ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವಿನ ಹಾದಿಯಲ್ಲಿ ಕರಗದ ಮೆರವಣಿಗೆ

Last Updated 15 ಏಪ್ರಿಲ್ 2014, 20:45 IST
ಅಕ್ಷರ ಗಾತ್ರ

ಬೆಂಗಳೂರು: ಚೈತ್ರ ಪೂರ್ಣಿಮೆಯ ರಾತ್ರಿಯಲ್ಲಿ ಮಲ್ಲಿಗೆ ಹೂವಿನ ಮಳೆಗರೆ­ಯು­ತ್ತಿದ್ದ ಭಕ್ತ ಸಮೂಹ. ‘ಅಲಲೋ ಡಿಕ್ ಡಿ’ ಎಂಬ ವೀರೋದ್ಘಾರ ಮಾಡು­­ತ್ತಿದ್ದ ವೀರಕುಮಾರರ ರಕ್ಷಣೆಯಲ್ಲಿ ದೇಗುಲದಿಂದ ಹೊರ ಬಂದ ಕರಗ. ಕರಗದ ದರ್ಶನ ಪಡೆದ ಭಕ್ತರಿಂದ ಶಕ್ತಿ ದೇವಿ ದ್ರೌಪದಿಗೆ ಜೈಕಾರ.

ವಿಶ್ವವಿಖ್ಯಾತ ‘ಬೆಂಗಳೂರು ಕರಗ’ಕ್ಕೆ ಮಂಗಳವಾರ ರಾತ್ರಿ ಲಕ್ಷಾಂತರ ಭಕ್ತರು ಸಾಕ್ಷಿಯಾದರು. ಅದ್ದೂರಿಯ ದ್ರೌಪದಿ­ದೇವಿ ಕರಗದ ಕ್ಷಣಗಳನ್ನು ಕಣ್ತುಂಬಿ­ಕೊಂಡ ಭಕ್ತರು ಧನ್ಯರಾದರು. ರಾಜ್ಯ ಹಾಗೂ ಹೊರ ರಾಜ್ಯದ ಸಾವಿರಾರು ಭಕ್ತರು ಕರಗದ ಅಪೂರ್ವ ದೃಶ್ಯ ನೋಡಿ ಪುಳಕಗೊಂಡರು.

ತಿಗಳರಪೇಟೆ ಧರ್ಮರಾಯ­ಸ್ವಾಮಿ ದೇವಸ್ಥಾನ­ದಲ್ಲಿ ರಾತ್ರಿ 1.40ಕ್ಕೆ ಧಾರ್ಮಿಕ ಶ್ರದ್ಧಾ­ಭಕ್ತಿ­ಯೊಂದಿಗೆ ಕರಗ ಆರಂಭವಾಯಿತು. ದ್ರೌಪದಿ ದೇವಿಯ ವೇಷಧಾರಿ­ಯಾಗಿದ್ದ ಎ.­ಜ್ಞಾನೇಂದ್ರ ಈ ವರ್ಷ ಐದನೇ ಬಾರಿ ಕರಗ ಹೊತ್ತರು.

ಧರ್ಮರಾಯ ಸ್ವಾಮಿಯ ರಥೋತ್ಸ­ವ­­ದೊಂದಿಗೆ ಕರಗ ಪ್ರದಕ್ಷಿಣೆ ಆರಂಭ­ವಾ­ಯಿತು. ಜ್ಞಾನೇಂದ್ರ ಅವರು ದೇವ­ರಿಗೆ ಪೂಜೆ ಸಲ್ಲಿಸುವ ಮೂಲಕ ಕರಗಕ್ಕೆ ಚಾಲನೆ ನೀಡಿದರು. ಸುಮಾರು 1,500 ­ವರ್ಷಗಳ ಐತಿಹ್ಯವಿದೆ ಎನ್ನಲಾ­ಗುವ ಕರಗ ಮಹೋತ್ಸವ ಅದ್ಧೂರಿ­ಯಿಂದ ನಡೆಯಿತು.

ಒಂದು ಕೈಯಲ್ಲಿ ಕತ್ತಿ, ಮತ್ತೊಂದು ಕೈಯಲ್ಲಿ ಮಂತ್ರದಂಡ ಹಿಡಿದಿದ್ದ ವೇಷ­ಧಾರಿಯ ಹಿಂದೆ, ಮೈಸೂರು ಪೇಟ ಧರಿಸಿದ್ದ ನೂರಾರು ವೀರಕುಮಾ­ರರು ಕತ್ತಿ ಹಿಡಿದು ಮೆರವಣಿಗೆ ಉದ್ದಕ್ಕೂ ಘೋಷ­ಣೆ­ ಕೂಗುತ್ತಾ ಮುನ್ನಡೆದರು.

ದುಂಡು ಮಲ್ಲಿಗೆ ಹೂವುಗಳಿಂದ ಅಲಂಕೃ­ತ­­ಗೊಂಡಿದ್ದ ಕರಗವು ತಿಗಳರ­ಪೇಟೆಯಿಂದ ಹೊರಟು ಕೃಷ್ಣಸ್ವಾಮಿ ದೇವಸ್ಥಾನ, ನಗರ್ತಪೇಟೆಯ ವೇಣು­ಗೋಪಾಲಸ್ವಾಮಿ, ಸಿದ್ದಣ್ಣಗಲ್ಲಿಯ ಭೈರೇ­ದೇವರ ದೇವಸ್ಥಾನ, ಕಬ್ಬನ್‌­ಪೇಟೆಯ ರಾಮಸೇವಾ ಮಂದಿರ, ಮೈಸೂರು ಬ್ಯಾಂಕ್ ವೃತ್ತದ ಕೋಟೆ ಆಂಜನೇಯ­ಸ್ವಾಮಿ ದೇವಸ್ಥಾನಗಳಲ್ಲಿ ಪೂಜೆ ಪಡೆಯಿತು.

ಅಕ್ಕಿಪೇಟೆಯ ತವಕ್ಕಲ್ ಮಸ್ತಾನ್ ಸಾಹೇಬರ ದರ್ಗಾದಲ್ಲಿ ಮೌಲ್ವಿಗಳು ಧೂಪ ಹಾಗೂ ಪನ್ನೀರು ಹಾಕಿ  ಕರಗವನ್ನು ಬರಮಾಡಿಕೊಂಡರು. ಮೌಲ್ವಿ­ಗಳಿಗೆ ನಿಂಬೆಹಣ್ಣಿನ ಪ್ರಸಾದ ನೀಡಿದ ನಂತರ ಕರಗ ಗಾಣಿಗರಪೇಟೆಯ ಚನ್ನರಾಯಸ್ವಾಮಿ ದೇವಸ್ಥಾನಕ್ಕೆ ಹೋಯಿತು.

ಕೆಂಪೇಗೌಡ ವೃತ್ತದ ಬಳಿಯ ಅಣ್ಣಮ್ಮದೇವಿ ದೇವಸ್ಥಾನದಲ್ಲಿ ಪೂಜೆ ಸ್ವೀಕರಿಸಿದ ಬಳಿಕ ಕರಗ ಬುಧವಾರ ಬೆಳಗಿನ ಜಾವ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಹಿಂದಿರುಗಿ ಗರ್ಭಗುಡಿ ಸೇರಿತು.

ಉತ್ಸವದ ಪ್ರಯುಕ್ತ ಧರ್ಮರಾಯಸ್ವಾಮಿ ದೇವಸ್ಥಾನ ರಸ್ತೆಯ ಇಕ್ಕೆಲಗಳಲ್ಲಿ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಕರಗ ಹೋಗುವ ಎಲ್ಲಾ ದೇವಸ್ಥಾನಗಳನ್ನು ಆಕರ್ಷಕವಾಗಿ ಸಿಂಗರಿಸಲಾಗಿತ್ತು. ರಸ್ತೆಗಳಲ್ಲಿ ಸಾಲುಗಟ್ಟಿ ನಿಂತಿದ್ದ ಭಕ್ತರು ಕರಗಕ್ಕೆ ಮಲ್ಲಿಗೆ ಹೂವು ಚೆಲ್ಲಿ ನಮಿಸಿದರು.

ರಾತ್ರಿ ಪೂರ್ತಿ ಅನ್ನದಾನ: ಕರಗ ನೋಡಲು ಬಂದಿದ್ದ ಜನರಿಗೆ ರಾತ್ರಿ ಇಡೀ ಅನ್ನದಾನ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಕರಗ ಸಾಗುವ ಮಾರ್ಗದುದ್ದಕ್ಕೂ ಪ್ರಸಾದ, ಕೋಸಂಬರಿ, ಕುಡಿ­ಯುವ ನೀರು, ಮಜ್ಜಿಗೆ ಹಾಗೂ ಪಾನಕ ವಿತರಿಸಿದರು.

‘ದರ್ಗಾದಲ್ಲಿ ಪೂಜೆಗೊಳ್ಳುವ ಏಕೈಕ ಆಚರಣೆ ಕರಗ. ತವಕ್ಕಲ್ ಮಸ್ತಾನ್ ಸಾಬ್ ದರ್ಗಾದಲ್ಲಿ ಸುಮಾರು 500 ವರ್ಷಗಳಿಂದಲೂ ಕರಗಕ್ಕೆ ಪೂಜೆ ಸಲ್ಲುತ್ತಿರುವ ಬಗ್ಗೆ ದಾಖಲೆಗಳಿವೆ. ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಇಂದೊಂದು ಉತ್ತಮ ನಿದರ್ಶನ’ ಎಂದು ಕರಗ ಮಹೋತ್ಸವ ಸಮಿತಿಯ ಸದಸ್ಯ ಕೆ.ಲಕ್ಷ್ಮಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT