ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿ ಸಂರಕ್ಷಿತ ಪ್ರದೇಶದ ಸಿಬ್ಬಂದಿಗೆ ಪಡಿತರ ಭತ್ಯೆ

Last Updated 28 ಆಗಸ್ಟ್ 2014, 19:54 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಾದ್ಯಂತ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಕೆಲಸ ಮಾಡುವ ತಳಮಟ್ಟದ ಸಿಬ್ಬಂದಿಗೆ ₨ ೮೬೦ರಂತೆ ಪಡಿತರ ಭತ್ಯೆಯನ್ನು ನೀಡಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ನಿರ್ಧರಿಸಿದೆ.

ಎನ್‌ಟಿಸಿಎ ಸದಸ್ಯ- ಕಾರ್ಯದರ್ಶಿ ರಾಜೇಶ್ ಗೋಪಾಲ್‌ ಈ ಸಂಬಂಧ ಅಧಿಸೂಚನೆ ಹೊರಡಿಸಿದ್ದಾರೆ. ಅಧಿಸೂಚನೆ ಪ್ರಕಾರ, ನಿಯತ ವೇತನ ಪಟ್ಟಿಗಳಲ್ಲಿರುವ (ಕಾಯಂ ನೌಕರರು) ವನಪಾಲಕ, ವನರಕ್ಷಕ ಮತ್ತು ಕ್ಷೇತ್ರಮಟ್ಟದ ಕೆಳ ಸಿಬ್ಬಂದಿ (ಉದಾಹರಣೆಗೆ; ಅರಣ್ಯ ವೀಕ್ಷಕರು, ಮುಂದಳ ಕೂಲಿಗಳು, ಮಾಲಿಗಳು, ಚೌಕೀದಾರರು ಮತ್ತು ಮಾವುತರು) ಈ ಸೌಲಭ್ಯಕ್ಕೆ ಅರ್ಹರಾಗಿದ್ದಾರೆ.

ಭಾರತದಲ್ಲಿ ಅತಿಹೆಚ್ಚು ಹುಲಿಗಳ ಸಂಖ್ಯೆಯನ್ನು ಹೊಂದಿರುವ ಕರ್ನಾಟಕ­ದಲ್ಲಿ ಬಂಡೀಪುರ, ನಾಗರಹೊಳೆ,  ಬಿಳಿಗಿರಿರಂಗನ ಬೆಟ್ಟ (ಬಿಆರ್‌ಟಿ), ಭದ್ರಾ ಮತ್ತು ದಾಂಡೇಲಿ-–ಅಣಶಿ ಅರಣ್ಯಗಳನ್ನು ಒಳಗೊಂಡು ಪ್ರಸ್ತುತ ಐದು ಹುಲಿ ಸಂರಕ್ಷಿತ ಪ್ರದೇಶಗಳಿವೆ. ಈ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಕೆಲಸ ಮಾಡುವ ನೂರಾರು ಮುಂಚೂಣಿ ಸಿಬ್ಬಂದಿ ಪಡಿತರ ಭತ್ಯೆ ಪ್ರಯೋಜನ­ವನ್ನು ಪಡೆಯಲಿದ್ದಾರೆ.

ಪಡಿತರ ಭತ್ಯೆಯನ್ನು ನೀಡುವಂತೆ ೨೦೦೫ರಲ್ಲಿ ಎನ್‌.ಸುನೀತಾ ನೇತೃತ್ವದ ಹುಲಿ ಕಾರ್ಯಪಡೆ (ಟಿಟಿಎಫ್) ಶಿಫಾರಸು ಮಾಡಿತ್ತು. ಪರಿಸರ ಹಾಗೂ ಅರಣ್ಯ ಸಚಿವಾಲಯ (ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ) ಸಹ ಕ್ಷೇತ್ರಕಾರ್ಯದಲ್ಲಿ ತೊಡಗಿದ ಸಿಬ್ಬಂದಿಗೆ ಸೌಕರ್ಯ ಒದಗಿಸುವುದು ಬಹು ಮುಖ್ಯ ಎಂದು ಸ್ಪಷ್ಟವಾಗಿ ಹೇಳಿತ್ತು. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸಭೆಯಲ್ಲಿ ಈ ಯೋಜನೆಗೆ ಒಪ್ಪಿಗೆ ಸಿಕ್ಕಿತ್ತು.

ಪ್ರಸ್ತುತ ಹುಲಿ ಸಂರಕ್ಷಿತ ಪ್ರದೇಶ­ಗಳಲ್ಲಿ ಕೆಲಸ ಮಾಡುತ್ತಿರುವ ಮುಂಚೂಣಿ ಸಿಬ್ಬಂದಿಗೆ ಹುಲಿ ಯೋಜನಾ ಭತ್ಯೆಯನ್ನು ನೀಡಲಾ­ಗುತ್ತಿದೆ. ಅದರ ಜತೆಗೆ ಪಡಿತರ ಭತ್ಯೆಯನ್ನೂ ನೀಡಲಾಗುತ್ತದೆ ಎಂದು ಎನ್‌ಟಿಸಿಎ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT