ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ನಗರದ ಕೊಳಚೆಯಿಂದ ಬೇಡ್ತಿ ಕಲುಷಿತ

Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ:  ನಗರದ ಕಸ– ಕೊಳಚೆ ಹೊತ್ತು ಸಾಗುವ ಕರ್ಕಿಹಳ್ಳ ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಕೃಷಿ ಹಾಗೂ ಕುಡಿಯುವ ನೀರಿನ ಮೂಲ ವಾದ ಬೇಡ್ತಿ ಹಳ್ಳವನ್ನು ಕಲುಷಿತ ಗೊಳಿಸುತ್ತಿದೆ. ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಹಲವು ಹಳ್ಳಿಗಳ ಜನರು ಕುಡಿಯಲು ಇದೇ ನೀರನ್ನು ಬಳಸುತ್ತಾರೆ. ಯಲ್ಲಾಪುರ ಪಟ್ಟಣದ ನಾಗರಿಕರಿಗೂ ಪೂರೈಕೆಯಾಗುತ್ತಿದೆ. ಅಲ್ಲದೇ, ಕೃಷಿಗೂ ಬಳಕೆಯಾಗುತ್ತಿದೆ.

ಹುಬ್ಬಳ್ಳಿ ತಾಲ್ಲೂಕಿನ ಗಾಮನಗಟ್ಟಿ ಬಳಿ ಹುಟ್ಟುವ ಕರ್ಕಿಹಳ್ಳ ಹುಬ್ಬಳ್ಳಿ ನಗರವನ್ನು ಬಳಸಿಕೊಂಡು ಅಂಚಟ ಗೇರಿ, ಮಿಶ್ರಿಕೋಟಿ ಮೂಲಕ ಹರಿದು ಕಲಘಟಗಿ ತಾಲ್ಲೂಕಿನ ಸಂಗಮ ದೇವರಕೊಪ್ಪದ ಬಳಿ ಬೇಡ್ತಿ ಹಳ್ಳವನ್ನು ಸೇರಿಕೊಳ್ಳುತ್ತದೆ.  ಮೊದಲು ಮಳೆಗಾ ಲದಲ್ಲಿ ಮಾತ್ರ ಹರಿಯುತ್ತಿದ್ದ ಈ ಹಳ್ಳ ಇದೀಗ ಹುಬ್ಬಳ್ಳಿ ನಗರದ ದೊಡ್ಡ ಚರಂಡಿಯಾಗಿ ಬದಲಾಗಿದೆ. ನಗರದ ಬಹುತೇಕ ಒಳಚರಂಡಿಗಳ ನೀರು ಕೂಡ ಇದೇ ಹಳ್ಳವನ್ನು ಸೇರುತ್ತಿದೆ. ದಂಡೆಯ ಉದ್ದಕ್ಕೂ ಇರುವ ವಧಾಲಯ, ಕೈಗಾ ರಿಕೆಗಳ ರಾಸಾಯನಿಕ, ಪ್ಲಾಸ್ಟಿಕ್‌ ತ್ಯಾಜ್ಯ ಹಳ್ಳಕ್ಕೆ ಸೇರಿ ವರ್ಷವಿಡೀ ಮಲಿನಯುಕ್ತ ನೀರು ಹರಿಯುತ್ತದೆ.

ಬೇಡ್ತಿಗೂ ಮಾಲಿನ್ಯದ ಶಾಪ: ಧಾರವಾ­ಡದ ಸೋಮೇಶ್ವರ ಭಾಗದಿಂದ ಹರಿದು ಬರುವ ಬೇಡ್ತಿ ಹಳ್ಳವನ್ನು ಸಂಗಮ ದೇವರಕೊಪ್ಪದ ಬಳಿ ಕರ್ಕಿಹಳ್ಳ ಕೂಡಿಕೊಳ್ಳುತ್ತಿ ದ್ದಂತೆಯೇ ಅದೂ ಮಲೀನವಾಗುತ್ತದೆ. ಉತ್ತರ ಕನ್ನಡ ಜಿಲ್ಲೆ ಪ್ರವೇಶಿಸು ತ್ತಿದ್ದಂತೆಯೇ ಅಲ್ಲಿನ ಮುಂಡಗೋಡ, ಯಲ್ಲಾಪುರ ತಾಲ್ಲೂಕುಗಳಲ್ಲಿ ಕಾಡಿ ನಿಂದ ಹರಿದು ಬರುವ ಕೆಲವು ಹಳ್ಳಗಳು ಬೇಡ್ತಿಯನ್ನು ಸೇರುತ್ತವೆ. ಇದರಿಂದ ಹಳ್ಳದ ಹರವು ವಿಸ್ತಾರಗೊಳ್ಳುತ್ತದೆ. ಅಂಕೋಲಾ ತಾಲ್ಲೂಕಿನಲ್ಲಿ ಹರಿದು ಸಮುದ್ರ ಸೇರುವ ಮುನ್ನ ಸ್ಥಳೀಯರು ಇದನ್ನು ಗಂಗಾವಳಿ ನದಿ ಎಂದು ಕರೆಯುತ್ತಾರೆ.

ಕೃಷಿಗೂ ಬಳಕೆ: ಹುಬ್ಬಳ್ಳಿ ಹಾಗೂ ಕಲಘಟಗಿ ತಾಲ್ಲೂಕುಗಳಲ್ಲಿ ಕರ್ಕಿಹಳ್ಳ ಮತ್ತು ಬೇಡ್ತಿಗೆ ಐದು ಕಡೆ ಬಾಂದಾರ (ಚೆಕ್‌ಡ್ಯಾಂ) ಕಟ್ಟಿ 30ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕೃಷಿ ಮಾಡಲಾಗುತ್ತಿದೆ. ಸೊಪ್ಪು, ತರಕಾರಿ, ಪೇರಲ, ಸಪೋಟಾ, ಮಾವು ಜೊತೆಗೆ ಗೋಧಿ, ಮೆಕ್ಕೆಜೋಳ, ಕಬ್ಬನ್ನು ಈ ಕೊಳಚೆ ನೀರು ಬಳಸಿ ಕೊಂಡು ಬೆಳೆಯುತ್ತಾರೆ.

‘ಯಲ್ಲಾಪುರ ಪಟ್ಟಣದ ಶಿರಸಿ ರಸ್ತೆ­ಯಲ್ಲಿರುವ ನೀರು ಶುದ್ಧೀಕರಣ ಘಟಕ­ದಿಂದ ಪ್ರತಿ ವರ್ಷ ಬೇಡ್ತಿಯಲ್ಲಿ ಹರಿದು ಬರುವ ಎರಡು ಲಾರಿ ಲೋಡ್ ಚಪ್ಪಲಿ­ಗಳನ್ನು ತೆಗೆದು ಬೇರೆಡೆ ಸಾಗಿಸಲಾಗು­ತ್ತಿದೆ. ನೀರು ಸದಾ ನೊರೆಯಿಂದ ಕೂಡಿರುತ್ತದೆ. ಇದರಿಂದ ಮಾಲಿನ್ಯದ ಪ್ರಮಾಣವನ್ನು ಅಂದಾಜಿ ಸಬಹುದು’ ಎನ್ನುತ್ತಾರೆ ಅಲ್ಲಿನ ಅರಣ್ಯ ಇಲಾಖೆ ಗುತ್ತಿಗೆದಾರ ಜಗದೀಶ ಸಂಗ್ರೆಕೊಪ್ಪ.

ಇನ್ನು ಮುಂಡಗೋಡ ತಾಲ್ಲೂಕಿನ ಯರೇಬೈಲು ಹಾಗೂ ಸಿಡ್ಲಗುಂಡಿಯ ಗೌಳಿಗರು, ಸಿದ್ಧಿ ಜನಾಂಗದವರು ಇದೇ ನೀರನ್ನು ಕುಡಿಯುತ್ತಾರೆ. ಮುಂಡ ಗೋಡ ಕಡೆಯಿಂದ ಹರಿದುಬರುವ ಹಳ್ಳವೊಂದು ಯರೇಬೈಲು ಬಳಿ ಬೇಡ್ತಿ ಹಳ್ಳವನ್ನು ಸೇರುವುದರಿಂದ ಅಲ್ಲಿ ನೀರು ಕೊಂಚ ತಿಳಿಯಾಗಿ ಹರಿದರೂ ದುರ್ವಾ ಸನೆ ಸ್ಥಳೀಯರನ್ನು ಕಂಗೆಡಿಸಿದೆ.

‘ನಾವು ಕಾಡಂಚಿನ ಮಂದೀರಿ, ಸರ್ಕಾರದೋರು ಒಂದು ಬೋರ್‌ವೆಲ್‌ ಹಾಕ್ಯಾರ. ಇಲ್ಲಿ ಕರೆಂಟ್ ಇರೋದೆ ಕಮ್ಮಿ ಹಾಗಾಗಿ ಬೇಡ್ತಿ ಹಳ್ಳದ ನೀರನ್ನು ಕುಡಿಯುವುದು ಅನಿವಾರ್ಯ. ಕೆಲ ವೊಮ್ಮೆ ಹಳ್ಳದ ದಂಡೆಯಲ್ಲಿ ಮೀನು ಗಳು ಸತ್ತು ಬಿದ್ದಿರುತ್ತವೆ’ ಎನ್ನು ತ್ತಾರೆ ಅಲ್ಲಿಯೇ ನೀರು ತುಂಬಿಕೊ ಳ್ಳುತ್ತಿದ್ದ ಯರೇಬೈಲು ಗೌಳಿದೊಡ್ಡಿಯ ನಿವಾಸಿ ಬಾಪೂ ಗೌಳಿ. ಸ್ಥಳೀಯರು ನಿತ್ಯ ಬಳಕೆಗೆ, ಜಾನುವಾ ರುಗಳಿಗೆ ಇದೇ ನೀರನ್ನು ಬಳಕೆ ಮಾಡು ತ್ತಿರುವುದು ‘ಪ್ರಜಾವಾಣಿ’ ಸ್ಥಳಕ್ಕೆ ಭೇಟಿ ನೀಡಿದಾಗ ಕಂಡು ಬಂತು.

‘ಬೇಡ್ತಿ ನೀರು ಕುಡಿಯಲು ಇರಲಿ ಅದರಿಂದ ಬೆಳೆಯುವ ಕಾಯಿಪಲ್ಲೆ, ಧಾನ್ಯಗಳೂ ತಿನ್ನಲು ಯೋಗ್ಯವಲ್ಲ’ ಎನ್ನುತ್ತಾರೆ ಕಲಘಟಗಿಯ ರೈತ ಮುಖಂಡ ಸಿ.ಎಂ.ನಿಂಬಣ್ಣವರ. ‘ಯಲ್ಲಾಪುರ ಪಟ್ಟಣಕ್ಕೇನೋ ಶುದ್ಧೀಕರಿಸಿದ ನೀರು ಕೊಡುತ್ತಾರೆ. ಆದರೆ ಮಧ್ಯದ ಅರಣ್ಯವಾಸಿಗಳು ಹಾಗೂ ವನ್ಯಜೀವಿಗಳ ಪಾಡೇನು? ಗಂಗಾ ಶುದ್ಧೀಕರಣದ ರೀತಿಯಲ್ಲಿಯೇ ಕರ್ಕಿಹಳ್ಳದ ನೀರನ್ನು ಶುದ್ಧೀಕರಿಸಿ ಬಿಡುವ ಇಚ್ಛಾಶಕ್ತಿಯನ್ನು ಸರ್ಕಾರ ತೋರಿಸಲಿ’ ಎಂದು ಸವಾಲು ಹಾಕುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT