ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಸಿಯಾದ ನಿರೀಕ್ಷೆ

Last Updated 19 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಪಾಕಿಸ್ತಾನದ ಜತೆ ಸಂಬಂಧ ಸುಧಾರಿಸಿಕೊಳ್ಳುವ ನಮ್ಮ ಪ್ರಯತ್ನಕ್ಕೆ ಮತ್ತೆ ಅಡಚಣೆಯೊಂದು ಎದುರಾಗಿದೆ. ಇದು ದುರದೃಷ್ಟಕರ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸಮಾರಂಭಕ್ಕೆ ಪಾಕ್ ಪ್ರಧಾನಿ ನವಾಜ್ ಷರೀಫ್ ಬಂದದ್ದು ಬಾಂಧವ್ಯ ವೃದ್ಧಿ ಹಾದಿಯಲ್ಲಿ ಹೊಸ ಆಸೆಯೊಂದನ್ನು ಚಿಗುರಿಸಿತ್ತು. ಆದರೆ ಇತ್ತೀಚಿನ ವಿದ್ಯಮಾನಗಳು ಅದನ್ನು ಚಿವುಟಿ ಹಾಕಿವೆ. ಕೆಲ ದಿನಗಳಿಂದ ಗಡಿಯಲ್ಲಿ ಪಾಕ್‌ ಪಡೆಗಳು ಅಪ್ರಚೋದಿತ ದಾಳಿ ನಡೆಸುತ್ತಿವೆ.

ಇಷ್ಟಾದರೂ ಬಾಂಧವ್ಯ ಹಳಸುವ ಮಟ್ಟಕ್ಕೆ ಹೋಗಿರಲಿಲ್ಲ. ಆದರೆ ಇದೀಗ ಕಾಶ್ಮೀರದ ಪ್ರತ್ಯೇಕತಾವಾದಿ ಸಂಘಟನೆಗಳ ಮುಖಂಡರನ್ನು ದೆಹಲಿಯಲ್ಲಿನ ತನ್ನ ಹೈಕಮಿಷನ್ ಕಚೇರಿಗೆ ಆಹ್ವಾನಿಸಿ ಮಾತುಕತೆ ನಡೆಸುವ ಮೂಲಕ ಪಾಕಿಸ್ತಾನ ಸರ್ಕಾರ, ಭಾರತದ ಸಹನೆಯನ್ನು ಕೆಣಕಿದೆ. ಹೀಗಾಗಿ ‘ಮಾತುಕತೆ ನಡೆಸಲು ನಿಮಗೆ ಭಾರತ ಸರ್ಕಾರ ಬೇಕೋ ಅಥವಾ ಪ್ರತ್ಯೇಕತಾವಾದಿ ನಾಯಕರು ಬೇಕೋ ಎಂಬುದನ್ನು ತೀರ್ಮಾನಿಸಿಕೊಳ್ಳಿ’ ಎಂದು ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್ ಸರಿಯಾಗಿಯೇ ಪಾಕ್‌ನ  ಕಿವಿ ಹಿಂಡಿದ್ದಾರೆ. ಅಲ್ಲದೆ ಅದರ ಈ ನಡವಳಿಕೆಯನ್ನು ತೀವ್ರವಾಗಿ ಪರಿಗಣಿಸಿದ ಭಾರತ, ಇದೇ ತಿಂಗಳು 25ರಂದು ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಸಭೆಯನ್ನು ರದ್ದುಗೊಳಿಸಿದೆ.

ಮೋದಿ-, ಷರೀಫ್ ಭೇಟಿ ನಂತರ ಎರಡೂ ದೇಶಗಳ ಮಧ್ಯೆ - ಆರೋಪ– ಪ್ರತ್ಯಾರೋಪ ಬಹಳಷ್ಟು ಕಡಿಮೆಯಾಗಿತ್ತು. ಮೋದಿಯವರೂ  ಪಾಕ್ ವಿಷಯದಲ್ಲಿ  ಸಂಯಮದ ಭಾಷೆಯನ್ನೇ ಬಳಸಿದ್ದರು. ಷರೀಫ್ ಸಹ ಸೂಕ್ತ ವಾಗಿಯೇ ಸ್ಪಂದಿಸಿದ್ದರು. ಆದರೆ ಈಗ ಏಕಾಏಕಿ ಷರೀಫ್‌ ನಿಲುವು ಬದ­ಲಾಗಲು ಅವರು ಎದುರಿಸುತ್ತಿರುವ ಆಂತರಿಕ ಒತ್ತಡವೇ ಕಾರಣ ಎನಿ­ಸುತ್ತದೆ. ಅವರನ್ನು ಅಧಿಕಾರದಿಂದ ಇಳಿಸಲೇಬೇಕು ಎಂದು ಅಲ್ಲಿನ ಪ್ರತಿಪಕ್ಷದ ನಾಯಕ ಇಮ್ರಾನ್ ಖಾನ್ ಮತ್ತು ಧರ್ಮಗುರು ತಾಹಿರ್ ಅಲ್ ಖಾದ್ರಿ ಪಟ್ಟು ಹಿಡಿದಿದ್ದಾರೆ.

ಸಾವಿರಾರು  ಜನರನ್ನು ಸೇರಿಸಿ ಪ್ರದರ್ಶನ, ಪ್ರತಿಭಟನೆ ನಡೆಸುತ್ತಿದ್ದಾರೆ. ಅವರೊಡನೆ ಷರೀಫ್ ಅವರ ಪಿಎಂಎನ್ಎಲ್ ಪಕ್ಷದ ಮುಖಂಡರು ನಡೆಸಿದ ಸಂಧಾನ ಫಲಕೊಟ್ಟಿಲ್ಲ. ರಾಜಧಾನಿ ಇಸ್ಲಾಮಾಬಾದ್ ಸೇರಿದಂತೆ ದೇಶದ ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಹೀಗೆ ಕುರ್ಚಿಗೆ ಕಂಟಕ ಬಂದಾಗ ಜನರ ಗಮನವನ್ನು ಬೇರೆಡೆ ಸೆಳೆಯಲು ಕಾಶ್ಮೀರ ವಿವಾದ ಕೆದಕುವುದು ಪಾಕ್‌ ಮುಖಂಡರ ಚಾಳಿ.

ಅದನ್ನು ಷರೀಫ್ ಈಗ ಮುಂದುವರಿಸಿದಂತೆ ಕಾಣುತ್ತದೆ. ಇಲ್ಲದೇ ಹೋಗಿದ್ದರೆ 25ರ ಸಭೆ ಮುಂದಿರುವಾಗ ಕಾಶ್ಮೀರದ ಹುರಿಯತ್ ನಾಯಕರ ಜತೆ ಚರ್ಚೆಗೆ ಇಳಿಯುತ್ತಿರಲಿಲ್ಲ. ‘ದ್ವಿಪಕ್ಷೀಯ ಸಭೆಗೆ ಮುನ್ನ ಕಾಶ್ಮೀರದ ಮುಖಂಡರ ಜತೆ ಮಾತುಕತೆ ನಡೆಸುವುದು ಹಿಂದಿನಿಂದಲೂ ನಡೆದುಬಂದ ಸಂಪ್ರದಾಯ’ ಎಂಬ ಪಾಕ್ ಹೇಳಿಕೆಯಲ್ಲಿ ಪ್ರಾಮಾಣಿಕತೆ ಕಾಣುತ್ತಿಲ್ಲ.

ಅಷ್ಟಕ್ಕೂ ಎರಡೂ ದೇಶಗಳ ಮಧ್ಯೆ ಉನ್ನತ ಮಟ್ಟದಲ್ಲಿ ಮಾತುಕತೆ ಶಾಸ್ತ್ರ ನಡೆಸುವುದರಿಂದ ಪ್ರಯೋಜನವೂ ಇಲ್ಲ. ಗಟ್ಟಿಯಾದ ತಳಹದಿಯ ಮೇಲೆ, ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಮಾತುಕತೆ ನಡೆಸಲು ಪಾಕಿಸ್ತಾನ ಪ್ರಾಮಾಣಿಕ ಕಾಳಜಿ ತೋರಿಸಬೇಕು. ಬೂಟಾಟಿಕೆ ಬಿಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT