ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆದಾರರ ದೂರು ಪರಿಹಾರ ಹೇಗೆ?

Last Updated 21 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ದೇಶದ ಷೇರು ಮತ್ತು ಹಣಕಾಸು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದ ಹೂಡಿಕೆದಾರರು ಮೋಸ, ವಂಚನೆ ಅಥವಾ ಸೇವಾ  ನ್ಯೂನತೆಗೆ ಒಳಗಾದಾಗ ಯಾರಿಗೆ ದೂರು ನೀಡಬೇಕು? ಕುಂದು ಕೊರತೆಗಳನ್ನು ಹೇಗೆ ಬಗೆಹರಿಸಿಕೊಳ್ಳಬೇಕು? ಮಾರುಕಟ್ಟೆಯ ವಿವಿಧ ವಿಭಾಗಗಳಲ್ಲಿ ಹಣ ಹೂಡಿದವರಿಗೆ ಒಮ್ಮೆಯಾದರೂ ಈ ಪ್ರಶ್ನೆಗಳು ಉದ್ಭವಿಸುತ್ತವೆ. ಬಹಳಷ್ಟು ಮಂದಿಗೆ ತಮಗೆ ಎದುರಾದ ಸಮಸ್ಯೆ, ಕುಂದು ಕೊರತೆಗೆ ಪರಿಹಾರ ಪಡೆಯುವ ಬಗೆ ಹೇಗೆ ಎಂಬ ಮಾಹಿತಿಯೇ ಇರುವುದಿಲ್ಲ. ಆ ಕುರಿತ ಮಾರ್ಗದರ್ಶನ ಇಲ್ಲಿದೆ...

ದೇಶದ ಷೇರು ಮತ್ತು ಹಣಕಾಸು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದ ಹೂಡಿಕೆದಾರರು ಮೋಸ,  ವಂಚನೆ ಅಥವಾ ಸೇವಾ ನ್ಯೂನತೆಗೆ ಒಳಗಾದಾಗ ಯಾರಿಗೆ ದೂರು ನೀಡಬೇಕು? ಕುಂದು ಕೊರತೆಗಳನ್ನು ಹೇಗೆ ಬಗೆಹರಿಸಿಕೊಳ್ಳಬೇಕು?

ಹಣಕಾಸು ಮಾರುಕಟ್ಟೆಯ ವಿವಿಧ ವಿಭಾಗಗಳಲ್ಲಿ ಹಣ ಹೂಡಿದವರಿಗೆ ಒಮ್ಮೆಯಾದರೂ ಈ  ಪ್ರಶ್ನೆಗಳು ಉದ್ಭವಿಸುತ್ತವೆ. ಬಹಳಷ್ಟು ಮಂದಿಗೆ ತಮಗೆ ಎದುರಾದ ಸಮಸ್ಯೆ, ಕುಂದು ಕೊರತೆಗೆ ಪರಿಹಾರ ಪಡೆಯುವ ಬಗೆ ಹೇಗೆ ಎಂಬುದರ ಕುರಿತು ಸರಿಯಾದ ಮಾಹಿತಿಯೇ ಇರುವುದಿಲ್ಲ.

ಹಣಕಾಸು ಮಾರುಕಟ್ಟೆಯ ವಿವಿಧ ಯೋಜನೆಗಳಲ್ಲಿ ಹಣ ತೊಡಗಿಸಲು ಇಚ್ಛಿಸುವವರನ್ನು ಆಕರ್ಷಿಸಿ ವಂಚಿಸುವ, ಅಮಾಯಕರ ಹಣವನ್ನು ನುಂಗಿಹಾಕುವ ಹಗರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಲೇ ಇವೆ. ಬಂಡವಾಳ ಹೂಡಿಕೆ ಪ್ರಕ್ರಿಯೆಯಲ್ಲಿ ಅಪಾಯ, ಕಂಟಕ ಇದ್ದೇ ಇರುತ್ತದೆ.  ಲಾಭದ ಅವಕಾಶ ಹೆಚ್ಚಾದಷ್ಟೂ ಅಪಾಯದ ಪ್ರಮಾಣವೂ ತುಸು ಹೆಚ್ಚೇ ಇರುತ್ತದೆ.

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ: ಸೆಬಿ) ದೇಶದಲ್ಲಿರುವ ಷೇರು ವಿನಿಮಯ ಕೇಂದ್ರಗಳನ್ನು, ಷೇರುಪೇಟೆಯಲ್ಲಿ ನೋಂದಣಿಯಾಗುವ ಕಂಪೆನಿಗಳನ್ನು ನಿಯಂತ್ರಿಸುವ ಸಂಸ್ಥೆ. ಷೇರು ಮಾರುಕಟ್ಟೆ,  ಮ್ಯುಚುಯಲ್ ಫಂಡ್ ಹಾಗೂ ಹಣಕಾಸು ಉಳಿತಾಯ, ಹೂಡಿಕೆ ಯೋಜನೆಗಳನ್ನು ನಿರ್ವಹಿಸುವ ಸಂಸ್ಥೆಗಳು ಸೆಬಿ ವ್ಯಾಪ್ತಿಗೆ ಒಳಪಡುತ್ತವೆ. ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಷೇರು ಬ್ರೋಕರ್‌ಗಳು, ಫಂಡ್‌ ಮ್ಯಾನೇಜರ್‌ಗಳು, ಹೂಡಿಕೆ ಸಲಹೆಗಾರರು ಸೆಬಿಯ ನಿಯಂತ್ರಣಕ್ಕೆ ಒಳಪಡುತ್ತಾರೆ.

ಸೆಬಿ ವ್ಯಾಪ್ತಿಗೆ ಬರುವ ದೂರು
ಷೇರು ಮಾರುಕಟ್ಟೆಯ ವಹಿವಾಟು ಪಟ್ಟಿಯಲ್ಲಿರುವ ಕಂಪೆನಿಗಳ ವಿರುದ್ಧ ಹೂಡಿಕೆದಾರರು ದೂರು ಸಲ್ಲಿಸಬಹುದು. ಅಲ್ಲದೇ,
*ಷೇರು ವಿನಿಯಮ ಕೇಂದ್ರಗಳು
*ಮ್ಯುಚುಯಲ್ ಫಂಡ್‌ ಸಂಸ್ಥೆಗಳು
*ಷೇರು ದಲ್ಲಾಳಿಗಳು
*ಡೆಪಾಸಿಟಿರಿ ಪಾರ್ಟಿಸಿಪೆಂಟ್ಸ್‌(D.P.)
*ರಿಜಿಸ್ಟ್ರಾರ್/ಷೇರು ಹಸ್ತಾಂತರ ಏಜೆಂಟರು
*ಮರ್ಚೆಂಟ್ ಬ್ಯಾಂಕರ್ಸ್‌
*ಪೋರ್ಟ್‌ಫೋಲಿಯೊ ವ್ಯವಸ್ಥಾಪಕರು
*ಕಸ್ಟೋಡಿಯನ್
*ಡಿಬೆಂಚರ್ ಟ್ರಸ್ಟಿಗಳು
*ಹೂಡಿಕೆ ಸಲಹೆಗಾರರು
*ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು
*ಸಾಮೂಹಿಕ ಹೂಡಿಕೆ ಯೋಜನೆಗಳು
*ಪೊಂಜಿ (ವಂಚನೆ)  ಅಥವಾ ಪಿರಮಿಡ್ ಯೋಜನೆಗಳು
*ಷೇರುಗಳಲ್ಲಿ ಒಳ ವಹಿವಾಟು, ವಂಚನೆ ಅಥವಾ ಷೇರಿನ ಬೆಲೆಯನ್ನು ಊದಿಸಿ ಬಾಧಿಸುವ ಬಗ್ಗೆ ಮಾಹಿತಿ ಲಭ್ಯವಿಲ್ಲದೇ ಇರುವುದು

ಸೆಬಿಗೆ ಒಳಪಡದ ದೂರುಗಳು
*ವಿಮೆ ಕಂಪೆನಿಗಳು
*ಬ್ಯಾಂಕುಗಳು
*ಪಿಂಚಣಿ ಫಂಡ್‌ಗಳು
*ಸರಕು ವಿನಿಮಯ ಮಾರುಕಟ್ಟೆ
*ವಿದೇಶಿ ವಿನಿಮಯ ಮಾರುಕಟ್ಟೆ
ಇವಿಷ್ಟೂ ಸಂಸ್ಥೆಗಳೊಂದಿಗಿನ ವಹಿವಾಟಿನಲ್ಲಿ ಎದು ರಾಗುವ ಸಮಸ್ಯೆ, ತೊಂದರೆಗಳು, ಅವ್ಯವಹಾರಗಳ ಕುರಿತು ಸೆಬಿಗೆ ದೂರು ಸಲ್ಲಿಸಬಹುದಾಗಿದೆ.

ಸೆಬಿ ನಿರಾಕರಿಸಬಹುದಾದ ದೂರು
*ಪೂರ್ಣ ವಿವರಗಳಿರದ ದೂರು
*ಪುರಾವೆಗಳೇ ಇಲ್ಲದ ದೂರು
*ಖಾಸಗಿ ಕಂಪೆನಿಯ ಷೇರುಗಳು, ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟು ನಡೆಸದ ಕಂಪೆನಿಗಳ ಕುರಿತ ದೂರು
*ಷೇರುಗಳ ಬೆಲೆ ಕುರಿತ ಅಸಮಾಧಾನ
*ಷೇರು ವಹಿವಾಟಿಗೆ ಸಂಬಂಧಿಸದ ಖಾಸಗಿ ದೂರು
*ನ್ಯಾಯಾಲಯದಲ್ಲಿರುವ ಪ್ರಕರಣ ಕುರಿತ ದೂರು...
*ಇವಿಷ್ಟೂ ಬಗೆಯ ದೂರುಗಳನ್ನು ದಾಖಲಿಸಿಕೊಂಡು ಕ್ರಮ ಜರುಗಿಸುವುದಕ್ಕೆ ಸೆಬಿ ಪ್ರಾಥಮಿಕ ಹಂತದಲ್ಲಿಯೇ ನಿರಾಕರಿಸಬಹುದು.

ದೂರು ನೀಡುವ ವಿಧಾನ
ಹಂತ 1: ಪ್ರಾಥಮಿಕ ದೂರು
ದೂರು ನಿವಾರಣೆಗೆ ಮೊದಲು ಸಂಬಂಧಪಟ್ಟ ಕಂಪನಿ ಅಥವಾ ಬ್ರೋಕರ್ , ಷೇರು ವಿನಿಮಯ ಕೇಂದ್ರ,  ಏಜೆಂಟರನ್ನು ಸಂಪರ್ಕಿಸಿ ಲಿಖಿತ ದೂರು ನೀಡಿ,  ಸ್ವಿಕೃತಿಯನ್ನು ಪಡೆಯಿರಿ.

ಗಮನಿಸಿ: ದೂರು ನೀಡುವ ಮುನ್ನ
1) ಅರ್ಜಿಗಳು, ಕಾಂಟ್ರ್ಯಾಕ್ಟ್ ನೋಟ್‌ಗಳು (ಕರಾರು ಪತ್ರ),  ಅಕೌಂಟ್ ಸ್ಟೇಟ್‌ಮೆಂಟ್, ಇ ಮೇಲ್, ಕಾಗದ ಪತ್ರಗಳನ್ನು ಸರಿಯಾಗಿ ಸಂಗ್ರಹಿಸಬೇಕು.
2) ಸಮಯ ವ್ಯರ್ಥ ಮಾಡದೇ ಬೇಗನೆ ದೂರು ನೀಡಿ. ಸರಿಯಾದ ವ್ಯಾಪ್ತಿಗೆ ಒಳಪಡುವ ಪ್ರಾಧಿಕಾರವನ್ನು ಸಂಪರ್ಕಿಸಿ.

ಹಂತ 2: ಷೇರು ವಿನಿಮಯ ಕೇಂದ್ರಕ್ಕೆ ದೂರು:
ದೂರುಗಳು ಷೇರು ದಲ್ಲಾಳಿಗಳು, ಕಂಪೆನಿ ಅಥವಾ ಡಿಪಾಸಿಟರಿ ಪಾರ್ಟಿಸಿಪೆಂಟ್ಸ್ ಬಗ್ಗೆ ಇದ್ದರೆ,  ಸಂಬಂಧಪಟ್ಟ ಷೇರು ವಿನಿಮಯ ಕೇಂದ್ರದ ಹೂಡಿಕೆದಾರರ ಸೇವಾ ಘಟಕಕ್ಕೆ ದೂರು ದಾಖಲಿಸಬೇಕು.

ಹಂತ 3: ಸೆಬಿಗೆ ದೂರು:
1) ಹೂಡಿಕೆದಾರರು ತಮ್ಮ ದೂರುಗಳನ್ನು ಸೆಬಿಗೆ investorcomplaints@sebi.gov.in ಗೆ ನೀಡಬಹುದು.
2) ಹೂಡಿಕೆದಾರರು ಯಾವುದೇ ಸಹಾಯಕ್ಕಾಗಿ ಸೆಬಿಯನ್ನು asksebi@sebi.gov.inನಲ್ಲಿ ಸಂಪರ್ಕಿಸಬಹುದು ಅಥವಾ ಸಹಾಯವಾಣಿ 1800 266 7575 ಸಂಖ್ಯೆಗೆ ಕರೆ ಮಾಡಬಹುದು. 
ಈ ಸಹಾಯವಾಣಿಗೆ ಮಾಡುವ ಕರೆಗಳಿಗೆ ದೂರವಾಣಿ ಶುಲ್ಕ ಇರುವುದಿಲ್ಲ.  ಸಹಾಯವಾಣಿ ಕನ್ನಡ ಸೇರಿದಂತೆ 1* ಭಾಷೆಗಳಲ್ಲಿ, ಬೆಳಿಗ್ಗೆ 9.30ರಿಂದ ಸಂಜೆ 7.30ರವರೆಗೆ ಲಭ್ಯವಿರುತ್ತದೆ.
3) ದೂರುಗಳನ್ನು ಸೆಬಿ ಅಂತರ್ಜಾಲ http://SCORES.gov.inನಲ್ಲಿ ದಾಖಲಿಸಬಹುದು.  ಈ ಅಂತರ್ಜಾಲ ಹೂಡಿಕೆದಾರರ ದೂರುಗಳಿಗಾಗಿ ವಿಶೇಷವಾಗಿ ಮೀಸಲಿಡಲಾಗಿದೆ. 

SCORES (SEBI complaint Redress system) ಈ ಅಂತರ್ಜಾಲ ತಾದ ವಿಶೇಷಗಳು ಕೆಳಗಿನಂತಿವೆ
ದೂರು ದಾಖಲಾದ ತಕ್ಷಣ ದೂರು ನೋಂದಣಿ ಸಂಖ್ಯೆಯನ್ನು ಇಮೇಲ್ ಹಾಗೂ ಮೆಸೇಜ್ ಮುಖಾಂತರ ದೂರುದಾರರಿಗೆ ದೊರಕುತ್ತದೆ. ಹೂಡಿಕೆದಾರರು ದೂರಿನ ಬಗ್ಗೆ ಪ್ರಗತಿ ಪರಿಶೀಲನೆಯನ್ನು ಅಂತರ್ಜಾಲದಲ್ಲಿ ವೀಕ್ಷಿಸಬಹುದು.
ಹೂಡಿಕೆದಾರರಿಗೆ ಅಂತರ್ಜಾಲದ ಅರಿವಿಲ್ಲದಿದ್ದರೆ ಲಿಖಿತ ದೂರನ್ನು ಹತ್ತಿರದ ಸೆಬಿ ಕಚೇರಿಗೆ ನೀಡಬಹುದು.  ಈ ದೂರುಗಳನ್ನು ಅಂತರ್ಜಾಲದಲ್ಲಿ ಸ್ಕ್ಯಾನ್ ಮಾಡಲಾಗುತ್ತದೆ.

ಸೆಬಿಗೆ ದೂರು - ಪರಿಹಾರ
ದೂರು ದಾಖಲಿಸಿದ ನಂತರದ ಕೆಲವು ದಿನಗಳಲ್ಲಿಯೇ ಸಂಬಂಧಪಟ್ಟ ಸಂಸ್ಥೆ ಅಥವಾ ಕಂಪೆನಿಯು ದೂರಿನ ಬಗ್ಗೆ ಸ್ಪಂದಿಸಬೇಕು. ಕೆಲವು ಪ್ರಕರಣಗಳಲ್ಲಿ ದೂರು ಇತ್ಯರ್ಥವಾಗುವುದಿಲ್ಲ. ಇದಕ್ಕೆ ಕಾರಣ ಸಂಬಂಧಪಟ್ಟ ಸಂಸ್ಥೆ ಅಥವಾ ಕಂಪೆನಿ ದೂರಿಗೆ ಸ್ಪಂದಿಸದೇ ಇರುವುದು.  ಸರಿಯಾದ ದಾಖಲೆಗಳು ಇಲ್ಲದೇ ಇರುವುದು, ಹೆಚ್ಚಿನ ಮಾಹಿತಿ ಬೇಕಾಗಿರುವುದು,  ಸಕಾರಾತ್ಮಕ ಉತ್ತರ ನೀಡದೇರುವುದು ಅಥವಾ ಕಂಪೆನಿ ಮುಚ್ಚಿರಬಹುದು ಅಥವಾ ನಿಗದಿತ ವಿಳಾಸದಿಂದ ಕಣ್ಮರೆಯಾಗಿರಬಹುದು.  ಅಂತಹ ಸನ್ನಿವೇಶದಲ್ಲಿ ಸೆಬಿ ಗ್ರಾಹಕರ ದೂರಿಗೆ ಸ್ಪಂದಿಸದ ಈ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತದೆ.

ಷೇರು ಮಾರುಕಟ್ಟೆ ಹೊರತುಪಡಿಸಿದ ದೂರುಗಳನ್ನು ಈ ಕೆಳಕಂಡ ಸಂಸ್ಥೆಗಳಿಗೆ ಸಲ್ಲಿಸಬೇಕು:

ಷೇರು ವಿನಿಮಯ ಕೇಂದ್ರಗಳಲ್ಲಿ ಹೂಡಿಕೆದಾರರ ಕುಂದು ಕೊರತೆ ನಿವಾರಣೆ ವಿಧಾನ:
ಹೂಡಿಕೆದಾರರ ದೂರುಗಳು ನೇರವಾಗಿ ಅಥವಾ SCORESS ಮುಖಾಂತರ ಷೇರು ವಿನಿಮಯ ಕೇಂದ್ರದ ಹೂಡಿಕೆದಾರರ ಸೇವಾ ಘಟಕಕ್ಕೆ ತಲುಪುತ್ತವೆ. ಷೇರು ವಿನಿಮಯ ಕೇಂದ್ರಗಳು 15 ದಿನಗಳೊಳಗೆ ದೂರುಗಳನ್ನು ಇತ್ಯರ್ಥಪಡಿಸಬೇಕು.

ಇತ್ಯರ್ಥವಾಗದ ದೂರುಗಳು ಹಾಗೂ ಮೇಲ್ಮನವಿಯನ್ನು ಷೇರು ವಿನಿಯಮ ಕೇಂದ್ರದ ಹೂಡಿಕೆದಾರರ ಕುಂದು- ಕೊರತೆ ನಿವಾರಣ ಸಮಿತಿಗೆ ಸಲ್ಲಿಸಬಹುದು.  ಸಮಿತಿಯು  15  ದಿನಗಳೊಳಗೆ ದೂರುಗಳನ್ನು ಇತ್ಯರ್ಥಪಡಿಸಬೇಕು. ಇಲ್ಲವಾದಲ್ಲಿ ದೂರಿನ ಮೊತ್ತವನ್ನು ನಿರ್ಧರಿಸಿ,  ಹೂಡಿಕೆದಾರರ ರಕ್ಷಣೆ ನಿಧಿಯಲ್ಲಿ ಕಾಯ್ದಿರಿಸಲಾಗುತ್ತದೆ. ಬ್ರೋಕರ್‌ಗಳು ನ್ಯಾಯ ಪಂಚಾಯ್ತಿ ನಿರ್ಣಯಕ್ಕೆ ಸಮ್ಮತಿಸುತ್ತಾರೆ ಎಂದು ಏಳು ದಿನಗಳೊಳಗೆ ತಿಳಿಸಬೇಕು.  ಇಲ್ಲವಾದಲ್ಲಿ ಕಾಯ್ದಿರಿಸಿದ ಹಣವನ್ನು ಹೂಡಿಕೆದಾರರಿಗೆ ನೀಡಲಾಗುತ್ತದೆ.  ನ್ಯಾಯ ಪಂಚಾಯ್ತಿಗೆ ಸಮ್ಮತಿಸಿದರೆ, ಕಾಯ್ದಿರಿಸಿದ ಹಣದ ಶೇ 50ರಷ್ಟು ಅಥವಾ ₨75 ಸಾವಿರ... ಈ ಎರಡರಲ್ಲಿ ಯಾವುದು ಕಡಿಮೆಯೊ ಅಷ್ಟನ್ನು ಹೂಡಿಕೆದಾರರಿಗೆ ನೀಡಲಾಗುತ್ತದೆ.

ಪಂಚಾಯ್ತಿಯಲ್ಲಿ ದೂರು ಇತ್ಯರ್ಥವಾದರೆ, ಉಳಿದ ಶೇ 50ರಷ್ಟು ಹಣವನ್ನು ಹೂಡಿಕೆದಾರರಿಗೆ ನೀಡಲಾಗುತ್ತದೆ. ಇಲ್ಲವಾದಲ್ಲಿ ಪ್ರಕರಣ ಪಂಚಾಯ್ತಿ ಮೇಲ್ಮನವಿ ಪ್ರಾಧಿಕಾರಕ್ಕೆ ಹೋಗುತ್ತದೆ.

ಪಂಚಾಯ್ತಿ ಮೇಲ್ಮನವಿ ಪ್ರಾಧಿಕಾರದಲ್ಲಿ ದೂರು ನಿವಾರಣೆಯಾಗದಿದ್ದರೆ ಶೇ 75ರಷ್ಟು ಹಣ ದೂರುದಾರರಿಗೆ ನೀಡಿ, ಪ್ರಕರಣ ನ್ಯಾಯಾಲಯಕ್ಕೆ ತಲುಪುತ್ತದೆ. ನ್ಯಾಯಾಲಯದಲ್ಲಿ ಅಂತಿಮ ತೀರ್ಮಾನ ಹೊರಬೀಳುವ ಮೂಲಕ ದೂರು ಇತ್ಯರ್ಥಗೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT