ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿ ಚರ್ಮ ಮಾರಾಟ: ಬಂಧನ

Last Updated 4 ಮಾರ್ಚ್ 2015, 20:08 IST
ಅಕ್ಷರ ಗಾತ್ರ

ಬೆಂಗಳೂರು: ಹುಲಿ ಚರ್ಮ ಮಾರುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಸಿಟಿ ಮಾರುಕಟ್ಟೆ ಪೊಲೀಸರು ಸುಮಾರು ₨ 50 ಲಕ್ಷ ಮೌಲ್ಯದ ಹುಲಿ ಚರ್ಮವನ್ನು ವಶಪಡಿಸಿಕೊಂಡಿದ್ದಾರೆ.

ನಗರದ ಆರ್‌ಎಂವಿ ಬಡಾವಣೆಯ ಜಗದೀಶ್‌ (37) ಮತ್ತು ಮೈಸೂರಿನ ಡಾ.ಇಫ್ತಿಕಾರ್‌ (58) ಬಂಧಿತ ಆರೋಪಿಗಳು.
ಅವರು ಠಾಣೆ ವ್ಯಾಪ್ತಿಯ ವಸತಿಗೃಹವೊಂದರಲ್ಲಿ ಹುಲಿ ಚರ್ಮ ಮಾರಾಟ ಮಾಡುವ ಯತ್ನದಲ್ಲಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಅವರನ್ನು ಬಂಧಿಸಲಾಯಿತು.

ಇಫ್ತಿಕಾರ್‌, ಪಿಎಚ್‌.ಡಿ ಪದವಿ ಪಡೆದಿದ್ದಾರೆ. ಮತ್ತೊಬ್ಬ ಆರೋಪಿ ಜಗದೀಶ್‌, ಗ್ರಾನೈಟ್‌ ವ್ಯವಹಾರ ಮಾಡುತ್ತಾರೆ. ಅವರಿಗೆ ಹುಲಿ ಚರ್ಮ ಕೊಟ್ಟವರು ಯಾರು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಹುಲಿ ಚರ್ಮ ವಂಶಪಾರಂಪರ್ಯವಾಗಿ ಮನೆಯ­ಲ್ಲಿತ್ತು ಎಂದು ಇಫ್ತಿಕಾರ್‌ ಹೇಳಿಕೆ ಕೊಟ್ಟಿದ್ದಾರೆ. ಆದರೆ, ಅದಕ್ಕೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆಯಿಂದ ಪಡೆದ ಪರವಾನಗಿ ಅಥವಾ ಯಾವುದೇ ದಾಖಲೆ­ಪತ್ರಗಳು ಅವರ ಬಳಿ ಇಲ್ಲ. ಬಂಧಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿ­ಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗರ್ಭಿಣಿ ಆತ್ಮಹತ್ಯೆ
ಬ್ಯಾಟರಾಯನಪುರ ಸಮೀಪದ ಕಸ್ತೂರಬಾ ನಗರದಲ್ಲಿ ಲಕ್ಷ್ಮಿ (25) ಎಂಬುವರು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರು ಪತಿ ಪವನ್‌ ಮತ್ತು ಅತ್ತೆ–ಮಾವನ ಜತೆ ವಾಸವಾಗಿದ್ದರು. ಅವರ ಮದುವೆಯಾಗಿ ಏಳು ತಿಂಗಳಾಗಿತ್ತು. ಪವನ್‌, ತರಕಾರಿ ಅಂಗಡಿ ಇಟ್ಟುಕೊಂಡಿದ್ದಾರೆ.

ಐದು ತಿಂಗಳ ಗರ್ಭಿಣಿಯಾಗಿದ್ದ ಲಕ್ಷ್ಮಿ ಅವರು ಕೊಠಡಿಯಲ್ಲಿ ಸಂಜೆ ನೇಣು ಹಾಕಿಕೊಂಡಿದ್ದಾರೆ ಎಂದು ಬ್ಯಾಟರಾಯನಪುರ ಪೊಲೀಸರು ತಿಳಿಸಿದ್ದಾರೆ.
‘ಅಳಿಯ ಮತ್ತು ಆತನ ಪೋಷಕರು ವರದಕ್ಷಿಣೆ ಹಣಕ್ಕಾಗಿ ಮಗಳಿಗೆ ಕಿರುಕುಳ ನೀಡುತ್ತಿದ್ದರು. ಆ ಮೂರು ಮಂದಿಯೇ ಮಗಳನ್ನು ಕೊಲೆ ಮಾಡಿ­ದ್ದಾರೆ’ ಎಂದು ಆರೋಪಿಸಿ ಲಕ್ಷ್ಮಿ ಅವರ ತಂದೆ ನಾಗ­ರಾಜ್‌ ಅವರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

ವರದಕ್ಷಿಣೆ ಸಾವು, ಅಪರಾಧ ಸಂಚು ಮತ್ತು ಕೊಲೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಪವನ್‌, ಆತನ ತಂದೆ ಧನರಾಜ್‌ ಹಾಗೂ ತಾಯಿ ಶೋಭಾ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT