿಲ್ಲ, ಹೆಚ್ಚಿನ ಗಲಾಟೆ ಇರುವುದಿಲ್ಲ... ಇವೆಲ್ಲಾ ಚಿಕ್ಕಪುಟ್ಟ ಸಂಗತಿಗಳಾದರೂ ನಮ್ಮ ಮನಸ್ಸು ಅತ್ತಿತ್ತ ಹರಿದಾಡದೆ, ಏಕಾಗ್ರತೆ ಮೂಡುವಲ್ಲಿ ಸಹಾಯವಾಗುತ್ತದೆ. ಗ್ರಂಥಾಲಯಗಳಿಗೆ ನೈಸರ್ಗಿಕ ಬೆಳಕು ಬಿದ್ದರೆ ಸಕಾರಾತ್ಮಕ ಶಕ್ತಿ ಆ ಕೋಣೆಯಲ್ಲಿರುತ್ತದೆ. ಇದರ ಕುರಿತೂ ಗಮನ ಹರಿಸಬೇಕಾಗುತ್ತದೆ.

*  ಗ್ರಂಥಾಲಯದಲ್ಲಿ ಏನೇನಿರಬೇಕು?
ಪುಸ್ತಕಗಳ ರ್‍ಯಾಕ್‌ಗಳೇ ಗ್ರಂಥಾಲಯಗಳ ಆಕರ್ಷಣೆ. ಒಂದು ರ್‍ಯಾಕ್‌ ಅನ್ನು ನಾಲ್ಕು ಹಂತದಲ್ಲಿ ತಯಾರಿಸಲಾಗುತ್ತದೆ. 7 ಇಂಚು, 10 ಇಂಚು, 13 ಇಂಚು ಹಾಗೂ ಎರಡು ಅಡಿಯ ಶೆಲ್ಫ್‌ಗಳನ್ನು ಬುಕ್‌ ರ್‍ಯಾಕ್‌ಗೆ ಅಳವಡಿಸಲಾಗುತ್ತದೆ. ಬುಕ್‌ ರ್‍ಯಾಕ್‌ ಹೊರತುಪಡಿಸಿದರೆ ಗ್ರಂಥಾಲಯಗಳಿಗೆ ಉತ್ತಮ ಲೈಟಿಂಗ್‌ ಅವಶ್ಯಕತೆಯಿದೆ. ದೊಡ್ಡ ದೊಡ್ಡ ಕಲಾಕೃತಿಗಳನ್ನು ಗೋಡೆಯ ಮೇಲೆ ನೇತು ಹಾಕಿದರೆ ವಿಭಿನ್ನ ಲುಕ್‌ ನೀಡುತ್ತದೆ. 

*  ಮನೆಯ ಯಾವ ಜಾಗದಲ್ಲಿ ಗ್ರಂಥಾಲಯ ಇದ್ದರೆ ಸೂಕ್ತ?
ಆಗಲೇ ಹೇಳಿದಂತೆ ನೆಲಮಾಳಿಗೆ ನನ್ನ ಮೊದಲ ಆದ್ಯತೆ. ಇದು ಬಿಟ್ಟರೆ ಮನೆಯ ಯಾವುದೇ ಜಾಗದಲ್ಲಾದರೂ  ಗ್ರಂಥಾಲಯ ನಿರ್ಮಿಸಬಹುದು. ಬೆಳಕು   ಹಾಗೂ ಗಾಳಿ ಚೆನ್ನಾಗಿ ಬರುವ ಕಡೆ ನಿರ್ಮಿಸಲು ಸೂಚಿಸುತ್ತೇವೆ.

ಕೆಲವರು ಪುಸ್ತಕಗಳನ್ನಿಡಲು ಪ್ರತ್ಯೇಕ ಜಾಗ ಕೇಳಿದರೆ, ಇನ್ನು ಕೆಲವರು ತಾವು  ಮಲಗುವ ಕೋಣೆಯಲ್ಲಿಯೇ ಪುಸ್ತಕಗಳನ್ನಿಡುವಂತೆ ಗ್ರಂಥಾಲಯ ನಿರ್ಮಿಸಿಕೊಡಿ ಎಂದು ಕೇಳುತ್ತಾರೆ.  ಉಳಿದರುವ ಜಾಗವನ್ನು ಖಾಲಿ ಬಿಡುವ ಬದಲು ಪುಸ್ತಕಗಳನ್ನಿಡಲು ಬಳಸಿಕೊಳ್ಳುವವರೂ ಇದ್ದಾರೆ. ಉದಾಹರಣೆಗೆ ಮೆಟ್ಟಿಲ ಕೆಳಗೆ ಸಿಗುವ ಖಾಲಿ ಜಾಗದಲ್ಲಿ ಷೋಕೇಸ್‌ ನಿರ್ಮಿಸಿ, ಅಲ್ಲಿ ಪುಸ್ತಕಗಳನ್ನು ಇಡುವಂತೆ ಅವಕಾಶ ಕಲ್ಪಿಸಿಕೊಡಿ ಎಂದು ಕೇಳುತ್ತಾರೆ. ಓದುವ ಕೋಣೆ ಹಾಗೂ ಗ್ರಂಥಾಲಯವನ್ನು ಒಟ್ಟಿಗೆ ಮಾಡಿದರೆ ಅನುಕೂಲ ಹೆಚ್ಚು.

*  ಯಾವ ಕಚ್ಚಾ ವಸ್ತುಗಳಿಂದ ಬುಕ್‌ ರ್‍ಯಾಕ್‌ ಮಾಡಿಸಿದರೆ ಸೂಕ್ತ?
ಯಾವುದಾದರೂ ಆಗಬಹುದು. ಆದರೆ ಉತ್ತಮ ಗುಣಮಟ್ಟದ್ದಾಗಿರಬೇಕು. ಮರದ ಹಲಗೆಗಳು, ಮೆಟಲ್‌ ರೋಪ್ಸ್‌, ಗಾಜು, ಕಬ್ಬಿಣದ ರ್‍ಯಾಕ್‌ಗಳು, ಆ್ಯಂಟಿಕ್‌ ಸಲಕರಣೆಗಳು ಹೀಗೆ ಅನೇಕ ಕಚ್ಚಾ ವಸ್ತುಗಳನ್ನು  ಬಳಸಬಹುದು.

*  ಗ್ರಂಥಾಲಯ ನಿರ್ಮಾಣಕ್ಕೆ ತಗುಲುವ ವೆಚ್ಚ ಎಷ್ಟು?
ಕೋಟಿ ರೂಪಾಯಿ ಇದ್ದರೆ ಹೈಫೈ ಗ್ರಂಥಾಲಯಗಳನ್ನು ಮಾಡಿಕೊಡುತ್ತೇನೆ. ಸಾವಿರ ರೂಪಾಯಿಯಿದ್ದರೆ ಇಟ್ಟಿಗೆ ಹಾಗೂ ಚಪ್ಪಡಿ ಕಲ್ಲುಗಳನ್ನು ಬಳಸಿ ಮಾಡಿಕೊಡುತ್ತೇನೆ. ವಾಸ್ತುಶಿಲ್ಪವೇ ಹಾಗೆ.. ಇಲ್ಲಿ ಕೆಲಸ ಮಾಡುವುದು ಕ್ರಿಯಾತ್ಮಕತೆಯಷ್ಟೆ.

*  ಯಾವ ವೃತ್ತಿಯವರು ಹೆಚ್ಚಾಗಿ ಗ್ರಂಥಾಲಯಗಳ ಮೊರೆಹೋಗುತ್ತಿದ್ದಾರೆ?
ಇಂಥದ್ದೇ ವೃತ್ತಿ ಎಂದಿಲ್ಲ. ಪ್ರಾಧ್ಯಾಪಕರು, ಸಾಹಿತಿಗಳು ಸ್ವಲ್ಪ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆಯಾದರೂ ಎಂಜಿನಿಯರ್‌ಗಳು ಸೇರಿದಂತೆ ಭೀನ್ನ ವೃತ್ತಿಯವರು  ನನ್ನ ಬಳಿ ಬರುವ ಅನೇಕ ಬೇರೆ ವೃತ್ತಿಯವರಾದರೂ ಪುಸ್ತಕಗಳನ್ನು ಪ್ರೀತಿಸುವವರಾಗಿದ್ದಾರೆ. ಆಸಕ್ತಿಕರ ವಿಷಯವೆಂದರೆ, ಯುವಕರಲ್ಲಿ ಹೆಚ್ಚಾಗಿ ಪುಸ್ತಕ ಪ್ರೀತಿಯನ್ನು ಕಾಣುತ್ತಿದ್ದೇನೆ.

ಕೆಲವು ಪೋಷಕರು ತಮ್ಮ ಮಕ್ಕಳಿಗಾಗಿ ಗ್ರಂಥಾಲಯಗಳನ್ನು ನಿರ್ಮಿಸುವಾಗ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಪುಸ್ತಕಗಳತ್ತ ಅವರು ಆಕರ್ಷಿತರಾಗಲು ಪೂರಕವಾದ ವಾತಾವರಣ ಸೃಷ್ಟಿ ಮಾಡಲು ಪ್ರಯತ್ನಿಸುತ್ತೇವೆ.

ಕಲಾತ್ಮಕತೆಯ ಸ್ಪರ್ಶ
‘ಗ್ರಂಥಾಲಯ ಎಂದಾಕ್ಷಣ ಕೇವಲ ಪುಸ್ತಕಗಳನ್ನು ತುಂಬುವುದಷ್ಟೇ ಅಲ್ಲ. ಆ ಜಾಗದಲ್ಲಿ ಗೋಡೆಗಳಿಗೆ ಯಾವ ಬಣ್ಣದ ಪೇಂಟ್‌ ಮಾಡಿಸಬೇಕು ಎಂಬ ಸಣ್ಣ ಸಣ್ಣ ಅಂಶದ ಮೇಲೆಯೂ ಗಮನ ಹರಿಸಬೇಕಾಗುತ್ತದೆ. ಇದೊಂದು ಪ್ರಶಾಂತ ಸ್ಥಳವಾಗಿರಬೇಕು. ಗ್ರಂಥಾಲಯಗಳಿಗೆ ಕಾಲಿಟ್ಟೊಡನೆ ಶಾಂತ ಭಾವ ಕೈಬೀಸಿ ಕರೆದು ಓದುವ ಆಸಕ್ತಿ ಮೂಡಿಸುವಂತಿರಬೇಕು. ಹಾಗಾಗಿ ಅಲ್ಲಲ್ಲಿ ಗ್ರಂಥಾಲಯಗಳಿಗೆ ಕಲಾಸ್ಪರ್ಶ ನೀಡಿದರೆ ಮತ್ತೂ ಆಕರ್ಷಕವಾಗಿರುತ್ತದೆ’ ಎನ್ನುತ್ತಾರೆ ವಾಸ್ತುಶಿಲ್ಪಿ ಚೇತನ್‌.

ಜಾಗ ಕಡಿಮೆ ಇತ್ತು
‘ನನಗೆ ಮೊದಲಿನಿಂದಲೂ ಪುಸ್ತಕಗಳೆಂದರೆ ನನಗೆ ತುಂಬಾ ಇಷ್ಟ.  ಇಂಥದ್ದೇ ಎನ್ನುವ ಮಿತಿ ಇಲ್ಲದೆ  ಪುರಾಣಗಳಿಗೆ ಸಂಬಂಧಿಸಿದ ಪುಸ್ತಕಗಳು, ಕಾದಂಬರಿಗಳು, ಕಾನೂನು ಸಂಬಂಧಿತ ಪುಸ್ತಕಗಳು, ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್‌ಗೆ ಸಂಬಂಧಪಟ್ಟ ಪುಸ್ತಕಗಳು ಸೇರಿದಂತೆ ಸುಮಾರು ಮೂರುಸಾವಿರದಷ್ಟು ಪುಸ್ತಕಗಳ ಸಂಗ್ರಹವಿತ್ತು. 35/15 ರಷ್ಟು ಜಾಗದಲ್ಲಿ ಮನೆ ನಿರ್ಮಾಣವೇ ಕಷ್ಟ ಅದರಲ್ಲಿ ನನ್ನ ಪುಸ್ತಕಗಳಿಗೆ ಹೇಗೆ ಜಾಗ ಒದಗಿಸಬಹುದು ಎಂಬ ಆಲೋಚನೆಯಲ್ಲಿದ್ದಾಗ ಆರ್ಟಿಟೆಕ್ಟ್ ಚೇತನ್‌ ನನ್ನ ಎಲ್ಲ ಪುಸ್ತಕಗಳಿಗೂ ಅದ್ಭುತವಾದ ಜಾಗ ಒದಗಿಸಿಕೊಟ್ಟರು. ಎರಡನೇ ಮಹಡಿಯ ಅಟ್ಟದಲ್ಲಿ ಮೂವೆಬಲ್‌ ಶೆಲ್ಫ್‌ಗಳನ್ನು ಮಾಡಿಕೊಟ್ಟು  ಪುಸ್ತಕಗಳ ಜೋಡಣೆಗೆ ಅವಕಾಶ ಮಾಡಿಕೊಟ್ಟರು’ ಎನ್ನುತ್ತಾರೆ 41 ವರ್ಷದ ಉದ್ಯಮಿ ಅಚ್ಯುತ.

ಪುಸ್ತಕಗಳ ಜೋಡಣೆ ಹೀಗಿದ್ದರೆ ಚೆಂದ...
ಮನೆಯಲ್ಲಿ ಗ್ರಂಥಾಲಯಗಳನ್ನು ನಿರ್ಮಿಸಿದ್ದರೂ ಕೆಲವೊಮ್ಮೆ ನಮಗೆ ಬೇಕಾದ ಪುಸ್ತಕಗಳು ತಕ್ಷಣ ಸಿಗುವುದಿಲ್ಲ. ಹಾಗಾಗಿ ಪುಸ್ತಕಗಳನ್ನು ವಿಂಗಡಿಸಿಕೊಂಡು ಪತ್ಯೇಕವಾಗಿ ಜೋಡಿಸಿಕೊಳ್ಳಬಹುದು. ಅತೀ ಅವಶ್ಯವಿರುವ ಪುಸ್ತಕಗಳು, ಓದಿರುವ ಹಾಗೂ ಓದಬೇಕಾದ ಪುಸ್ತಕಗಳು, ವೃತ್ತಿಗೆ ಸಂಬಂಧಿಸಿದ ಪುಸ್ತಕಗಳು ಹೀಗೆ  ಪುಸ್ತಕಗಳನ್ನು ವಿಂಗಡಿಸಿ ಜೋಡಿಸಿಕೊಳ್ಳುವುದರಿಂದ ನಮಗೆ ಬೇಕಾದ ಪುಸ್ತಕಗಳು ಬೇಗನೇ ಕೈಗೆ ಸಿಗುತ್ತದೆ. ಪುಸ್ತಕಗಳ ಗಾತ್ರಕ್ಕೆ ತಕ್ಕಂತೆ ಜೋಡಿಸಿದರೆ ರ್‍ಯಾಕ್‌ಗಳ ಅಂದ ಹೆಚ್ಚುತ್ತದೆ. ವರ್ಣಾಕ್ಷರದ ಅನುಕ್ರಮವಾಗಿ ಕೂಡ ಜೋಡಿಸಿಕೊಂಡರೂ ಅನುಕೂಲವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT