ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಟ್ಟುಲಿಂಗ ಕಟ್ಟುಲಿಂಗ

Last Updated 29 ಮೇ 2016, 19:30 IST
ಅಕ್ಷರ ಗಾತ್ರ

ಲಿಂಗವಂತರಿಗೆ ಕಟ್ಟುಲಿಂಗ ಕುರುಬರಿಗೆ ಹುಟ್ಟುಲಿಂಗ ಎಂಬುದು ಕನ್ನಡದ ಜನಮಾತು. ಕುರಿಕಾಯುವ ಕಾಯಕದಲ್ಲಿ ನಿರತರಾಗಿ ಹುಲ್ಲುನೀರಿನ ಹುಡುಕುವಿಕೆಯಲ್ಲಿ ಸದಾ ಅಲೆಮಾರಿ­ಗಳಾಗಿದ್ದವರು ಕುರುಬರು.

ಕುರಿಯ ಜೊತೆ ಬಾಳುವೆ ಮಾಡುತ್ತಿದ್ದ ಇವರಿಗೆ ಕಟ್ಟುಲಿಂಗದ ಹಂಗು ಭಾರದ ಬದುಕು. ಬಿಟ್ಟಲ್ಲಿ ಬೀಡು ಸಿಕ್ಕಿದ ಕಲ್ಲೇ ಲಿಂಗ ಇದು ಇವರ ಬದುಕು. ತೊಳೆದು ಪೂಜಿಸಿದ ಕಲ್ಲನ್ನು ಪೂಜಿಸಿದ ಜಾಗದಲ್ಲೇ ಬಿಟ್ಟು ಮುನ್ನಡೆಯುವುದು ಅಥವಾ ಗಂಗೆಗೆ ಅರ್ಪಿಸಿ ಮುಂದೆ ಸಾಗುವುದು ಇದು ಇವರ ಇಷ್ಟಲಿಂಗ ಪೂಜೆಯ ಕ್ರಮ. ಲಿಂಗದ ಸಂಕೇತದಲ್ಲಿ ಕಲ್ಲನ್ನು ಬಳಸಿ ಪೂಜಿಸುವಾಗ ಅದು ಅವರ ಭಕ್ತಿಯ ದೈವ.

ಅಲ್ಲಿಂದ ಮುಂದೆ ಪಯಣಿಸಿದರೆ ಅಲ್ಲಿಗೆ ಆ ಲಿಂಗ ಅಳಿಯಿತ್ತು. ಅದು ಆ ನಂತರ ಮಳೆ ಮೇಲೆ ಬಿದ್ದ ಕಲ್ಲು. ಮುಂದೆ ಇನ್ನೊಂದೆಡೆ ಬಿಡಾರ ಹೂಡಿದಾಗ ಅಲ್ಲಿ ಮತ್ತೊಂದು ಕಲ್ಲು ಅವರ ಲಿಂಗದೈವ. 

ಹೀಗೆ ಸದಾ ಚಾರಣಿಗರಾಗಿದ್ದ ಈ ಸಮುದಾಯಕ್ಕೆ ಕಟ್ಟುಲಿಂಗಕ್ಕಿಂತ ಹುಟ್ಟುಲಿಂಗ ಅಂದರೆ ಅಲ್ಲಲ್ಲಿ ಆಗಾಗ ಹುಟ್ಟಿಕೊಳ್ಳುವ ಲಿಂಗ ಇದೇ ಇವರ ಇಷ್ಟಲಿಂಗ, ಸಂಕೇತವಸ್ತುವನ್ನು ಇಷ್ಟು ಅರ್ಥಪೂರ್ಣವಾಗಿ ಅಂದರೆ ಅಗತ್ಯಕ್ಕನುಗುಣವಾಗಿ ಹುಟ್ಟು ಪಡೆಯುವ ಲಿಂಗವಾಗಿ ಬಳಸಿ ಬಿಸಾಕುವ ಇವರ ನಡವಳಿಕೆಯಲ್ಲಿ ಸಂಕೇತದ ವಸ್ತುಗೌರವಕ್ಕಿಂತ ಭಕ್ತಿಯ ಭಾವಗೌರವದ ಮಹತ್ವ ಅರಿವಿಗೆ ಬರುತ್ತದೆ.

ಕಲ್ಲನ್ನು ಲಿಂಗವೆಂದು ಭಾವಿಸುವ ಆ ಮನೋಧರ್ಮ ಜೀವಂತ ಜಂಗಮರೂಪಿ ಅದಕ್ಕೆ ಅಂದರೆ ಆ ಜೀವ ಭಾವಕ್ಕೆ ಭಕ್ತಿಯ ಜಂಗಮ ಸ್ವರೂಪಕ್ಕೆ ಸಾವಿಲ್ಲ. ಆದರೆ ಬಳಸುವ ವಸ್ತು ಸಂಕೇತಕ್ಕೆ ಸಾವಿದೆ; ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.

ಕಲ್ಲಿನೊಳಗೆಲಿಂಗ ಹುಟ್ಟಿದ ಮರಿಯಾದೆ
ಯಲ್ಲಿರಬೇಕು ಭಕ್ತಿಯೊಳು
ಜಲದೊಳು ತಾವರೆಹುಟ್ಟಿದ ಮರಿಯಾದೆ
ಅಲ್ಲಲ್ಲೆ ಪೂಜ್ಯುಂಟು ನಿಮಗೆ
(ತಗರ ಪವಾಡ)
ಸಂಕೇತವೆಂಬುದು ಸ್ಥೂಲವಾದಾಗ ಅದು ಕಾಯ ಮನದ ವಸ್ತುಭಾರ; ಸೂಕ್ಷ್ಮವಾದಾಗ ಅದು ಅರಿವಿನ ಭಾವದ ಗುರುದ್ವಾರ. ಅಧ್ಯಾತ್ಮದ ಅಪರಂಪಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT