ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ–ಬೆಟದೂರ ಏಕ್‌ ಆತು ನೋಡ್ರಿ...

ಮೊಳಗಿದ ಜಯಘೋಷ * ಅಂತಿಮಯಾತ್ರೆ ಕಣ್ತುಂಬಿಕೊಂಡ ಜನ * ದೂರದ ಊರಿನಿಂದ ಬಂದ ವಿದ್ಯಾರ್ಥಿಗಳು
Last Updated 13 ಫೆಬ್ರುವರಿ 2016, 11:48 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಣ್ಣು ಹಾಯಿಸಿದಷ್ಟೂ ದೂರ ಕಾಣುತ್ತಿದ್ದ ಜನ, ರಸ್ತೆಯ ಇಕ್ಕೆಲದಲ್ಲಿ ಹೂವು–ಮಾಲೆ ಹಿಡಿದು ನಿಂತ ಗ್ರಾಮಸ್ಥರು, ವಿದ್ಯಾರ್ಥಿಗಳಿಂದ ವಂದೇ ಮಾತರಂ ಘೋಷಣೆ, ಮತ್ತೆ ಹುಟ್ಟಿ ಬಾ ಹನುಮಂತಪ್ಪ... ಎಂದು ಕೂಗುತ್ತಿದ್ದ ಯುವಕರು, ಮೆರವಣಿಗೆಯುದ್ದಕ್ಕೂ ಮೊಳಗಿದ ದೇಶಭಕ್ತಿಗೀತೆಗಳು... ಯೋಧ ಹನುಮಂತಪ್ಪ ಕೊಪ್ಪದ ಅವರ ಪಾರ್ಥಿವ ಶರೀರವನ್ನು ಹುಬ್ಬಳ್ಳಿಯ ನೆಹರೂ ಮೈದಾನದಿಂದ ಬೆಟದೂರಿನವರೆಗೆ ಮೆರವಣಿಗೆ ಮೂಲಕ ಒಯ್ಯುತ್ತಿದ್ದಾಗ ಕಂಡ ದೃಶ್ಯಗಳಿವು.

ಸೇನಾ ವಾಹನಗಳು ಹತ್ತಿರ ಬರುತ್ತಿದ್ದಂತೆಯೇ ಮಹಿಳೆಯರು, ಮಕ್ಕಳು, ವೃದ್ಧರಾದಿಯಾಗಿ ಕೈ ಮುಗಿಯುತ್ತಿದ್ದುದು ಸಾಮಾನ್ಯವಾಗಿತ್ತು.
ಹನುಮಂತಪ್ಪ ಓಡಾಡಿದ ಊರುಗಳಲ್ಲಿ ಮೆರವಣಿಗೆ ಸಾಗುತ್ತಿದ್ದಾಗ, ಕೆಲ ಹೊತ್ತು ವಾಹನ ನಿಲ್ಲಿಸಿ, ಗ್ರಾಮಸ್ಥರು ಪುಷ್ಪವೃಷ್ಟಿ ಮಾಡುತ್ತಿದ್ದರು. ರಸ್ತೆಯ ಬದಿಯಲ್ಲಿ, ಅಂಗಡಿಗಳ ಮೇಲೆ, ಮನೆಯ ಮೇಲೆ ನಿಂತುಕೊಂಡು ಜನರು ಯೋಧನ ಅಂತಿಮಯಾತ್ರೆಯನ್ನು ವೀಕ್ಷಿಸಿದರು.

ಕೊಟಗುಣಸಿ, ಅದರಗುಂಚಿ, ನೂಲ್ವಿ, ಶೆರೇವಾಡ ಮತ್ತು ಸುತ್ತ–ಮುತ್ತಲಿನ ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡರು.

‘ಸತ್ರ ಹಿಂಗ್‌ ಸಾಯಬೇಕ್ರೀ...’ ಎಂಬ ಮಾತನ್ನು ಅನೇಕರು ಹೇಳಿದರೆ, ‘ಹನುಮಂತಪ್ಪ ಕೊಪ್ಪದ ದೇವತಾ ಅಂಶ ಅಂತಾ ನನಗನಸ್ತೈತಿ, ಯಾವ್ ಮುಖ್ಯಮಂತ್ರಿ, ಪ್ರಧಾನಮಂತ್ರಿ ಸತ್ರೂ ಜನರಿಂದ ಇಂಥಾ ಗೌರವಾ ಸಿಗೂದು ಭಾಳ ಅಪರೂಪ್ ರೀ’ ಎಂದು ಸಿದ್ಧಪ್ಪ ಬೆಂಡ್ಲಕಟ್ಟಿ ಹೆಮ್ಮೆಯಿಂದ ಹೇಳಿದರು.

‘ದೇಶದ್‌ ಮಗಾ ಆಗಿಹೋದನ್ರೀ ಅಂವಾ, ನನ್ನ ಜೀವನ್ದಾಗ ಇಂಥಾ ಮೆರವಣಿಗಿ ಕಂಡಿರ್ಲಿಲ್ಲ. ಸಣ್ಣ ವಯಸ್ನಾಗ ದೊಡ್ಡ ಹೆಸ್ರ ಮಾಡಿಹೋದ್ನೋ ಯಪ್ಪಾ...’ ಎಂದು ಕಣ್ಣೀರಿಟ್ಟರು 66 ವರ್ಷದ ಬಸವ್ವ ತಳವಾರ.

‘ಆರ್‌ ದಿನಾ ಐಸ್‌ನ್ಯಾಗ ಇದ್ನಂದ್ರ ಅವಂದು ಜೋಡಿ ಗುಂಡಿಗಿ ಬಿಡ್ರೀ.. ಅಂವಾ ನಮ್‌ ತಾಲ್ಲೂಕಿನಂವಾ ಅಂತಾ ಹೇಳಾಕ್‌ ಹೆಮ್ಮಿ ಅನಸ್ತೈತಿ’ ಎಂದು ಹೇಳಿದರು ತರ್ಲಘಟ್ಟದ ರಾಮಣ್ಣ.

‘ಎಂದಅರ (ಯಾವತ್ತಾದ್ರೂ) ಇಷ್ಟ್‌ ಜನಾನ್‌ ನಾವ್‌ ನೋಡಕಾಗ್ತೈತೇನ್ರಿ.. ಹುಬ್ಬಳ್ಳಿ–ಬೆಟದೂರ ಏಕ್‌ ಆಗೇತಿ ನೋಡ್ರಿ, ಅಷ್ಟ್‌ ಜನಾ ಸೇರ್‍ಯಾರ, ಅಂವಾ ಹುಟ್ಟಿದ್ದಕ್ಕೂ ಸಾರ್ಥಕಾ ಆತ್‌ಬಿಡ್ರಿ...’ ಎಂದರು ಸೋಮಪ್ಪ ಅಮ್ಮಿನಬಾವಿ.

ದಾರಿಯುದ್ದಕ್ಕೂ ಗ್ರಾಮಸ್ಥರಿಂದ ಇಂತಹ ಮಾತುಗಳು, ಕಣ್ಣೀರು, ಘೋಷಣೆಗಳು ಸಾಮಾನ್ಯವಾಗಿದ್ದವು. ಬೈಕ್‌ಗಳಲ್ಲಿ ಬರುತ್ತಿದ್ದ ಯುವಕರು ಮತ್ತು ವಾಹನಗಳನ್ನು ನಿಯಂತ್ರಿಸಲು ಸಂಚಾರ ಪೊಲೀಸರು ಹರಸಾಹಸ ಪಡುತ್ತಿದ್ದರು.

ಶಿರೂರು, ಅರಳಿಕಟ್ಟಿ ಮತ್ತು ನೂಲ್ವಿಯಲ್ಲಿ ಕೊಪ್ಪದ ಅವರು ಓದಿದ್ದರಿಂದ ಆ ಶಾಲೆಗಳು ಮತ್ತು ಕಾಲೇಜಿನ ವಿದ್ಯಾರ್ಥಿಗಳು ತಂಡೋಪತಂಡವಾಗಿ ಬಂದು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಯೋಧನ ಭಾವಚಿತ್ರಗಳಿದ್ದ ಬ್ಯಾಡ್ಜ್‌ಗಳನ್ನು ಎದೆಗೆ ಸಿಕ್ಕಿಸಿಕೊಂಡು, ಕೈಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ಸುಮಾರು ಹತ್ತು ಕಿ.ಮೀ. ವರೆಗೆ ನಡೆದು ಬಂದರು. ವಕೀಲರು, ರೈತ ಸಂಘದ ಸದಸ್ಯರು, ಮಹಿಳಾ ಸಂಘದ ಸದಸ್ಯರು ಯೋಧನ ಅಂತಿಮಯಾತ್ರೆಗೆ ಸಾಕ್ಷಿಯಾ ದರು. ಮೆರವಣಿಗೆಯ ದೃಶ್ಯವನ್ನು ಎಲ್ಲರೂ ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಿದ್ದುದು ಸಾಮಾನ್ಯವಾಗಿತ್ತು.

ಆಂಬುಲೆನ್ಸ್‌ನಲ್ಲಿ ಪಾರ್ಥಿವ ಶರೀರ!
ಹುಬ್ಬಳ್ಳಿಯ ನೆಹರೂ ಮೈದಾನದಿಂದ ಬೆಟದೂರಿನವರೆಗೆ ಸಾಗಿದ ಮೆರವಣಿಗೆಯಲ್ಲಿ, ಹನುಮಂತಪ್ಪ ಅವರ ಪಾರ್ಥಿವ ಶರೀರ ಮಿಲಿ ಟರಿಯ ತೆರೆದ ವಾಹನದಲ್ಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಪುಷ್ಪಗುಚ್ಛವನ್ನು ಆ ವಾಹನದ ಪೆಟ್ಟಿಗೆಯ ಮೇಲೆ ಇಡುತ್ತಿದ್ದರು. ಗ್ರಾಮಸ್ಥರೂ ಹೂಗಳನ್ನು ಎಸೆದಿದ್ದು ಆ ಪೆಟ್ಟಿಗೆಯ ಮೇಲೆಯೇ. ಆದರೆ, ಶವವನ್ನು ಆಂಬುಲೆನ್ಸ್‌ನಲ್ಲಿ ತರಲಾಯಿತು.

ಅಂತ್ಯ ಕ್ರಿಯೆ ಸ್ಥಳದಲ್ಲೇ ಸ್ಮಾರಕ
ಬೆಟದೂರ (ಧಾರವಾಡ ಜಿಲ್ಲೆ):
‘ಹನುಮಂತಪ್ಪ ಕೊಪ್ಪದ ಅವರ ಅಂತ್ಯಸಂಸ್ಕಾರ ನಡೆದ ಗ್ರಾಮ ಪಂಚಾಯ್ತಿ ಕಟ್ಟಡದ ಪಕ್ಕದಲ್ಲಿಯೇ ಯೋಧನ ಸ್ಮಾರಕ ನಿರ್ಮಿಸಲಾಗುವುದು’ ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯೂ ಆಗಿರುವ ಸ್ಥಳೀಯ ಶಾಸಕ ಸಿ.ಎಸ್‌. ಶಿವಳ್ಳಿ ಹೇಳಿದರು. ಗ್ರಾಮದಲ್ಲಿ ಶುಕ್ರವಾರ ಈ ಮಾಹಿತಿ ನೀಡಿದ ಅವರು, ಕುಂದಗೋಳದ ಲ್ಲಿಯೂ ಸ್ಮಾರಕ ಸ್ಥಾಪಿಸುವ ಪ್ರಸ್ತಾವವಿದೆ ಎಂದರು.

ಮತದಾನ ಮುಂದಕ್ಕೆ
ಹುಬ್ಬಳ್ಳಿ:
ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿಗೆ ಇಂದು ಜಿಲ್ಲೆಯಲ್ಲಿ ಚುನಾವಣೆ ನಡೆಯಲಿದೆ. ಆದರೆ, ಯೋಧ ಹನುಮಂತಪ್ಪ ಕೊಪ್ಪದ ನಿಧನದ ಹಿನ್ನೆಲೆಯಲ್ಲಿ ಯಲಿ ವಾಳ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಬೆಟ ದೂರ ಗ್ರಾಮದಲ್ಲಿ ಮಾತ್ರ 13ರ ಬದಲು ಇದೇ 15ರಂದು ಮತದಾನ ನಡೆಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಚುನಾ ವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪಿ. ರಾಜೇಂದ್ರ ಚೋಳನ್‌ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಂದ ನೀರು ಪೂರೈಕೆ: ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಜೆ.ಜಿ. ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ವಿಭಿನ್ನವಾಗಿ ಹನುಮಂತಪ್ಪ ಕೊಪ್ಪದ ಅವರಿಗೆ ಗೌರವ ಸಲ್ಲಿಸಿದರು. ತಾವೇ ಹಣ ಸಂಗ್ರಹಿಸಿ  ತಂದಿದ್ದ 500 ಲೀಟರ್‌ ನೀರಿನ ಪಾಕೀಟುಗಳನ್ನು ಜನರಿಗೆ ಉಚಿತವಾಗಿ ವಿತರಿಸಿದರು.

ಹರಿದುಬಂದ ಜನಸಾಗರ
ಹುಬ್ಬಳ್ಳಿ:
ಪಾರ್ಥಿವ ಶರೀರವನ್ನು ದೆಹಲಿಯಿಂದ ಗುರುವಾರ ರಾತ್ರಿ ವಾಯು ಪಡೆಯ ವಿಶೇಷ ವಿಮಾನದಲ್ಲಿ ತಂದು, ಹುಬ್ಬಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಕಿಮ್ಸ್‌) ಶವಾಗಾರದಲ್ಲಿ ಇಡಲಾಗಿತ್ತು. ಪಾರ್ಥಿವ ಶರೀರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬರಮಾಡಿಕೊಂಡಿದ್ದರು.

ಕಿಮ್ಸ್‌ನಲ್ಲಿ ಸೇನಾಪಡೆಯ ಕಣ್ಗಾವಲಿನಲ್ಲಿದ್ದ ಮೃತದೇಹವನ್ನು ಬೆಳಿಗ್ಗೆ 7 ಗಂಟೆಗೆ ಕಿಮ್ಸ್ ಆಸ್ಪತ್ರೆಯಿಂದ ಸೇನಾಪಡೆಯ ತೆರೆದ ವಾಹನದಲ್ಲಿ ವಿದ್ಯಾನಗರ, ಹೊಸೂರು ಕ್ರಾಸ್, ಚನ್ನಮ್ಮ ವೃತ್ತ, ಕೋರ್ಟ್ ಸರ್ಕಲ್, ಲ್ಯಾಮಿಂಗ್ಟನ್ ರಸ್ತೆಯ ಮೂಲಕ ಹುಬ್ಬಳ್ಳಿಯ ನೆಹರೂ ಮೈದಾನಕ್ಕೆ ತರಲಾಯಿತು. ಅಲ್ಲಿ ಬೆಳಿಗ್ಗೆ 8.15ರಿಂದ 10.10ರ ವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಟ್ಟು, ಬಳಿಕ ಸುಮಾರು 20 ಕಿ.ಮೀ ದೂರವಿರುವ ಬೆಟದೂರಿನಲ್ಲಿರುವ ಮನೆಗೆ ಕೊಂಡೊಯ್ಯಲಾಯಿತು.

ಶುಕ್ರವಾರ ಬೆಳಿಗ್ಗೆ ಹುಬ್ಬಳ್ಳಿಯ ನೆಹರೂ ಮೈದಾನಕ್ಕೆ ಬಂದು, ಮತ್ತೊಮ್ಮೆ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ, ಬೆಟದೂರಿಗೆ ತೆರಳಿ ಯೋಧನ ತಾಯಿ, ಪತ್ನಿ ಮತ್ತು ಕುಟುಂಬ ವರ್ಗದವರನ್ನು ಸಂತೈಸಿದರು. ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿದ ಪರಿಹಾರವನ್ನು ಪುನರುಚ್ಚರಿಸಿದ ಅವರು, ‘ಕೇಂದ್ರ ಸರ್ಕಾರ ಕೂಡ ಕುಟುಂಬದ ಭವಿಷ್ಯದ ದೃಷ್ಟಿಯಿಂದ ಸೂಕ್ತ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ಮೃತದೇಹ ಬೆಟದೂರನ್ನು ತಲುಪುತ್ತಿದ್ದಂತೆಯೇ ಅಲ್ಲಿನ ವಾತಾವರಣ ಒಮ್ಮೆಲೇ ಶೋಕಸಾಗರದಲ್ಲಿ ಮುಳುಗಿತು. ಗ್ರಾಮಸ್ಥರ ಕಂಬನಿಯ ಕಟ್ಟೆಯೊಡೆಯಿತು. ಎಷ್ಟು ಸಂತೈಸಿದರೂ ಶಮನಗೊಳ್ಳದ ಕೊಪ್ಪದ ಅವರ ಪತ್ನಿ ಮಹಾದೇವಿಯ ಒಡಲಾಳದ ನೋವು ಅಲ್ಲಿದ್ದವರ ಮನಸ್ಸನ್ನು ಭಾರವಾಗಿಸಿತ್ತು.

ಭಾವಪೂರ್ಣ ಶ್ರದ್ಧಾಂಜಲಿ: ಮನೆಯಲ್ಲಿ ಎರಡು ನಿಮಿಷ ವಿಧಿ–ವಿಧಾನಗಳನ್ನು ಪೂರೈಸಿದ ಬಳಿಕ ಬೆಟದೂರ ಸರ್ಕಾರಿ ಶಾಲಾ ಆವರಣದಲ್ಲಿ  ಸುಮಾರು ಒಂದೂವರೆ ಗಂಟೆ ಗ್ರಾಮಸ್ಥರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಸುತ್ತಮುತ್ತಲಿನ ಹಳ್ಳಿಗಳ ಜನರು ಸಾಗರೋಪಾದಿಯಾಗಿ ಬಂದು ನಮನ ಸಲ್ಲಿಸಿದರು. ಮಹಿಳೆಯರು, ಮಕ್ಕಳು, ವಯೋವೃದ್ಧರು ಸರದಿ ಸಾಲಿನಲ್ಲಿ ನಿಂತು ಯೋಧನಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಿಸಿದರು. ಅಪ್ಪನ ಪಾರ್ಥಿವ ಶರೀರದ ಮುಂದೆ ಮಗಳು ನೇತ್ರಾ ಆಟವಾಡುತ್ತಿದ್ದ ದೃಶ್ಯ ಎಲ್ಲರ ಮನ ಕಲಕುವಂತಿತ್ತು.

ಅಂತ್ಯಕ್ರಿಯೆಯಲ್ಲಿ ಕೇಂದ್ರ ಸರ್ಕಾ ರದ ಪ್ರತಿನಿಧಿಯಾಗಿ ಕೇಂದ್ರ ರಸಗೊ ಬ್ಬರ ಸಚಿವ ಅನಂತಕುಮಾರ ಭಾಗವಹಿ ಸಿದ್ದರು. ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಎಚ್‌.ಕೆ. ಪಾಟೀಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅಂತ್ಯಕ್ರಿಯೆ ಸಿದ್ಧತೆಗಳ ನೇತೃತ್ವ ವಹಿಸಿದ್ದರು. ಸಂಸದ ಪ್ರಹ್ಲಾದ ಜೋಶಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಇದ್ದರು. ಸಾರ್ವಜನಿಕ ಪ್ರದರ್ಶ ನಕ್ಕಿಟ್ಟಿದ ಜಾಗದಿಂದ ಪಾರ್ಥಿವ ಶರೀರ ವನ್ನು ಅಂತ್ಯಕ್ರಿಯೆ ವಿಧಿ–ವಿಧಾನ ಪೂರೈಸಲು ಕೊಂಡೊಯುತ್ತಿದ್ದಂತೆಯೇ ಜನರು, ‘ಸಿಯಾಚಿನ್‌ ಹೀರೋ ಹನು ಮಂತಪ್ಪ ಅಮರ್ ರಹೇ...’, ‘ಹುತಾತ್ಮ ಕೊಪ್ಪದ್‌ಗೆ ಜೈ’ ಎಂದು ಘೋಷಣೆ ಕೂಗಿ ಅಭಿಮಾನ ಪ್ರದರ್ಶಿಸಿದರು.

ಬೆಟದೂರಿಗೆ ಬಂದ ವಿದ್ಯಾರ್ಥಿಗಳು
ಹುಬ್ಬಳ್ಳಿ:
ಇಲ್ಲಿಯ ನೆಹರೂ ಮೈದಾನದಲ್ಲಿ ಶುಕ್ರವಾರ ಬೆಳಿಗ್ಗೆ ಯೋಧ ಹನುಮಂತ ಕೊಪ್ಪದ ಅವರ ಅಂತಿಮ ದರ್ಶನ ಪಡೆಯಲು ವಿದ್ಯಾರ್ಥಿಗಳಿಗೆ ಆಗಲಿಲ್ಲ. ಆದರೆ, ಅಂತಿಮ ಯಾತ್ರೆಯನ್ನು ನೋಡಲೇಬೇಕು ಎಂದು ಹಟಕ್ಕೆ ಬಿದ್ದವರಿಗೆ ನಿರಾಸೆ ಮಾಡದ ಶಾಲಾ ಮುಖ್ಯಸ್ಥರು ಶಾಲಾ ವಾಹನವನ್ನು ಬೆಟದೂರಿಗೆ ಹೊರಳಿಸುವಂತೆ ಸೂಚನೆ ನೀಡಿದರು.

ಮಟ ಮಟ ಮಧ್ಯಾಹ್ನದ ಬಿಸಿಲನ್ನೂ ಲೆಕ್ಕಿಸದೇ 9 ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳು ಗ್ರಾಮಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ನಗರದ ಕೆಎಲ್‌ಇ ಸಂಸ್ಥೆಯ ಎಂ.ಆರ್‌. ಸಾಖರೆ ಇಂಗ್ಲಿಷ್‌ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳೇ ಹೀಗೆ ಹಟಕ್ಕೆ ಬಿದ್ದು ಸೈನಿಕನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದವರು.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಶಾಲೆಯ ಶಿಕ್ಷಕಿ ಪೂರ್ಣಿಮಾ, ‘ನಾವು ನೆಹರೂ ಗ್ರೌಂಡ್‌ಗೆ ಹೋಗುವಷ್ಟರಲ್ಲಿಯೇ ಸೈನಿಕನ ಶವವನ್ನು ಗ್ರಾಮದಲ್ಲಿ ಕೊಂಡೊಯ್ಯಲಾಗಿತ್ತು. ಇಲ್ಲೀತನಕ ಬಂದಿದ್ದೇವೆ. ನೋಡಿಕೊಂಡೇ ಹೋಗಬೇಕು ಎಂದು ವಿದ್ಯಾರ್ಥಿಗಳು ಒತ್ತಾಯ ಮಾಡಿದರು. ಆದ್ದರಿಂದ ನಮ್ಮ ಶಾಲೆಯ ಪ್ರಾಚಾರ್ಯೆ ಶರ್ಮಿಳಾ ಅವರು ಊರಿಗೇ ಬಸ್‌ ಒಯ್ಯುವಂತೆ ಸೂಚನೆ ನೀಡಿದರು’ ಎಂದರು.

ಶಾಲೆಯ 60 ವಿದ್ಯಾರ್ಥಿಗಳು ಹಾಗೂ ಶಿಕ್ಷಕಿಯರು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರು. ಇದು ಒಂದು ಶಾಲೆಯ ಕಥೆಯಷ್ಟೇ ಅಲ್ಲ. ಕುಂದಗೋಳ ಪಟ್ಟಣದಲ್ಲಿಯೂ ಶವಯಾತ್ರೆ ತಮ್ಮೂರಿಗೂ ಬರಬಹುದು ಎಂಬ ನಿರೀಕ್ಷೆಯಲ್ಲಿ ಬಸ್‌ ನಿಲ್ದಾಣಕ್ಕೆ ತೆರಳುವ ವೃತ್ತದ ಬಳಿ ಕಾಯ್ದು ನಿಂತಿದ್ದರು. ಆದರೆ, ಮಧ್ಯಾಹ್ನ 12.30ರ ವೇಳೆಗೇ ಅಂತ್ಯಸಂಸ್ಕಾರ ಮಾಡ ಬೇಕು ಎಂದು ಸೇನೆಯ ಹಿರಿಯ ಅಧಿಕಾರಿಗಳಿಂದ ಸೂಚನೆ ಇದ್ದುದರಿಂದ ಕುಂದಗೋಳದ ಬದಲು ನೇರ ಶೆರೇವಾಡ ಗ್ರಾಮದ ಮಾರ್ಗವಾಗಿ ಬೆಟ ದೂರ ತಲುಪಿತು.

ಉನ್ನಿಕೃಷ್ಣನ್‌ ದಂಪತಿ ಅಂತಿಮ ನಮನ
ಹುಬ್ಬಳ್ಳಿ:
ತಾಜ್ ಹೋಟೆಲ್‌ನಲ್ಲಿ ಉಗ್ರರ ಜೊತೆಗಿನ ಹೋರಾಟದಲ್ಲಿ ವೀರಮರಣ ಅಪ್ಪಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ತಂದೆ ಕೆ. ಉನ್ನಿಕೃಷ್ಣನ್‌ ಮತ್ತು ತಾಯಿ ಧನಲಕ್ಷ್ಮಿ ಕೂಡ ಕೊಪ್ಪದಗೆ ಅಂತಿಮ ನಮನ ಸಲ್ಲಿಸಲು ಬೆಟದೂರಿಗೆ ಬಂದಿದ್ದರು.

‘ಧೀರ ಸೈನಿಕನನ್ನು ಕಳೆದುಕೊಂಡಿದ್ದೇವೆ. ಅವನಿಗೆ ಎಂತಹ ಗೌರವ ಸಿಕ್ಕಿದೆ! ಇಂಥವರು ಮತ್ತೆ ಹುಟ್ಟಿ ಬರಬೇಕು. ಇಂತಹ ಯೋಧರ ಅಗತ್ಯ ದೇಶಕ್ಕಿದೆ’ ಎಂದು ಉನ್ನಿಕೃಷ್ಣನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT