ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆದಾರರಿಗೆ ದೀಪಾವಳಿ ಕೊಡುಗೆ

Last Updated 17 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಬಿಹಾರ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಕೇಂದ್ರ ಸರ್ಕಾರವು 15 ವಲಯಗಳಲ್ಲಿನ ವಿದೇಶಿ ನೇರ ಹೂಡಿಕೆಗೆ  (ಎಫ್‌ಡಿಐ)  ಸಂಬಂಧಿಸಿದಂತೆ ಸುಧಾರಣಾ ಕ್ರಮಗಳನ್ನು ಪ್ರಕಟಿಸಿ ಅಚ್ಚರಿ ಮೂಡಿಸಿದೆ. ಹೂಡಿಕೆದಾರರು ಮತ್ತು ಬಂಡವಾಳ ಮಾರುಕಟ್ಟೆ ಪಾಲಿಗಂತೂ ಇದು ದೀಪಾವಳಿಯ ವಿಶೇಷ ಕೊಡುಗೆಯಾಗಿದೆ.

ಬಿಹಾರದಲ್ಲಿನ ಹೀನಾಯ ಸೋಲು ಕೇಂದ್ರದಲ್ಲಿನ ಎನ್‌ಡಿಎ ಸರ್ಕಾರಕ್ಕೆ ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ಕೈಕಟ್ಟಿಹಾಕಲಿದೆ. ಸರ್ಕಾರ ದುರ್ಬಲಗೊಳ್ಳಲಿದ್ದು, ಮಹತ್ವದ ನಿರ್ಧಾರ ಕೈಗೊಳ್ಳಲು ಹಿಂದೇಟು ಹಾಕಲಿದೆ ಎನ್ನುವ ವಿಶ್ಲೇಷಣೆಗಳನ್ನೆಲ್ಲ ತಲೆಕೆಳಗು ಮಾಡುವ ರೀತಿಯಲ್ಲಿ 15 ವಲಯಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಸಂಬಂಧಿಸಿದ ನಿಯಮಗಳನ್ನು ಸಡಿಲಿಸಲಾಗಿದೆ.

ತನ್ನ ಆರ್ಥಿಕ ಸುಧಾರಣಾ ಕಾರ್ಯಸೂಚಿ ಮೇಲೆ ಚುನಾವಣಾ ಫಲಿತಾಂಶ ಯಾವುದೇ ಪ್ರಭಾವ ಬೀರಿಲ್ಲ. ಸುಧಾರಣೆಗಳನ್ನು ಮುಂದುವರೆಸಲು ಸರ್ಕಾರ ದೃಢ ನಿರ್ಧಾರ ಮಾಡಿದೆ ಎನ್ನುವ ಸಂದೇಶವನ್ನೂ ಸರ್ಕಾರ ಈ ಮೂಲಕ ನೀಡಿದೆ.

ಆರ್ಥಿಕ ಸುಧಾರಣಾ ಕ್ರಮಗಳಿಗೆ ಸಂಬಂಧಿಸಿದಂತೆ ಸರ್ಕಾರ ಮತ್ತೊಮ್ಮೆ  ತನ್ನ ಬದ್ಧತೆ ಪ್ರಕಟಿಸಿದಂತಾಗಿದೆ. ದೇಶದ ಅರ್ಥ ವ್ಯವಸ್ಥೆ ಸುಧಾರಣೆಗೇ ನಮ್ಮ ಮೊದಲ ಆದ್ಯತೆ ಎನ್ನುವ ಇಂಗಿತವೂ ಇದಾಗಿದೆ. ಪ್ರಧಾನಿ ಮೋದಿ ಅವರು ಜಪಿಸುತ್ತಿರುವ ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ಮಂತ್ರಕ್ಕೂ ಇದು ಅನುಗುಣವಾಗಿದೆ. ಈ ಸುಧಾರಣಾ ನಿರ್ಧಾರಗಳ ಜಾರಿಗೆ ಕಾನೂನು ಬದಲಾವಣೆಯ ಅಗತ್ಯ ಇಲ್ಲ. ರಕ್ಷಣೆ, ಪ್ಲಾಂಟೇಷನ್‌ನಿಂದ ಹಿಡಿದು ಸಿಂಗಲ್‌ ಬ್ರ್ಯಾಂಡ್‌ ರಿಟೇಲ್‌ ಮತ್ತು ಖಾಸಗಿ ಬ್ಯಾಂಕ್‌ಗಳವರೆಗೆ ಸುಧಾರಣೆಗಳನ್ನು ಜಾರಿಗೊಳಿಸಲಾಗಿದೆ.

ಕೃಷಿ, ಗಣಿಗಾರಿಕೆ, ನಾಗರಿಕ ವಿಮಾನಯಾನ,  ಕೃಷಿ, ಪಶು ಸಂಗೋಪನೆ, ಟೆಲಿವಿಷನ್‌ ಮತ್ತು ರೇಡಿಯೊ, ನಾಗರಿಕ ವಿಮಾನಯಾನ, ಕಟ್ಟಡ ನಿರ್ಮಾಣ, ಕ್ಯಾಷ್‌ ಆಂಡ್‌ ಕ್ಯಾರಿ ಸಗಟು ವ್ಯಾಪಾರ, ತೆರಿಗೆ ಮುಕ್ತ ಮಳಿಗೆಗಳು ಮತ್ತು ತಯಾರಿಕಾ ವಲಯಗಳು  ಇವುಗಳಲ್ಲಿ  ಸೇರಿವೆ. ಜತೆಗೆ, ‘ಎಫ್‌ಡಿಐ‘ಗೆ ಸಂಬಂಧಿಸಿದ ಅನೇಕ ತೊಡಕುಗಳನ್ನು ನಿವಾರಿಸಿ, ನಿರ್ಬಂಧಗಳನ್ನು ಸಡಿಲಿಸಿ,  ಹೂಡಿಕೆ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲಾಗಿದೆ.  ಇದರಿಂದ ದೇಶದೊಳಗೆ ಬಂಡವಾಳವು ಹರಿದು ಬರುವುದರ ಜತೆಗೆ ಸ್ವದೇಶಿ ಉದ್ದಿಮೆಗಳಿಗೆ ವಿದೇಶಿ ತಂತ್ರಜ್ಞಾನದ ಪ್ರಯೋಜನವೂ ದೊರೆಯಲಿದೆ.

‘ಎಫ್‌ಡಿಐ’ ಮಿತಿ ಸಡಿಲಿಕೆ, ವಿವಿಧ ವಲಯಗಳಲ್ಲಿನ ‘ಎಫ್‌ಡಿಐ’ಗೆ ಸಂಬಂಧಿಸಿದ ನಿರ್ಬಂಧಗಳಲ್ಲಿ ವಿನಾಯ್ತಿ ನೀಡಿರುವುದು ವಿದೇಶಿ ಹೂಡಿಕೆದಾರರು ಮತ್ತು ಹಾಲಿ ಪ್ರವರ್ತಕರಿಗೆ ಉದ್ದಿಮೆ – ವಹಿವಾಟು ವಿಸ್ತರಣೆಗೆ ಹಲವಾರು ಹೊಸ ಅವಕಾಶಗಳನ್ನು ಒದಗಿಸಿ ಕೊಡಲಿದೆ.

ಭಾರತದಲ್ಲಿ ಹಣ ಹೂಡಿಕೆ ಮಾಡಿ ಲಾಭ ಬಾಚಿಕೊಳ್ಳಲು ವಿಪುಲ ಅವಕಾಶಗಳು ಇರುವುದರತ್ತ ಈಗ ಇಡೀ ವಿಶ್ವ ಮತ್ತೊಮ್ಮೆ ಭಾರತದತ್ತ ತಿರುಗಿ ನೋಡುವಂತಾಗಿದೆ. ಈ ಎಲ್ಲ ಕ್ರಮಗಳು ವಿದೇಶಿ ಹೂಡಿಕೆದಾರರ ಆತ್ಮವಿಶ್ವಾಸವನ್ನೂ ಹೆಚ್ಚಿಸಲಿವೆ. ಬ್ಯಾಂಕ್, ರಕ್ಷಣೆ ಮತ್ತು ಕಟ್ಟಡ ನಿರ್ಮಾಣ ರಂಗಗಳು ‘ಎಫ್‌ಡಿಐ ಸುಧಾರಣಾ’ ಕ್ರಮಗಳ ಹೆಚ್ಚಿನ ಪ್ರಯೋಜನ ಪಡೆಯಲಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸ್ವತಂತ್ರವಾಗಿ ಅಥವಾ ದೇಶಿ ಹೂಡಿಕೆದಾರರ ಜತೆಗಿನ ಪಾಲುದಾರಿಕೆಯಡಿ ವಹಿವಾಟು ವಿಸ್ತರಿಸಲು ಸಾಧ್ಯವಾಗಲಿದೆ.

ಭಾರತದಲ್ಲಿ ಹಣ ತೊಡಗಿಸಿ ಲಾಭ ಮಾಡಿಕೊಳ್ಳಲು  ವಿದೇಶಿ ಹೂಡಿಕೆದಾರರಿಗೆ ಈ ಕ್ರಮಗಳು ಹೆಚ್ಚು ಆಕರ್ಷಕವಾಗಲಿವೆ.  ದೇಶದಲ್ಲಿ ಉದ್ದಿಮೆ ವಹಿವಾಟು ನಡೆಸಲು ಇನ್ನಷ್ಟು ಹೆಚ್ಚು ಅನುಕೂಲಕರ ವಾತಾವರಣವೂ ಸೃಷ್ಟಿಯಾಗಲಿದೆ. ಖಾಸಗಿ ಬ್ಯಾಂಕ್‌ ವಲಯದಲ್ಲಿ ಶೇ 74ರಷ್ಟು ಬಂಡವಾಳ ಹೂಡಿಕೆಗೆ ಅವಕಾಶ ಇರುವುದರಿಂದ ಬ್ಯಾಂಕಿಂಗ್‌ ಕ್ಷೇತ್ರವು ವ್ಯಾಪಕವಾಗಿ ವಿಸ್ತರಣೆಯಾಗಲಿದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ.

ರಕ್ಷಣಾ ವಲಯದಲ್ಲಿ ಶೇ 49ರಷ್ಟರವರೆಗಿನ ಸಾಗರೋತ್ತರ ಸಂಸ್ಥೆಗಳ ಪಾಲುದಾರಿಕೆಗೆ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿ ಬದಲಿಗೆ ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ ಅನುಮೋದನೆ ನೀಡಲಿದೆ. ಹೊಸ ಉದ್ದಿಮೆಗಳಲ್ಲಿ ಹಣ ಹೂಡಿಕೆ ಮಾಡುವ ವಿದೇಶಿ  ಬಂಡವಾಳ ಹೂಡಿಕೆದಾರರು ಈಗ ದುಪ್ಪಟ್ಟು ಪ್ರಮಾಣದಲ್ಲಿ (ಶೇ 49) ಹಣ ತೊಡಗಿಸಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೂ ಮೊದಲು ಈ ಮಿತಿ ಕೇವಲ ಶೇ 24ರಷ್ಟಿತ್ತು.

ಇದು ದೇಶದಲ್ಲಿ ಹೊಸ ಉದ್ದಿಮೆಗಳನ್ನು (ಸ್ಟಾರ್ಟ್‌ಅಪ್‌) ಸ್ಥಾಪಿಸಲು ಮುಂದಾಗುತ್ತಿರುವ ಸ್ಥಳೀಯ ಉದ್ಯಮಿಗಳಿಗೂ ಗಮನಾರ್ಹವಾಗಿ ನೆರವಾಗಲಿದೆ.  ಅನೇಕ ಮಹತ್ವದ ವಲಯಗಳಲ್ಲಿ  ದೇಶಿ ತಂತ್ರಜ್ಞಾನ ಅಭಿವೃದ್ಧಿಪಡಿಸಲೂ ಇದು ಉತ್ತೇಜನ ನೀಡಲಿದೆ. ಕಟ್ಟಡ ನಿರ್ಮಾಣ ಚಟುವಟಿಕೆಗಳಲ್ಲಿ  ಈ ಮೊದಲು ಜಾರಿಯಲ್ಲಿದ್ದ ಕನಿಷ್ಠ ಬಂಡವಾಳ ತೊಡಗಿಸುವಿಕೆ ಮೇಲಿನ ನಿಬಂಧನೆ ಸಡಿಲಗೊಳಿಸಿರುವುದು ವಸತಿ ನಿರ್ಮಾಣ ರಂಗಕ್ಕೆ ಭಾರಿ ಉತ್ತೇಜನ ನೀಡುವ ನಿರೀಕ್ಷೆ ಇದೆ.

ಅರ್ಥ ವ್ಯವಸ್ಥೆಯಲ್ಲಿ ನಿರ್ಮಾಣ ವಲಯಕ್ಕೆ ಮಹತ್ವದ ಪಾತ್ರವಿದೆ. ವಸತಿ ಸೌಲಭ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಸಾಕಾರಗೊಳ್ಳಲೂ ಇದರಿಂದ ಸಾಧ್ಯವಾಗಲಿದೆ. ಕಟ್ಟಡ ನಿರ್ಮಾಣ ರಂಗದಲ್ಲಿ ಹಣ ಹೂಡಿದ ವಿದೇಶಿ ಸಂಸ್ಥೆಗಳು ಮೂರು ವರ್ಷಗಳ ನಿರ್ಬಂಧದ ನಂತರ ಯೋಜನೆಯಿಂದ ಹಿಂದೆ ಸರಿಯುವ ಮತ್ತು ಸ್ವದೇಶಕ್ಕೆ ವಾಪಸ್‌ ಹೋಗಲು ಅವಕಾಶ ಮಾಡಿಕೊಟ್ಟಿರುವುದು  ದೇಶಿ ಅರ್ಥ ವ್ಯವಸ್ಥೆಗೆ ಹಲವು ಬಗೆಯಲ್ಲಿ ಪ್ರಯೋಜನಕಾರಿಯಾಗಲಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಅವಕಾಶಗಳೂ ಸೃಷ್ಟಿಯಾಗಲಿವೆ.  ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಪ್ರಮಾಣದ ತೆರಿಗೆ ವರಮಾನವೂ ಹರಿದು ಬರಲಿದೆ. ಇತ್ತೀಚಿನ ದಿನಗಳಲ್ಲಿ ನಿರ್ಲಕ್ಷಕ್ಕೆ ಒಳಗಾಗಿದ್ದ ಸುಧಾರಣಾ ಪ್ರಕ್ರಿಯೆಗೆ ಈಗ ಇನ್ನಷ್ಟು ವೇಗ ಬರಲಿದೆ. ಮುಂಬರುವ ದಿನಗಳಲ್ಲೂ ಮೋದಿ ಸರ್ಕಾರವು ಆರ್ಥಿಕ ಸುಧಾರಣಾ ಪ್ರಕ್ರಿಯೆ ಈ ವೇಗವನ್ನು ಸ್ಥಿರವಾಗಿ ಕಾಯ್ದುಕೊಳ್ಳುವ ಅಗತ್ಯ ಇದೆ. ಸರ್ಕಾರವು ಈಗ ಇಂತಹದೇ ಪ್ರಕ್ರಿಯೆಯನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿ ವಿಷಯದಲ್ಲೂ ಮುಂದುವರೆಸಬೇಕಾಗಿದೆ.
*
ಟೀಕೆ
ಜಾಗತಿಕ ಅರ್ಥ ವ್ಯವಸ್ಥೆ ಬಿಕ್ಕಟ್ಟಿನಲ್ಲಿರುವಾಗ, ವಿದೇಶಿ ಹೂಡಿಕೆದಾರರಿಗೆ ಕೆಂಪು ರತ್ನಗಂಬಳಿ ಹಾಸಿರುವುದು ದೇಶದ ಸಂಪತ್ತನ್ನು ಲೂಟಿ ಮಾಡಲು ಅವಕಾಶ ಮಾಡಿಕೊಟ್ಟಂತೆ ಆಗಿದೆ. ಈ  ಕ್ರಮಗಳು ದೇಶವು ಪಾಶ್ಚಿಮಾತ್ಯ ದೇಶಗಳನ್ನು ಹೆಚ್ಚಾಗಿ ಅವಲಂಬಿಸುವಂತೆ ಮಾಡುತ್ತವೆ  ಎಂದು ಎಡಪಕ್ಷಗಳು ಟೀಕಿಸಿವೆ. ವಿದೇಶಿ ಹೂಡಿಕೆದಾರರು ಕೃಷಿ, ಪಶು ಸಂಗೋಪನೆ ಮತ್ತು ಪ್ಲಾಂಟೇಷನ್‌ ವಲಯಗಳಿಂದ ದೂರ ಉಳಿಯಬೇಕು. ಇಲ್ಲದಿದ್ದರೆ ಪ್ರತಿಭಟನೆಯ ಮಾರ್ಗ ತುಳಿಯಬೇಕಾದೀತು ಎಂದು ಅಖಿಲ ಭಾರತ ಕಿಸಾನ್‌ ಸಭಾ ಎಚ್ಚರಿಸಿದೆ.

*
ಎಫ್‌ಡಿಐ ಗರಿಷ್ಠ ಮಿತಿ
* ರಕ್ಷಣೆ ಮತ್ತು ಪ್ರಾದೇಶಿಕ ವಿಮಾನ ಸಂಸ್ಥೆಗಳಲ್ಲಿ ಶೇ 49ರಷ್ಟು ಎಫ್‌ಡಿಐಗೆ ಸರ್ಕಾರದ ಅನುಮೋದನೆ ಬೇಕಾಗಿಲ್ಲ
* ಡಿಟಿಎಚ್‌, ಮೊಬೈಲ್‌ ಟಿವಿ ಮತ್ತು ಕೇಬಲ್‌ ಟೆಲಿವಿಷನ್‌ ಸೇವಾ ವಲಯದಲ್ಲಿ ಶೇ 100
* ಎಫ್‌ಎಂ ರೇಡಿಯೊ, ಸುದ್ದಿ ಪ್ರಸಾರ ಮಾಡುವ ಟೆಲಿವಿಷನ್‌ ಚಾನೆಲ್‌ಗಳಲ್ಲಿ ಮಿತಿ ಶೇ 26ರಿಂದ ಶೇ 49ಕ್ಕೆ ಹೆಚ್ಚಳ
* ಖಾಸಗಿ ಬ್ಯಾಂಕ್‌ಗಳಲ್ಲಿ ಶೇ 74
* ಬಹು ಬ್ರ್ಯಾಂಡ್‌ ಚಿಲ್ಲರೆ ವಹಿವಾಟಿನಲ್ಲಿ ಶೇ 51ರಷ್ಟು ಮಿತಿ ಬದಲಾಗಿಲ್ಲ
* ಕಾಫಿ, ರಬ್ಬರ್‌, ತಾಳೆ ಪ್ಲಾಂಟೇಷನ್‌ಗಳಲ್ಲಿ  ಮೊದಲ ಬಾರಿಗೆ ಎಫ್‌ಡಿಐಗೆ ಮುಕ್ತ ಅವಕಾಶ
*
ವಿದೇಶಿ ಹೂಡಿಕೆದಾರರು ದೇಶವನ್ನು ಕೊಳ್ಳೆ ಹೊಡೆಯಲು ಲೈಸೆನ್ಸ್‌ ನೀಡಿದಂತಾಗಿದೆ.
–ಎಡ ಪಕ್ಷಗಳು
*
‘ಎಫ್‌ಡಿಐ’ಗೆ ಸಂಬಂಧಿಸಿದ ಈ ನಿರ್ಧಾರಗಳು,  ಪ್ರತಿಯೊಬ್ಬ ಪ್ರಜೆಗೆ ಪ್ರಯೋಜನಕಾರಿಯಾ ಗುವ ಆರ್ಥಿಕ ಸುಧಾರಣೆಗಳ ಜಾರಿಗೆ ಸರ್ಕಾರದ ನಿಸ್ಸಂದಿಗ್ಧ ಬದ್ಧತೆಯ ಪ್ರತೀಕವಾಗಿವೆ
–ನರೇಂದ್ರ ಮೋದಿ,
ಪ್ರಧಾನಿ
*
ಸುಧಾರಣಾ ಪ್ರಕ್ರಿಯೆ ನಿರಂತರವಾದದ್ದು. ಆರ್ಥಿಕ ಸುಧಾರಣೆಗಳಿಗೆ ಸಂಬಂಧಿಸಿದಂತೆ ಅಂತ್ಯ ಎಂಬುದು ಇಲ್ಲ.
–ಅರುಣ್‌ ಜೇಟ್ಲಿ , 
ಕೇಂದ್ರ ಹಣಕಾಸು ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT