ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯಸ್ಪರ್ಶಿ ಅನುಭವಗಳ ಸುಂದರ ಚಿತ್ರಣಗಳು

ರಂಗಭೂಮಿ
Last Updated 13 ಜುಲೈ 2015, 19:44 IST
ಅಕ್ಷರ ಗಾತ್ರ

ನೇರವಾಗಿ ಹೃದಯಕ್ಕೇ ತಟ್ಟುವ ಕೆಲವು ಕಥಾವಸ್ತುಗಳು ಸಾಹಿತ್ಯದ ಯಾವುದೇ ಪ್ರಕಾರದಲ್ಲಿರಲಿ ಅವು ಆಪ್ತವಾಗುತ್ತವೆ. ಆ ಬಗೆಯ ಹೃದ್ಯ ಅನುಭವ ಕಟ್ಟಿಕೊಟ್ಟ ನಾಟಕ ‘ಶ್ರದ್ಧಾ ಮತ್ತು ಸ್ಟೀಲ್ ಪಾತ್ರೆಗಳು’ ಇತ್ತೀಚೆಗೆ ‘ರಂಗಶಂಕರ’ದಲ್ಲಿ ‘ವಟೀ ಕುಟೀರ’ ತಂಡದಿಂದ ಪ್ರದರ್ಶಿತವಾಯಿತು.

ಲೇಖಕರಾದ ಶ್ರೀನಿವಾಸ ವೈದ್ಯ ಅವರ ಲಲಿತ ಪ್ರಬಂಧ ಆಧಾರಿತ ‘ಶ್ರದ್ಧಾ’ ಮತ್ತು ವಸುಧೇಂದ್ರರ ‘ಸ್ಟೈನ್‌ಲೆಸ್ ಸ್ಟೀಲ್ ಪಾತ್ರೆಗಳು’ಎಂಬ ಸಣ್ಣಕಥೆಯನ್ನು ಆಧರಿಸಿ ಕ್ರಮವಾಗಿ ಕಿರಣ್ ವಟಿ ಮತ್ತು ಗಣೇಶ್ ಶೆಣೈ ಪರಿಣಾಮಕಾರಿಯಾಗಿ ರಂಗಕ್ಕೆ ಅಳವಡಿಸಿದ್ದರು.

ಎರಡೂ ಕಥೆಗಳ ಸಾಮ್ಯತೆಯಿಂದ ಅವುಗಳನ್ನು ಒಂದೆಡೆ ಹೆಣೆದು ನಿರೂಪಣಾಧಾಟಿಯ ತಂತ್ರದಲ್ಲಿ ದೃಶ್ಯಗಳನ್ನು ಕಟ್ಟಿಕೊಡಲಾಗಿತ್ತು. ತಂದೆ-ತಾಯಿಯ ನೆನಪಿನೋತ್ಸವದಲ್ಲಿ ಹೃದಯ ಸ್ರವಿಸುವ ಮಾರ್ಮಿಕ ಅನುಭವಗಳ ಗಣಿಯೊಳಗಿನ ಬಂಗಾರದ ಅಂತಃಕರಣವನ್ನು ತೆರೆದು ತೋರಿಸುವ ಶ್ಲಾಘನೀಯ ಪ್ರಯತ್ನ ಇದಾಗಿತ್ತು.

‘ಶ್ರದ್ಧೆ’ಯಿಂದ ಅಪ್ಪನ ಶ್ರಾದ್ಧವನ್ನು ಮಾಡುವ ವಿದೇಶದಲ್ಲಿ ನೆಲೆಸಿದ ಮಗ, ಹೆತ್ತವರ ಕೊನೆಗಳಿಗೆಯಲ್ಲಿ ಸೇವೆಯಿರಲಿ, ಅಂತ್ಯಸಂಸ್ಕಾರವನ್ನೂ ಮಾಡದ ತಾನು ಕರ್ತವ್ಯಭ್ರಷ್ಟನಾದೆ ಎಂದು ಕೊರಗುತ್ತಾನೆ. ಅಪ್ಪನ ಧೋತರ, ಅಮ್ಮನ ಹದಿನೆಂಟುಮೊಳದ ಸೀರೆಗಳು ಅವರ ನೆನಪನ್ನು ಹರಡಿ, ಬಾಲ್ಯದ ನೆನಪುಗಳಲ್ಲಿ ಅವನು ಕೊಚ್ಚಿಹೋಗುತ್ತಾನೆ.

ತನ್ನ ಎಳೆತನದ ಮುಗ್ಧ ಮನಸ್ಸಿನ ಮೂಲಕ ಹಿಂದಿನ ಸಂಗತಿಗಳನ್ನೆಲ್ಲ ಪರಾಮರ್ಶಿಸುತ್ತ ಹೋಗುವನು. ಅಪ್ಪನ ಗಿರಿಜಾಮೀಸೆಗೆ ತಕ್ಕ ಗಾಂಭೀರ್ಯದ ಸ್ವಭಾವ, ಕಟ್ಟುನಿಟ್ಟಿನ ಶಿಸ್ತುಬದ್ಧತೆ, ಸಲುಗೆ ಕೊಡದ ಭಯದ ವಾತಾವರಣದಲ್ಲಿ ಬೆಳೆಸಿದ ಅವನ ಮಾತುಕತೆ, ನಡವಳಿಕೆಗಳನ್ನೆಲ್ಲ ವಿಶ್ಲೇಷಣೆ ಮಾಡುತ್ತ ಹೋಗುವ ನಿಟ್ಟಿನಲ್ಲಿ ಅವನ ಹಿಡಿತಕ್ಕೆ ಸಿಕ್ಕ ಮೃದುಮನಸ್ಸಿನ ಅಮ್ಮನ ಬಾಯಿಲ್ಲದ ಅಸಹಾಯಕ ಪರಿಸ್ಥಿತಿ ಕಣ್ಮುಂದೆ ಸುಳಿದು ಭಾವುಕನಾಗುತ್ತಾನೆ.

ವಿದ್ಯಾಭ್ಯಾಸದಲ್ಲಿ ಹಿಂದುಳಿದ ತನ್ನ ಬಗ್ಗೆ ತಂದೆಯ ಕಠೋರ ಧೋರಣೆ, ಒರಟುಮಾತು, ನಡವಳಿಕೆ ಕಂಡು ಅವರ ಬಗ್ಗೆ ಕೃದ್ಧನಾಗುತ್ತಾನೆ. ಆದರೆ ಕೆಲಸ ಅರಸಿ ಮುಂಬೈಗೆ ಹೊರಟ ಮಗನ ಬೆನ್ನು ನೇವರಿಸಿ, ದಾರಿಖರ್ಚಿಗೆ ಹಣವನ್ನು ಕೈಯಲ್ಲಿ ತುರುಕಿ, ರೈಲುಹತ್ತಿ ಅವನು ಮರೆಯಾಗುವವರೆಗೂ ತನ್ನ ಪಂಚೆಯ ಚುಂಗಿನಿಂದ ಕಣ್ಣೊತ್ತಿಕೊಳ್ಳುತ್ತಿದ್ದ ದೃಶ್ಯ ಮಗನ ಸ್ಮೃತಿಪಟಲದಿಂದ ಮರೆಯಾಗುವುದೇ ಇಲ್ಲ.  ಆಗಲೇ ಅವನಿಗೆ ತಂದೆಯ ಪ್ರೀತಿಯ ಅಂತಃಕರಣ ಹಿಡಿದಲುಗಿಸಿದ್ದು. ಅವರಿಂದ ದೂರ ದೂರ ಹೋದಷ್ಟೂ ಅವನು ಅಂತರಂಗದಲ್ಲಿ ಅವರಿಗೆ ಅಷ್ಟಷ್ಟು ಹತ್ತಿರವಾಗಿದ್ದು.

ಅನಿವಾರ್ಯವಾಗಿ ವಿದೇಶಕ್ಕೆ ಹೋದನಂತರ ಅಲ್ಲಿ ಅವನನ್ನು ಬಾಧಿಸಿದ್ದ ಪ್ರೀತಿ ಇನ್ನೂ ಅಧಿಕ. ತಂದೆಯ ವಾತ್ಸಲ್ಯದ ವ್ಯಕ್ತಿತ್ವ ಅವನಲ್ಲಿ ಬೇರೂರಿದ್ದು, ಅವರನ್ನರಿಯದೆ ತಪ್ಪರ್ಥ ಮಾಡಿಕೊಂಡ ಬಗ್ಗೆ ಅವರ ಕಡೆಗಾಲದಲ್ಲಿ ದೂರವಾದ ಬಗ್ಗೆ ಪಶ್ಚಾತ್ತಾಪದಿಂದ ದಗ್ಧನಾಗಿ ಹೋಗುವ ದಾರುಣಚಿತ್ರವನ್ನು ನಾಟಕ ಸಮರ್ಥವಾಗಿ ಕಟ್ಟಿಕೊಡುತ್ತದೆ. ಮೂಲ ಲೇಖಕರ ಲಲಿತಶೈಲಿಯನ್ನೇ ನಿರೂಪಣೆಗೆ ಬಳಸಿಕೊಂಡದ್ದು ನಾಟಕದ ಸಫಲತೆಗೆ ಕಾರಣವಾಯಿತು.

ಲೇಖಕರ ಮೂಲ ಆಶಯವನ್ನು ಕಣ್ಣಿಗೆ ಕಟ್ಟುವ ಸನ್ನಿವೇಶಗಳ ಮೂಲಕ ಅನುಭವಜನ್ಯವಾಗಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ತಂದೆ-ಮಗನ ಅವರ್ಣನೀಯ ಸಂಬಂಧವನ್ನು ಹುರಿಗೊಳಿಸುವಲ್ಲಿ ಮೂಡಿರುವ ಪಾತ್ರಚಿತ್ರಣಗಳು ಅನನ್ಯ. ಮನಮುಟ್ಟುವ ಸಂಭಾಷಣೆಗಳು ಸಂದರ್ಭಗಳ ಸಾಂದ್ರತೆ ಹೆಚ್ಚಿಸಿವೆ. ದೃಶ್ಯಗಳು ಚುರುಕಾಗಿ ಸಾಗುತ್ತ ಎಲ್ಲೂ ಯಾಂತ್ರಿಕತೆ ಇಣುಕದು. ಹೆತ್ತವರನ್ನು ಕಳೆದುಕೊಂಡ ಅವನ ನೋವು ಸಾರ್ವತ್ರಿಕತೆ ಪಡೆದುಕೊಂಡು ಎಲ್ಲರನ್ನೂ ತಟ್ಟುವಂತಿತ್ತು.

ಇದೇ ಕಥೆಯ ಇನ್ನೊಂದು ಮುಖ, ತಾಯಿಯ ಬಗೆಗಿನ ಅನೂಹ್ಯ ಬೆಸುಗೆಯ ಹೃದಯಸ್ಪರ್ಶಿ ದರ್ಶನ. ‘ಸ್ಟೀಲ್ ಪಾತ್ರೆಗಳ’ ಬಗ್ಗೆ ವಿಪರೀತ ವ್ಯಾಮೋಹ ಬೆಳೆಸಿಕೊಂಡ ತಾಯಿಯ ಅಮಾಯಕ ಸ್ವಭಾವ, ಮುಗ್ಧ ಆಸೆಗಳು ಅವಳ ಜೀವನದ ಪ್ರತಿ ಹೆಜ್ಜೆಯಲ್ಲೂ ಬಿಂಬಿತವಾಗಿವೆ.  ಸ್ಟೀಲ್‌ಪಾತ್ರೆಗಳೆಂದರೆ ಮಧ್ಯಮವರ್ಗದ ಎಂಥ ಹೆಂಗಸರೂ ಬಾಯಿಬಿಡುತ್ತಿದ್ದ ಕಾಲವೊಂದಿತ್ತು.

ಅವೇ ಅವರ ಪಾಲಿಗೆ ಬೆಳ್ಳಿ-ಬಂಗಾರ ಎಲ್ಲಾ. ಹೆಂಗಳೆಯರ ಒಂದು ಕಾಲದ ಮನದಾಳದ ಸತ್ಯ ಸಂಗತಿಯನ್ನು ಬಹು ಕಲಾತ್ಮಕವಾಗಿ ತೆರೆದಿಡುವ ಸುಂದರ ನಾಟಕವಿದು. ತಾಯಿಯ ಸ್ಟೀಲ್‌ಪಾತ್ರೆಗಳ ಬಯಕೆಯನ್ನು ಅವನು ಪುಟ್ಟ ಬಾಲಕನಾದಾಗಿನಿಂದ ನೋಡಿಕೊಂಡು ಬಂದ ಪರಿ ಬಲು ಸೊಗಸು. ಮೊಟ್ಟ ಮೊದಲ ಬಾರಿಗೆ ಅವಳು ಸ್ಟೀಲ್‌ತಟ್ಟೆ ಕೊಂಡಾಗಿನ ಸಂಭ್ರಮದಿಂದ ಹಿಡಿದು, ಒಂದೊಂದೇ ಸ್ಟೀಲ್‌ಲೋಟ-ಪಾತ್ರೆಗಳು ಅವರ ಮನೆಗೆ ಬರುವ ಪ್ರತಿ ಘಟನೆಯನ್ನೂ ಆನಂದದಿಂದ ಅನುಭವಿಸುವ ಆಕೆಯ ಅಮಾಯಕ ನಡವಳಿಕೆ ಕುತೂಹಲಕರವಾಗಿದ್ದು, ಹಾಸ್ಯವನ್ನೂ ಚಿಮ್ಮಿಸುತ್ತದೆ.

ನಾಮಕರಣದಲ್ಲಿ ಬಂದವರು ಉಡುಗೊರೆಯಾಗಿ ನೀಡುವ ಸ್ಟೀಲ್ ಸಾಮಾನುಗಳ ಬಗ್ಗೆ ಅವಳು ತೋರುವ ಪುಳಕ, ಆನಂದಗಳಂತಹ ಪುಟ್ಟ ಪುಟ್ಟ ಕ್ಷಣಗಳೂ ಮೈನವಿರೇಳಿಸುತ್ತವೆ.  ಮನೆಯಲ್ಲಿ ಹಣದ ಅಡಚಣೆಯಿದ್ದಾಗ ಅವಳ ಬಯಕೆಯ ಡಬ್ಬಿಗಳು ಅವಳ ಅಡುಗೆಮನೆ ಸೇರದಿದ್ದಾಗ ಅವಳು ಹಳಹಳಿಸುವ ರೀತಿ ಮರುಕ ತರಿಸುವಂತ್ತಿತ್ತು. ಹುಡುಗ ಬೆಳೆಬೆಳೆಯುತ್ತ ತಾಯಿಯ ಅದಮ್ಯ ಸ್ಟೀಲ್ ಪ್ರೀತಿಯನ್ನು ಕಾಣುತ್ತ ಒಂದು ಬಗೆಯ ಅವ್ಯಕ್ತ ಆನಂದ ಅನುಭವಿಸುತ್ತಾನೆ.

ಒಮ್ಮೆ ಅವರು ಕುಟುಂಬ ಸಮೇತ ರೈಲು ಪ್ರಯಾಣ ಮಾಡುವಾಗ ಆಕಸ್ಮಾತ್ ಸ್ಟೀಲ್‌ಲೋಟ ರೈಲಿನಿಂದ ಹೊರಗೆಬಿದ್ದಾಗ, ಅದನ್ನು ಕಳೆದುಕೊಂಡ ಸಂಕಟ, ಮರಮರಳಿ ಅದನ್ನು ನೆನೆಸಿಕೊಳ್ಳುವ ಆಕೆಯ ಸ್ಟೀಲ್ ಬಗೆಗಿನ ಗೀಳನ್ನು ಕಂಡಾಗ ನಗೆಯುಕ್ಕಿ ಬರುವುದು. ಮುಂದೆ ಅವನು ಕೆಲಸಕ್ಕೆ ಸೇರಿದಾಗ, ಅವನು ಮೊದಲು ಮಾಡುವ ಕೆಲಸವೆಂದರೆ, ಮನಸೋ ಇಚ್ಛೆ ಆಕೆಗೆ ಸ್ಟೀಲ್‌ಪಾತ್ರೆಗಳನ್ನು ಖರೀದಿ ಮಾಡುವಂತೆ ಹೇಳಿದಾಗ ಆಕೆ ಸಂತಸ ಪಡುವ ದೃಶ್ಯ ಅದ್ಭುತವಾಗಿತ್ತು.

ಮನೆಯ ತುಂಬಿದ ಸ್ಟೀಲ್ ಸಾಮಾನುಗಳನ್ನು ಕಂಡು ಅವಳಿಗೆ ಅತೀವ ಖುಷಿ. ತಾಯಿಯ ಆ ಸಂತೋಷ ಕಂಡು ಅವನಿಗೆ ಅಗಾಧ ತೃಪ್ತಿ. ಇಂಥ ಮುಗ್ಧ, ವಾತ್ಸಲ್ಯಮಯಿ ತಾಯಿಯನ್ನು ಮುಂದೆ ಕಳೆದುಕೊಂಡು ಮಮ್ಮಲ ಮರುಗುವ ಮಗ, ಅವಳ ನೆನಪನ್ನು ಶಾಶ್ವತವಾಗಿ ಎದೆಗಪ್ಪಿಕೊಳ್ಳುವ ಸ್ಮರಣೀಯ ಚಿತ್ರವಾಗಿಸಿದ ನಾಟಕ ಹೃದಯಂಗಮವಾಗಿತ್ತು.

ಭಾಗವಹಿಸಿದ್ದ ಒಟ್ಟು ಐದುಜನ ಕಲಾವಿದರು ಎರಡೂ ನಾಟಕಗಳಲ್ಲಿ ಸಂದರ್ಭಕ್ಕೆ ತಕ್ಕಂತೆ ಅನೇಕ ಪಾತ್ರಗಳನ್ನು ನಿರ್ವಹಿಸಿದ್ದು ಮೆಚ್ಚುಗೆ ತಂದಿತ್ತು. ಅಪ್ಪನನ್ನು ನೆನೆಯುವ ಮಗನ ಪಾತ್ರದಲ್ಲಿ ಕೀರ್ತಿಭಾನು ಅವರದು ಅತ್ಯುತ್ತಮ ಅಭಿನಯ. ಇನ್ನುಳಿದ ಹಲವಾರು ಪಾತ್ರಗಳಲ್ಲೂ ಅವರದು ಪಕ್ವ ನಟನೆ. ತಾಯಿಯನ್ನು ನೆನೆಯುವ ಮಗನಾಗಿ ಹರೀಶ್ ಸೋಮಯಾಜಿ ಅವರದು ‘ಸಟಲ್’ ಅಭಿನಯ.

ಇನ್ನುಳಿದ ಸಮಯೋಚಿತ ಪಾತ್ರಗಳಲ್ಲೂ ಅವರದು ಮನನೀಯ ಅಭಿನಯ. ತಂದೆಯಾಗಿ ಗಣೇಶ್‌ ಶೆಣೈ ಅವರದು ಲೀಲಾಜಲ ಅಭಿನಯ. ಪಾತ್ರಗಳ ಅಂತರಂಗವರಿತು ಅಭಿನಯಿಸಿದ ಹದವಾದ ನಟನೆ. ತಾಯಿಯಾಗಿ ಪ್ರಾಚೀ ರವಿಚಂದ್ರ ಅವರದು ಮನಸೆಳೆವ ಪ್ರಭಾವಶಾಲೀ ನೈಜಾಭಿನಯ. ಗೆಳೆಯ ಹಾಗೂ ಇನ್ನಿತರ ಪಾತ್ರಗಳಲ್ಲಿ ಸೂಕ್ತ ನಟನೆ ತೋರಿದ ಅರವಿಂದ ನಾಡಿಗ್ ಅವರು ಹದವಾಗಿ ನಟಿಸಿದ್ದು ಇಷ್ಟವಾಯಿತು. ದಕ್ಷ-ಸೂಕ್ಷ್ಮ ನಿರ್ದೇಶನ ನೀಡಿದ ಕಿರಣ್ ವಟಿ ಅವರ ಕೆಲಸ ಮನೋಜ್ಞವಾಗಿತ್ತು. ಬೆಳಕು, ಪ್ರಸಾಧನ, ರಂಗಸಜ್ಜಿಕೆ ಪ್ರತಿಯೊಂದು ಅಂಶಗಳಲ್ಲೂ ವೃತ್ತಿಪರತೆ ಎದ್ದು ಕಾಣುತ್ತಿತ್ತು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT