ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುರಿಯತ್‌ ಜತೆ ಮಾತುಕತೆ ನಿಲ್ಲದು

ಭಾರತದ ನಿರ್ಧಾರದಿಂದ ಎದೆಗುಂದಿಲ್ಲ: ಪಾಕ್‌
Last Updated 20 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಯಾವುದೇ ಕಾರಣಕ್ಕೂ ಕಾಶ್ಮೀರದ ಹುರಿಯತ್‌ ನಾಯಕರ ಜತೆ ಮಾತುಕತೆ ಕೈಬಿಡುವುದಿಲ್ಲ. ಇದೇ ಕಾಲಕ್ಕೆ  ಭಾರತದೊಂದಿಗಿನ ದ್ವಿಪಕ್ಷೀಯ ಮಾತುಕತೆಯನ್ನೂ ನಿಲ್ಲಿಸುವುದಿಲ್ಲ ಎಂದು ಪಾಕಿಸ್ತಾನ ಬುಧವಾರ ಸ್ಪಷ್ಟಪಡಿಸಿದೆ.

ಭಾರತದೊಂದಿಗೆ ಮಾತುಕತೆ ನಡೆಸಲು ಪಾಕಿಸ್ತಾನ ಬದ್ಧವಾ­ಗಿದ್ದು, ಈ ಪ್ರಕ್ರಿಯೆ ಅರ್ಧಕ್ಕೆ ಸ್ಥಗಿತಗೊಳ್ಳಲು ಬಿಡುವುದಿಲ್ಲ ಎಂದೂ ಅದು ಹೇಳಿದೆ.

ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಕಾರ್ಯದರ್ಶಿಗಳ ಮಟ್ಟದ ಮಾತುಕತೆ­ಯಿಂದ ಹಿಂದೆ ಸರಿದ ಭಾರತದ ನಿರ್ಧಾ­ರದಿಂದ ಎದೆಗುಂದಿಲ್ಲ ಎಂದು ದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನರ್‌ ಅಬ್ದುಲ್‌ ಬಸಿತ್‌ ಸ್ಪಷ್ಟಪಡಿಸಿದ್ದಾರೆ.

ಮಾತುಕತೆ ರದ್ದಾಗಿರುವುರಿಂದ  ಯಾರೂ ನಿರಾಶರಾಗಬೇಕಿಲ್ಲ ಹಾಗೂ ಈ ಬೆಳವಣಿಗೆಯಿಂದ ದ್ವಿಪಕ್ಷೀಯ ಮಾತುಕತೆಗೆ ಹಿನ್ನಡೆ ಆಗಿಲ್ಲ ಎಂದು ವಿದೇಶಿ ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಅವರು ಹೇಳಿದರು.

ಭಾರತದ ಕಠಿಣ ಎಚ್ಚರಿಕೆ ಮತ್ತು ಪ್ರತಿಭಟನೆಯ ನಡು­ವೆಯೂ ಹುರಿಯತ್‌ ನಾಯಕರ ಜತೆ ಮಾತುಕತೆ ನಡೆಸಿದ ಬಸಿತ್‌, ಶಿಷ್ಟಾಚಾರ ಉಲ್ಲಂಘಿಸಿಲ್ಲ ಎಂದರು.

‘ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ನಾವು ಬದ್ಧರಾಗಿದ್ದೇವೆ. ಈ ದಿಸೆಯಲ್ಲಿ  ಉಭಯ ರಾಷ್ಟ್ರಗಳು ಪರಸ್ಪರ ಸಹಕಾರದಿಂದ ಮುನ್ನಡೆಯಬೇಕೇ ಹೊರತು ಸಂಘರ್ಷಕ್ಕೆ ಇಳಿಯಬಾರದು. ಮಾತುಕತೆಗೆ ಎಲ್ಲ ಸಮಾನ ಪಾಲುದಾರರ ಅಭಿಪ್ರಾಯ ಮತ್ತು ಪಾಲ್ಗೊಳ್ಳುವಿಕೆಯೂ ಮುಖ್ಯ’ ಎಂದರು.

ಕಾಶ್ಮೀರ ಸಮಸ್ಯೆಗೆ ಶಾಂತಿಯುತ  ಪರಿಹಾರ ಕಂಡು­ಹಿಡಿಯಲು ಹುರಿಯತ್‌ ನಾಯಕರೊಂದಿಗೆ  ಮಾತುಕತೆ ಅಗತ್ಯವಿದೆ. ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಪ್ರಕ್ರಿಯೆ­ಯಲ್ಲಿ ಎಲ್ಲ ಪಾಲುದಾರರು ಪಾಲ್ಗೊಳ್ಳಬೇಕು ಎನ್ನುವುದು ಪಾಕಿಸ್ತಾನದ ಮೂಲ ಆಶಯ ಎಂದರು.

ಇಸ್ಲಾಮಾಬಾದ್‌ನಲ್ಲಿರುವ ಭಾರತದ ಹೈಕಮಿಷನರ್‌ ಎಲ್ಲ ರೀತಿಯ ಜನರನ್ನು ಭೇಟಿಯಾಗಿ ಚರ್ಚಿಸುವಾಗ  ದೆಹಲಿ­ಯಲ್ಲಿರುವ ಪಾಕಿಸ್ತಾನ ಹೈಕಮಿಷನರ್‌ ಹುರಿಯತ್‌ ನಾಯಕ­ರೊಂದಿಗೆ  ಚರ್ಚಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಹಾಗಾದರೆ ಬಲೂಚ್‌ ಪ್ರಾಂತ್ಯದ ಪ್ರತ್ಯೇಕತವಾದಿ ನಾಯ­ಕ­ರನ್ನು ಭೇಟಿ ಮಾಡಲು ಇಸ್ಲಾಮಾಬಾದ್‌ನಲ್ಲಿರುವ ಭಾರತದ ಹೈಕಮಿಷನರ್‌ ಅವರಿಗೆ  ಪಾಕಿಸ್ತಾನ ಅವಕಾಶ ನೀಡುತ್ತದೆಯೇ ಎಂಬ ಪ್ರಶ್ನೆಗೆ ಅವರು ಯಾವುದೇ ಉತ್ತರ ನೀಡಲಿಲ್ಲ.

ಭಾರತದೊಂದಿಗೆ ಈ  ಹಿಂದೆ ಪಾಕಿಸ್ತಾನ ನಡೆಸಿದ ಅನೇಕ ಮಹತ್ವದ ಮಾತುಕತೆಗಳಿಗೂ ಮುನ್ನ ಕಾಶ್ಮೀರ ಹುರಿಯತ್‌ ನಾಯಕರ ಜತೆ ಚರ್ಚೆ ನಡೆಸಲಾಗಿತ್ತು. ಇದು ಹೊಸತೇನಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT