ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೊಂದು ಮಿಥ್ಯಾವಾಸ್ತವ ವೀಕ್ಷಕ

Last Updated 2 ಏಪ್ರಿಲ್ 2015, 9:08 IST
ಅಕ್ಷರ ಗಾತ್ರ

ನಾವು ದಿನನಿತ್ಯ ಕಾಣುವ ಎಲ್ಲ ವಸ್ತು ಗಳು, ದೃಶ್ಯಗಳು ಮೂರು ಆಯಾಮದಲ್ಲಿವೆ. ಅಂದರೆ ಅವುಗಳಿಗೆ ಉದ್ದ, ಅಗಲ ಮತ್ತು ಎತ್ತರಗಳಿವೆ. ಆದರೆ ಪುಸ್ತಕ, ಟಿ.ವಿ. ಪರದೆ, ಗಣಕ, ಟ್ಯಾಬ್ಲೆಟ್, ಸ್ಮಾರ್ಟ್‌ಫೋನ್‌ ಇತ್ಯಾದಿಗಳ ಪರದೆಗಳು ಎರಡು ಆಯಾಮದಲ್ಲಿವೆ. ಅಂದರೆ ಅವುಗಳಿಗೆ ಎತ್ತರ ಅಥವಾ ಆಳ ಇರುವುದಿಲ್ಲ. ಈ ಮೂರನೆಯ ಆಯಾಮವನ್ನು ಕೃತಕವಾಗಿ ಪರದೆಯಲ್ಲಿ ಸೃಷ್ಟಿಸಲು ಹಲವು ವಿಧಾನ ಗಳಿವೆ. ಅವುಗಳಲ್ಲಿ ಜನಪ್ರಿಯ ಮತ್ತು ಪ್ರಚಲಿತವಾದ ಒಂದು ವಿಧಾನ ಎಡ ಮತ್ತು ಬಲ ಕಣ್ಣುಗಳು ಪ್ರತ್ಯೇಕ ಚಿತ್ರವನ್ನು (ದೃಶ್ಯ)  ವೀಕ್ಷಿಸುವಂತೆ ಮಾಡುವುದು.

ಇದನ್ನು ಅರ್ಥಮಾಡಿಕೊಳ್ಳಲು ಈ ವಿಧಾನದ ಬಗ್ಗೆ ಸ್ವಲ್ಪ ಪ್ರಾಥಮಿಕ ಜ್ಞಾನ ಪಡೆದುಕೊಂಡರೆ ಉತ್ತಮ. ಕಣ್ಣ ಮುಂದೆ ಕಾಣುವ ವಸ್ತು ಅಥವಾ ದೃಶ್ಯವನ್ನು ನೋಡಲು ಒಂದು ಕಣ್ಣು ಸಾಕಲ್ಲವೇ? ಹಾಗಿರುವಾಗ ನಮಗೆ ಎರಡು ಕಣ್ಣುಗಳು ಏಕಿವೆ? ಇದಕ್ಕೆ ಉತ್ತರವಾಗಿ ಸಣ್ಣ ಪ್ರಯೋಗ ಮಾಡೋಣ. ನಿಮ್ಮ ಕಣ್ಣಿನಿಂದ ಸುಮಾರು ಒಂದು ಅಡಿ ದೂರಲ್ಲಿ ಒಂದು ಪೆನ್ನನ್ನು ನೆಲಕ್ಕೆ ಲಂಬವಾಗಿ ಹಿಡಿದುಕೊಳ್ಳಿ. ಮೊದಲು ಎಡದ ಕಣ್ಣು ಮುಚ್ಚಿ ಬಲದ ಕಣ್ಣಿನಲ್ಲಿ, ನಂತರ ಬಲದ ಕಣ್ಣು ಮುಚ್ಚಿ ಎಡ ಕಣ್ಣಿನಲ್ಲಿ ನೋಡಿ. ಎರಡು ದೃಶ್ಯಗಳೂ ಒಂದೆಯೇ? ಇಲ್ಲಿ ವ್ಯತ್ಯಾಸ ಕಂಡುಬರುವುದು ಪೆನ್ನಿನ ಹಿನ್ನೆಲೆಯ ವಸ್ತುಗಳಿಗೆ ಹೊಂದಿಕೊಂಡಂತೆ ಪೆನ್ನಿನ ಸ್ಥಾನ. ಎರಡು ಸಂದರ್ಭಗಳಲ್ಲಿ ಕಂಡು ಬರುವ ದೃಶ್ಯಗಳಲ್ಲಿ ಹಿನ್ನೆಲೆಗೆ ಹೊಂದಿಕೊಂಡಂತೆ ಪೆನ್ನಿನ ಸ್ಥಾನ ಸ್ವಲ್ಪ ಬದಲಾಗಿರುತ್ತದೆ.

ಇನ್ನೂ ಸ್ವಲ್ಪ ವೈಜ್ಞಾನಿಕವಾಗಿ ಪ್ರಯೋಗ ಮಾಡ ಬೇಕಾದರೆ ನಿಮ್ಮ ಕ್ಯಾಮೆರಾ (ಅಥವಾ ಸ್ಮಾರ್ಟ್‌ಫೋನ್‌) ಕೈಗೆತ್ತಿಕೊಳ್ಳಿ. ಒಂದು ಸ್ಥಾನದಿಂದ ಪೆನ್ನಿನ ಫೋಟೊ ತೆಗೆಯಿರಿ. ನಂತರ ಕ್ಯಾಮೆರಾವನ್ನು ಎಚ್ಚರಿಕೆಯಿಂದ ಸುಮಾರು 5-6 ಸೆ.ಮೀ. ಪಕ್ಕಕ್ಕೆ (ಎಡಕ್ಕೆ ಅಥವಾ ಬಲಕ್ಕೆ) ಸರಿಸಿ ಇನ್ನೊಂದು ಫೋಟೊ ತೆಗೆಯಿರಿ. ಎರಡು ಫೋಟೊ ತೆಗೆಯುವಾಗ ವಸ್ತು (ಪೆನ್) ಅದರ ಸ್ಥಾನದಿಂದ ಚಲಿಸಿರಬಾರದು ಹಾಗೂ ಕ್ಯಾಮೆರಾ ಎಡ ಅಥವಾ ಬಲಕ್ಕೆ ಮಾತ್ರ ಸರಿದಿರಬೇಕು. ಮೇಲೆ ಅಥವಾ ಕೆಳಕ್ಕೆ ಚಲಿಸಿರಬಾರದು.

ಈಗ ಆ ಎರಡು ಫೋಟೊ ಗಳನ್ನು ಎಚ್ಚರಿಕೆಯಿಂದ ಗಮನಿಸಿ. ಅವುಗಳಲ್ಲಿ ಸ್ವಲ್ಪ ವ್ಯತ್ಯಾಸವಿದೆ ತಾನೆ? ನಿಮ್ಮಲ್ಲಿ ಗಣಕ ಇದ್ದರೆ ಈ ಎರಡು ಫೋಟೊಗಳನ್ನು ಪರದೆಯ ಮೇಲೆ ಮೂಡಿಸಿ. ಪರದೆಯ ಎಡದ ಅರ್ಧ ಭಾಗದಲ್ಲಿ ಕ್ಯಾಮೆರಾ ಎಡ ಭಾಗದಲ್ಲಿದ್ದಾಗ ತೆಗೆದ ಫೋಟೊ ಮತ್ತು ಬಲದ ಅರ್ಧ ಭಾಗದಲ್ಲಿ ಕ್ಯಾಮೆರಾ ಬಲ ಭಾಗದಲ್ಲಿದ್ದು ತೆಗೆದ ಫೋಟೊಗಳನ್ನು ಮೂಡಿಸಿ. ಈಗ ಒಂದು ರಟ್ಟಿನ ತುಂಡನ್ನು ನಿಮ್ಮ ಮುಖದ ಮುಂದೆ ಎರಡು ಕಣ್ಣುಗಳ ಮಧ್ಯದಲ್ಲಿ ಬರು ವಂತೆ ನೀಟಾಗಿ ಹಿಡಿದು ಈ ಫೋಟೊಗಳನ್ನು ವೀಕ್ಷಿಸಿ.

ಪರದೆಯ ಎಡದ ಭಾಗದಲ್ಲಿರುವ ಚಿತ್ರವನ್ನು ಎಡದ ಕಣ್ಣು ಮಾತ್ರ ಹಾಗೂ ಬಲದ ಭಾಗದಲ್ಲಿರುವ ಚಿತ್ರವನ್ನು ಬಲದ ಕಣ್ಣು ಮಾತ್ರ ವೀಕ್ಷಿಸುವಂತೆ ಮಾಡಬೇಕು. ಈಗ ನೀವು ಕಾಣುತ್ತಿರುವುದು 3 ಆಯಾಮಗಳ ಚಿತ್ರ. ಒಂದು ದೃಶ್ಯದ ಮೂರು ಆಯಾಮದ ಅನುಭವವನ್ನು ನಮ್ಮ ಮೆದುಳಿಗೆ ನೀಡಲು ಎರಡು ಕಣ್ಣುಗಳ ಅಗತ್ಯವಿದೆ. ಎಡದ ಕಣ್ಣಿಗೆ ಒಂದು ಫೋಟೊ ಅಥವಾ ದೃಶ್ಯ, ಬಲದ ಕಣ್ಣಿಗೆ ಇನ್ನೊಂದು ಕಾಣಿಸುವ ಸರಳ ಸಾಧನ ಮಾರುಕಟ್ಟೆಯಲ್ಲಿ ದೊರೆಯುವುದನ್ನು ನೋಡಿರ ಬಹುದು.

ಅವುಗಳಿಗೆ ಸ್ಟೀರಿಯೋಸ್ಕೋಪ್ ಎಂಬ ಹೆಸರಿದೆ. 3 ಆಯಾಮಗಳ ಚಲನಚಿತ್ರ ವೀಕ್ಷಣೆಗೂ ವಿಶೇಷ ಕನ್ನಡಕ ಹಾಕಿಕೊಳ್ಳಬೇಕಾಗುತ್ತದೆ. ಈಗ ಇಂತಹ ತಂತ್ರಜ್ಞಾನವನ್ನು ಗೂಗಲ್‌ನವರು ಆಂಡ್ರಾಯಿಡ್ ಫೋನಿಗೆ ತಂದಿದ್ದಾರೆ. ಸರಳವಾಗಿ ರಟ್ಟನ್ನು ಕತ್ತರಿಸಿ ನೀವೇ ಇಂತಹ ಮಿಥ್ಯಾವಾಸ್ತವ (virtual reality) ವೀಕ್ಷಕವನ್ನು ಮನೆಯಲ್ಲೇ ತಯಾರಿಸಬಹುದು. google.com/cardboard ಜಾಲತಾಣದಲ್ಲಿ ಇದರ ವಿವರಗಳಿವೆ. ಗೂಗ್ಲ್ ಕಾರ್ಡ್‌ಬೋರ್ಡ್‌ ಜೊತೆ ಬಳಸ ಲೆಂದೇ ಹಲವು ಕಿರುತಂತ್ರಾಂಶಗಳು (ಆಪ್) ಅದೇ ಜಾಲತಾಣದಲ್ಲಿವೆ.

ಗೂಗ್ಲ್ ಕಾರ್ಡ್‌ಬೋರ್ಡ್‌ ವಿನ್ಯಾಸ ವನ್ನು ಬಳಸಿ ತಯಾರಿಸಿದ ಹಲವು ಮಿಥ್ಯಾವಾಸ್ತವ ವೀಕ್ಷಕಗಳು ಅದೇ ಜಾಲತಾಣದ ಮೂಲಕ ಮಾರಾಟಕ್ಕೆ ಲಭ್ಯವಿವೆ. ಆದರೆ ಅವುಗಳು ಅಮೆರಿಕದಲ್ಲಿ ಡಾಲರ್ ಬೆಲೆಯಲ್ಲಿ ದೊರೆಯುತ್ತಿವೆ. ಬಾಕ್ಸ್ಇಟ್ ಎಂಬ ಭಾರತೀಯ ಕಂಪೆನಿ ಗೂಗ್ಲ್ ಕಾರ್ಡ್‌ಬೋರ್ಡ್‌ ವಿನ್ಯಾಸ ಬಳಸಿ ಮಿಥ್ಯಾವಾಸ್ತವ ವೀಕ್ಷಕವನ್ನು  (Boxight Beta VR Kit) ತಯಾರಿಸಿದೆ. ಮುಖ ಬೆಲೆ ₹890. ವಿಶೇಷ ಆಹ್ವಾನದ ಮೂಲಕ ₹288 ಕ್ಕೂ ದೊರೆಯುತ್ತಿದೆ. ನಾನು ಈ ಬೆಲೆಗೆ ತರಿಸಿದ್ದು.

ಅವರು ತಮ್ಮ ಜಾಲತಾಣದಲ್ಲಿ ಹೇಳಿಕೊಂಡಂತೆ ಇದು ಮಿಥ್ಯಾವಾಸ್ತವ ಲೋಕಕ್ಕೆ ಪ್ರವೇಶ ಬಯಸುವವರಿಗೆ ಉತ್ತಮ. ಹೆಚ್ಚಿನ ಗುಣಮಟ್ಟದ ಉತ್ಪನ್ನ ಬೇಕಿದ್ದಲ್ಲಿ ಅವರದೇ ಜಾಲತಾಣದಲ್ಲಿ ಹೆಚ್ಚಿನ ಬೆಲೆಗೆ (₹3,000) ಪ್ಲಾಸ್ಟಿಕ್ಕಿನಿಂದ ತಯಾರಿಸಿದ ಮಾದರಿ ಲಭ್ಯ. ಇವನ್ನು ಕೊಳ್ಳಲು ನೀವು boxight.com ಜಾಲತಾಣಕ್ಕೆ ಭೇಟಿ ನೀಡಬೇಕು. ಇದರ ಜೊತೆ ಬಳಸುವ ಹಲವು ಕಿರುತಂತ್ರಾಂಶಗಳ ಕೊಂಡಿ ಅದೇ ಜಾಲತಾಣದಲ್ಲಿವೆ. ಈ ಬೀಟಾ ಆವೃತ್ತಿಯ ಗುಣಮಟ್ಟ ಸಾಧಾರಣ ವಾಗಿದೆ. ₹288 ಬೆಲೆ ನೀಡಬಹುದು. ಆದರೆ ₹890 ಬೆಲೆ ಮಾತ್ರ ಸ್ವಲ್ಪ ಜಾಸ್ತಿಯಾಯಿತು. ಅವರ ಜಾಲತಾಣದಲ್ಲಿ ನೀಡಿದ ವಿಡಿಯೊ ನೋಡಿ ಅವರು ನೀಡಿದ ರಟ್ಟಿನ ತುಂಡುಗಳನ್ನು ಜೋಡಿಸಿ ನಿಮ್ಮ ವೀಕ್ಷಕವನ್ನು 5 ನಿಮಿಷ ದಲ್ಲಿ ತಯಾರಿಸಬಹುದು. ಅವರು ನೀಡಿದ ಅಂಟುಪಟ್ಟಿ ಅಷ್ಟೇನೂ ಚೆನ್ನಾಗಿಲ್ಲ. ರಟ್ಟಿನ ತುಂಡುಗಳನ್ನು ಕತ್ತರಿಸಿದ್ದ ರಲ್ಲೂ ಅಲ್ಪಸ್ವಲ್ಪ ಆಚೀಚೆ ಆಗಿದೆ.

ಕತ್ತರಿ ಅಥವಾ ಚಾಕು ವಿನಿಂದ ಸ್ವಲ್ಪ ಕತ್ತರಿಸಿ ಸರಿಮಾಡಿಕೊಳ್ಳ ಬೇಕಾಗುತ್ತದೆ. ವೀಕ್ಷಕದೊಳಗೆ ಫೋನ್ ಇಟ್ಟು ಅದರಲ್ಲಿ ಮೂರು ಆಯಾಮಗಳಲ್ಲಿ ದೃಶ್ಯ, ಚಲನಚಿತ್ರ, ಬ್ರಹ್ಮಾಂಡದ ಪ್ರತ್ಯನುಕರಣೆ (simulation) ಎಲ್ಲ ನೋಡಬಹುದು. ಗೂಗ್ಲ್‌ ಕಾರ್ಡ್‌ಬೋರ್ಡ್‌ಗೆಂದೇ ತಯಾರಾದ ವಿಶೇಷ ಮೂರು ಆಯಾಮಗಳ ಆಟಗಳನ್ನೂ ಆಡಬಹುದು. ಈ ವೀಕ್ಷಕದ ಜೊತೆ ಒಂದು ಅಯಸ್ಕಾಂತ ಮತ್ತು ಅದಕ್ಕೆ ಸರಿ ಹೊಂದುವ ಕಬ್ಬಿಣದ ಬಿಲ್ಲೆ ನೀಡಿದ್ದಾರೆ. ಅಯಸ್ಕಾಂತ ವನ್ನು ಒಳಗೆ ಮತ್ತು ಕಬ್ಬಿಣದ ಬಿಲ್ಲೆಯನ್ನು ಹೊರಗೆ ಅದಕ್ಕೆಂದೇ ನೀಡಿರುವ ಸ್ಥಳದಲ್ಲಿ ಜೋಡಿಸಬೇಕು. ಕಬ್ಬಿಣದ ಬಿಲ್ಲೆಯನ್ನು ಸರಿಸಿ ಕೈಬಿಟ್ಟರೆ ಅದು ವಾಪಸ್ಸು ತನ್ನ ಸ್ಥಾನಕ್ಕೆ ಚಕ್ಕನೆ ಮರಳುತ್ತದೆ. ಈ ಕ್ರಿಯೆ ಆಟದಲ್ಲಿ ಕ್ಲಿಕ್ ಬದಲಿಗೆ ಬಳಕೆಯಾಗುತ್ತದೆ. 

ವಾರದ ಆಪ್
ಮಾಂಡೆಲ್ಬ್ರೋಟ್ ಮ್ಯಾಪ್

ಗಣಿತದಲ್ಲಿ ಮ್ಯಾಂಡೆಲ್‌ಬ್ರೋಟ್ ಸೆಟ್ ಎಂಬುದು ಒಂದು ನಮೂನೆಯ ಫ್ರಾಕ್ಟಲ್. ಫ್ರಾಕ್ಟಲ್ ಎಂಬುದು ಗಣಿತದಲ್ಲಿ ಒಂದು ವಿಶೇಷ ವಿಭಾಗ. ಮ್ಯಾಂಡೆಲ್‌ಬ್ರೋಟ್ ಸೆಟ್ ಮತ್ತು ಅದಕ್ಕೆ ಜೋಡಿ ಯಾದ ಜೂಲಿಯಾ ಸೆಟ್‌ಗಳ ನಕ್ಷೆ ಮಾಡುವುದು ಗಣಕದಲ್ಲಿ ಪ್ರೋಗ್ರಾಮಿಂಗ್ ಕಲಿಯುವಾಗ ಮಾಡುವ ಒಂದು ಸಾಮಾನ್ಯ ಅಭ್ಯಾಸ.

ಈಗ ಅವುಗಳನ್ನು ಆಂಡ್ರಾಯಿಡ್ ಫೋನ್‌ಗಳಲ್ಲಿ ಚಿತ್ರಿಸುವ ಕಿರುತಂತ್ರಾಂಶ (ಆಪ್) ಬಂದಿದೆ. ಗೂಗ್ಲ್ ಪ್ಲೇ ಸ್ಟೋರ್‌ನಲ್ಲಿ  Mandelbrot Maps ಎಂದು ಹುಡುಕಿದರೆ ಇದು ದೊರೆಯುತ್ತದೆ. ಮ್ಯಾಂಡೆಲ್‌ಬ್ರೋಟ್ ಸೆಟ್  (Mandelbrot Maps)  ಮತ್ತು ಜೊತೆಯ ಜೂಲಿಯಾ ಸೆಟ್ ಎರಡನ್ನೂ ಇದು ಚಿತ್ರಿಸುತ್ತದೆ. ಚಿತ್ರದ ಒಳಗೆ ಝೂಮ್ ಮಾಡುತ್ತ ಹೋಗಬಹುದು.

ಹಾಗೆ ಹೋದಂತೆ ಹೊಸ ಹೊಸ ವಿನ್ಯಾಸಗಳನ್ನು ಪಡೆಯಬಹುದು. ನಿಮಗೆ ಗಣಿತದಲ್ಲಿ ಏನೇನೂ ಆಸಕ್ತಿ ಇಲ್ಲದಿದ್ದರೂ ಈ ಕಿರುತಂತ್ರಾಂಶ ಹಾಕಿಕೊಂಡು ಸುಂದರ ಚಿತ್ರಗಳನ್ನು ಪಡೆದು. ಅವುಗಳನ್ನು ನಿಮ್ಮ ಫೋನಿನ ವಾಲ್‌ಪೇಪರ್ ಮಾಡಬಹುದು, ಸ್ನೇಹಿತರಿಗೂ ಕಳುಹಿಸಬಹುದು.
*

ದ್ರವದಿಂದ ತಣಿಯುವ ಫೋನ್
ಸ್ಮಾರ್ಟ್‌ಫೋನ್‌ಗಳ ಶಕ್ತಿ ಜಾಸ್ತಿಯಾಗುತ್ತಲೇ ಇದೆ. ಅಧಿಕ ಶಕ್ತಿಯನ್ನು ಬೇಡುವ ಆಟಗಳನ್ನು ಆಡಿದರೆ ಫೋನ್ ಬಿಸಿಯಾಗುತ್ತದೆ. ಕೆಲವು

ಫೋನ್‌ಗಳು ತುಂಬ ಬಿಸಿಯಾಗುತ್ತವೆ. ಕಾರ್, ಬಸ್, ಇತ್ಯಾದಿ ವಾಹನಗಳ ಎಂಜಿನ್ ಬಿಸಿಯಾಗದಂತೆ ಅವುಗಳನ್ನು ತಣಿಸಲು ಒಂದು ದ್ರವ ಇರುತ್ತದೆ. ಈಗ ಅದೇ ಸೂತ್ರವನ್ನು ಫೋನ್‌ಗಳನ್ನು ತಣಿಸಲು ಬಳಸಲು ಆಲೋಚನೆ ನಡೆಯುತ್ತಿದೆ.

ಫೋನ್‌ನಲ್ಲಿ ದ್ರವವನ್ನು ಹರಿಸಲು ಲೋಹದ ವಿಶೇಷ ಸಾಧನವನ್ನು ಅಳವಡಿಸಲಾಗುತ್ತದೆ. ಅದರ ಒಂದು ಭಾಗ ಫೋನಿನಲ್ಲಿ ಅತಿಯಾದ ತಾಪವನ್ನು ಉಂಟುಮಾಡುವ ಅಂಗದ ಮೇಲೆ ಹಾದುಹೋಗಿ ಅದರಿಂದ ತಾಪವನ್ನು ತೆಗೆಯುತ್ತದೆ. ಫುಜಿತ್ಸು ಕಂಪೆನಿಯವರ ಈ ಆವಿಷ್ಕಾರ ಇನ್ನೂ ಮಾರುಕಟ್ಟೆಗೆ ಬಂದಿಲ್ಲ.
*
ಗ್ಯಾಜೆಟ್ ಸಲಹೆ
ಸಂಧ್ಯಾ ಅವರ ಪ್ರಶ್ನೆ: ನನಗೆ ಇ-ಬುಕ್ ಓದಲು, ವಿಕಿಪೀಡಿಯ ನೋಡಲು ₹20,000 ಒಳಗೆ ಒಂದು ಆಂಡ್ರಾಯಿಡ್ ಟ್ಯಾಬ್ಲೆಟ್ ಬೇಕಿದೆ, ಯಾವುದನ್ನು ಕೊಳ್ಳಬಹುದೆಂದು ತಿಳಿಸಿ.
ಉ: ಶಿಯೋಮಿ ಎಂಐ ಪ್ಯಾಡ್ (Xiaomi Mi Pad)
*
ಗ್ಯಾಜೆಟ್ ತರ್ಲೆ
ಕೆಲವು ಆಧುನಿಕ ಗಾದೆಗಳು:
ಊಟ ಬಲ್ಲವನಿಗೆ ರೋಗವಿಲ್ಲ, ಮೊಬೈಲ್ ಇಲ್ಲದವನಿಗೆ ಮರ್ಯಾದೆ ಇಲ್ಲ .
ಕೋಟಿ ವಿದ್ಯೆಗಿಂತ ಚಾಟಿಂಗ್ ವಿದ್ಯೆ ಮೇಲು.
ಇಂದಿನ ಮಕ್ಕಳೆ ಮುಂದಿನ ಇಂಟರ್ನೆಟ್ ಸರದಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT