ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಳೆತ್ತುವ ನೆಪದಲ್ಲಿ ಮರಳು ಗಣಿಗಾರಿಕೆ?

ತೀರ್ಥಹಳ್ಳಿ: ತುಂಗಾ ನದಿಯ ಹಿನ್ನೀರಿನಲ್ಲಿ ಮರಳು ತೆಗೆಯುವ ಯೋಜನೆಗೆ ಸಿದ್ಧತೆ
Last Updated 25 ಮೇ 2016, 10:43 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ತುಂಗಾ ನದಿಯ ಹಿನ್ನೀರಿನಲ್ಲಿ ಶೇಖರಣೆಗೊಂಡ ಮರಳನ್ನು ತೆಗೆಯಲು ಹೊಸ ಯೋಜನೆ ರೂಪಿಸಲಾಗಿದೆ. ಮರಳು ಅಭಾವ ನೀಗಿಸಲು ಹೂಳೆತ್ತುವ ನೆಪದಲ್ಲಿ ಮರಳು ತೆಗೆಯಲು ಸಿದ್ಧತೆ ನಡೆಸಲಾಗಿದ್ದು, ಸಾರ್ವಜನಿಕ ಚರ್ಚೆಗೆ ಗುರಿಯಾಗಿದೆ.

ತಾಲ್ಲೂಕಿನ ಮಂಡಗದ್ದೆ ಸಮೀಪ ತುಂಗಾ ನದಿಯ ಹಿನ್ನೀರಿನಲ್ಲಿ ಹುದುಗಿರುವ  ಕೋಟ್ಯಂತರ ರೂಪಾಯಿ ಮೌಲ್ಯದ ಮರಳನ್ನು ಮೇಲಕ್ಕೆತ್ತಲು ಪ್ರಭಾವ ಬಳಸಿ ಯೋಜನೆ ರೂಪಿಸಲಾಗಿದೆ. ಈ ಸಂಬಂಧ ಲೋಕೋಪಯೋಗಿ ಇಲಾಖೆ ಪ್ರಸ್ತಾವನೆಯಂತೆ ಜಲಸಂಪನ್ಮೂಲ ಇಲಾಖೆ, ಸಮೀಕ್ಷೆ ನಡೆಸಿ ಕಾರ್ಯರೂಪಕ್ಕೆ ತರಲು ಮುಂದಾಗಿದೆ.

ತುಂಗಾ ನದಿಯ ಹಿನ್ನೀರಿನ ಪ್ರದೇಶದಲ್ಲಿ ಮಳೆಗಾಲದಲ್ಲಿ ಸಂಗ್ರಹಗೊಂಡ ಮರಳನ್ನು ತೆಗೆಯಲು ಹೂಳೆತ್ತುವ ನೆಪವನ್ನು ಮುಖ್ಯ ಮಾಡಿಕೊಳ್ಳಲಾಗಿದೆ. ಹಿನ್ನೀರು ಪ್ರದೇಶವನ್ನು ಶುದ್ಧಗೊಳಿಸುವ ಹೆಸರಿನಲ್ಲಿ ಮರಳು ತೆಗೆಯುವ ಯೋಜನೆಗೆ ಜಿಲ್ಲಾಡಳಿತದಿಂದ ಅನುಮತಿ ಪಡೆಯುವ ಪ್ರಯತ್ನವನ್ನು ನಡೆಸಲಾಗುತ್ತಿದೆ. ರಾಜ್ಯದಲ್ಲಿ ಮರಳಿನ ಅಭಾವವನ್ನು ವರವಾಗಿಸಿಕೊಳ್ಳುವಲ್ಲಿ ಕೆಲವು ಪ್ರಭಾವಿಗಳು ಈ ಕಾರ್ಯಕ್ಕೆ ಕೈಹಾಕಿದ್ದು ಶುಕ್ರವಾರ ಮಂಡಗದ್ದೆಯ ತುಂಗಾ ನದಿ ಹಿನ್ನೀರಿನ ಪ್ರದೇಶದ ಸಮೀಕ್ಷೆ ನಡೆಸಲಾಗಿದೆ.

ಹೊಸ ಮರಳು ನೀತಿಯಲ್ಲಿ  ಅಕ್ರಮಗಳನ್ನು ತಡೆಗಟ್ಟಲು ಸಾಧ್ಯವಾಗದೇ ಇರುವ ಸಂದರ್ಭದಲ್ಲಿ ನದಿಯಲ್ಲಿ ಹೂತಿರುವ ಮರಳನ್ನು ಯಂತ್ರಗಳ ಮೂಲಕ ಹೊರ ತೆಗೆದು ಬಳಕೆ ಮಾಡಿಕೊಳ್ಳಲು ಯೋಚಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಯನ್ನು ಸಾರ್ವಜನಿಕರು, ಪರಿಸರ ಪ್ರೇಮಿಗಳು ಮುಂದಿಟ್ಟಿದ್ದಾರೆ.

ರಾಜ್ಯದ ಆಯ್ದ ಕಾಮಗಾರಿಗಳಿಗೆ  ಎಂಸ್ಯಾಂಡ್‌ ಬಳಕೆ ಮಾಡುವುದಕ್ಕೆ ಅವಕಾಶ ಇಲ್ಲದೇ ಇರುವುದರಿಂದ  ಮರಳು ಬಳಕೆ ಮಾಡಬೇಕಿದ್ದು ಅಷ್ಟು ಪ್ರಮಾಣದ ಮರಳು ಈಗ ಪಿಡಬ್ಯೂಡಿ ಇಲಾಖೆ ನಿಗಧಿ ಪಡಿಸಿರುವ ಮರಳು ಕ್ವಾರೆಗಳಲ್ಲಿ ಲಭ್ಯವಾಗುತ್ತಿಲ್ಲ. ಮರಳಿನ ಅಭಾವದ ನೆಪವನ್ನು ವರವಾಗಿಸಿಕೊಳ್ಳುವ ಮೂಲಕ ಜೀವನದಿ ತುಂಗೆಯ ಒಡಲನ್ನು ಬಗೆಯಲು ಸಂಚು ರೂಪಿಸಲಾಗಿದೆ ಎಂಬ ಆರೋಪ  ಕೇಳಿ ಬಂದಿದೆ.

ಗಾಜನೂರಿನಲ್ಲಿನ ತುಂಗಾ ಆಣೆಕಟ್ಟನ್ನು ಎತ್ತರಿಸಿದ ನಂತರ ಹಿನ್ನೀರಿನಲ್ಲಿ ಹುದುಗಿರುವ ಪ್ರಮುಖ ಮರಳು ಕ್ವಾರೆ ಮಂಡಗದ್ದೆಯಲ್ಲಿದ್ದು ಮಳೆಗಾಲದಲ್ಲಿ ತುಂಗಾ ನದಿಯ ಹಿನ್ನೀರಿಗೆ ಮಳೆ ನೀರು ಬಂದು ಸೇರುವಲ್ಲಿ ಶೇಖರಣೆಗೊಂಡ ಮರಳನ್ನು ಗುರಿಯಾಗಿರಿಸಿಕೊಳ್ಳಲಾಗಿದೆ. ಪರಿಸರ ಇಲಾಖೆ, ಸಾರ್ವಜನಿಕರ ವಿರೋಧವನ್ನು ಮೀರಿ ಮರಳು ತೆಗೆಯಲು ಆರಂಭಿಸಿದರೆ ಮಳೆಗಾಲದಲ್ಲಿಯೂ ಮರಳು ಗಣಿಗಾರಿಕೆ ನಡೆಯುವಂತಾಗಲಿದ್ದು ಮಂಡಗದ್ದೆ ಮಿನಿ ಬಳ್ಳಾರಿಯಂತಾಗಲಿದೆ ಎಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಮಂಡಗದ್ದೆಯ ಪಕ್ಷಿಧಾಮದ ಸಮೀಪದಲ್ಲಿಯೇ ಮರಳನ್ನು ತೆಗೆಯಲು ಯೋಚಿಸಿದ್ದು ಪಕ್ಷಿಧಾಮಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ. ಹೂಳೆತ್ತುವ ಜೊತೆಗೆ ಹೂಳಿನಲ್ಲಿರುವ ಮರಳನ್ನು ಮಾತ್ರ ಬಳಕೆ ಮಾಡಿಕೊಳ್ಳಲಾಗುವುದು. ಇದರಿಂದ ಮರಳನ್ನು ಬಳಕೆ ಮಾಡಿಕೊಂಡಂತಾಗುತ್ತದೆ. ಸರ್ಕಾರದ ಬೊಕ್ಕಸಕ್ಕೂ ಹಣ ಸಂದಾಯವಾಗುತ್ತದೆ ಎಂದು ಜನರಿಗೆ ಮಾಹಿತಿ ನೀಡುವ ಅಧಿಕಾರಿಗಳು ನೀರೊಳಗೆ ಶೇಖರಣೆಗೊಂಡ ಮರಳನ್ನು ತೆಗೆಯಲು ಯೋಜನೆ ರೂಪಿಸಿರುವುದು ಸ್ಥಳೀಯ ಜನರಲ್ಲಿ ಅಚ್ಚರಿ ಮೂಡಿಸಿದೆ.

ಮರಳು ತೆಗೆಯುವ  ಸಿದ್ಧತೆ ಸಾರ್ವಜನಿಕ ಚರ್ಚೆಗೆ ಒಳಗಾಗಿದೆ. ಬೃಹತ್‌ ಗಾತ್ರದ ಯಂತ್ರಗಳನ್ನು ಬಳಸಿ ನೀರಿನ ಆಳದಲ್ಲಿ ಹುದುಗಿರುವ ಮರಳನ್ನು ತೆಗೆಯುವುದರಿಂದ ಸುತ್ತಲಿನ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿರುವ ಮರಳು ಮೇಲುಸ್ತುವಾರಿ ಸಮಿತಿ, ಪರಿಸರ ಇಲಾಖೆ ಇಲ್ಲಿನ ಪ್ರದೇಶದಲ್ಲಿ ಮರಳನ್ನು ಹೊರತೆಗೆಯಲು ಅನುಮತಿ ನೀಡಲಿದೆಯೇ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ.

‘ಪಕ್ಷಿಧಾಮದ ಸಮೀಪ ಮರಳು ಕ್ವಾರೆಗೆ ಅವಕಾಶ ಕಲ್ಪಿಸಿದರೆ ಪಕ್ಷಿಧಾಮಕ್ಕೆ ಧಕ್ಕೆಯಾಗುತ್ತದೆ. ಜೂನ್‌ ನಂತರ ಹೆಚ್ಚು ಪಕ್ಷಿಗಳು ಇಲ್ಲಿಗೆ ಬರುವುದರಿಂದ ಮಳೆಗಾಲದಲ್ಲಿ ಮರಳು ಗಣಿಗೆ ಅವಕಾಶ ನೀಡಬಾರದು’ ಎಂದು ಸ್ಥಳೀಯರಾದ ಮಂಜಪ್ಪ ತಿಳಿಸಿದ್ದಾರೆ.

‘ನೀರಾವರಿ ಇಲಾಖೆ ಸಮಿತಿ ಮೂಲಕ ಸ್ಥಳ ಸಮೀಕ್ಷೆ ನಡೆಸಿದೆ.  ಸಾಧಕ ಬಾಧಕಗಳನ್ನು ಪರಿಶೀಲಿಸಿ ನೀರಾವರಿ ಇಲಾಖೆ ಮರಳು ತೆಗೆಯುವಂತೆ ತೀರ್ಮಾನ ತೆಗೆದುಕೊಂಡು ಅದರ ಜವಾಬ್ದಾರಿಯನ್ನು ಪಿಡಬ್ಲ್ಯೂಡಿ ಇಲಾಖೆಗೆ ನೀಡಿದರೆ ನಿರ್ವಹಿಸಲಾಗುತ್ತದೆ’ ಎಂದು ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಎಂಜಿನಿಯರ್‌ ಬಿ.ಎಸ್‌.ಬಾಲಕೃಷ್ಣ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT