ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣ್ಣಿಮೆ ಹರಿಸಿದ ಬೆಳದಿಂಗಳ ದಾರಿ ಹಿಡಿದು...

ಉಭಯ ಕುಶಲೋಪರಿ ಬಿ.ಎ. ಸನದಿ ಅವರೊಂದಿಗೆ ಪಟ್ಟಾಂಗ
Last Updated 5 ಮಾರ್ಚ್ 2016, 19:39 IST
ಅಕ್ಷರ ಗಾತ್ರ

ಸಹಜ ಸಾತ್ವಿಕತೆಯ ಪ್ರತಿರೂಪದಂತಿರುವ ಕವಿ ಬಿ.ಎ. ಸನದಿ ಅವರಿಗೆ 2015ರ ಸಾಲಿನ ‘ಪಂಪ ಪ್ರಶಸ್ತಿ’ ಸಂದಿದೆ. ಕುಮಟಾದಲ್ಲಿ ವಿಶ್ರಾಂತ ಜೀವನ ಕಳೆಯುತ್ತಿರುವ 83ರ ಹರೆಯದ ಈ ಹಿರಿಯ ಕವಿಯನ್ನು ‘ಮುಕ್ತಛಂದ’ ಪುರವಣಿಗಾಗಿ ಕಥೆಗಾರ ಶ್ರೀಧರ ಬಳಗಾರ ಮಾತನಾಡಿಸಿದ್ದಾರೆ.

* ಸ್ಥೂಲವಾಗಿ ನಿರಂತರ ವಲಸೆ ಎಂದನಿಸುವ ಚಲನೆ ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ ವಲಯದಲ್ಲಿ ಜರುಗುತ್ತ ಬಂದಿದೆ. ಗೌರೀಶ ಕಾಯ್ಕಿಣಿಯವರು ಜನಿಸಿದ ಜಿಲ್ಲೆಯಲ್ಲೇ ತನ್ನ ದೈವವನ್ನು ಜಾಗ್ರತಗೊಳಿಸಿಕೊಂಡವರು; ಚಿತ್ತಾಲ ಸಹೋದರರು, ವಿ.ಜಿ. ಭಟ್ಟರು ಜಿಲ್ಲೆಯ ಹೊರಗೇ ನೆಲೆಸಿದವರು; ಎಕ್ಕುಂಡಿ, ಪಾಂಡೇಶ್ವರ್, ನೀವೆಲ್ಲ ಹೊರಗಿನಿಂದ ಬಂದವರು. ನಿಮ್ಮನ್ನು ಇಲ್ಲಿಗೆ ಸೆಳೆದದ್ದು ಹೊಸ ಶಬ್ದ ಸಂಸಾರವೊ ಅಥವಾ ವಾನಪ್ರಸ್ಥದ ದಾಂಪತ್ಯದ ಅನುಕೂಲತೆಯೊ? ಕರಾವಳಿಯ ಯಾವ ಮೋಹನ ಮುರಳಿ ನಿಮ್ಮನ್ನು ಕರೆಯಿತು?
ಕುಮಟ ನನ್ನ ಮಾವನ ಮನೆ; ಅಂದರೆ, ನನ್ನ ಹೆಂಡತಿಯ ತವರು ಮನೆ. ಹುಣ್ಣಿಮೆ ಹರಿಸಿದ ಬೆಳದಿಂಗಳ ದಾರಿ ಹಿಡಿದು ತೀರದ ಆಸೆಯಿಂದ ಬಂದವನು ನಾನು. ನೀವು ಗುರುತಿಸಿದಂತೆ ಜಿಲ್ಲೆಯ ಸಾಹಿತ್ಯಕ್ಕೆ ಸಾಂಸ್ಕೃತಿಕ ಗುಣ ಪ್ರಾಪ್ತವಾದದ್ದು ನಿರಂತರವಾದ ಅಂತರ್ ಚಲನೆಯಿಂದ ಎಂದು ನನಗೂ ಅನಿಸಿದೆ. 

ನಿವೃತ್ತಿಯ ನಂತರ ನಿರಾಳವಾಗಿ ನೆಮ್ಮದಿಯಿಂದ ನನ್ನ ಪಾಡಿಗೆ ನಾನು ಒಂದೆಡೆ ನೆಲೆಸಲು ಸೂಕ್ತ ಸ್ಥಳದ ಹುಡುಕಾಟದಲ್ಲಿದ್ದಾಗ ಕುಮಟ ನೆನಪಾಯಿತು. ಬೆಚ್ಚಗಿನ ಹಗುರಾದ ಕರಾವಳಿಯ ಹವಾಮಾನ ನನ್ನ ಪ್ರಕೃತಿಗೆ, ಸೂಕ್ಷ್ಮವಾದ ಆರೋಗ್ಯಕ್ಕೆ ಯೋಗ್ಯ ಅನಿಸಿತು. ಹೆಂಡತಿಗೆ ತವರಾದುದರಿಂದ ಆಪ್ತ ಬಳಗದ ಒಡನಾಡಿಗಳು ನಮ್ಮನ್ನು ಸ್ವಾಗತಿಸಲು ಸಿದ್ಧರಾಗಿದ್ದರು; ಅಲೆದಾಟದಿಂದ ದಣಿದ ನಮಗೂ ಇಂಥ ಆನಂದಾಶ್ರಮದ ಅಗತ್ಯವಿತ್ತು.

ಇಲ್ಲಿಗೆ ಬಂದ ಮೇಲೆ ಅಂತರ್ಧಾನವಾದ ಸಾಹಿತ್ಯ ಸ್ಮೃತಿ ಜಾಗ್ರತವಾಯಿತು. ಒಂದು ಕಾಲದಲ್ಲಿ ಗೋಪಾಲಕೃಷ್ಣ ಅಡಿಗ, ಆಮೂರ, ಕೃಷ್ಣಮೂರ್ತಿ, ಬಿ.ಎಚ್. ಶ್ರೀಧರ ಇಲ್ಲಿಯ ಕಾಲೇಜಿನಲ್ಲಿ ಪಾಠ ಮಾಡಿದವರು. ಅವರು ಬಿಟ್ಟು ಹೋದ ಕಂಪಿನ ಕರೆಯೂ ನನ್ನೊಳಗೆ ಸುಪ್ತವಾಗಿತ್ತು. ಸ್ಥಳೀಯ ಸಾಹಿತ್ಯ ಪರಿಷತ್ತಿನ ಮೂಲಕ ನಾನು ಆ ಪರಿಮಳದ ಮೂಲಕ್ಕೆ ಹೋಗಿ ಅದನ್ನು ಮರಳಿ ತರಲು ಯತ್ನಿಸಿದೆ. ಇಲ್ಲಿ ಸಾಹಿತ್ಯದ ತೇರೆಳೆಯಲು ಸಂಘಟನೆಯಾಗಲೀ ಸಂಸ್ಥೆಯಾಗಲೀ ಇಲ್ಲ. ಸಾಹಿತ್ಯ ನಿಶ್ಶಬ್ದತೆಯನ್ನು ನೀಗಿಕೊಂಡು ಎಲ್ಲರ ಶಬ್ದ ಸಂಸಾರಕ್ಕೆ ಅವು ಬೇಕೆನಿಸುತ್ತದೆ.

* ವೃತ್ತಿ ನಿಮಿತ್ತ ನೀವು ರಾಯಭಾಗ, ಗುಲ್ಬರ್ಗ, ಬೆಂಗಳೂರು, ಗುಜರಾತ್, ಮುಂಬೈ– ಹೀಗೆ ಸಂಚರಿಸಿದವರು. ನಿಮ್ಮ ಅಲೆಮಾರಿತನದಲ್ಲಿ ತನ್ನನ್ನು ಒಂದು ಮತದೊಂದಿಗೆ ಗುರುತಿಸದೆ ಮನುಷ್ಯನನ್ನಾಗಿ ಸ್ವೀಕರಿಸಿ ಎಂಬ ಅಪೇಕ್ಷೆ ಉಂಟಾಗುವಂಥ ಒತ್ತಡ ನಿಮ್ಮೊಳಗೆ ಇತ್ತೆ? ಯಾಕೆಂದರೆ, ನಿಮ್ಮ ಅನೇಕ ಕವಿತೆಗಳ ವಸ್ತುಗಳಾದ ಸಾಮರಸ್ಯ, ದೇಶಾಭಿಮಾನ, ಜಾತಿಬೇಲಿ, ಕನ್ನಡ ನುಡಿಯ ಬಗ್ಗೆ ತುಸು ಭಾವಾವೇಶದಿಂದ ಸಮರ್ಥನೆಗೆ ತೊಡಗಿದಂತೆ ಭಾಸವಾಗುತ್ತದೆ.
ಜಾತಿ- ಮತಗಳ ಕವಚಗಳು ತಾವಾಗಿಯೆ ಕಳಚಿಹೋದ ಪರಿಸರದಲ್ಲಿ ಹುಟ್ಟಿ, ಬೆಳದದ್ದು ನನ್ನ ಅದೃಷ್ಟ. ಬೆಳಗಾವಿ ಜಿಲ್ಲೆಯ ಸಣ್ಣ ಹಳ್ಳಿಯಲ್ಲಿ ನನ್ನ ಬಾಲ್ಯ ಕಳೆಯಿತು. ನಮ್ಮ ಮನೆಯ ಆಚೀಚೆ ಬ್ರಾಹ್ಮಣ ಮತ್ತು ಲಿಂಗಾಯತರ ಕುಟುಂಬಗಳು ಇದ್ದವು. ಸಂಸ್ಕೃತ ಭಾಷೆ ಕಲಿತು, ವಚನ ಸಾಹಿತ್ಯ ಓದಿಕೊಂಡಿದ್ದೆ. ಮಸೀದಿಗೆ ಹೋಗುವ ರೂಢಿಯಂತೂ ಇರಲಿಲ್ಲ.

ಕೆಲವು ಸಂಪ್ರದಾಯಸ್ಥರಿಗೆ ನಾನು ಮತಾಂತರಗೊಂಡೆ ಎನಿಸಿರಬೇಕು. ‘ಹಣೆಗೆ ನಾಮ ವಿಭೂತಿ ಪಟ್ಟೆ ಎಳ್ಕೊ’ ಎಂದು ಲೇವಡಿ ಮಾಡಿದರು. ನನ್ನಪ್ಪ ಸನದು ಬರೆಯುವ ಕೆಲಸ ಮಾಡ್ತಿದ್ರು. ಅಡ್ಡ ಹೆಸರು ‘ಸನದಿ’ ಎಂದು ಇರಲು ಇದೇ ಕಾರಣವಿರಬಹುದು. ಮನೆಯಲ್ಲಿ ಯಾವಾಗಲೂ ರೈತರು ಇರ್ತಿದ್ರು. ಅವರು ಕನ್ನಡ, ಮರಾಠಿ, ಉರ್ದು ಎಲ್ಲಾ ಭಾಷೆ ಆಡುವವರು. ಬಹು ಭಾಷೆಗಳ, ವಿವಿಧ ಜಾತಿ–ಧರ್ಮಗಳ ಹಾಸುಹೊಕ್ಕಿನ ಸಮುದಾಯ ಅದಾಗಿತ್ತು.

ಸ್ಥಳೀಯ ಸಂಪ್ರದಾಯಗಳ ಮಿತಿಗಳನ್ನು ಮೀರಲು ಇದರಿಂದ ಅವಕಾಶವಾಯಿತು. ಉರ್ದು ಭಾಷೆಯನ್ನು ಶಾಲೆಗೆ ಹೋಗಿ ಕಲಿಯಲಾರದ ಬಗ್ಗೆ, ಅದರ ಸಾಹಿತ್ಯವನ್ನು ಅಧ್ಯಯನ ಮಾಡುವ ಅವಕಾಶ ಕಳೆದುಕೊಂಡದ್ದಕ್ಕಾಗಿ ನನಗೆ ವಿಷಾದವಿದೆ. ಮನುಷ್ಯ ಸಹಜವಾದ ಸಂಬಂಧಗಳ ನಡುವೆ ಜಾತಿ–ಮತಗಳ ನೆನಪು ಆಗದ ಕಾಲ ಅದು.

ವಾರ್ತಾ ಇಲಾಖೆಯ ಕ್ಷೇತ್ರ ಪ್ರಚಾರಕನಾಗಿ ನಾನು ಕೆಲಸ ಮಾಡಿದೆ. ಜಾತಿ–ಮತ–ಭಾಷೆಗಳ ಗಡಿಗಳನ್ನು ದಾಟಿ ಹೋಗಲು ನನ್ನ  ವೃತ್ತಿಯೂ ಕಾರಣ. ಕಾಲ ಕಾಲಕ್ಕೆ ವರ್ಗಾವಣೆ ಆಗುತ್ತ ಮಹಾನಗರಗಳಲ್ಲಿ ವಾಸವಾದದ್ದರಿಂದ ಹಳ್ಳಿಗಳಲ್ಲಿ ಬಾಧಿಸುತ್ತಿದ್ದ ಧಾರ್ಮಿಕ ಆಚರಣೆ, ರೂಢಿ, ಸಂಪ್ರದಾಯಗಳು ಕಟ್ಟುಪಾಡುಗಳಾಗಿ ಕಾಡಲಿಲ್ಲ.

* ನಿಮ್ಮ ಮನೆ ಮಾತು ಉರ್ದು. ನೀವು ಇಂಗ್ಲಿಷ್ ಮತ್ತು ಸಂಸ್ಕೃತವನ್ನು ಅಧ್ಯಯನ ಮಾಡಿದವರು. ಕನ್ನಡದಲ್ಲಿ ಬರವಣಿಗೆ. ಕನ್ನಡದ ಕೆಲವು ಮುಖ್ಯ ಲೇಖಕರು ಬಹು ಭಾಷಾ ಪರಂಪರೆಗೆ ಸೇರಿದವರು. ಈ ಬಗೆಯ ಬಹುವಚನೀಯ ಸಾಧ್ಯತೆಗಳು ಸಾಂಸ್ಕೃತಿಕವಾಗಿ ನಿಮಗೆ ಹೇಗೆ ಮುಖ್ಯ ಅನಿಸಿದೆ?
ಉರ್ದು ನನ್ನ ಅಂತರಂಗದಲ್ಲಿ ಅಂತರ್ಗತ ಆಗಲೇ ಇಲ್ಲ. ನಾನು ಹೈಸ್ಕೂಲಿನಲ್ಲಿ ಉರ್ದು ಕಲಿಯುವ ಪ್ರಯತ್ನವನ್ನೇನೊ ಮಾಡಿದೆ. ಯಾಕೊ ಅದು ಕನ್ನಡದಷ್ಟು ಸಲೀಸಾಗಿ, ಆಪ್ತವಾಗಿ ನನ್ನ ಜಾಯಮಾನಕ್ಕೆ ಒಗ್ಗಲಿಲ್ಲ.

ನಮಗೆ ಉರ್ದು ಪಾಠ ಮಾಡುತ್ತಿದ್ದ ಮಾಸ್ತರರೊಬ್ಬರು ಒಂದಿನ ಕ್ಲಾಸಿನಲ್ಲಿ ನನ್ನ ಎದ್ದು ನಿಲ್ಲಿಸಿ, ‘ಉರ್ದುವನ್ನು ನೀನು ಕನ್ನಡದ ಇಂಟೊನೇಷನ್‌ನಲ್ಲಿ ಮಾತಾಡ್ತೀಯಾ. ಉರ್ದು ಕಲಿಯೋದಕ್ಕೆ ನೀನು ಅಯೋಗ್ಯ’ ಎಂದು ಅವಮಾನ ಮಾಡಿದ್ರು. ಈ ಘಟನೆಯಿಂದ ಬೇಸರಗೊಂಡು ನಾನು ಸಂಸ್ಕೃತ ಕ್ಲಾಸಿನಲ್ಲಿ ಕೂರಬೇಕಾಯಿತು. ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ಅರಿಯಲು ಬಹುಭಾಷೆಗಳು ಬೇಕು ಎಂದು ನನಗೆ ಅನಿಸಿದೆ. ಕೊನೆಗೂ ಉರ್ದುವನ್ನಾಗಲಿ, ಪರ್ಶಿಯನ್ನಾಗಲಿ ಕಲಿಯಲಾಗಲಿಲ್ಲ ಎಂದು ನನಗೆ ಖೇದವಿದೆ.

* ದೀರ್ಘ ಕಾಲ ನೀವು ಮುಂಬೈಯಲ್ಲಿದ್ದವರು. ನಿದ್ರಿಸದ ಆ ಬೃಹತ್ ಮಾಯಾ ನಗರದ ಯಾಂತ್ರಿಕತೆ, ಅಸಂಗತತೆ, ಹಿಂಸೆಯ ಕುರಿತು ನೀವು ಹಲವು ಕವಿತೆಗಳನ್ನು ಬರೆದಿದ್ದೀರಿ. ಮುಂಬೈಗೆ ಮಾನವೀಯ ಮುಖವೂ ಇರಬೇಕಲ್ಲ, ಅದರ ದರ್ಶನ ನಿಮಗೆ ಆಗಲಿಲ್ಲವೆ?
ಮುಂಬೈ ಸಂಕೀರ್ಣವಾದ ಸಂಕ್ಷಿಪ್ತ ಭಾರತ. ದೇಶದ ಎಲ್ಲೆಡೆಯಿಂದ ಕಾಯಕವೇ ಕೈಲಾಸ ಎನ್ನುತ್ತ ತಮ್ಮ ದೈವವನ್ನು ಹುಡುಕಿಕೊಂಡು ಜನ ಅಲ್ಲಿಗೆ ಬರ್ತಾರೆ. ಜಾತಿ, ಮತ, ಭಾಷೆಗಳ ವಿಚಿತ್ರ ಸಮೀಕರಣ, ಕಲಸುಮೇಲೋಗರ ಅಲ್ಲಿದೆ. ಹೊರಗಿನಿಂದ ಹೋದವರು ಬೇರು ಬಿಡುವ ಯತ್ನದಲ್ಲಿ ಕೇವಲ ಮನುಷ್ಯರಾಗಿರುತ್ತಾರೆ.

ಆದರೆ, ಕೆಲವು ಸ್ಥಳೀಯ ಶಕ್ತಿಗಳಿಗೆ ಈ ಆಗಂತುಕರು ತಮ್ಮ ಕೆಲಸಕ್ಕೆ ಸ್ಪರ್ಧಿಗಳಾಗುತ್ತಿದ್ದಾರೆಂದು ಅನಿಸಿದರೆ ಸಾಕು– ಗಲಾಟೆ ಶುರು. ದಕ್ಷಿಣ ಭಾರತದವರೊಂದಿಗೆ ಭಾಷೆಯ ಜಗಳ; ಉತ್ತರದವರೊಂದಿಗೆ ಕೂಲಿ ಕೆಲಸದ ಜಗಳ; ವಲಸಿಗರು ಬಡತನದಿಂದಾಗಿ, ಅವಲಂಬನದಿಂದಾಗಿ ಒಂದು ಮಟ್ಟದವರೆಗೆ ಹಿಂಸೆ, ಅವಮಾನ ಸಹಿಸಿಕೊಂಡಿರ್ತಾರೆ. ಹಾಗೆ ನೋಡಿದರೆ ಪರಸೊತ್ತಿನಲ್ಲಿ ಅವರಿಗೆ ಜಗಳಕ್ಕೂ ಪುರಸೊತ್ತಿಲ್ಲ.

ಆಧುನಿಕ ಯಂತ್ರ ನಾಗರೀಕತೆ ಒಂದೇ ಚಾವಿಯಿಂದ ಸ್ವರ್ಗ ಮತ್ತು ನರಕ ಎರಡನ್ನೂ  ತೆರೆದಿದೆ. ಮತೀಯತೆಯ ಮತ್ತು ಆಧುನಿಕತೆಯ ವಿಕೃತಿಗಳು ನನ್ನ ‘ದೃವ ಬಿಂಧು’ ಮತ್ತು ‘ಮನೆಮನೆಗೆ ಬೇಲಿ’ ಕವನ ಸಂಕಲಗಳಲ್ಲಿ ಅಭಿವ್ಯಕ್ತಿಗೊಂಡಿವೆ. 1993ರಲ್ಲಿ ಮುಂಬೈಯಲ್ಲಿ ಮತೀಯ ಗಲಭೆಯಾಯಿತು. ಜನರು ಹಿಂಸೆ ಬಿಟ್ಟು ಒಗ್ಗೂಡಲು ನಾವೊಂದು ಸಣ್ಣ ಪ್ರಯೋಗ ಮಾಡಿದೆವು.

‘ಕರ್ನಾಟಕ ಸಂಘ’ದಡಿಯಲ್ಲಿ ‘ಕಲಾ ಭಾರತಿ’ ಎಂಬ ಕಾರ್ಯಕ್ರಮ ಆರಂಭಿಸಿದೆವು. ಪ್ರತಿ ರವಿವಾರ ಕಲೆಯ ಯಾವುದಾದರೂ ಪ್ರಕಾರದ ಪ್ರದರ್ಶನ ಸಾರ್ವಜನಿಕರಿಗೆ ಪುಕ್ಕಟೆಯಾಗಿ ನೀಡತೊಡಗಿದೆವು. ಬೇರೆ ಬೇರೆ ಧರ್ಮ, ಭಾಷೆ, ಪ್ರಾಂತಗಳಿಗೆ ಸೇರಿದವರು ತಮ್ಮ ಮೂಲವ್ಯಾಧಿಯನ್ನು ಮರೆತು, ಕಲೆಯಲ್ಲಿ ಅಸಹಜ ಗಡಿಗಳನ್ನು ಮೀರಿ ಒಂದಾದರು. ಹಿಂಸೆಯಿಂದ ಜನರ ಗಮನವನ್ನು ಬೆರೆಡೆಗೆ ಸೆಳೆಯಲು ಸ್ವಲ್ಪ ಯಶಸ್ಸನ್ನು ನಾವು ಕಂಡೆವು.

* ಎಡ – ಬಲ ಹಟಮಾರಿ ಪಂಥಗಳಿಂದ ಒಡೆದುಹೋದ ನಮ್ಮ ಕಾಲದ ಸಮಾಜಕ್ಕೆ ಮತ್ತೊಂದು ಮಾನವೀಯ ಮಧ್ಯಮ ಪಥದ ಅವಶ್ಯಕತೆಯಿದೆ ಎಂದು ನಿಮಗೆ ಅನಿಸಿದೆಯೆ?
ಎಡ – ಬಲ ಸಿದ್ಧಾಂತಗಳಿಂದ ಸಾಮಾಜಿಕ ವಿಘಟನೆ ಆದದ್ದು ನಿಜ. ಈ ಎರಡೂ ಸಿದ್ಧಾಂತಗಳು ಸಾಂಸ್ಕೃತಿಕ ಸಂಘರ್ಷಗಳಾಗದೆ ರಾಜಪ್ರಭುತ್ವಗಳ ದಾಳವಾಗುತ್ತಿರುವುದು ವಿಷಾದನೀಯ. ನೀವೆಂದಂತೆಯೇ ಮನುಷ್ಯನಿಗಿಂತ ಅವನ ಜಾತಿ, ಕುಲಗಳ ಲೆಕ್ಕಾಚಾರಗಳಲ್ಲೆ ರಾಜಕೀಯ ಲಾಭಗಳಿವೆ.

ರಾಜಕೀಯ ಸಾಹಿತ್ಯಕ್ಕಿಂತ ‘ಸಾಹಿತ್ಯದಲ್ಲಿನ ರಾಜಕೀಯ’ ಹೆಚ್ಚು ಅಪಾಯಕಾರಿ. ಕಲೆ–ಸಾಹಿತ್ಯದ ಒಳಗೆ ಹೊಸ ಮಠಗಳು ಉದ್ಭವಿಸುತ್ತಿವೆ. ಒಳ ಹುತ್ತಗಳಲ್ಲಿ ಹಾವುಗಳಿವೆ. ಎರಡೂ ಜನರಿಗೆ ಸಾಕಾಗಿದೆ. ತೃತೀಯ ಅವಕಾಶವನ್ನು ಶೋಧಿಸುವ ಕಾಲ ಸನ್ನಿಹಿತವಾಗಿದೆ.

* ನೀವು ಬರವಣಿಗೆ ಆರಂಭಿಸಿದ ದಿನಗಳಲ್ಲಿ ಕವಿಗೆ ಪ್ರತಿಭೆ, ಪಾಂಡಿತ್ಯ, ಪರಂಪರೆಯ ಅರಿವು ಮತ್ತು ಪ್ರತಿಭಟನೆ ಮುಖ್ಯವಾಗಿದ್ದವು. ಈ ಹಿನ್ನೆಲೆಯಲ್ಲಿ ಹೊಸ ತಲೆಮಾರಿನ ಕವಿಗಳ ಸಿದ್ಧತೆ ಮತ್ತು ಸಾಧ್ಯತೆಯ ಬಗ್ಗೆ ಏನು ಹೇಳ್ತೀರಿ?
ನಾನು ಕಾವ್ಯ ಕೃಷಿಗೆ ತೊಡಗಿದ ಕಾಲದಲ್ಲಿ ಅನುಭವದ ಪಕ್ವತೆಗೆ ಕಾಯುವ ಪ್ರಾಮಾಣಿಕತೆ, ಹೊಸತನದ ಹುಡುಕಾಟ, ಬದ್ಧತೆ ಇದ್ದವು. ಧಾರ್ಮಿಕ ಭಕ್ತಿಯಿಂದ, ಪ್ರಭುತ್ವದ ಶರಣಾಗತಿಯಿಂದ ಹೊರಳಿ ನಾಡು, ನುಡಿ, ಪ್ರಕೃತಿಯೇ ಅಧ್ಯಾತ್ಮ ಎಂಬ ಮನುಷ್ಯತ್ವದ ಅರಿವಿನತ್ತ ನಡೆದ ಕಾಲ ಅದು. ಹೊಸ ತಲೆಮಾರಿನ ಹೆಚ್ಚಿನ ಕವಿಗಳು ಪ್ರತಿಭಾ ವಿಲಾಸವನ್ನು ಮಾತ್ರ ನಂಬಿದವರು.

ಅವರು ಜಾಹೀರಾತಿನ ಮತ್ತು ಮಾರುಕಟ್ಟೆಯ ಆಮಿಷಗಳಿಗೆ ಮಾರು ಹೋದದ್ದು ನಿಜ. ಸಾಹಿತ್ಯದಲ್ಲಿ ಗುಣ ವಿಮರ್ಶೆಗಿಂತ ಗುಂಪುಗಾರಿಕೆ, ವೈಯಕ್ತಿಕ ಹಿತಾಸಕ್ತಿಗಳೇ ವಿಜೃಂಭಿಸುತ್ತಿವೆ.

* ನಿಮ್ಮ ಕುಟುಂಬ, ವಿಶೇಷವಾಗಿ ನಿಮ್ಮ ಹೆಂಡತಿ ಸಾಹಿತ್ಯ ಕೃಷಿಗೆ ಹೇಗೆ ಸಹಕರಿಸಿದ್ದಾರೆ?
ಸಂಸಾರ ಸಂತೆಯ ಎಲ್ಲ ವ್ಯವಹಾರಗಳನ್ನು ಅಚ್ಚುಕಟ್ಟಾಗಿ ಅವರೇ ನಿರ್ವಹಿಸುತ್ತಿದ್ದುದರಿಂದ ನನ್ನ ಸಮಯವನ್ನು ಸಂಪೂರ್ಣವಾಗಿ ಸಾಹಿತ್ಯಕ್ಕೆ ಮುಡಿಪಾಗಿಡಲು ಅವಕಾಶವಾಯ್ತು. ಅವರ ಕನ್ನಡ ಪ್ರೀತಿ, ಅತಿಥಿ ಸತ್ಕಾರ ಮತ್ತು ಅಡುಗೆಯ ರುಚಿ ನನ್ನ ಸಾಹಿತ್ಯದ ಗುಣವಾದರೆ ಅಚ್ಚರಿ ಪಡಬೇಕಾಗಿಲ್ಲ. ವಿದೇಶದಲ್ಲಿರುವ ನಮ್ಮ ಮಕ್ಕಳ ಒಲುಮೆ ನಮ್ಮ ದಾಂಪತ್ಯವನ್ನು ಪೊರೆದಿದೆ.

* ‘ಮನುಷ್ಯ ಕುಲಂ ತಾನೊಂದೆ ವಲಂ’ ಎಂಬ ಪಂಪನ ಸಾಲೊಂದರ ಹಿನ್ನಲೆಯಲ್ಲಿ ನಿಮಗೊಲಿದು ಬಂದ ಈ ಸಾಲಿನ ಪಂಪ ಪ್ರಶಸ್ತಿ ಸಂದರ್ಭದಲ್ಲಿ ನಿಮ್ಮ ಪ್ರತಿಕ್ರಿಯೆ ಏನು?
ಪಂಪನ ಹೆಸರಿನ ಜೊತೆ ನಾನು ನಿಲ್ಲುವಂತಾದದ್ದು ನಿಜಕ್ಕೂ ಸಂತೋಷದ ಸಂಗತಿ. ನನಗಿಂತ ಅರ್ಹರಾದ ನನ್ನ ಸಮಕಾಲೀನ ಅನೇಕರು ಈ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಬಹುದಿತ್ತು ಎನಿಸಿತು. ಪ್ರಾದೇಶಿಕ ನ್ಯಾಯಕ್ಕಾಗಿ ನನ್ನನ್ನು ಆಯ್ಕೆ ಮಾಡಿರಬಹುದು. ‘ಆರಂಕುಶವಿಟ್ಟೊಡೆಂ ನೆನೆವುದೆನ್ನ ಮನಂ ಬನವಾಸಿ ದೇಶಂ’ ಎಂಬ ಕವಿಯ ವಾಣಿ ನನ್ನೊಳಗಿನ ಒಳ ಆದೇಶವಾಗಿದೆ.

ಕಾಜಾಣವಾಗಿಯೊ ಮರಿ ದುಂಬಿಯಾಗಿಯೋ ತಾನು ಬನವಾಸಿಯಲ್ಲಿಯೇ ಪುನಃ ಜನ್ಮ ತಾಳುವೆ ಎಂದ ಪಂಪನಿಗೆ ಅಂಥ ಪಾವಿತ್ರ್ಯ ಇಂದಿನ ಬನವಾಸಿ ದೇಶದಲ್ಲಿದೆಯೇ ಎಂದು ಪ್ರಶ್ನಿಸಬೇಕೆಂದು ಅನಿಸುತ್ತದೆ. ಜಾತ್ಯತೀತ ತತ್ವದ ಮೂಲ ಪುರುಷ ಪಂಪನೇ. ಬಸವಣ್ಣ, ಗಾಂಧಿ, ಅಂಬೇಡ್ಕರ್, ಲೋಹಿಯಾ ಮುಂತಾದವರ ಮೂಲಕ ಒಂದು ಪರಂಪರೆಯಾಗಿ ಜಾತ್ಯತೀತತೆ ಮುಂದೆ ಸಾಗಿದ ವಿಷಯದಲ್ಲೂ ಅವನು ಆದಿ ಕವಿ.

‘ಮನುಷ್ಯ ಕುಲಂ ತಾನೊಂದೆ ವಲಂ’ ಎಂಬುದನ್ನು ಸರಕಾರ ಘೋಷವಾಕ್ಯವನ್ನಾಗಿ ಅಂಗೀಕರಿಸಿ, ರಾಷ್ಟ್ರಗೀತೆ, ನಾಡಗೀತೆಯಂತೆ ಎಲ್ಲ ಇಲಾಖೆ, ಶಾಲಾ ಕಾಲೇಜುಗಳಲ್ಲಿ ನಿತ್ಯ ನುಡಿಯಾಗಿ ಆಚರಿಸಲು ಮುಂದಾಗಬೇಕು ಎಂಬುದು ನನ್ನ ವಿನಮ್ರ ವಿನಂತಿ.

**
ಜಾತ್ಯತೀತ ತತ್ವದ ಮೂಲ ಪುರುಷ ಪಂಪನೇ. ಬಸವಣ್ಣ, ಗಾಂಧಿ, ಅಂಬೇಡ್ಕರ್, ಲೋಹಿಯಾ ಮುಂತಾದವರ ಮೂಲಕ ಒಂದು ಪರಂಪರೆಯಾಗಿ ಜಾತ್ಯತೀತತೆ ಮುಂದೆ ಸಾಗಿದ ವಿಷಯದಲ್ಲೂ ಅವನು ಆದಿ ಕವಿ. ‘ಮನುಷ್ಯ ಕುಲಂ ತಾನೊಂದೆ ವಲಂ’ ಎಂಬುದನ್ನು ಸರಕಾರ ಘೋಷವಾಕ್ಯವನ್ನಾಗಿ ಅಂಗೀಕರಿಸಿ, ರಾಷ್ಟ್ರಗೀತೆ, ನಾಡಗೀತೆಯಂತೆ ಎಲ್ಲ ಇಲಾಖೆ, ಶಾಲಾ ಕಾಲೇಜುಗಳಲ್ಲಿ ನಿತ್ಯ ನುಡಿಯಾಗಿ ಆಚರಿಸಲು ಮುಂದಾಗಬೇಕು

**
ಬಾಬಾ ಸಾಹೇಬ ಅಹಮದ್‌ ಸಾಹೇಬ ಸನದಿಯವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಸಿಂಧೋಳಿಯಲ್ಲಿ (ಜನನ: ಆ. 18, 1933).  ‘ಸನದಿ’ ಮನೆತನದ ಹೆಸರು. ಶಿಕ್ಷಣ ಇಲಾಖೆ, ವಾರ್ತಾ ಇಲಾಖೆ ಹಾಗೂ ಆಕಾಶವಾಣಿಯ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. 1991ರಲ್ಲಿ ನಿವೃತ್ತಿ. ಪ್ರಸ್ತುತ ಕುಮಟಾದಲ್ಲಿ ನೆಲೆ. ‘ಆಶಾಕಿರಣ’, ‘ನೆಲಸಂಪಿಗೆ’, ‘ತಾಜಮಹಲು’, ‘ಹಿಮಗಿರಿಯ ಮುಡಿಯಲ್ಲಿ’, ‘ನಮ್ಮ ಪ್ರೀತಿ’ ಅವರ ಕೆಲವು ಕಾವ್ಯಕೃತಿಗಳು.

‘ಸೂರ್ಯಪಾನ’ ಸಮಗ್ರಕಾವ್ಯ ಸಂಕಲನ. ಕಥೆ, ಅನುವಾದ, ಮಕ್ಕಳ ಸಾಹಿತ್ಯ, ನಾಟಕ, ಸಂಪಾದನೆ, ವಿಮರ್ಶೆ– ಹೀಗೆ ಹಲವು ಕ್ಷೇತ್ರಗಳಲ್ಲಿ ಅವರ ಸಾಧನೆ ಸಂದಿದೆ. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ ಹಾಗೂ ಈಗ ಸಂದಿರುವ ‘ಪಂಪ ಪ್ರಶಸ್ತಿ’ ಸೇರಿದಂತೆ ಹಲವು ಗೌರವಗಳು ಸನದಿ ಅವರಿಗೆ ಸಂದಿವೆ.

**
ರಾಜಕೀಯ ಸಾಹಿತ್ಯಕ್ಕಿಂತ ‘ಸಾಹಿತ್ಯದಲ್ಲಿನ ರಾಜಕೀಯ’ ಹೆಚ್ಚು ಅಪಾಯಕಾರಿ. ಕಲೆ–ಸಾಹಿತ್ಯದ ಒಳಗೆ ಹೊಸ ಮಠಗಳು ಉದ್ಭವಿಸುತ್ತಿವೆ. ತೃತೀಯ ಅವಕಾಶವನ್ನು ಶೋಧಿಸುವ ಕಾಲ ಸನ್ನಿಹಿತವಾಗಿದೆ.

**
ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ಅರಿಯಲು ಬಹುಭಾಷೆಗಳು ಬೇಕು ಎಂದು ನನಗೆ ಅನಿಸಿದೆ. ಉರ್ದುವನ್ನಾಗಲಿ, ಪರ್ಶಿಯನ್ನಾಗಲಿ ಕಲಿಯಲಾಗಲಿಲ್ಲ ಎಂದು ನನಗೆ ಖೇದವಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT