ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ಮಠಕ್ಕೆ ಮರಳಿ ಹೋಗಲ್ಲ: ರಾಜಯೋಗೀಂದ್ರ

ಅಧ್ಯಾತ್ಮ ಪೂರ್ವ, ವ್ಯವಹಾರ ಪಶ್ಚಿಮ: ಎರಡಕ್ಕೂ ಎತ್ತಣಿಂದೆತ್ತ ಸಂಬಂಧ
Last Updated 23 ನವೆಂಬರ್ 2014, 19:57 IST
ಅಕ್ಷರ ಗಾತ್ರ

ಹಾನಗಲ್‌ (ಹಾವೇರಿ ಜಿಲ್ಲೆ): ‘ಅಧ್ಯಾತ್ಮ ಪೂರ್ವ. ವ್ಯವಹಾರ ಪಶ್ಚಿಮ. ಎರಡಕ್ಕೂ ಎತ್ತಣಿಂದೆತ್ತ ಸಂಬಂಧ. ಇವೆರಡನ್ನೂ ಜೊತೆದೂ­ಗಿಸಲು ಸಾಧ್ಯವೇ...’

–ಹುಬ್ಬಳ್ಳಿಯ ಮೂರು ಸಾವಿರ ಮಠದ ಪೀಠವನ್ನು ಶನಿವಾರ ತ್ಯಜಿಸಿದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಭಾನುವಾರ ಸಂಜೆ ಹಾನಗ ಲ್‌ನ ಕುಮಾರ ಶಿವಯೋಗಿಗಳ ವಿರಕ್ತ ಮಠದಲ್ಲಿ ನಿರಾಳವಾಗಿ ‘ಪ್ರಜಾವಾಣಿ’ ಜೊತೆ ತಮ್ಮ ಮನದಾಳದ ಮಾತು­ಗಳನ್ನು ಹಂಚಿಕೊಂಡರು.

‘ಆ ಮಠದ (ಹುಬ್ಬಳ್ಳಿ) ವ್ಯಾಪ್ತಿಯೂ ದೊಡ್ಡದು. ಹೀಗಾಗಿ ವ್ಯವಹಾರ, ಪ್ರವಾಸ ಕಾರ್ಯವೂ ಅಧಿಕ. ಓಡಾಟದ ನಿರ್ವಹಣೆಯೇ ಹೆಚ್ಚಾಗಿತ್ತು. ಅಧ್ಯಾತ್ಮಕ್ಕೆ ಸಮಯ ಬಹಳ ಕಡಿಮೆ ಇತ್ತು. ಎಲ್ಲೋ ನನ್ನ ಮನಸ್ಸು ಇತ್ತ, ಗುರುಗಳ ನೆನಪಿನತ್ತ ಸೆಳೆದದ್ದು ನಿಜ. ಅಧ್ಯಾತ್ಮ ಸೆಳೆತ ಹೆಚ್ಚಾಗಿ ಇಲ್ಲಿಗೆ ಬಂದಿದ್ದೇನೆ. ಈಗ ನಿರಾಳವಾ­ಗಿದ್ದೇನೆ. ಸಂತೃಪ್ತಿ ಇದೆ’ ಎಂದು ನುಡಿದರು.

‘ಹಿಂದೆ ಇಲ್ಲಿ (ಹಾನಗಲ್‌ ಮಠ) ನೆಮ್ಮದಿಯಿಂದ ಇದ್ದೆ. ಆರಂಭದಲ್ಲಿ ಅಲ್ಲೂ ಚೆನ್ನಾಗಿತ್ತು. ಆದರೆ ಈಚಿನ ಕೆಲ ಬೆಳವಣಿಗೆಗಳು ನೋವನ್ನು ಉಂಟು ಮಾಡಿದವು. ನ್ಯಾಯಾಲಯ, ಗೊಂದ­ಲದ ವಾತಾ ವರಣ ಬೇಸರ ಮೂಡಿಸಿತು. ಈಗ ಪರಿಪೂರ್ಣವಾಗಿ ಚಿಂತಿಸಿ ನಿರ್ಧಾರ ಕೈಗೊಂಡಿದ್ದೇನೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇಲ್ಲೇ ಇದ್ದು, ಮುಂದುವ ರಿಯುತ್ತೇನೆ’ ಎಂದರು.

‘ಪೀಠ ಬಿಟ್ಟು ಬಂದಿದ್ದೇನೆ. ಅಲ್ಲಿನ ಉತ್ತರಾಧಿಕಾರಿ ಬಗ್ಗೆ ಇನ್ನು ಮುಂದೆ ಚಿಂತಿಸುವುದಿಲ್ಲ. ಅಲ್ಲಿನ ಭಕ್ತರು ಸಮರ್ಥರಿದ್ದಾರೆ. ಅಲ್ಲಿ ಇದ್ದಾಗಲೂ  ಪ್ರಜಾಪ್ರಭುತ್ವವಾಗಿ ಭಕ್ತರ ಒಲವಿ ನಂತೆ ನಿರ್ಧಾರ ಕೈಗೊಳ್ಳುತ್ತಿದ್ದೆ. ಈಗ ಅವರೇ ನಿರ್ಧರಿಸುತ್ತಾರೆ. ಹೊಸ ಪೀಠಾಧಿಪತಿ ಆಯ್ಕೆ ಬಗ್ಗೆ ಸಲಹೆ ಕೇಳಿದರೆ ಕೊಡ­ಬಹುದು. ಆದರೆ ನಿರ್ಣಯದಲ್ಲಿ ಭಾಗಿಯಾಗುವುದಿಲ್ಲ’ ಎಂದು ತಿಳಿಸಿದರು.

‘ಇಲ್ಲೇ ಇದ್ದುಕೊಂಡು ಆ ಪೀಠ ದಲ್ಲಿ ಮುಂದುವರಿಯುವುದು ಆಗದ ಮಾತು. ಅದು ಪ್ರಾಮಾ ಣಿಕವೂ ಅಲ್ಲ. ಅಲ್ಲಿನ ಮಠ ನಿರ್ವ ಹಿಸಲು, ಅಲ್ಲೇ ಪೀಠಾಧಿಪತಿ ಆಗಿರ ಬೇಕು’ ಎಂದರು.

‘ನನ್ನ ಗುರುಗಳು ಇಲ್ಲಿಯೇ ಇದ್ದರು. ಇಲ್ಲಿನ ಭಕ್ತರ ಪ್ರೀತಿ ಸಂತೋಷ ತರಿಸಿದೆ. ದಿನನಿತ್ಯ ವ್ಯವಹ ರಿಸಿಕೊಂಡು ಓಡಾಡು­ವುದು ಅಧ್ಯಾತ್ಮ ವಲ್ಲ. ಇಲ್ಲಿ ನನಗೆ ಅಂತಹ ಕಿರಿಕಿರಿ ಇಲ್ಲ. ಹೆಚ್ಚೆಂದರೆ, ಭಕ್ತರು ಭಾವನಾತ್ಮ ಕವಾಗಿ ತಮ್ಮ ಮನೆ ಕಾರ್ಯಕ್ರಮಕ್ಕೆ ಕರೆಯುತ್ತಾರೆ’ ಎಂದು ಹಾನಗಲ್‌ ಬಗ್ಗೆ ಒಲವೇಕೆ ಎಂಬ ಪ್ರಶ್ನೆಗೆ ಉತ್ತರಿಸಿದರು.

ಹಾನಗಲ್‌ ಕುಮಾರೇಶ್ವರ ವಿರಕ್ತ­ಮಠಕ್ಕೆ ಮ.ನಿ.ಪ್ರ ಕುಮಾರ ಮಹಾ­ಸ್ವಾಮಿ ಎಂಬ ಅಭಿನಾಮದಿಂದ 1984 ರಲ್ಲಿ ಪೀಠಾಧೀಶರಾದ ಸ್ವಾಮೀಜಿ, ಹುಬ್ಬಳ್ಳಿ ಮೂರು ಸಾವಿರ ಮಠಕ್ಕೆ ಶ್ರೀ ಗುರುಸಿದ್ಧ ರಾಜಯೋ ಗಿಂದ್ರ ಮಹಾ­ಸ್ವಾಮಿಗಳು ಎಂದು 1999 ರ ಮಾರ್ಚ್‌ 29 ರಂದು ಪೀಠಾಧಿಪತಿ­ಯಾದರು, ಹದಿನೈದು ವರ್ಷಗಳ ಬಳಿಕ ಶನಿವಾರ ರಾತ್ರಿ ತಮ್ಮ ಮೂಲ ಮಠಕ್ಕೆ ವಾಪಸಾಗಿದ್ದಾರೆ. ಭಾನುವಾರ ಬೆಳಿಗ್ಗಿನಂದಲೇ ಮಠಕ್ಕೆ ಬರುತ್ತಿದ್ದ ಭಕ್ತರನ್ನು ಮಾತನಾಡಿಸುತ್ತಿದ್ದರು. ನಿರಾಳರಾಗಿದ್ದಂತೆ ಕಂಡು ಬಂದರು.

ದಿಂಗಾಲೇಶ್ವರರ ಆತಂಕ

ಹುಬ್ಬಳ್ಳಿಯ ಮೂರುಸಾವಿರ ಮಠದ ಉತ್ತರಾ ಧಿಕಾರಿ ನೇಮಕವನ್ನು ಬೇಗ ಮಾಡ ಬೇಕು. ಇಲ್ಲ ದಿದ್ದರೆ ಮಠ­ದಲ್ಲಿ ಅರಾಜಕತೆ ಉಂಟಾ ಗಲಿದೆ’ ಎಂದು ಗದಗ ಜಿಲ್ಲೆಯ ಬಾಲೇಹೊ­ಸೂರಿನ ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಲಕ್ಷ್ಮೇಶ್ವರ­ದಲ್ಲಿ ಆತಂಕ ವ್ಯಕ್ತಪಡಿಸಿದರು.

ಗುರುಸಿದ್ಧಶ್ರೀ ವಾಪಸಿಗೆ ಒತ್ತಾಯಿಸಿ ಧರಣಿ
ಹುಬ್ಬಳ್ಳಿ:
ಪೀಠ ತ್ಯಜಿಸಿರುವ ಗುರುಸಿದ್ಧ ರಾಜ­ಯೋಗೀಂದ್ರ ಸ್ವಾಮೀಜಿ ತಮ್ಮ ನಿರ್ಧಾರ­ವನ್ನು ಬದಲಿಸಿ ಮಠಕ್ಕೆ ವಾಪಸಾಗಬೇಕು ಎಂದು ಒತ್ತಾಯಿಸಿ ಭಕ್ತರ ಗುಂಪುಗಳು ಇಲ್ಲಿನ ಮೂರುಸಾವಿರ ಮಠದ ಆವರಣದಲ್ಲಿ ಭಾನುವಾರ ಪ್ರತ್ಯೇಕವಾಗಿ ಧರಣಿ ನಡೆಸಿದವು.

ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ ನೇತೃತ್ವದಲ್ಲಿ 25ಕ್ಕೂ ಅಧಿಕ ಭಕ್ತರು ಬೆಳಿಗ್ಗೆ ಮೊದಲು ಬಂದು ಧರಣಿ ಕುಳಿತಿದ್ದರು. ನಂತರ ವಿಧಾನ ಪರಿಷತ್‌ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ನೇತೃತ್ವದಲ್ಲಿ 20ಕ್ಕೂ ಅಧಿಕ ಭಕ್ತರು ಇದೇ ಬೇಡಿಕೆ ಇಟ್ಟು­ಕೊಂಡು ಮತ್ತೊಂದು ಭಾಗದಲ್ಲಿ ಧರಣಿ ಆರಂಭಿ ಸಿದರು. ಮಧ್ಯಾಹ್ನ ಮಠಕ್ಕೆ ಬಂದ ಮಂಟೂರಿನ ಅಡವಿಸಿದ್ಧೇಶ್ವರ ಸ್ವಾಮೀಜಿ ಅವರೊಂದಿಗೆ ಮಾತನಾಡಿದ ಭಕ್ತರು, ‘ ಸ್ವಾಮೀಜಿ ಅವರು ಮರಳಿ ಮಠಕ್ಕೆ ಬರಬೇಕು. ಕೆಲವು ಭಕ್ತರು ಕೆಟ್ಟದಾಗಿ ವರ್ತಿಸಿದ್ದರಿಂದ ಬೇಸರಗೊಂಡು ಅವರು ಪೀಠ ತ್ಯಜಿಸಿರುವುದು ಎಲ್ಲರಿಗೂ ನೋವುಂಟು ಮಾಡಿದೆ. ಅವರನ್ನು ಮರಳಿ ಕರೆ ತರುವ ಜವಾಬ್ದಾರಿಯನ್ನು ನೀವೇ ವಹಿಸಿಕೊಳ್ಳಬೇಕು’ ಎಂದು ಕೋರಿದರು.

ಭಕ್ತರ ಒತ್ತಾಯಕ್ಕೆ ಮಣಿದ ಅವರು, ‘ವಿವಿಧ ಮಠಾಧೀಶರನ್ನು ಒಳಗೊಂಡ ನಿಯೋಗ ಹಾನಗಲ್‌ಗೆ ತೆರಳಿ, ಸ್ವಾಮೀಜಿ ಅವರ ಮನವೊಲಿಸಿ, ಮಠಕ್ಕೆ ವಾಪಸ್‌ ಕರೆತರುವ ಪ್ರಯತ್ನ ಮಾಡ­ಲಾಗುವುದು. ಶ್ರೀಗಳು ಸ್ಪಂದಿಸದಿದ್ದರೆ ಎಲ್ಲ ಮಠಾಧೀಶರು ಹಾನಗಲ್‌ ಮಠದಲ್ಲಿಯೇ ಧರಣಿ ಆರಂಭಿಸುತ್ತೇವೆ’ ಎಂದು ಭರವಸೆ ನೀಡಿದ ನಂತರ ಭಕ್ತರು ಧರಣಿ ಹಿಂತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT