ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಸಿ ಕನಸು ತೋರಿದ ಬಿಜೆಪಿ: ಸೋನಿಯಾ

Last Updated 20 ಆಗಸ್ಟ್ 2014, 14:40 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಸಾಕಷ್ಟು’ ಪ್ರಯತ್ನದ ಹೊರತಾಗಿಯೂ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಸೋಲು ಕಂಡಿತು ಎಂದು ವಿಷಾದಿಸಿದ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್‌ ಮತ್ತೆ ಪುಟಿದೇಳಲಿದೆ ಎಂದು ಬುಧವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಮಹಿಳಾ ಕಾಂಗ್ರೆಸ್‌’ ಸಮಾರಂಭದಲ್ಲಿ ಮಾತನಾಡಿದ ಸೋನಿಯಾ, ‘ಅವರು ಸುಳ್ಳು ಕನಸುಗಳನ್ನು ತೋರಿಸಿದರು. ಹಾಗೂ ಅದರಲ್ಲಿ ಜನರು ಸಿಲುಕಿದರು’ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಹರಿಹಾಯ್ದರು.

ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರ 70ನೇ ಜನ್ಮದಿನದ ಅಂಗವಾಗಿ ಸಮ್ಮೇಳನ ಆಯೋಜಿಸಲಾಗಿದ್ದು, ಕಾಂಗ್ರೆಸ್‌ನ ಮಹಿಳಾ ಸದಸ್ಯರು ‘ಸುನಾಮಿ’ ರೂಪ ತಾಳಬೇಕು ಹಾಗೂ ಸಿದ್ಧಾಂತಗಳ ನಡುವಣ ಯುದ್ಧದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ಕರೆ ನೀಡಿದರು.

‘ನಾವು ಸಾಕಷ್ಟು ಶ್ರಮ ಪಟ್ಟಿದ್ದೆವು. ನಮ್ಮ ಕೆಲಸ, ನಮ್ಮ ಸಾಧನೆಗಳನ್ನು ಅಲಕ್ಷಿಸಿದರು. ಈಗಲೂ ಕೆಲವು ಜನರು ನಿರ್ಲಕ್ಷಿಸುತ್ತಿದ್ದಾರೆ. ಹುಸಿ ಕನಸುಗಳನ್ನು ತೋರಿದವರೆಡೆ ಜನರು ನುಗ್ಗಿ ನಡೆದರು’ ಎಂದು ಅವರು ಲೋಕಸಭೆಯಲ್ಲಿ ಎದುರಾದ ಸೋಲನ್ನು ನೆನಪಿಸಿಕೊಂಡರು.

ಮಹಿಳಾ ಸಬಲೀಕರಣಕ್ಕೆ ಕೈಗೊಂಡ ಕ್ರಮಗಳನ್ನು ಹಾಗೂ ಇತರ ಸುಧಾರಣೆಗಳನ್ನು ಕಾಂಗ್ರೆಸ್‌ ನೇತೃತ್ವದ ಹಿಂದಿನ ಸರ್ಕಾರದ ಸಾಧನೆಗಳಿಗೆ ಆಧಾರ ಒದಗಿಸಿದರು.

‘ಸದ್ಯ ಅಧಿಕಾರದಲ್ಲಿರುವ ಸರ್ಕಾರ ತಮ್ಮ ಅಭಿರುಚಿಗೆ ತಕ್ಕಂತೆ ದೇಶದ ಜನತೆಗೆ ಭಿನ್ನ ಚಿತ್ರಣವನ್ನು ತೋರಿಸುತ್ತಿದೆ. ಕಾಂಗ್ರೆಸ್‌ ಚಾಲನೆ ನೀಡಿದ್ದ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ತಮ್ಮ ಸ್ವಂತದ್ದು ಎಂಬಂತೆ ಅನುಷ್ಠಾನ ಗೊಳಿಸುತ್ತಿದ್ದಾರೆ’ ಎಂದು ಮೋದಿ ಅವರ ಕಾರ್ಯವೈಖರಿಯನ್ನು ಟೀಕಿಸಿದರು.

ಇದೇ ವೇಳೆ, ‘ನಮ್ಮ ಹೋರಾಟದ ದಾರಿ ಸ್ವಲ್ಪ ದೀರ್ಘವಿರಬಹುದು. ನಾವು ಸ್ವಲ್ಪ ಹೆಚ್ಚು ಕೆಲಸ ಮಾಡಬೇಕಾಗಬಹುದು. ಆದರೆ ನಾವೆಲ್ಲರೂ ಶ್ರಮಪಟ್ಟು, ಒಗ್ಗಟ್ಟಾಗಿ ದುಡಿದರೆ ಕಾಂಗ್ರೆಸ್‌ ಮತ್ತೆ ಉತ್ತುಂಗದ ತುದಿ ತಲುಪುವ ದಿನ ದೂರವಿಲ್ಲ’ ಎನ್ನುವ ಮೂಲಕ ಕಾಂಗ್ರೆಸ್‌ ಮತ್ತೆ ಎದ್ದು ನಿಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT