ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಳೆತ್ತುವ ಕಾಮಗಾರಿ: ಟಿವಿಸಿಸಿ ತನಿಖೆ

Last Updated 30 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜಕಾಲುವೆಗಳ ಹೂಳೆತ್ತಲು ನಡೆಸ­­ಲಾಗಿರುವ ರೂ. 8 ಕೋಟಿ ಮೊತ್ತದ ಕಾಮಗಾ­ರಿ­ಗಳ ಕುರಿತು ಬಂದಿರುವ ದೂರುಗಳಿಗೆ ಸಂಬಂಧಿ­ಸಿದಂತೆ ಆಯುಕ್ತರ ತಾಂತ್ರಿಕ ತನಿಖಾ ಕೋಶದಿಂದ (ಟಿವಿಸಿಸಿ) ಸಮಗ್ರ ತನಿಖೆ ನಡೆಸಿ, ಮುಂದಿನ ಕೌನ್ಸಿಲ್ ಸಭೆಯಲ್ಲಿ ವಿವರವಾದ ವರದಿ ಮಂಡಿಸ­ಬೇಕು’ ಎಂದು ಮೇಯರ್‌ ಎನ್‌. ಶಾಂತಕುಮಾರಿ ಅವರು ಆಯುಕ್ತರಿಗೆ ಸೂಚನೆ ನೀಡಿದರು.

ಹೂಳೆತ್ತುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೌನ್ಸಿಲ್ ಸಭೆಯಲ್ಲಿ ಮಂಗಳವಾರ ಹಲವು ಸದಸ್ಯರಿಂದ ಆರೋಪಗಳು ಕೇಳಿಬಂದ ಹಿನ್ನೆಲೆ­ಯಲ್ಲಿ ಮೇಯರ್‌ ಈ ಆದೇಶವನ್ನು ನೀಡಿದರು.

ನಾಗಪುರ ವಾರ್ಡ್‌ ಸದಸ್ಯ ಎಸ್‌. ಹರೀಶ್‌, ‘2010–11ರಿಂದ ಇದುವರೆಗೆ ರಾಜಕಾಲುವೆಗಳ ಹೂಳು ತೆಗೆದ ಕಾಮಗಾರಿಗಳ ವಿವರ ನೀಡಬೇಕು. ಹೂಳು ತೆಗೆದಿದ್ದನ್ನು ಯಾವೊಬ್ಬ ಪಾಲಿಕೆ ಸದಸ್ಯರೂ ನೋಡಿಲ್ಲ. ಹಾಗಿದ್ದಾಗ ರೂ. 8 ಕೋಟಿ ಹೇಗೆ ವೆಚ್ಚವಾಯಿತು’ ಎಂದು ಅವರು ಪ್ರಶ್ನಿಸಿದರು.

‘ಕೌನ್ಸಿಲ್‌ ಸಭೆ ಹಾಗೂ ಸ್ಥಾಯಿ ಸಮಿತಿ ಗಮನಕ್ಕೆ ತಾರದೆ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋ­ದನೆ ನೀಡಿದ್ದು ಹೇಗೆ? ನಿಯಮಾವಳಿ­ಯಲ್ಲಿ ಅವಕಾಶ ಇಲ್ಲದಿದ್ದರೂ ಹೂಳು ತೆಗೆಯುವ ಕಾಮಗಾರಿಯನ್ನು ತುಂಡು ಗುತ್ತಿಗೆಗೆ ಕೊಟ್ಟಿದ್ದೇಕೆ’ ಎಂದು ಅವರು ಕೇಳಿದರು.

ಹರೀಶ್‌ ಅವರ ಆಕ್ಷೇಪಕ್ಕೆ ಸ್ಪಷ್ಟನೆ ನೀಡಿದ ಆಯುಕ್ತ ಎಂ.ಲಕ್ಷ್ಮೀನಾರಾಯಣ, ‘ನಿಯಮಾವಳಿ ಪ್ರಕಾರ, ರೂ. 60 ಲಕ್ಷ ಮೊತ್ತದ ಕಾಮ­ಗಾರಿ­ವರೆಗೂ ಆಯು­ಕ್ತರಿಗೆ ಆಡಳಿತಾತ್ಮಕ ಅನುಮೋ­ದನೆ ನೀಡುವ ಅಧಿಕಾರ ಇದೆ. ಆ ಅಧಿಕಾರ ಬಳಸಿ­ಕೊಂಡು ನಾನೇ ಅನು­ಮೋದನೆ ನೀಡಿದ್ದೇನೆ’ ಎಂದು ತಿಳಿಸಿದರು.

‘ಹಾಗಾದರೆ ಕಾಮಗಾರಿ ನಡೆದಿದ್ದು ಎಲ್ಲಿ’ ಎಂದು ಹರೀಶ್‌ ಹಾಗೂ ನಂದಿನಿ ಬಡಾವಣೆ ವಾರ್ಡ್‌ ಸದಸ್ಯ ಎಂ. ನಾಗರಾಜ್‌ ಪ್ರಶ್ನಿಸಿದರು. ಬೃಹತ್‌ ನೀರು­ಗಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಎಚ್‌.ಸಿ. ಅನಂತಸ್ವಾಮಿ ಅವರಿಗೆ ವಿವರಣೆ ನೀಡಲು ಮೇಯರ್‌ ಸೂಚಿಸಿದರು. ಆದರೆ, ‘ಕಾಮಗಾರಿ ನಡೆದೇ ಇಲ್ಲ’ ಎಂದು ಸದಸ್ಯರು ದೂರಿದರು. ಆಗ ಮೇಯರ್‌ ತನಿಖೆಗೆ ಆದೇಶಿಸಿದರು.

ಕೆರೆಗಳಿಗೆ ನೀರೇ ಹೋಗಲ್ಲ: ‘ಮಳೆ ಬಂದಾಗ ನಗರ­ದಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಲು ಮುಖ್ಯ ಕಾರಣ ಮಳೆ ನೀರು ಕೆರೆಗೆ ಹರಿಯದೇ ಇರುವುದು’ ಎಂದು ವಿಧಾನ ಪರಿಷತ್‌ ಸದಸ್ಯ ಅಶ್ವತ್ಥನಾರಾಯಣ ಪ್ರತಿಪಾದಿಸಿದರು.

‘ಪ್ರತಿ ಸಲ ಮಳೆ ಬಂದಾಗಲೂ ಗಾಳಿ ಆಂಜ­ನೇಯ ದೇವಸ್ಥಾನದ ಬಳಿ ಪ್ರವಾಹದ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಕೆಂಪಾಂಬುಧಿ ಕೆರೆಯಲ್ಲಿ ನೀರು ನಿಲ್ಲುವು­ದಿಲ್ಲ. ತಿಮ್ಮನಹಳ್ಳಿ ಕೆರೆಯನ್ನು ಪಾರ್ಕ್‌ ಮಾಡಲಾ­ಗಿದೆ. ರಾಜಾಜಿ­ನಗರ, ಶ್ರೀರಾಂಪುರ, ದೀಪಾಂಜಲಿ­ನಗರ ಹಾಗೂ ಕೆಂಪಾಂಬುಧಿ ಕೆರೆ ನೀರು ಗಾಳಿ ಆಂಜ­ನೇಯ ದೇವಸ್ಥಾನದ ಬಳಿ ಸಂಗಮ ಆಗುವುದ­ರಿಂದ ಪ್ರವಾಹ ಉಂಟಾಗುತ್ತದೆ’ ಎಂದು ವಿವರಿಸಿದರು.

‘ಲಾಲ್‌ಬಾಗ್‌, ಯಡೆಯೂರು, ಸ್ಯಾಂಕಿ, ಅಗರ ಸೇರಿದಂತೆ ಹಲವು ಕೆರೆಗಳಿಗೆ ಮಳೆ ನೀರು ಹರಿಯು­ತ್ತಲೇ ಇಲ್ಲ. ಬಿಡಿಎ ಅವೈಜ್ಞಾನಿಕವಾಗಿ ಬಡಾವಣೆ ರೂಪಿಸಿದ್ದರಿಂದ ಸಮಸ್ಯೆ ಬಿಗಡಾಯಿಸಿದೆ’ ಎಂದು ಹೇಳಿದರು. ‘ಗ್ರಾಮೀಣ ಭಾಗದಲ್ಲಿ ಮಳೆ ಅನಾಹು­ತಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಪರಿಹಾರ ಸಿಗು­ತ್ತದೆ. ಬೆಂಗಳೂರಿನಲ್ಲಿ ಆಗಿರುವ ಅನಾಹುತಕ್ಕೂ ಕೇಂದ್ರದಿಂದ ನೆರವು ಪಡೆಯ­ಬೇಕು. ಶಾಶ್ವತ ಪರಿಹಾರ ರೂಪಿಸಬೇಕು’ ಎಂದು ಆಗ್ರಹಿಸಿದರು.

ಶಾಸಕ ಗೋಪಾಲಯ್ಯ, ‘ವೃಷಭಾವತಿ ಕಣಿವೆ­ಯಲ್ಲಿ ರಾಜಕಾಲುವೆ ತಡೆಗೋಡೆಗಳು ಉರುಳಿ ಬಿದ್ದಿದ್ದು, ದುರಸ್ತಿಗೆ ಅಧಿಕಾರಿಗಳು ಕ್ರಮವನ್ನೇ ಕೈಗೊಂಡಿಲ್ಲ’ ಎಂದು ದೂರಿದರು. ಅದಕ್ಕೆ ಪ್ರತಿಕ್ರಿ­ಯಿ­­ಸಿದ ಆಯುಕ್ತರು, ‘ರಾಜ್ಯ ಸರ್ಕಾರದಿಂದ ಈಗ 50 ಕೋಟಿ ನೆರವು ಸಿಗುತ್ತಿದ್ದು, ಆ ಹಣದಲ್ಲಿ ತಡೆ­ಗೋಡೆ ನಿರ್ಮಾಣ ಮಾಡಲಾಗುತ್ತದೆ’ ಎಂದು ಹೇಳಿದರು.

ಶಾಂತಲಾನಗರ ವಾರ್ಡ್‌ನ ಕೆ.ಶಿವಕುಮಾರ್‌, ‘ರಾಜಕಾಲುವೆ ಮೇಲೆ ಖಾಸಗಿ ಹೋಟೆಲ್‌ ಒಂದಕ್ಕೆ ಸ್ಲ್ಯಾಬ್‌ ಹಾಕಲು ಅವಕಾಶ ನೀಡಿದ್ದರಿಂದ ನೀರು ಹರಿಯಲು ಜಾಗ ಇಲ್ಲದೆ ವಿಠಲ ಮಲ್ಯ ರಸ್ತೆಯಲ್ಲಿ ಪ್ರವಾಹ ಉಂಟಾಯಿತು. ಕಾರು ಸಹ ಅದರಲ್ಲಿ ತೇಲುವಂತಾಯಿತು’ ಎಂದು ದೂರಿ­ದರು. ಸ್ಥಳ ಪರಿಶೀಲನೆ ಮಾಡಿ ನಿರ್ಧಾರ ತೆಗೆದು­ಕೊಳ್ಳ­ಲಾಗುವುದು ಎಂದು ಮೇಯರ್‌ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT